ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಒಂದೆಡೆ; ಬಿಸಿಯೂಟ ಇನ್ನೊಂದೆಡೆ

Last Updated 4 ಜುಲೈ 2013, 7:26 IST
ಅಕ್ಷರ ಗಾತ್ರ

ಯಾದಗಿರಿ: ಶಹಾಪುರ ತಾಲ್ಲೂಕಿನ ಕೊಂಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಯೂಟ ಸವಿಯಬೇಕಾದರೆ  ಅರ್ಧ ಕಿಲೋಮೀಟರ್ ನಡೆಯಲೇಬೇಕು!

ಈ ಶಾಲೆಯ ವಿದ್ಯಾರ್ಥಿಗಳು ಮಳೆ, ಬಿಸಿಲನ್ನು ಲೆಕ್ಕಿಸದೇ ಹಸಿವು ನೀಗಿಸಿಕೊಳ್ಳಲು ದೂರದಲ್ಲಿರುವ ಪ್ರಾಥಮಿಕ ಶಾಲೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು. ಊಟದ ನಂತರ ನೀರು ಕುಡಿಯುವುದಕ್ಕೂ ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.

ಒಂದರಿಂದ ಏಳನೇ ತರಗತಿಯವರೆಗೆ ಸುಮಾರು 417 ವಿದ್ಯಾರ್ಥಿಗಳು, ಪ್ರೌಢಶಾಲೆಯಲ್ಲಿ 156 ವಿದ್ಯಾರ್ಥಿಗಳು ಇದ್ದಾರೆ. ಇವರೆಲ್ಲ ಊಟ ಮುಗಿಸಿ, ನೀರು ಕುಡಿಯಬೇಕಾದರೂ, ಎಂಜಲು ಕೈ ಹಾಗೂ ತಟ್ಟೆ ತೊಳೆಯಲು ಸರತಿ ಸಾಲಿನಲ್ಲಿ ಕಾಯುವ ಅನಿವಾರ್ಯತೆ ಎದುರಾಗಿದೆ.

`ಒಂದು ಕಡೆ ಕಲಿಕೆ, ಇನ್ನೊಂದೆಡೆ ಬಿಸಿಯೂಟ ಸೇವಿಸಲು ಅರ್ಧ ಕಿ.ಮೀ ನಡೆಯಬೇಕು ಎನ್ನುವ ಚಿಂತೆಯಲ್ಲಿಯೇ ನಿತ್ಯ ಕಾಲ ಕಳೆಯುಂತಾಗಿದೆ. ಓಡಾಡುವುದರಲ್ಲಿ ಸಮಯ ಹೋಗುತ್ತಿದ್ದು, ವಿದ್ಯಾಭ್ಯಾಸದತ್ತ ಗಮನ ನೀಡಲು ಆಗುತ್ತಿಲ್ಲ' ಎಂದು ವಿದ್ಯಾರ್ಥಿಗಳು ನೊಂದು ಹೇಳುತ್ತಾರೆ.

ಇದರ ಜೊತೆಗೆ ಶಾಲೆಯ ಆವರಣದಲ್ಲಿ ಒಂದೇ ಕೊಳವೆಬಾವಿ ಇದೆ. ಇದರಲ್ಲಿಯೇ ನೀರು ಕುಡಿದು, ತಟ್ಟೆ ತೊಳೆದು ಬರುವಷ್ಟರಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳ ಮಧ್ಯಾಹ್ನದ ಒಂದು ಅವಧಿಯ ತರಗತಿ ಮುಗಿದು ಹೋಗಿರುತ್ತದೆ.

ಸಾರಿಗೆ ವೆಚ್ಚವಿಲ್ಲ: `ಈ ಹಿಂದೆ ಪ್ರಾಥಮಿಕ ಶಾಲೆಯ ಅಡುಗೆ ಕೇಂದ್ರದಲ್ಲಿ ಬಿಸಿಯೂಟ ತಯಾರಿಸಿ ಪ್ರೌಢಶಾಲೆಗೆ ಸರಬರಾಜು ಮಾಡಲಾಗುತ್ತಿತ್ತು. ಆಗ ಸಾರಿಗೆ ವೆಚ್ಚವಾಗಿ ರೂ. 500 ಅನ್ನು ಅಡುಗೆ ಮಾಡುವ ಸಿಬ್ಬಂದಿಗೆ ಕೊಡಲಾಗುತ್ತಿತ್ತು. ಈಗ ಸಾರಿಗೆ ವೆಚ್ಚದ ಹಣ ನಿಲ್ಲಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಿಸಿಯೂಟಕ್ಕಾಗಿ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗುವಂತಾಗಿದೆ.
  ಕಳೆದ ವರ್ಷ ಪ್ರೌಢಶಾಲೆಯ ಅಡುಗೆ ಕೇಂದ್ರಕ್ಕೆ ಎಸ್‌ಡಿಎಂಸಿ ಸದಸ್ಯರು ಕಾನೂನುಬಾಹಿರವಾಗಿ ಅಡುಗೆ ಸಿಬ್ಬಂದಿಗಳ ನೇಮಕ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಈ ನೇಮಕಾತಿ ರದ್ದುಪಡಿಸಲಾಯಿತು.

  ಹೀಗಾಗಿ ಪ್ರೌಢಶಾಲೆಯ ಬಿಸಿಯೂಟವನ್ನು ಪ್ರಾಥಮಿಕ ಶಾಲೆಗೆ ವಿಲೀನಗೊಳಿಸಲಾಗಿದೆ' ಎಂದು ಗ್ರಾಮಸ್ಥರು ಹೇಳುತ್ತಾರೆ.  
ಸಿಬ್ಬಂದಿ ನೇಮಕಕ್ಕೆ ಸೂಚನೆ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟದ ಅಡುಗೆ ಸಿಬ್ಬಂದಿ ನೇಮಕವಾಗದೇ ಇರುವುದರಿಂದ ತೊಂದರೆ ಆಗಿದೆ. ಈ ಬಗ್ಗೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತನಾಡಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗುವುದು. ಈ ಸಮಸ್ಯೆ ನಿವಾರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಡಿ.ಎಂ.ಹೊಸಮನಿ ಹೇಳಿದ್ದಾರೆ.

`ಸದ್ಯಕ್ಕೆ ಮಳೆಗಾಲ ಆರಂಭವಾಗುತ್ತಿದ್ದು, ಈಗ ಮಕ್ಕಳಿಗೆ ತೊಂದರೆ ಆಗಬಾರದು.  ಎರಡು ದಿನದಲ್ಲಿ ಪ್ರೌಢಶಾಲೆಯಲ್ಲಿಯೇ ಬಿಸಿಯೂಟ ಆರಂಭಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT