ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೀಂಖಾನರ ಇಂಪು -ಗಂಧರ್ವರ ಝೇಂಕಾರ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಭೀಮಸೇನ್ ಜೋಷಿ ಅವರ ಹೆಸರೇ, ಸಂಗೀತಾಸಕ್ತರ ಮನಸ್ಸಿನಲ್ಲಿ ಮಧುರ ಭಾವನೆಗಳ ಜೊತೆಗೆ ರೋಮಾಂಚನ ಮೂಡಿಸುತ್ತದೆ. ವಿಶ್ವವಿಖ್ಯಾತವಾದ ಈ ಹೆಸರಿನ ಮೂಲ ಕರ್ನಾಟಕದ ಗ್ರಾಮೀಣ ಪ್ರದೇಶ ಎನ್ನುವುದು ಅಭಿಮಾನದ ಸಂಗತಿ.

ಹಿಂದೆ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಒಂದು ಮಾತು ಪ್ರಚಲಿತವಿತ್ತು, ‘ಭಾರತೀಯ ಸಂಗೀತದ ವರ್ತಮಾನ ಸ್ಥಿತಿಯಲ್ಲಿ ಉಸ್ತಾದ್ ಅಮೀರ್‌ಖಾನ್ ಮತ್ತು ಬಡೇ ಗುಲಾಂ ಅಲಿಯವರಿಂದ ಪ್ರಭಾವಿತನಾಗದೇ ಇರುವ ಸಂಗೀತಗಾರನೇ ಇಲ್ಲ’ ಎಂದು. ಈ ಇಬ್ಬರೂ ಸಂಗೀತಗಾರರ ಜೊತೆ ಜೊತೆಯೇ ಪ್ರವರ್ಧಮಾನಕ್ಕೆ ಬಂದು, ಎಲ್ಲ ಘರಾಣಾಗಳ ಉತ್ತಮ ಅಂಶಗಳನ್ನು ಹೀರಿ, ಕಿರಾಣಾ ಘರಾಣಾದ ಉತ್ತುಂಗ ಗಾಯಕನಾಗಿ ಬೆಳೆದ ಭೀಮಸೇನ್ ಜೋಷಿ ಅವರ ಗಾಯನಕ್ಕೆ ಮಾರುಹೋಗದ ಸಂಗೀತ ಶ್ರೋತೃವಿಲ್ಲ, ಇವರ ಪ್ರಭಾವಕ್ಕೆ ಒಳಗಾಗದ ಸಂಗೀತಗಾರನಿಲ್ಲ.

ಅಬ್ದುಲ್ ಕರೀಂಖಾನರ ಮಾಧುರ್ಯ ಮತ್ತು ಸವಾಯಿ ಗಂಧರ್ವರ ಪ್ರಗಲ್ಭತೆಗಳನ್ನು ಮೈಗೂಡಿಸಿಕೊಂಡು, ಮನೆಯಲ್ಲಿನ ವೈದಿಕ ಸಂಪ್ರದಾಯದಿಂದ ಸಹಜವಾಗಿಯೂ ಮೈಗೂಡಿದ ಭಕ್ತಿ-ವೈರಾಗ್ಯ ಭಾವನೆಗಳಿಂದಾಗಿ, ಭೀಮಸೇನ್ ಜೋಷಿಯವರು ಅದ್ವಿತೀಯ ಗಾಯಕರಾಗಿ ವಿಶ್ವವಿಖ್ಯಾತರಾದರು.

ಭೀಮಸೇನ ಜೋಷಿಯವರ ಜನನ ಸಮಯದಲ್ಲಿ ತಮ್ಮ ಕನಸಿನಲ್ಲಿ ಗದುಗಿನ ವೀರ ನಾರಾಯಣನೇ ಬಂದು ಒಂದು ಗಂಟೆಯನ್ನು ನೀಡಿದಂತೆ ಭಾಸವಾಯಿತೆಂದು ಜೋಷಿಯವರ ತಂದೆ ಗುರುರಾಜಾಚಾರ್ಯ ದಾಖಲಿಸಿದ್ದಾರೆ. ಈ ಲೇಖನದಲ್ಲಿ ಒಬ್ಬ ಆಸ್ತಿಕನ ಭಾವೋದ್ರೇಕ ವ್ಯಕ್ತವಾಗಿದೆಯಾದರೂ ಮುಂದೆ ಈ ಬಾಲಕ ಭೀಮಸೇನ, ‘ಭಾರತರತ್ನ’ವಾಗಿ, ಹಿಂದುಸ್ತಾನಿ ಸಂಗೀತ ಪ್ರಪಂಚದ ಧ್ರುವತಾರೆಯಾಗಿ ಬೆಳೆದ ಬಗ್ಗೆ ನೋಡಿದಾಗ, ತಂದೆಯ ಕನಸು ಸುಳ್ಳಲ್ಲ ಎಂದೆನ್ನಿಸುತ್ತದೆ.

ಚಿಕ್ಕಂದಿನಲ್ಲೆ ಸಂಗೀತ ಪರಿಸರ ಬಳುವಳಿಯಾಗಿ ಪಡೆದ ಜೋಷಿಯವರಿಗೆ ಪ್ರಥಮಗುರು ಅಗಸರ ಚೆನ್ನಪ್ಪ ಎಂಬ ಹಾರ್ಮೋನಿಯಂ ಮಾಸ್ತರರು. ಅಗಸರ ಚೆನ್ನಪ್ಪನು, ಪಂ. ಪಂಚಾಕ್ಷರಿ ಗವಾಯಿಗಳ ಶಿಕ್ಷಕ.

ಬಾಲಕ ಭೀಮಸೇನನ ಅಪೂರ್ವ ಲಕ್ಷಣಗಳನ್ನು ಗಮನಿಸಿ, ಈ ಬಾಲಕನಿಗೆ ಅದ್ವಿತೀಯ ಭವಿಷ್ಯವಿದೆ, ಅದಕ್ಕಾಗಿ ಪುಣೆಯ ಕಡೆಗಿನ ಅದ್ವಿತೀಯ ಗುರುಗಳೇ ಸರಿ, ಎಂದು ಗಾನಯೋಗಿಗಳೇ, ಗುರುರಾಜಾಚಾರ್ಯರಿಗೆ ಸೂಕ್ಷ್ಮವಾಗಿ ತಿಳಿಸಿದ್ದರಂತೆ.

ಅದರಂತೆ, ಗುರುಗಳ ಅನ್ವೇಷಣೆಗಾಗಿ, ಮನೆ ಬಿಟ್ಟು ಉತ್ತರ ಭಾರತ ಸಂಚರಿಸಿ, ಪಳಾಡಿ ಸನ್ಯಾಲ, ಪಟವರ್ಧನ್ ಮುಂತಾದವರ ಹತ್ತಿರ ಅಭ್ಯಸಿಸಿ, ಕೊನೆಗೆ ನಿನ್ನ ಗುರು ಕುಂದಗೋಳದ ಸವಾಯಿ ಗಂಧರ್ವರೆಂದು ಪಟವರ್ಧನರು ತಿಳಿಸಿದ ಮೇಲೆ, ಧಾರವಾಡಕ್ಕೆ ಬಂದು ಸವಾಯಿ ಗಂಧರ್ವರ ಬಳಿ ಕಠೋರ ಶಿಷ್ಯವೃತ್ತಿ ಮಾಡಿ, ಒಬ್ಬ ಕಷ್ಟ ಸಹಿಷ್ಣು ಸಾಧಕನಾಗಿ ಪಂ. ಜೋಷಿಯವರು ರೂಪುಗೊಂಡರು. ಗಂಧರ್ವರ ಬಳಿ ನಾಲ್ಕು ವರ್ಷಗಳ ಸತತ ಶಿಕ್ಷಣದಲ್ಲಿ ಕಲಿತುದು ಪೂರಿಯಾ, ತೋಡಿ ಮತ್ತು ಮುಲ್ತಾನಿ ರಾಗಗಳನ್ನು ಮಾತ್ರ. ಆದರೆ, ಆ ರಾಗಗಳಿಂದ ನೂರು ರಾಗಗಳನ್ನು ಸೃಷ್ಟಿಸುವ ಶಕ್ತಿಯನ್ನು ಜೋಷಿಯವರು ಗಳಿಸಿದರು.

ಕರೀಂಖಾನರ ಇಂಪು ಮತ್ತು ಸವಾಯಿ ಗಂಧರ್ವರ ಠೇಂಕಾರಗಳನ್ನು ಮೈಗೂಡಿಸಿಕೊಂಡಿದ್ದರೂ, ಸ್ವಬುದ್ಧಿಯಿಂದ ಮತ್ತು ಚಿಕಿತ್ಸಾತ್ಮಕ ದೃಷ್ಟಿಕೋನದಿಂದ, ಉಳಿದೆಲ್ಲ ಘರಾಣೆಗಳ ಅತ್ಯುತ್ತಮ ಅಂಶಗಳನ್ನು ಮೈಗೂಡಿಸಿಕೊಂಡ ಮೇಧಾವಿ ಸಂಗೀತಗಾರರು ಪಂ. ಭೀಮಸೇನ ಜೋಷಿಯವರು. ಬೀನ್ ಮಾಧುರ್ಯದ ಇಂಪು, ಗ್ವಾಲಿಯರ್ ಘರಾಣೆಯ ಲಯ, ಜೈಪುರ ಘರಾಣೆಯ ತಾನುಗಳ ವೈಶಿಷ್ಟ್ಯ ಮತ್ತು ಪಾಟಿಯಾಲಾದ ಸೂಕ್ಷ್ಮ ಖಟಕಾ ಹಾಗೂ ಮುರ್ಕಿಗಳನ್ನು ಸಮೃದ್ಧವಾಗಿ ಬೆಳೆಸಿಕೊಂಡು, ಕಿರಾಣಾ ಘರಾಣಾದ ಚೌಕಟ್ಟಿನಲ್ಲಿ ಇದನ್ನು ಸಂಸ್ಕರಿಸಿ ತಮ್ಮದೇ ಆದ ಒಂದು ಹೊಸ ಶೈಲಿಯನ್ನು ಜೋಷಿ ಸೃಷ್ಟಿಸಿದರು. ಆ ಮೂಲಕ ಕಿರಾಣಾ ಘರಾಣೆಗೆ ಒಂದು ಹೊಸ ಆಯಾಮ ನೀಡಿದರು.

ಪಂ. ಜೋಷಿಯವರು ಶಾಸ್ತ್ರೀಯ ಗಾಯನವನ್ನೇ ಹಾಡಲಿ, ಭಕ್ತಿ ಸಂಗೀತವನ್ನೇ ಹಾಡಲಿ ಎರಡರಲ್ಲೂ ಪಾಂಡಿತ್ಯ ಮತ್ತು ಭಕ್ತಿ ವೈರಾಗ್ಯಗಳು ತುಂಬಿ ತುಳುಕುತ್ತಿದ್ದುವು.ಬ್ರಿಜ್ ಭಾಷೆಯಲ್ಲಿನ ಕೃಷ್ಣನ ವರ್ಣನೆಗಳಾದ ‘ಪೀಯಾ’, ‘ಸೈಯಾ’ ಎಂಬ ಪದಗಳನ್ನು ಕೇಳುವಾಗಲೂ ಆಧ್ಯಾತ್ಮಿಕತೆಯನ್ನೇ ನಾವು ಕಾಣುತ್ತೇವೆ. ‘ಸ್ವರದಲ್ಲೇ ಭಾವ’ ಎಂಬುದು ಪಂಡಿತ್‌ಜಿಯವರ ಸಿದ್ಧಾಂತ. ಭಾವವು ಶಬ್ದಾತೀತ, ಅಂತೆಯೇ ಭೀಮಸೇನ್ ಜೋಷಿಯವರ ಗಾಯನಕ್ಕೆ, ಕೇವಲ ಹಿಂದುಸ್ತಾನಿ ಶ್ರೋತೃವಷ್ಟೇ ಅಲ್ಲ, ಪಾಶ್ಚಾತ್ಯರೂ ಮನಸೋತವರು, ಅಭಂಗ, ದಾಸರ ಪದಗಳ ಮೂಲಕ, ಸಂಗೀತವನ್ನು ಮನೆ ಮನೆಗೂ ತಲುಪಿಸಿದ ಅಮರ ಗಾಯಕ ಅವರು.

ಶಾಸ್ತ್ರೀಯ ಸಂಗೀತದ ಸಂಘಟನೆ
ಪುಣೆಯಲ್ಲಿ ಇವರು ಆಯೋಜಿಸುತ್ತಿದ್ದ ಸವಾಯಿಗಂಧರ್ವ ಪುಣ್ಯ ಸ್ಮರಣೆ ಸಂಗೀತೋತ್ಸವ ಲಕ್ಷಾವಧಿ ಶ್ರೋತೃಗಳಿಗೆ ಸಂಗೀತದ ರಸದೌತಣ ನೀಡುವ ಸಂಗೀತದ ಹಬ್ಬವಾಗಿತ್ತು. ಇದರಿಂದಾಗಿ, ಪ್ರವರ್ಧಮಾನಕ್ಕೆ ಬರುವ ಸಂಗೀತಗಾರರಿಗೆ ಒಂದು ಅಪೂರ್ವ ವೇದಿಕೆ   ಸಿಕ್ಕಂತಾಗಿತ್ತು. ದೊರೆತಂತಾಗಿದೆ. ಶಾಸ್ತ್ರೀಯ ಕಲೆಗಳಿಗೆ ಗ್ರಹಣ ಹಿಡಿದಂತಿರುವ ಈ ಸಂದರ್ಭದಲ್ಲಿ ಇಂಥ ವೇದಿಕೆ, ಭಾರತೀಯ ಸಂಸ್ಕೃತಿಯ ಹರಿಕಾರನಂತೆ ಕೆಲಸ ನಿರ್ವಹಿಸಿತು.

ಕಲಾಶ್ರೀ, ಮತ್ತು ಲಲಿತ್ ಭಟಿಯಾರ್‌ಗಳಂಥ ಹೊಸ ರಾಗಗಳನ್ನು ಅವರು ಆವಿಷ್ಕರಿಸಿದ್ದರು. ಹಳೆಯ ರಾಗಗಳನ್ನೇ ಪ್ರತಿದಿನ ಹೊಸದಾಗಿ ನೀಡಬಲ್ಲ ಸಾಮರ್ಥ್ಯ ಅವರಿಗೆ ಸಿದ್ಧಿಸಿತ್ತು.ರಥಸಪ್ತಮಿ ದಿನ ಜನಿಸಿದ್ದ ಭೀಮಸೇನ ಜೋಷಿ, ಸೂರ್ಯನಂತೆ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ನಭೋಮಂಡಲದಲ್ಲಿ ವಿಜೃಂಭಿಸಿ, ಉತ್ತರಾಯಣ ಪುಣ್ಯಕಾಲದಲ್ಲಿ ಅಮರತ್ವದೆಡೆಗೆ ಹೆಜ್ಜೆ ಹಾಕಿದ್ದಾರೆ. ಈ ಗಾನ ಗಾರುಡಿಗನಿಗೆ ನನ್ನ ಅಶ್ರುಭರಿತ ವಿದಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT