ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ದರ: ರೈತರ ಸಭೆ ಕರೆಯಲು ಒತ್ತಾಯ

Last Updated 8 ಜೂನ್ 2011, 9:05 IST
ಅಕ್ಷರ ಗಾತ್ರ

ಚಾಮರಾಜನಗರ: ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಕೂಡಲೇ ರೈತರ ಸಭೆ ಕರೆಯಬೇಕು ಎಂದು ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿಯು ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಅವರನ್ನು ಒತ್ತಾಯಿಸಿತು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಧ್ಯಕ್ಷ ಬ್ಯಾತಹಳ್ಳಿ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ಕಾರ್ಖಾನೆಗಳಲ್ಲಿ ನಿಗದಿಪಡಿಸಿರುವ ಕಬ್ಬಿನ ದರ ಅವೈಜ್ಞಾನಿಕವಾಗಿದೆ.
 
ರಾಜ್ಯ ಸರ್ಕಾರ ಸಹ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥ ಪಡಿಸುವಲ್ಲಿ ವಿಫಲವಾಗಿದೆ. ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ರೈತರ ಸಭೆ ಕರೆದು ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಾರ್ಖಾನೆಗಳ ಏಜೆಂಟ್‌ರಂತೆ ವರ್ತಿಸುತ್ತಿವೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ಎರಡು ಬಾರಿ ಸಭೆ ಕರೆದು ಮುಂದೂಡಿರುವುದು ರೈತರ ಮೇಲಿನ ನಿರ್ಲಕ್ಷ್ಯ ತೋರುತ್ತದೆ. ಹಿಂದೆ ಕಾರ್ಖಾನೆಗಳು ರೂ. 1950 ದರ ನಿಗದಿ ಮಾಡಿದ್ದವು. ಆದರೆ ಈಗ 1800 ರೂಪಾಯಿಗೆ ಇಳಿಸಿದೆ. ಇದು ಯಾವುದಕ್ಕೂ ಸಾಲುತ್ತಿಲ್ಲ ಎಂದರು. ಉಪಾಧ್ಯಕ್ಷ ಬೂದಿತಿಟ್ಟು ಗುರುಸ್ವಾಮಿ, ಎಂ.ಎಸ್.ರಾಜೇಂದ್ರ, ವಾಸು ಹಾಗೂ ಇತರರು ಭಾಗವಹಿಸಿದ್ದರು.

ಪದಾಧಿಕಾರಿಗಳ ನೇಮಕ

ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರನ್ನಾಗಿ ಆಲೂರು ಮಲ್ಲು ಅವರನ್ನು ನೇಮಕ ಮಾಡಲಾಯಿತು. ಗೌರವಧ್ಯಕ್ಷ-ಗುಂಡೇಗಾಲ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ-ಬಸವನಪುರ ರಾಜಶೇಖರ್, ಸಹ ಕಾರ್ಯದರ್ಶಿ-ಕಮರವಾಡಿ ಕೆ.ಎಸ್.ಮಹದೇವಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ.

ಟನ್ ಕಬ್ಬಿಗೆ ರೂ. 2500 ನಿಗದಿಗೆ ಒತ್ತಾಯ
ಪ್ರಸಕ್ತ ಸಾಲಿನ್ಲ್ಲಲಿ ಬಣ್ಣಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ ರೂ. 2500 ರೂಪಾಯಿ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ. ಜಿಲ್ಲಾ ವ್ಯಾಪ್ತಿಯ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಕಾರ್ಖಾನೆಗೆ ಕಬ್ಬು ಸಾಗಣೆ ಮಾಡಿ ಕೇವಲ ರೂ. 1800 ಪಡೆದು ರೈತರು ತೊಂದರೆಯಲ್ಲಿದ್ದಾರೆ. ಕಬ್ಬು ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. 

 ಕಾಯ್ದೆಯನ್ನು ಜಾರಿಗೆ ತರದೆ ರೈತರಿಗೆ ತೊಂದರೆ ಉಂಟು ಮಾಡಿದೆ. ಕಾರ್ಖಾನೆ ಹಾಗೂ ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿಗೆ ತರದೆ ಬಂಡವಾಳಶಾಹಿಗಳ ಪರ ಆಡಳಿತ ನಡೆಸುತ್ತಿದೆ ಎಂದು ಅಧ್ಯಕ್ಷ ಲಿಂಗಾಪುರ ಪುಟ್ಟಸ್ವಾಮಿ ಆರೋಪಿಸಿದ್ದಾರೆ.

ಇಳುವರಿ ಆಧಾರದ ಮೇಲೆ ಬೆಲೆ ನಿಗದಿ ಮಾಡುವುದಾಗಿ ಐದು ತಿಂಗಳ ಹಿಂದೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಣ್ಣಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಗೆ ನೀಡಿತ್ತು. ನಂತರ ಎಲ್ಲಾ ಕಬ್ಬನ್ನು ಕಟಾವು ಮಾಡಿಕೊಂಡು 1800 ರೂಪಾಯಿ ನೀಡುತ್ತಿದೆ ಎಂದು ದೂರಿದ್ದಾರೆ. ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಅವರು ಎರಡು ಬಾರಿ ರೈತರ ಸಭೆ ಮುಂದೂಡಿದ್ದಾರೆ. ರಾಜ್ಯ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಬಂದಿಲ್ಲ.
 
ಹೀಗಿರುವಾಗ ಸ್ಥಳಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯದೆ ರೈತರನ್ನು ಕಡೆಗಣಿಸಿದ್ದಾರೆ ಎಂದರು.
ಇನ್ನು ಒಂದು ವಾರದಲ್ಲಿ ಸಭೆ ಕರೆಯದಿದ್ದರೆ ಕಬ್ಬು ಬೆಳೆಗಾರರ ಸಂಘವು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗಣಾಪುರ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಮಾರಹಳ್ಳಿ ಮಹದೇವಸ್ವಾಮಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT