ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಆನಂದ ಸಿಗದು

ಶಿಕ್ಷಣ ಶಿಕ್ಷೆ ಬೇಕೇ? ಚರ್ಚಾ ಸರಣಿ ಭಾಗ 9
Last Updated 17 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹೂವು ಅರಳುವುದು, ಮುದುಡುವುದು ಎರಡು ಕ್ರಿಯೆಗಳೂ ಹೇಗೆ ಹೂವಿಗೆ ಪರಸ್ಪರ ವಿರುದ್ಧ ರೂಪ, ಗುಣ ಕೊಡುತ್ತವೋ ಅದೇ ರೀತಿ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಶಿಕ್ಷೆ ಪೂರಕವಾಗುವುದರ ಬದಲು ವಿರುದ್ಧ ಕ್ರಿಯೆ ಆಗಿರುತ್ತದೆ.

ಶಿಕ್ಷಣದಲ್ಲಿ ಶಿಕ್ಷೆ ಅನಿವಾರ್ಯವಲ್ಲ. ಸಂಸ್ಕೃತದ `ಶಿಕ್ಷಾ' ಎಂಬ ಪದದಿಂದ ಶಿಕ್ಷಣ ಬಂದಿದೆ. ಶಿಕ್ಷಾ ಎಂದರೆ `ಕಲಿಕೆ' ಎಂದರ್ಥ. ಸಂಸ್ಕೃತದ `ಶಿಕ್ಷಾ' ಕನ್ನಡದ `ಶಿಕ್ಷೆ' ಅಲ್ಲ. ಆದರೆ ಶಿಕ್ಷೆ, ಶಿಕ್ಷಣ ಎರಡೂ ಜೋಡಿ ಪದಗಳ ರೀತಿಯಲ್ಲಿ ಬಳಕೆ ಆಗುತ್ತಿವೆ. ಭಾಷಾ ಪ್ರಯೋಗದ ದೃಷ್ಟಿಯಿಂದಲೂ ಇದು ತಪ್ಪು.

ಶಿಕ್ಷಣ ಎಂದರೆ ಕಲಿಸುವುದು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದರಿಂದ ಕಲಿಕೆ ಸುಲಭವಾಗುತ್ತದೆ. ಶಿಕ್ಷೆಯಿಂದ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡಲು ಪ್ರಯತ್ನ ಮಾಡಬಹುದೇ ಹೊರತು, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಕುರಿ ಎದುರು ಮೇಯಲು ಸಮೃದ್ಧವಾಗಿ ಹುಲ್ಲು ಹಾಕಿ ಎದುರಿಗೆ ಸಿಂಹವನ್ನು ಕಟ್ಟಿಹಾಕಿದರೆ ಹೇಗಾಗುತ್ತದೆ? ಮಕ್ಕಳಿಗೆ ಶಿಕ್ಷೆ ಎಂಬುದು ಸಿಂಹ ಇದ್ದ ಹಾಗೆ. ಶಿಕ್ಷೆಯ ಭಯದಲ್ಲಿ ಎಷ್ಟೇ ಕಲಿಸಿದರೂ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ಅಲ್ಲದೆ ಕಲಿಕೆಯ ಆನಂದವನ್ನೂ ಅವರು ಅನುಭವಿಸುವುದಿಲ್ಲ.

ಶಿಕ್ಷಕರು ಮಕ್ಕಳಿಗೆ ಕಲಿಸಬೇಕು ಎಂಬ ಸಲುವಾಗಿ ಪಾಠ ಮಾಡುವರೋ ಅಥವಾ ನಾನು ಹೇಳಿದ್ದನ್ನು ಕೇಳಬೇಕು ಎಂಬ ಉದ್ದೇಶದಿಂದ ಕಲಿಸುವರೋ?   ನಾನು ಹೇಳಿದ್ದನ್ನು ಎಲ್ಲ ಮಕ್ಕಳೂ ಕೇಳಬೇಕು ಎಂದು ಶಿಕ್ಷಕರು ಭಾವಿಸುವುದಾದರೆ ಅಲ್ಲಿ ಮಕ್ಕಳಿಗೆ ಬೆಲೆಯೇ ಇರುವುದಿಲ್ಲ. ಮಕ್ಕಳಿಗೂ ಒಂದು ವ್ಯಕ್ತಿತ್ವ ಇದೆ, ಸ್ವಾಭಿಮಾನ ಇದೆ, ಅವರ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ಕಲಿಸಬೇಕು, ಉತ್ತೇಜನ ಕೊಡಬೇಕು, ಅವರ ಭಾವನೆಗಳಿಗೆ ಬೆಲೆ ಕೊಡಬೇಕು ಎಂಬ ಎಚ್ಚರ ಶಿಕ್ಷಕರಿಗೆ ಇರಬೇಕು.

ಸಾಮಾನ್ಯವಾಗಿ ಬಹುತೇಕರು ಹೇಳುವಂತೆ `ಮೊದಲೆಲ್ಲ ಎಷ್ಟೊಂದು ಹೊಡೀತಿದ್ದರು, ಹಾಗಾಗಿ ನಾವು ಚೆನ್ನಾಗಿ ಕಲಿಯಲು ಸಾಧ್ಯವಾಯಿತು' ಎನ್ನುವ ಮಾತಿನಲ್ಲಿ ಹುರುಳಿಲ್ಲದೇ ಇರಬಹುದು. ಹೊಡೆದು, ಹೊಡೆದು ಅವರ ಆಲೋಚನಾ ಶಕ್ತಿ ಕುಗ್ಗಿರಬಹುದು. ಹೊಡೆಸಿಕೊಂಡು ಅವರು `ಇಷ್ಟೇ' ಆಗಿರಬಹುದು. ಮಕ್ಕಳು ಶಿಕ್ಷೆ ಕೊಟ್ಟಾಗ ತಕ್ಷಣಕ್ಕೆ ಕಲಿತದ್ದನ್ನು ಶಿಕ್ಷಕರ ಎದುರು ಒಪ್ಪಿಸಬಹುದು.

ಆದರೆ ಅದು ಪೂರ್ತಿಯಾಗಿ ತಲೆಗೆ ಹೋಗಿರುತ್ತದೆ ಎನ್ನುವುದು ಸುಳ್ಳು. ಹೀಗೆ ಮಾಡುವುದರಿಂದ, ಸರ್ಕಸ್‌ನಲ್ಲಿ ಸಿಂಹಕ್ಕೆ ಹೊಡೆದು, ಹೊಡೆದು ಕಾಲು ಎತ್ತಲು ಅಭ್ಯಾಸ ಮಾಡಿಸಿರುವಂತೆ, ಮಕ್ಕಳು ಹೊಡೆದಾಗ ಮಾತ್ರ ಬಾಯಿ ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಅಳೆಯುವ ಸಾಮರ್ಥ್ಯ
ಶಿಕ್ಷೆಯಿಂದ ಮಕ್ಕಳ ಯೋಚನಾಶಕ್ತಿ ಕಡಿಮೆ ಆಗುತ್ತದೆ. ಸೃಜನಶೀಲತೆ ಕಡಿಮೆ ಆಗುತ್ತದೆ. ಶಿಕ್ಷೆ ಕೊಟ್ಟೂ ಕೊಟ್ಟೂ `ಇಷ್ಟೇ ಯೋಚನೆ ಮಾಡಿ' ಎಂದು ಕಲಿಸಿದಂತೆ ಆಗುತ್ತದೆ. ಹಾಗಾಗಿ ಕಲಿಕಾ ಸಾಮರ್ಥ್ಯ, ಆಲೋಚನಾ ಶಕ್ತಿ ದಿನದಿಂದ ದಿನಕ್ಕೆ ಮಕ್ಕಳಲ್ಲಿ ಕಡಿಮೆ ಆಗುತ್ತಾ ಹೋಗುತ್ತದೆ. ಶಿಕ್ಷಕರು ತಮ್ಮ ದೌರ್ಬಲ್ಯದಿಂದ ಅಥವಾ ಸೀಮಿತವಾದ ಚೌಕಟ್ಟಿನಿಂದ ಮಕ್ಕಳ ಮೌಲ್ಯಮಾಪನ ಮಾಡುವುದರಿಂದ ಮಕ್ಕಳನ್ನು ಶಿಕ್ಷೆಯ ಕಡೆಗೆ ಎಳೆಯುತ್ತಾರೆ.

ಅವೆುರಿಕ, ನಾರ್ವೆ ಮುಂತಾದ ದೇಶಗಳಲ್ಲಿ ಮಕ್ಕಳು ತಪ್ಪು ಉತ್ತರಗಳನ್ನು ಸಹ ಬಹಳಷ್ಟು ಧೈರ‌್ಯವಾಗಿಯೇ ಹೇಳುತ್ತಾರೆ. ತಪ್ಪು ಹೇಳಿ ಸರಿಯಾದದ್ದನ್ನು ಕಲಿಯಬಹುದು. ಆದರೆ ಏನನ್ನೂ ವ್ಯಕ್ತಪಡಿಸದಿದ್ದರೆ ಕಲಿಯುವುದಾದರೂ ಏನನ್ನು? ನಮ್ಮಲ್ಲಿ 3ನೇ ತರಗತಿಯ ಮಗು ಬರೆಯುವುದಿಲ್ಲ ಎಂದರೆ, `ಅಯ್ಯೋ ಬರೆಯಲಿಕ್ಕೂ ಬರಲ್ಲ' ಎಂದು ಹಣೆಪಟ್ಟಿ ಕಟ್ಟುತ್ತೇವೆ. ಆ ಮಗುವಿಗೆ ಬೇರೆ ಏನೆಲ್ಲ ಸಾಮರ್ಥ್ಯ ಇರಬಹುದು. ಬರೆಯಲು ಸಾಧ್ಯವಾಗದ ಮಗುವಿಗೆ ಉತ್ತರಗಳನ್ನು ಬಾಯಲ್ಲಿ ಹೇಳಲು ಬರಬಹುದು, ಪ್ರಯೋಗಗಳ ಮೂಲಕ ತಾನು ಕಲಿತಿರುವುದನ್ನು ತೋರಿಸಲು ಪ್ರಯತ್ನಿಸಬಹುದು. ಆದರೆ ಶಿಕ್ಷಕರಿಗೆ ಇದನ್ನೆಲ್ಲ ಅಳೆಯುವ ಸಾಮರ್ಥ್ಯ ಇರಬೇಕಷ್ಟೆ.

ಮಗುವಿನ ಸಾಮರ್ಥ್ಯವನ್ನು ತರಗತಿಯಲ್ಲಿ ಹೇಗೆ ಗುರುತಿಸಬಹುದು ಎಂದು ಚಿಂತಿಸುತ್ತಾ ಹೋದರೆ ಶಿಕ್ಷೆಯ ಪ್ರಶ್ನೆ ಬರುವುದೇ ಇಲ್ಲ. 50 ಮಕ್ಕಳಿರುವ ತರಗತಿಯಲ್ಲಿ ಬೇರೆ ಬೇರೆ ಮಾದರಿಯ ಮಕ್ಕಳು ಇರುತ್ತಾರೆ. ಆದರೆ ಉತ್ತಮ ಶಿಕ್ಷಕರು ಸಾಮಾನ್ಯವಾಗಿ ತಮ್ಮ ಮನಸ್ಸಿನಲ್ಲೇ ಮಕ್ಕಳನ್ನು 3-4 ಗುಂಪುಗಳಾಗಿ ವಿಂಗಡಿಸಿಕೊಂಡಿರುತ್ತಾರೆ. ಕೆಲವು ಮಕ್ಕಳು ನೋಡಿದ ತಕ್ಷಣ ಕಲಿಯುತ್ತಾರೆ, ಕೆಲವರು ಮಾಡಿದ ತಕ್ಷಣ ಕಲಿಯುತ್ತಾರೆ, ಕೆಲವರು ಹೇಳಿದ ತಕ್ಷಣ ಕಲಿಯುತ್ತಾರೆ. ಹಾಗಾಗಿ ಪ್ರತಿ ತರಗತಿಯಲ್ಲೂ ಈ ಮೂರೂ ಮಾದರಿಯಲ್ಲಿ ಮಕ್ಕಳಿಗೆ ಕಲಿಕೆ ಆಗಲೇಬೇಕು. ಚಟುವಟಿಕೆಗಳ ಮೂಲಕ ಕಲಿಸಿದರೆ ಮಕ್ಕಳು ಸುಲಭವಾಗಿ ಗ್ರಹಿಸುತ್ತಾರೆ. ಅದಲ್ಲದೆ ಕೆಲವರಿಗೆ ಹಾಡಿನ ಮೂಲಕ, ಕೆಲವರಿಗೆ ಚಿತ್ರಕಲೆ ಮೂಲಕ, ಇನ್ನು ಕೆಲವರಿಗೆ ನಾಟಕದ ಮೂಲಕವೂ ಕಲಿಕೆ ಸುಲಭವಾಗುತ್ತದೆ. ಮುಖ್ಯವಾಗಿ ಶಿಕ್ಷಕರಿಗೆ ವಿಷಯದ ಪರಿಣತಿ ಇದ್ದರೆ ಯಾವ ರೀತಿಯಲ್ಲಾದರೂ ಮಕ್ಕಳಿಗೆ ಸೃಜನಾತ್ಮಕವಾಗಿ ಕಲಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಅಭಿನಯ ಗೀತೆ ಮಾಡಿರುತ್ತಾರೆ. ದಶಮಾಂಶ ಪದ್ಧತಿಯನ್ನು ಅದರ ಮೂಲಕ ಎಷ್ಟು ಸುಲಭವಾಗಿ ಕಲಿಯಬಹುದು ಎಂದರೆ, `120 ಅಂದರೆ 100ರ ಗುಂಪು ಒಂದು, 10ರ ಗುಂಪು ಎರಡು' ಎಂದು ರಾಗವಾಗಿ ಹೇಳುತ್ತಾ ಕಲಿಯುತ್ತಾರೆ.

ವಿಭಿನ್ನ ಮಾದರಿ
ಪ್ರತಿ ತರಗತಿಯಲ್ಲೂ ಪಾಠವನ್ನು ನಾಲ್ಕಾರು ರೀತಿಯಲ್ಲಿ ಮಾಡಿದರೆ ಎಲ್ಲರೂ ಉತ್ತಮವಾಗಿ ಕಲಿಯಲು ಅಥವಾ ಎಲ್ಲ ಮಕ್ಕಳೂ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯ. ಅದು ಬಿಟ್ಟು ಎಲ್ಲರೂ ಕೇಳಲೇಬೇಕು, ಎಲ್ಲರೂ ಬರಿಯಲೇಬೇಕು ಎಂದರೆ ಹೇಗೆ? ಮಕ್ಕಳ ಬುದ್ಧಿಮಟ್ಟ ಒಂದೇ ರೀತಿ ಇರಬಹುದು. ಆದರೆ ಕೌಶಲ ಬೇರೆ ಬೇರೆ ಇರುತ್ತದೆ. ಅಭಿವ್ಯಕ್ತಿಯೂ ವಿಭಿನ್ನವಾಗಿ ಇರುತ್ತದೆ. ಅವರ ಕೌಶಲ ಪ್ರದರ್ಶನಕ್ಕೆ ಆಸ್ಪದವನ್ನೇ ಕೊಡದೆ, ಕಲಿಯುವ ಅವಕಾಶವನ್ನೇ ಕೊಡದೆ, ಶಿಕ್ಷಿಸಿ ಕಲಿಸಿದರೆ ಮಾತ್ರ ಶಿಕ್ಷಣ ಎಂದರೆ ಹೇಗೆ ಸಾಧ್ಯ?

ತಿಳಿವಳಿಕೆಗೆ ಒಂದು ಹೆದ್ದಾರಿಯಾಗಿರುವ ಶಿಕ್ಷಣ ಎಂದರೆ ಪಾಠ ಕಲಿಯುವುದು, ಕಲಿಸಿಕೊಡುವುದು ಆಗಿರುತ್ತದೆ. ಪಠ್ಯಕ್ರಮದಲ್ಲಿರುವ ತಾತ್ವಿಕ ಮಾಹಿತಿಯನ್ನು ಅದೇ ಕ್ರಮದಲ್ಲಿ ಕಲಿತರೆ ಮಕ್ಕಳಿಗೆ ಆನಂದ ಸಿಗದೇ ಇರಬಹುದು. ಅದಕ್ಕೆ ಪಠ್ಯದ ಜೊತೆಯಲ್ಲಿ ದೈನಂದಿನ ಜೀವನದಲ್ಲಿ ನಡೆಯುವ ಪ್ರಸಂಗಗಳನ್ನು ಹುಡುಕಿ ಅದರ ಕಾರಣ ಕೇಳುವುದು, ಉಪಾಯ ಹುಡುಕುವುದು ಮಾಡಿದಾಗ ಕಲಿಕೆಗೆ ಒಂದು ರೂಪ ಸಿಗುತ್ತದೆ.

ಕಲಿಕೆಯ ಸಮಯದಲ್ಲಿ ಎಲ್ಲೂ ಶಿಕ್ಷೆಯ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಶಿಕ್ಷೆಗೆ ಮಕ್ಕಳು ಹೆದರಬಹುದು. ಆದರೆ ಶಿಕ್ಷೆಯಿಂದ ಹೆಚ್ಚು ಕ್ರಿಯಾಶೀಲರಾಗಿ ಕಲಿಯುತ್ತಾರೆ ಎನ್ನಲಾಗುವುದಿಲ್ಲ. ಶಿಕ್ಷಣದ ಗುರಿ, ಮಕ್ಕಳ ಮನಸ್ಸನ್ನು ಪೂರ್ಣವಾಗಿ ಅರಳಿಸಿ ಮುಂದೆ ಅದರಿಂದ ಅವರು ಮಧುರವಾದ ಫಲವನ್ನು ಪಡೆಯುವಂತೆ ಮಾಡುವುದಾಗಿರಬೇಕು. ಅದು ಬಿಟ್ಟು ಶಿಕ್ಷೆಯಿಂದ ಮಕ್ಕಳು ಅರಳುವ ಮೊದಲೇ ಬಾಡಿದ ಮೊಗ್ಗಿನಂತೆ ಆಗಬಾರದು.

ಶಿಕ್ಷೆ ಎನ್ನುವುದು ಋಣಾತ್ಮಕ, ಕಲಿಕೆ ಧನಾತ್ಮಕ. ಧನಾತ್ಮಕವಾದ ಕಲಿಕೆಗೆ ಋಣಾತ್ಮಕವಾದ ಮಾರ್ಗದಲ್ಲಿ ಹೋದಾಗ ಮಕ್ಕಳ ಮನೋವಿಕಾಸ ಖಂಡಿತಾ ಸಾಧ್ಯವಿಲ್ಲ.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT