ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಮಗ್ರ ಚಾಂಪಿಯನ್

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪುಣೆ: ಕರ್ನಾಟಕ ತಂಡದವರು ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ 1991ರಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗಳಿಸ್ದ್ದಿದರು. ಆ ಬಳಿಕ ಈ ತಂಡದವರ ವಿಜಯದ ಓಟಕ್ಕೆ ತಡೆಯೇ ಇಲ್ಲ. ಶನಿವಾರ ಸಂಜೆ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ರಾಜ್ಯ ತಂಡದವರು ಮತ್ತೆ ಸಂಭ್ರಮಿಸಲು ಕಾರಣವಿತ್ತು.

ಏಕೆಂದರೆ ಕರ್ನಾಟಕ ತಂಡದವರು ಮತ್ತೊಮ್ಮೆ ಸಮಗ್ರ ಚಾಂಪಿಯನ್ ಆದರು. ವಿಶೇಷವೆಂದರೆ ಸತತ 22ನೇ ಬಾರಿ ಈ ಪಟ್ಟ ಒಲಿಯುತ್ತಿದೆ. 1991ರಿಂದ 2012ರ ನಡುವೆ ಬೇರೆ ಯಾವುದೇ ತಂಡಕ್ಕೆ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕನ್ನಡಿಗರು ಅದಕ್ಕೆ ಅವಕಾಶವನ್ನೇ ನೀಡಿಲ್ಲ.

ಶನಿವಾರ ಇಲ್ಲಿ ಕೊನೆಗೊಂಡ 66ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಕರ್ನಾಟಕ ಮತ್ತೆ ಆ ಸಾಧನೆಯನ್ನು ಪುನರಾವರ್ತಿಸಿತು. ಸಮೀಪದ ಪ್ರತಿಸ್ಪರ್ಧಿ ಮಹಾರಾಷ್ಟ್ರ (214) ತಂಡವನ್ನು ಹಿಂದಿಕ್ಕಿದ ಈ ತಂಡದವರು ಒಟ್ಟು 272 ಪಾಯಿಂಟ್ಸ್ ಕಲೆಹಾಕಿದರು. ಪುರುಷರ ತಂಡ ವಿಭಾಗದಲ್ಲೂ ಚಾಂಪಿಯನ್ ಪಟ್ಟ ಪಡೆದರು. 

 ಕರ್ನಾಟಕ ತಂಡದವರು (13 ಚಿನ್ನ, 13 ಬೆಳ್ಳಿ, 8 ಕಂಚು) ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು. ಆತಿಥೇಯ ಮಹಾರಾಷ್ಟ್ರ ತಂಡದವರು (12 ಚಿನ್ನ, 7 ಬೆಳ್ಳಿ ಹಾಗೂ 11 ಕಂಚು) ಎರಡನೇ ಸ್ಥಾನ ಗಳಿಸಿದರು.
ಆದರೆ ಮಹಿಳೆಯರ ತಂಡ ವಿಭಾಗದಲ್ಲಿ ಮಹಾರಾಷ್ಟ್ರ ಚಾಂಪಿಯನ್ ಆಯಿತು. ಪುರುಷರ ವಿಭಾಗದ ವೈಯಕ್ತಿಕ ಪ್ರಶಸ್ತಿ ಮಹಾರಾಷ್ಟ್ರದ ವೀರಧವಳ್ ಖಾಡೆ (ಐದು ಚಿನ್ನದ ಪದಕ) ಪಾಲಾಯಿತು. ಮಹಿಳೆಯರ ವಿಭಾಗದಲ್ಲಿ ಈ ಶ್ರೇಯವನ್ನು ಪೊಲೀಸ್ ತಂಡದ ರಿಚಾ ಮಿಶ್ರಾ (ಐದು ಚಿನ್ನದ ಪದಕ) ಪಡೆದರು. ಸತತ ಏಳನೇ ಹಾಗೂ ಒಟ್ಟು 10ನೇ ಬಾರಿ ಅವರಿಗೆ ಈ ಗೌರವ ಒಲಿಯಿತು.

ಅಂತಿಮ ದಿನದ ಸ್ಪರ್ಧೆಗಳಲ್ಲಿ ಕರ್ನಾಟಕದ ಆ್ಯರನ್ ಡಿಸೋಜಾ (200 ಮೀ.ಬಟರ್‌ಫ್ಲೈ, 2:01.47 ಸೆ.), ಪೂಜಾ ಆರ್.ಆಳ್ವಾ (200 ಮೀ. ಬಟರ್‌ಫ್ಲೈ) ಹಾಗೂ ಸೌರಭ್ ಸಾಂಗ್ವೇಕರ್ (1500 ಮೀ.ಫ್ರೀಸ್ಟೈಲ್) ಚಿನ್ನದ ಪದಕ ಗೆದ್ದರು.

13ರ ಹರೆಯದ ದಾಮಿನಿ ಕೆ.ಗೌಡ 200 ಮೀ.ಬಟರ್‌ಫ್ಲೈನಲ್ಲಿ ಕಂಚಿನ ಪದಕ ಗೆದ್ದರು. ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಸಿಕ್ಕ ಮೊದಲ ಪದಕವಿದು. ಅವರು ಈ ವರ್ಷದ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿದ್ದರು. 100 ಮೀ.ಫ್ರೀಸ್ಟೈಲ್‌ನಲ್ಲಿ ಆ್ಯರನ್ ಡಿಸೋಜಾ ಹಾಗೂ 1500 ಮೀ.ಫ್ರೀಸ್ಟೈಲ್‌ನಲ್ಲಿ ಎ.ಪಿ.ಗಗನ್ ಬೆಳ್ಳಿ ಗೆದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT