ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕೋರ್ಟ್‌ಗೆ ಜಯಾ ಹಾಜರಿಗೆ ಸೂಚನೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಕರ್ನಾಟಕದ ವಿಶೇಷ ನ್ಯಾಯಾಲಯ ಮುಂದೆ ಹಾಜರಾಗಬೇಕಾದೀತು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಜಯಲಲಿತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, `ಖುದ್ದು ಹಾಜರಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸುವ ಮೂಲಕ ಜಯಲಲಿತಾ ವಿಚಾರಣೆ ಪ್ರಕ್ರಿಯೆಯನ್ನು ವಿಳಂಬ ಮಾಡಲು ಯತ್ನಿಸುತ್ತಿದ್ದಾರೆ~ ಎಂದು ಹೇಳಿತು.

`ನಾವು ವಿಶಾಲವಾದ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ.  ಅಂದ ಮಾತಕ್ಕೆ ಆರೋಪಿ ಹೇಳುವ ಮಾತುಗಳನ್ನೆಲ್ಲಾ ಪರಿಗಣಿಸುವ ಅಗತ್ಯವಿಲ್ಲ. ವಿಚಾರಣೆ ಪ್ರಕ್ರಿಯೆಯನ್ನು ವಿಳಂಬ ಮಾಡುವ ಉದ್ದೇಶ ಬಿಟ್ಟರೆ ಈ ಅರ್ಜಿಯಲ್ಲಿ ಬೇರೇನೂ ಕಾಣುತ್ತಿಲ್ಲ~ ಎಂದು  ಭಂಡಾರಿ ಅಭಿಪ್ರಾಯ ಪಟ್ಟರು.
 
ವಿಚಾರಣೆ ನಡೆಯುತ್ತಿರುವ ಕರ್ನಾಟಕದ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ಜಯಲಲಿತಾ ಅವರಿಗೆ ಯಾವಾಗ ಸಾಧ್ಯವಾಗಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಲು ಜಯಾ ಪರ ವಕೀಲ ಹರೀಶ್ ಸಾಳ್ವೆಗೆ ಒಂದು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿದೆ.

ಮಿತಿ ಮೀರಿದ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಜಯಲಲಿತಾ ಅವರು ಸಿಆರ್‌ಪಿಸಿ ಸೆಕ್ಷನ್ 313ರಡಿ ಸುಪ್ರೀಂಕೋರ್ಟ್‌ನಲ್ಲಿ  ಮನವಿ ಸಲ್ಲಿಸಿದ್ದರು.
 
ಜಯಾಲಲಿತಾ ಮತ್ತೆ  ಮುಖ್ಯಮಂತ್ರಿಯಾಗಿರುವುದರಿಂದ ಮತ್ತು ಭದ್ರತಾ ಕಾರಣಗಳಿಂದ ಅವರಿಗೆ ಖುದ್ದು ವಿಚಾರಣೆಗೆ ಹಾಜರಾಗಲು ಕಷ್ಟವಾಗಬಹುದೆಂದು ಜಯಾ ಪರ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ತಿಳಿಸಿದರು.

ಅಗತ್ಯಬಿದ್ದರೆ, ಜಯಲಲಿತಾ ಸುರಕ್ಷತೆಗಾಗಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ವಿಚಾರಣಾ ಕೋರ್ಟ್‌ಗೆ ಸೂಚಿಸುವುದಾಗಿಯೂ ನ್ಯಾಯಪೀಠ ಹೇಳಿತು.1991-96ರ ಅವಧಿಯಲ್ಲಿ ಜಯಲಿಲಿತಾ ಅವರು ಅಕ್ರಮವಾಗಿ 66 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಆರೋಪವನ್ನು ಜಯಲಲಿತಾ ಅವರು ತಿರಸ್ಕರಿಸಿದ್ದು, ಹಿಂದಿನ ಡಿಎಂಕೆ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಈ ಪ್ರಕರಣವನ್ನು ದಾಖಲಿಸಿತ್ತು ಎಂದು ಆರೋಪಿಸಿದ್ದರು.ಆ ಬಳಿಕ ಪ್ರಕರಣದ ನಿಷ್ಪಕ್ಷಪಾತ ವಿಚಾರಣೆಗಾಗಿ ಪ್ರಕರಣವನ್ನು ಕರ್ನಾಟಕದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT