ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಭೂ ಕಂದಾಯ ಮಸೂದೆಗೆ ಒಪ್ಪಿಗೆ

Last Updated 13 ಡಿಸೆಂಬರ್ 2012, 19:38 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದ ನಗರ ಪ್ರದೇಶಗಳಲ್ಲಿ ಪ್ರಸಕ್ತ ವರ್ಷದ ಜನವರಿ 1ಕ್ಕೂ ಮೊದಲು ಸರ್ಕಾರಿ ಕಂದಾಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡಿರುವ 20/30 ಚದರ ಅಡಿ ವಿಸ್ತೀರ್ಣದ ವಾಸದ ಮನೆಗಳನ್ನು ಸಕ್ರಮಗೊಳಿಸುವ `ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ-2012'ಕ್ಕೆ ವಿಧಾನಮಂಡಲದ ಉಭಯ ಸದನಗಳೂ ಗುರುವಾರ ಒಪ್ಪಿಗೆ ನೀಡಿದವು.

ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರ ನಡೆಯುತ್ತಿದ್ದಂತೆಯೇ ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಈ ಮಸೂದೆಯನ್ನು ಮಂಡಿಸಿದರು. ಅದನ್ನು ಪರಿಶೀಲಿಸಿ ಅಂಗೀಕಾರ ನೀಡುವಂತೆ ಕೋರಿದರು. ಆಡಳಿತ ಪಕ್ಷದ ಸದಸ್ಯರ ಪೂರ್ಣ ಒಪ್ಪಿಗೆಯೊಂದಿಗೆ ಮಸೂದೆಗೆ ಅಂಗೀಕಾರದ ಮುದ್ರೆ ಬಿತ್ತು.

ಈ ತಿದ್ದುಪಡಿಯು ಭೂ ಕಂದಾಯ ಕಾಯ್ದೆಯ ಕಲಂ 94ಸಿಸಿ ಅಡಿಯಲ್ಲಿ ನಗರ ಪ್ರದೇಶದಲ್ಲಿ ವಾಸದ ಉದ್ದೇಶಕ್ಕೆ ನಡೆದಿರುವ ಒತ್ತುವರಿಯನ್ನು ಸಕ್ರಮಗೊಳಿಸುವ ಅಂಶವನ್ನು ಕಾಯ್ದೆಗೆ ಸೇರಿಸುತ್ತದೆ. ಪ್ರಸಕ್ತ ವರ್ಷದ ಜನವರಿ 1ಕ್ಕೆ ಮೊದಲು ಸರ್ಕಾರದ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 20/30 ಚದರ ಅಡಿಯನ್ನು ಮೀರದಂಥ ವಿಸ್ತೀರ್ಣದ `ಪ್ಲಿಂಥ್' ಪ್ರದೇಶವುಳ್ಳ ವಾಸದ ಮನೆ ಅಥವಾ ವಾಸದ ಮನೆಯ ವಾಸ್ತವ ನಿರ್ಮಿತ ಪ್ರದೇಶ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ನಿಗದಿತ ಶುಲ್ಕ ಪಡೆದು ಸಕ್ರಮಗೊಳಿಸಲು ಈ ಮಸೂದೆ ಅವಕಾಶ ನೀಡಲಿದೆ.

ಅರ್ಜಿ ಸಲ್ಲಿಸಿದ ವ್ಯಕ್ತಿ ಅಥವಾ ಆತನ ಕುಟುಂಬದ ಯಾವುದೇ ಸದಸ್ಯರು ಅರ್ಜಿಯಲ್ಲಿ ಉಲ್ಲೇಖಿಸುವ ಜಮೀನು ಇರುವ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ಅಥವಾ ನಿವೇಶನವನ್ನು ಹೊಂದಿದ್ದಲ್ಲಿ ಅಂತಹ ಅರ್ಜಿಯನ್ನು ಮಾನ್ಯ ಮಾಡಲು ಅವಕಾಶವಿಲ್ಲ. ಅರ್ಜಿದಾರ ಅಥವಾ ಆತನ ಕುಟುಂಬದ ಸದಸ್ಯರು ಒಂದಕ್ಕಿಂತ ಹೆಚ್ಚು ವಾಸದ ಮನೆಗಳನ್ನು ಹೊಂದಿದ್ದರೆ ಅಂತಹ ಅರ್ಜಿಯನ್ನೂ ಮಾನ್ಯ ಮಾಡುವಂತಿಲ್ಲ. ಮನೆ ನಿರ್ಮಿಸದ ಖಾಲಿ ಜಮೀನಿನ ಒತ್ತುವರಿಯನ್ನು ಸಕ್ರಮಗೊಳಿಸಲು ಈ ಮಸೂದೆ ಅವಕಾಶ ನೀಡುವುದಿಲ್ಲ.

ಈ ಮಸೂದೆಯ ಅನ್ವಯ ಮಂಜೂರಾದ ಜಮೀನನ್ನು 15 ವರ್ಷಗಳವರೆಗೂ ಇತರರಿಗೆ ಪರಭಾರೆ ಮಾಡುವಂತಿಲ್ಲ. ಅಂತಹ ಜಮೀನನ್ನು ವಾಸದ ಉದ್ದೇಶಕ್ಕೆ ಮಾತ್ರ ಬಳಸಬೇಕು. ನಗರಪಾಲಿಕೆಗಳು, ನಗರಸಭೆಗಳು ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳು, ಅಭಿವೃದ್ಧಿ ಪ್ರಾಧಿಕಾರಗಳ ಒಡೆತನದಲ್ಲಿರುವ ಜಮೀನನ್ನು ಮಂಜೂರು ಮಾಡಲು ಅವಕಾಶ ಇಲ್ಲ.

ಒಳ ಚರಂಡಿಗಳು, ಕಾಲುವೆಗೆ ಅಡ್ಡವಾಗಿರುವ ದಾರಿಗಳು, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಸೇರಿದ ಜಮೀನು, ರಸ್ತೆಗಳ, ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಮೀನು, ರೈಲ್ವೆ ಜಮೀನು, ಅರಣ್ಯ ಭೂಮಿ,  ಬೇರೊಬ್ಬರ ಒಡೆತನದಲ್ಲಿರುವ ಜಮೀನು, ಉದ್ಯಾನ, ಆಟದ ಮೈದಾನ, ಮಳೆನೀರು ಕಾಲುವೆ ಸಂಪರ್ಕಿಸುವಂತಿರುವ ಜಮೀನು, ಪಾರಂಪರಿಕ ಸ್ಮಾರಕಗಳ ಸುತ್ತಮುತ್ತ, ವಿಮಾನ ನಿಲ್ದಾಣ ಅಥವಾ ರಕ್ಷಣಾ ಇಲಾಖೆಯಿಂದ ಕಟ್ಟಡ ನಿರ್ಮಾಣ ನಿರ್ಬಂಧಿಸಿರುವ ಪ್ರದೇಶ, ಹೈಟೆನ್ಷನ್ ವಿದ್ಯುತ್ ಮಾರ್ಗಗಳು ಹಾದು ಹೋಗುವಲ್ಲಿ, ಅಗ್ನಿ ಅವಘಡಗಳಿಂದ ರಕ್ಷಣೆ ಪಡೆಯಲು ಮೀಸಲಿಟ್ಟ ಜಮೀನಿನಲ್ಲಿರುವ ಕಟ್ಟಡಗಳನ್ನು ಈ ಮಸೂದೆಯಡಿ ಸಕ್ರಮಗೊಳಿಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 18 ಕಿ.ಮೀ. ವ್ಯಾಪ್ತಿಯಲ್ಲಿ, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ, ಎಲ್ಲಾ ನಗರಸಭೆಗಳ ಐದು ಕಿ.ಮೀ. ವ್ಯಾಪ್ತಿಯಲ್ಲಿ, ಪುರಸಭೆಗಳ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಮೂರು ಕಿ.ಮೀ. ವ್ಯಾಪ್ತಿಗೆ ಈ ಮಸೂದೆ ಅನ್ವಯವಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ 60/40 ಚದರ ಅಡಿ ವಿಸ್ತೀರ್ಣದವರೆಗಿನ ಮನೆಗಳನ್ನು ಸಕ್ರಮಗೊಳಿಸುವ ಮಸೂದೆಯನ್ನು ಬುಧವಾರ ವಿಧಾನಮಂಡಲ ಅಂಗೀಕರಿಸಿತ್ತು.

ಖಾಸಗಿ ವಿ.ವಿ ಮಸೂದೆಗೆ ಒಪ್ಪಿಗೆ
ಆಡಳಿತ ಪಕ್ಷದ ಹತ್ತಕ್ಕೂ ಹೆಚ್ಚು ಶಾಸಕರ ವಿರೋಧದ ನಡುವೆಯೇ ಹೊಸದಾಗಿ 13 ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಅವಕಾಶ ಕಲ್ಪಿಸುವ ಮಸೂದೆಗಳಿಗೆ ವಿಧಾನಸಭೆ ಗುರುವಾರ ಒಪ್ಪಿಗೆ ನೀಡಿತು. ವಿರೋಧ ಪಕ್ಷದ ಸದಸ್ಯರೆಲ್ಲರೂ ಕಲಾಪ ಬಹಿಷ್ಕರಿಸಿದ್ದರೂ, ಆಡಳಿತ ಪಕ್ಷದ ಸದಸ್ಯರೇ ಮಸೂದೆಯ ಬಗ್ಗೆ ಆಕ್ಷೇಪ ಎತ್ತಿ ಕೆಲಕಾಲ ಗದ್ದಲ ನಡೆಸಿದರು.

ಮಣಿಪಾಲ ವಿ.ವಿ, ಅರ್ಕ ವಿ.ವಿ, ದಯಾನಂದ ಸಾಗರ ವಿ.ವಿ, ವೆಲ್ಲೂರು ತಾಂತ್ರಿಕ ಸಂಸ್ಥೆ ಬೆಂಗಳೂರು ವಿ.ವಿ, ಎಂ.ಎಸ್.ರಾಮಯ್ಯ ಅನ್ವಯಿಕ ವಿ.ವಿ, ದೇವರಾಜ ಅರಸು ವಿ.ವಿ, ಶರಣಬಸವ ವಿ.ವಿ, ಆದಿಚುಂಚನಗಿರಿ ವಿ.ವಿ, ರಾಯ ತಾಂತ್ರಿಕ ವಿ.ವಿ, ಅಮೃತ ಸಿಂಚನ ಅಧ್ಯಾತ್ಮ ವಿ.ವಿ, ರೇವಾ ವಿ.ವಿ, ಕೆಎಲ್‌ಇ ತಾಂತ್ರಿಕ ವಿ.ವಿ ಮತ್ತು ಪಿಇಎಸ್ ವಿ.ವಿ ಮಸೂದೆಗಳಿಗೆ ಸದನದ ಅಂಗೀಕಾರ ದೊರೆಯಿತು.

ಆರಂಭದಲ್ಲಿ ಮಣಿಪಾಲ ವಿ.ವಿ ಮಸೂದೆಯನ್ನು ಪರಿಶೀಲಿಸುವಂತೆ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಕೋರಿದರು. ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಬಿ.ಸುರೇಶ್‌ಗೌಡ, `ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಅನುಮತಿ ನೀಡಲೇಬಾರದು. ಒಮ್ಮೆ ಮಸೂದೆಯನ್ನು ಅಂಗೀಕರಿಸಿದರೆ ಮತ್ತೆ ಆ ಸಂಸ್ಥೆಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತವೂ ಇರುವುದಿಲ್ಲ. ಆಡಳಿತ ಮಂಡಳಿಗಳ ಸ್ವೇಚ್ಛಾಚಾರಕ್ಕೆ ಇದು ದಾರಿಯಾಗುತ್ತದೆ' ಎಂದು ವಾದಿಸಿದರು.

`ರಾಷ್ಟ್ರದಲ್ಲಿ ವಿ.ವಿಗಳ ಕೊರತೆ ಇರುವುದು ನಿಜ. ರಾಷ್ಟ್ರೀಯ ಜ್ಞಾನ ಆಯೋಗ ಖಾಸಗಿ ವಿ.ವಿಗಳ ಆರಂಭಕ್ಕೆ ಶಿಫಾರಸು ಮಾಡಿದೆ. ಜಗತ್ತಿನಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಮತ್ತು ಸಂಶೋಧನೆ ನಡೆಸುವ ಹತ್ತು ವಿ.ವಿಗಳೂ ಖಾಸಗಿ ವಿ.ವಿಗಳಾಗಿವೆ. ಈಗ ಖಾಸಗಿ ವಿ.ವಿಗಳನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ' ಎಂದು ರವಿ ಮಸೂದೆಯನ್ನು ಸಮರ್ಥಿಸಿಕೊಂಡರು.

ಆದರೆ ಮಸೂದೆ ಅಂಗೀಕರಿಸದಂತೆ ಮತ್ತೆ ಒತ್ತಾಯಿಸಿದ ಸುರೇಶ್ ಗೌಡ, `ಈ ವಿ.ವಿಗಳಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆಯುವುದಿಲ್ಲ. ಆಡಳಿತ ಮಂಡಳಿಗಳು ಮನಸೋಇಚ್ಛೆ ಶುಲ್ಕ ನಿಗದಿ ಮಾಡುತ್ತವೆ. ಆಡಳಿತ ಮಂಡಳಿಗಳಲ್ಲಿ ಶಾಸಕರಿಗೂ ಪ್ರಾತಿನಿಧ್ಯ ನೀಡಬೇಕೆಂಬ ಮನವಿಯನ್ನು ಪರಿಗಣಿಸಿಲ್ಲ' ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿರುವ ಶಾಸಕರಾದ ನೆಹರೂ ಓಲೇಕಾರ್, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಸುರೇಶ್‌ಗೌಡರ ಬೆಂಬಲಕ್ಕೆ ನಿಂತರು. ಅತ್ತ ಸಚಿವ ಬಾಲಚಂದ್ರ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿರುವ ವೈ.ಸಂಪಂಗಿ, ಎಂ.ವಿ.ನಾಗರಾಜು ಮತ್ತಿತರರು ಮಸೂದೆಯನ್ನು ಬೆಂಬಲಿಸಿದರು.

ನಂತರ ಉಡುಪಿ ಶಾಸಕ ರಘುಪತಿ ಭಟ್ ಕೂಡ ಆಕ್ಷೇಪ ಎತ್ತಿದರು. `ಮಣಿಪಾಲ ಸಮೂಹ ಸಂಸ್ಥೆಗಳು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಅಲ್ಲಿ ಉಪನ್ಯಾಸಕರಿಗೆ ಉತ್ತಮ ವೇತನ ನೀಡುತ್ತಾರೆ. ಆದರೆ ಶಿಕ್ಷಕೇತರ ಸಿಬ್ಬಂದಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಾರೆ. ಅವರಿಗೂ ರಾಜ್ಯ ಸರ್ಕಾರದ ವೇತನ ಶ್ರೇಣಿ ಅನ್ವಯವಾಗುವಂತೆ ಮಸೂದೆಯಲ್ಲಿ ಬದಲಾವಣೆ ತರಬೇಕು' ಎಂದು ಆಗ್ರಹಿಸಿದರು.

ಸಚಿವ ರವಿ ಮತ್ತೊಮ್ಮೆ ಮಸೂದೆ ಕುರಿತು ವಿವರಣೆ ನೀಡಿದರು. ಯಾವುದೇ ಸಮಸ್ಯೆಗಳೂ ಉದ್ಭವಿಸುವುದಿಲ್ಲ ಎಂದು ಸಮರ್ಥಿಸಿಕೊಂಡರು. ಈ ಗದ್ದಲದ ನಡುವೆಯೇ ಮಸೂದೆಗೆ ಧ್ವನಿಮತದ ಮೂಲಕ ಅಂಗೀಕಾರ ದೊರೆಯಿತು. ನಂತರ ಸರದಿಯಲ್ಲಿ 12 ಖಾಸಗಿ ವಿ.ವಿಗಳ ಮಸೂದೆಗೆ ಸದನದ ಸಮ್ಮತಿ ದೊರಕಿತು.

ಮಸೂದೆಯಲ್ಲಿ ಏನಿದೆ?
ಖಾಸಗಿ ವಿ.ವಿಯು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೆ 25 ಎಕರೆ, ಪಾಲಿಕೆ ಹೊರಗಿದ್ದು, ಬೆಂಗಳೂರು ನಗರ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದರೆ 50 ಎಕರೆ ಮತ್ತು ಈ ಎರಡೂ ಪ್ರದೇಶಗಳ ಹೊರಗಿದ್ದರೆ 60 ಎಕರೆ ಜಮೀನಿನ ಒಡೆತನ ಹೊಂದಿರಬೇಕು. ಈ ಜಮೀನು ಒಂದೇ ಘಟಕವಾಗಿರಬೇಕು. ನಗದು ಮತ್ತು ಠೇವಣಿ ಸೇರಿ ಕನಿಷ್ಠ 25 ಕೋಟಿ ರೂಪಾಯಿ ಹೊಂದಿರಬೇಕು.

ಖಾಸಗಿ ವಿ.ವಿಗಳು ಶೇಕಡ 40ರಷ್ಟು ಸೀಟುಗಳನ್ನು ರಾಜ್ಯ ಸರ್ಕಾರದ ಕೋಟಾಗೆ ನೀಡಬೇಕು. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರ ಅಧ್ಯಕ್ಷತೆಯ ಶುಲ್ಕ ನಿಯಂತ್ರಣ ಸಮಿತಿಯು ಎಲ್ಲ ವಿ.ವಿಗಳನ್ನು ಪರಿಶೀಲಿಸಿ ಶುಲ್ಕ ನಿರ್ಧರಿಸುತ್ತದೆ. ವಿ.ವಿ ಕುಲಪತಿ, ಕುಲಸಚಿವ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಈ ಸಮಿತಿಯಲ್ಲಿರುತ್ತಾರೆ.

ಪರೀಕ್ಷೆಗಳನ್ನು ನಡೆಸುವುದು ಅಥವಾ ಪದವಿಗಳನ್ನು ನೀಡುವಾಗ, ಅಂಕಪಟ್ಟಿ ನೀಡುವುದಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸಿದರೆ, ಅಕ್ರಮ ಎಸಗಿದರೆ 50 ಸಾವಿರ ರೂಪಾಯಿಯಿಂದ ಹತ್ತು ಲಕ್ಷ ರೂಪಾಯಿವರೆಗೆ ದಂಡ ಮತ್ತು ಆರು ತಿಂಗಳಿನಿಂದ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.

ದಿನಗೂಲಿ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಮಸೂದೆ
ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ದಿನಗೂಲಿ ನೌಕರರಿಗೆ ಸೇವಾ ಭದ್ರತೆ, ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ `ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಮಸೂದೆ-2012'ಕ್ಕೆ ಗುರುವಾರ ವಿಧಾನಮಂಡಲದ ಉಭಯ ಸದನಗಳ ಒಪ್ಪಿಗೆ ದೊರೆಯಿತು.

2006ರ ಏಪ್ರಿಲ್ 10ಕ್ಕೆ ಅನ್ವಯವಾಗುವಂತೆ ಹತ್ತು ವರ್ಷದ ಸೇವೆಯನ್ನು ಪೂರೈಸಿರುವ ಎಲ್ಲ ದಿನಗೂಲಿ ನೌಕರರು ಈ ಮಸೂದೆ ವ್ಯಾಪ್ತಿಗೆ ಬರುತ್ತಾರೆ. ಈ ನೌಕರರನ್ನು 60 ವರ್ಷ ತುಂಬುವವರೆಗೂ ಸೇವೆಯಲ್ಲಿ ಮುಂದುವರಿಸಲು ಈ ಮಸೂದೆ ಅವಕಾಶ ಒದಗಿಸುತ್ತದೆ.

ನೇಮಕಾತಿಯ ದಿನದಂದು ಆ ಹುದ್ದೆಗೆ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನು ಹೊಂದಿರದ ನೌಕರರನ್ನು ಸೇವೆಯಲ್ಲಿ ಮುಂದುವರಿಸುವಂತಿಲ್ಲ. ಮಸೂದೆ ಕಾಯ್ದೆಯ ಸ್ವರೂಪ ಪಡೆದು ಜಾರಿಗೆ ಬಂದ ಒಂದು ವರ್ಷದೊಳಗೆ ಎಲ್ಲ ಅರ್ಹ ದಿನಗೂಲಿ ನೌಕರರ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ಪ್ರಕಟಿಸಬೇಕು.

ದಿನಗೂಲಿ ನೌಕರರಿಗೆ ಅವರು ಇರುವ ಹುದ್ದೆಯ ಶ್ರೇಣಿಗೆ ಆಯಾ ಕಾಲದಲ್ಲಿ ನೀಡುವ ವೇತನದ ಕನಿಷ್ಠ ಮೊತ್ತವನ್ನು ನೀಡಲೇಬೇಕು. ಆಯಾ ಹುದ್ದೆಗಳಿಗೆ ಅರ್ಹವಾದ ತುಟ್ಟಿಭತ್ಯೆ ಮತ್ತು ಮನೆಬಾಡಿಗೆ ಭತ್ಯೆಯನ್ನು ಸರ್ಕಾರ ಕಾಲಕಾಲಕ್ಕೆ ಪಾವತಿಸಬೇಕು. ಈ ನೌಕರರಿಗೆ ಎಲ್ಲಾ ಸಾರ್ವತ್ರಿಕ ರಜಾ ದಿನಗಳಂದು ರಜೆ ಇರುತ್ತದೆ. ವಾರ್ಷಿಕ 15 ದಿನಗಳ ಸಾಂದರ್ಭಿಕ ರಜೆ ಮತ್ತು ಒಂದು ತಿಂಗಳ ಗಳಿಕೆ ರಜೆಯನ್ನು ಈ ನೌಕರರಿಗೆ ನೀಡಬೇಕು. ನೌಕರನಿಗೆ 60 ವರ್ಷ ತುಂಬಿದಾಗ ನಿವೃತ್ತಿ ಹಂತದ ಸೌಲಭ್ಯ ಮತ್ತು ಎಕ್ಸ್‌ಗ್ರೇಷಿಯಾ ಪಾವತಿಸಬೇಕು.

ಈ ಮಸೂದೆಯ ಜಾರಿಯಿಂದ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ವಾರ್ಷಿಕ 100 ಕೋಟಿ ರೂಪಾಯಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಷಿಕ 70 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 17,000 ದಿನಗೂಲಿ ನೌಕರರಿಗೆ ಈ ಮಸೂದೆಯಿಂದ ಅನುಕೂಲ ದೊರೆಯಲಿದೆ ಎಂದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ವಿಧಾನಸಭೆಗೆ ತಿಳಿಸಿದರು.

ಸಿಐಡಿ ತನಿಖೆ ಚುರುಕು
ಬೆಳ್ತಂಗಡಿ ತಾಲ್ಲೂಕಿನ ಉಜಿರೆ  ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತ ಸಿಐಡಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು  ಗೃಹ ಸಚಿವ ಆರ್. ಅಶೋಕ ತಿಳಿಸಿದರು.

   ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಮೋಟಮ್ಮ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೌಜನ್ಯಾ ಅವರ ಪಾಲಕರ ಆಶಯದಂತೆ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದರು.

   ಇದಕ್ಕೂ ಮುನ್ನ ಮಾತನಾಡಿದ ಮೋಟಮ್ಮ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಂತೋಷ್ ರಾವ್ ಮಾನಸಿಕ ಅಸ್ವಸ್ಥ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ಆತನಿಂದ ಅತ್ಯಾಚಾರ ನಡೆದಿದೆ ಎನ್ನುವಂತೆ ವೈದ್ಯಕೀಯ ವರದಿ ಹೇಳುತ್ತಿದೆ. ಎರಡೂ ಹೇಳಿಕೆಗಳಲ್ಲಿ ಗೊಂದಲವಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರಿಗೆ  ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಗೋವಧೆ ಪ್ರತಿಬಂಧಕ ಮಸೂದೆ ಅಂಗೀಕಾರ
ಸುವರ್ಣ ವಿಧಾನಸೌಧ (ಬೆಳಗಾವಿ):  
      `ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಕಾಯ್ದೆ-1964'ರಲ್ಲಿನ `ಗೋವು' ಪದದ ವ್ಯಾಪ್ತಿಯನ್ನು ವಿಸ್ತರಿಸಿ ಎತ್ತು ಮತ್ತು ಹೋರಿಗಳನ್ನೂ ಅದರಡಿ ತರುವ `ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಮಸೂದೆ-2012'ಕ್ಕೆ ವಿಧಾನಮಂಡಲದ ಉಭಯ ಸದನಗಳು ಗುರುವಾರ ಅಂಗೀಕಾರ ನೀಡಿದವು.

ಪಶು ಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಈ ಮಸೂದೆಯನ್ನು ಮಂಡಿಸಿದರು. ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಗೋವು ಎಂಬ ಪದದ ವ್ಯಾಪ್ತಿಯಲ್ಲಿ ಎತ್ತು ಮತ್ತು ಹೋರಿಯನ್ನೂ ಈ ತಿದ್ದುಪಡಿ ಮೂಲಕ ಸೇರಿಸಲಾಯಿತು. `ಗೋವಿನ ಕರು' ಎಂಬ ಪದಕ್ಕೆ `ಹೆಣ್ಣಿರಲಿ, ಗಂಡಿರಲಿ' ಎಂಬ ಪದಗಳನ್ನೂ ಜೋಡಿಸಲಾಯಿತು. `ಎಮ್ಮೆ' ಮತ್ತು `ಕೋಣ'ಗಳನ್ನು ಈ ಪದದ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಕಾಯ್ದೆಯ ವ್ಯಾಪ್ತಿಯಲ್ಲಿ ಅವಕಾಶ ನೀಡಿರುವ ಪ್ರಾಣಿಗಳ ವಧೆಗೆ ಹನ್ನೆರಡು ವರ್ಷಗಳ ವಯಸ್ಸನ್ನು ಈ ಹಿಂದಿನ ಕಾಯ್ದೆಯಲ್ಲಿ ನಿಗದಿ ಮಾಡಲಾಗಿತ್ತು. ಅದನ್ನು 15 ವರ್ಷಗಳಿಗೆ ಹೆಚ್ಚಿಸುವ ತಿದ್ದುಪಡಿಯನ್ನು ಈ ಮಸೂದೆ ಒಳಗೊಂಡಿದೆ. ಈ ರೀತಿ ವಯಸ್ಸಿನ ಆಧಾರದಲ್ಲಿ ಪ್ರಾಣಿಗಳ ವಧೆಗೆ ಅನುಮತಿ ನೀಡುವುದಕ್ಕೆ ಪ್ರಾಧಿಕಾರ ರಚಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ.

ಈ ಕಾಯ್ದೆಗೆ ವಿರುದ್ಧವಾಗಿ ಜಾನುವಾರುಗಳನ್ನು ಹತ್ಯೆ ಮಾಡುವ ಅಥವಾ ಹತ್ಯೆಗೆ ಪ್ರೇರೇಪಿಸುವ ಅಪರಾಧ ಎಸಗಿದವರಿಗೆ ವಿಧಿಸುತ್ತಿದ್ದ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನೂ ಹೆಚ್ಚಿಸುವ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ.

ಈ ತಿದ್ದುಪಡಿ ಪ್ರಕಾರ, ಕಾಯ್ದೆ ಉಲ್ಲಂಘನೆ ಸಾಬೀತಾದಲ್ಲಿ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. 25,000 ರೂಪಾಯಿಯಿಂದ ರೂ 50,000ದವರೆಗೆ ದಂಡ ವಿಧಿಸಬಹುದು. ಎರಡನೇ ಬಾರಿ ಅಪರಾಧ ಎಸಗಿರುವುದು ಸಾಬೀತಾದರೆ ದಂಡದ ಮೊತ್ತವನ್ನು ರೂ 50,000ದಿಂದ ರೂ 1 ಲಕ್ಷದವರೆಗೂ ಹೆಚ್ಚಿಸಬಹುದು.

ಇತರೆ ಆರೋಪಗಳಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ 10 ಸಾವಿರದಿಂದ ರೂ 25 ಸಾವಿರದ ವರೆಗೆ ದಂಡ ವಿಧಿಸಬಹುದು. ಎರಡೂ ಸಂದರ್ಭಗಳಲ್ಲಿ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ಒಟ್ಟಿಗೆ ವಿಧಿಸಲು ಅವಕಾಶ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT