ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಕಲಾಪ: ಹಸೆಯ ನೆನಪಿನ ಚಿತ್ತಾರ...

Last Updated 16 ಮೇ 2012, 19:30 IST
ಅಕ್ಷರ ಗಾತ್ರ

`ಆಗಿನ್ನೂ ನನಗೆ ಸುಮಾರು ಹನ್ನೆರಡು ವರ್ಷ. ಅಮ್ಮ ಅಡುಗೆ ಮಾಡುತ್ತಿದ್ದ ಒಲೆಯ ಹಿಂದಿನ ಗೋಡೆ ಮೇಲಿನ ಹಸೆ ಚಿತ್ತಾರ ಕಣ್ಣಿಗೆ ರಾಚುತಿತ್ತು. ಮನೆ ಕೆಲಸವೆಲ್ಲಾ ಪಟಪಟನೆ ಮುಗಿಸಿ ಬಿಡುವಿನ ವೇಳೆಯಲ್ಲಿ ಆ ಮಣ್ಣಿನ ಗೋಡೆಗೆ ಹಸೆ ಚಿತ್ರ ಬಿಡಿಸುತ್ತಿದ್ದ ಆಕೆ ನಿನ್ನೆ ಮೊನ್ನೆಯಷ್ಟೇ ಕೈ ಹಸಿ ಮಾಡಿಕೊಂಡು ಚಿತ್ರ ಬಿಡಿಸಿರುವಂತಿದೆ~
-ಕಲಾವಿದ ಚಂದ್ರಶೇಖರ್ ಕಾಡುವ ಬಾಲ್ಯದ ನೆನಪನ್ನೊಮ್ಮೆ ಕೆದಕಿದರು.

ಅಮ್ಮನ ಕಾಲದ ಹಸೆಚಿತ್ರದಂತಹ  ಕಲೆ ಗಾಢ ಪ್ರಭಾವ ಬೀರಿದ್ದು ಮತ್ತು ಚಿತ್ರಕಾರನಾಗಿ ರೂಪುಗೊಳ್ಳಲು ವೇದಿಕೆಯಾದದ್ದು ಅದೇ ಗೋಡೆಚಿತ್ತಾರಗಳು ಎಂಬ ಭಾವ ಅವರ ನೋಟದಲ್ಲಿ ಎದ್ದು ಕಾಣುತ್ತಿತ್ತು. ಅವರ ಚಿತ್ರಗಳಲ್ಲಿ ಗ್ರಾಮೀಣ ಭಾಗದ ಕಲೆಯನ್ನು ಉಳಿಸುವ ಸಂದೇಶದ ಗಟ್ಟಿ ಛಾಪು ಇದಕ್ಕೆ ಮತ್ತೊಂದು ಸಾಕ್ಷಿ. ಜಯನಗರದ ಜೆನಿಸಸ್ ಕಲಾ ಗ್ಯಾಲರಿಯಲ್ಲಿ ಮೊನ್ನೆಯಷ್ಟೇ ನಡೆದ  ಅವರ ಕಲಾಕೃತಿಗಳ ಪ್ರದರ್ಶನದಲ್ಲಿ ಮೇಲುಗೈ ಸಾಧಿಸಿದ್ದೂ ಗ್ರಾಮೀಣ ಸೊಗಡೇ.

ಹಾಸನ ಜಿಲ್ಲೆ ಹೊಳೆನರಸೀಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿರುವ ಚಂದ್ರಶೇಖರ ಅವರ ಚಿತ್ರಗಳು ವಿಶಿಷ್ಟವೆನಿಸಿದ್ದು ಈ ಕಾರಣಕ್ಕೇ.

ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಒಳಾಂಗಣವನ್ನು ಸುಂದರವಾಗಿಸಲು ಅಮ್ಮಂದಿರು ನೈಸರ್ಗಿಕ ಬಣ್ಣದಿಂದ ಬಿಡಿಸುತ್ತಿದ್ದ ಹಸೆ ಕಲೆ ಹಾಗೂ ಸೀಮೆ ಸುಣ್ಣದಿಂದ ಬಿಡಿಸುತ್ತಿದ್ದ ಚಿತ್ರಗಳು ಇಂದಿನ ದಿನಗಳಲ್ಲಿ ಕಾಣದಾಗಿದೆ. ಹಾಗಾಗಿ ಇಂಥ ಕಲೆಗಳ ಬಗ್ಗೆ ಗಮನ ಕೇಂದ್ರೀಕರಿಸಿ ಚಿತ್ರ ಬಿಡಿಸಲು ಮುಂದಾಗಿದ್ದಾರೆ ಚಂದ್ರಶೇಖರ್.

ಕಪ್ಪಂಚಿನ ಮನೆ, ಗುಡಿಸಲೇ ಇರಲಿ ಆ ಮನೆಗಳ ಹೊರಭಾಗ ಮತ್ತು ಒಳ ಭಾಗದಲ್ಲಿ ಬಿಡಿಸುತ್ತಿದ್ದ ಚಿತ್ರಗಳು ಮನೆಯ ಅಂದವನ್ನು ಹೆಚ್ಚಿಸಿದ್ದವು. ಆಧುನಿಕತೆ ಬೆಳೆದಂತೆ ಇಂಥ ಕಲೆಗಳೂ ಕಣ್ಮರೆಯಾಗುತ್ತಿವೆ. ಆದ್ದರಿಂದ ಚಿತ್ರಕಲೆಯ ಮೂಲಕವಾದರೂ ಆ ಕಲೆ ಜೀವಂತವಾಗಿಸುವ ಪ್ರಯತ್ನ ಮಾಡುತ್ತಿರುವುದಾಗಿ ಚಂದ್ರಶೇಖರ್ ಹೇಳುತ್ತಾರೆ.

`ಪ್ರಕೃತಿ ಉಳಿಸಿ~ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿದ ಚಿತ್ರಗಳಲ್ಲಿ ಜೀವಧ್ವನಿಯಿದೆ. ಸೇಂದಿ ಕೊಡುವ ಈಚಲು ಮರ ತನ್ನ ಸೌಂದರ್ಯ ಉಳಿಸಿಕೊ
ಳ್ಳಲು ಹವಣಿಸುತ್ತದೆ ಎಂಬುದನ್ನು ಚಿತ್ರದಲ್ಲಿ ಚಂದ್ರಶೇಖರ್ ಸೆರೆಹಿಡಿದಿದ್ದಾರೆ.

ಕಡಲ ತಡಿಯಲ್ಲಿ ಒಣಹಾಕಿದ ಬಟ್ಟೆಯ ಮೇಲೂ ಚಿತ್ರಗಳ ಚಿತ್ತಾರವಿದೆ. ತೈಲವರ್ಣದ ಲ್ಯಾಂಡ್‌ಸ್ಕೇಪ್ ಚಿತ್ರದಲ್ಲಿ, ಮಲೆನಾಡು, ಹಸಿರು ಗದ್ದೆಯ ಬಯಲಿನಲ್ಲಿ ಕಣ್ಣಿಗೆ ರಾಚುತ್ತದೆ ಕಲಾವಿದನ ಪ್ರಕೃತಿ ಪ್ರೇಮ.

ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆ, ಮನೆಯ ಸುತ್ತಲಿನ ಕಾನನ ಹಾಗೂ ಕವಿಶೈಲದ ಆಕರ್ಷಕ ತೈಲಚಿತ್ರಗಳು ಗಮನ ಸೆಳೆಯುತ್ತವೆ. ಅಲ್ಲೊಂದು ಕನ್ನಡಿಯಲ್ಲಿ ನೇತು ಹಾಕಿದ ಸೇಬು ಹಾಗೂ ಹೂಜಿಯ ಪ್ರತಿಬಿಂಬ ನಮ್ಮನ್ನು ತಡೆಯುತ್ತದೆ.

ಹಿನ್ನೆಲೆಯಲ್ಲಿ ಸಮುದ್ರ! ಅಲ್ಲಿಂದಲೇ ಎದ್ದು ಬಂದಂತೆ ಭಾಸವಾಗುವುದು ಅದರ ನೈಜತೆಗೆ ಸಾಕ್ಷಿ. ತಮ್ಮೂರಿನ ಪ್ರಾಚೀನ ಕಾಲದ ದೇವಾಲಯದ ಚಿತ್ರಗಳು ಕ್ಯಾನ್ವಾಸ್‌ಗೆ ಜೀವತುಂಬಿದ್ದರೂ ಶಿವನ ದೇವಾಲಯ ಮಾತ್ರ ಆಧುನಿಕ ಸ್ಪರ್ಶಕ್ಕೆ ಸಿಲುಕಿ ನೈಜತೆ ಕಳಕೊಂಡಿದೆ.

ಚಂದ್ರಶೇಖರ್ ಅವರದ್ದು ನಗರದಲ್ಲಿ ಐದನೇ ಪ್ರದರ್ಶನವಿದು. ಕೊಚ್ಚಿನ್, ಪಾಂಡಿಚೇರಿ, ಹೈದರಾಬಾದ್, ಮುಂಬೈ, ಚೆನ್ನೈನಲ್ಲೂ ಇವರ ಪ್ರದರ್ಶನ ನಡೆದಿವೆ. ಕೆ.ಎಂ. ರಾಮಚಂದ್ರ, ಬಿ.ಎಸ್. ದೇಸಾಯಿ, ಗಣೇಶ ದೊಡ್ಡಮನಿ ಅವರಂತಹ ಹಿರಿಯ ಕಲಾವಿದರ ಜೊತೆಗೂಡಿ ಸಮೂಹ ಚಿತ್ರಕಲಾ ಪ್ರದರ್ಶನ ಆಯೋಜಿಸಿರುವುದು ನನಗೆ ಹೆಮ್ಮೆ ಎನ್ನುತ್ತಾರೆ ಅವರು.

ಹಾಸನ ಜಿಲ್ಲೆ ಹೀರಿಬಿಳ್ತಿ ಹಳ್ಳಿಯಲ್ಲಿ ಹುಟ್ಟಿದ ಚಂದ್ರಶೇಖರ್ ಅವರಿಗೆ ತಂದೆ ತಾಯಿಯ ಪ್ರೋತ್ಸಾಹವೇ ಕಾರಣವಂತೆ. ಮನೆಯ ಒಳಾಂಗಣ ಚಿತ್ರಕ್ಕೆ ಲಲಿತ ಕಲಾ ಅಕಾಡೆಮಿಯ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳೂ ಇವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT