ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗಳಿಗೆ ವೇದಿಕೆಯಾಗಲಿರುವ ಕಿತ್ತೂರು ಉತ್ಸವ

Last Updated 19 ಅಕ್ಟೋಬರ್ 2011, 11:10 IST
ಅಕ್ಷರ ಗಾತ್ರ

ಬೆಳಗಾವಿ: ವೀರರಾಣಿ ಕಿತ್ತೂರ ಚೆನ್ನಮ್ಮಳ ವಿಜಯೋತ್ಸವದ ಸವಿನೆನಪಿಗಾಗಿ ಅ.23 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕಿತ್ತೂರ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.
ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅ.23 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉತ್ಸವ ಉದ್ಘಾಟಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ಶಿವರಾಜಕುಮಾರ್, ನಟಿ ಅನು ಪ್ರಭಾಕರ ಆಗಮಿಸಲಿದ್ದಾರೆ. ಚನ್ನಮ್ಮನ ಕಿತ್ತೂರ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಸುರೇಶ ಮಾರಿಹಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ, ಶಾಸಕರು, ಸಂಸದರು, ವಿವಿಧ ಹಂತದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಅಂದು ಸಂಜೆ 7 ಗಂಟೆಗೆ ಚಲನಚಿತ್ರ ನಟ ಶಿವರಾಜಕುಮಾರ್ ಮತ್ತು ತಂಡದಿಂದ ಸಂಗೀತ ನೃತ್ಯ, ಮಾಯಾರಾವ್ ಮತ್ತು ತಂಡದಿಂದ ನೃತ್ಯ ರೂಪಕ, ಪ್ರವೀಣ ಗೋಡ್ಖಿಂಡಿ ಅವರಿಂದ ಕೊಳಲು ವಾದನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅ.24 ರಂದು ಬೆಳಿಗ್ಗೆ ವಾಲಿಬಾಲ್, ಕಬಡ್ಡಿ ಸ್ಪರ್ಧೆ ನಡೆಯಲಿವೆ. ನಂತರ ವಿಚಾರ ಸಂಕಿರಣ, ಕವಿಗೋಷ್ಠಿ ನಡೆಯಲಿವೆ. ಮಧ್ಯಾಹ್ನ 4 ಗಂಟೆಗೆ ಮಲ್ಲಕಂಬ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಸಂಜೆ ರಘು ದಿಕ್ಷೀತ್ ಮತ್ತು ತಂಡದಿಂದ ಸಂಗೀತ ವೈವಿಧ್ಯ, ರಿಚರ್ಡ್ ಲೂಯಿಸ್, ಮೈಸೂರು ಆನಂದ ಮತ್ತಿತರರಿಂದ ಹಾಸ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅ.25 ರಂದು ಹಾಫ್ ಮ್ಯಾರಾಥಾನ್ ಓಟ, ಸೈಕ್ಲಿಂಗ್, ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ಸಂಜೆ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗಿರಡ್ಡಿ ಗೋವಿಂದರಾಜು ಸಮಾರೋಪ ನುಡಿ ನುಡಿಯಲಿದ್ದಾರೆ. ಮಡಿವಾಳೇಶ್ವರ ಮಠದ ಚನ್ನಬಸಪ್ಪ ಸ್ವಾಮೀಜಿ, ಅದೃಶ್ಯಾನಂದ ಆಶ್ರಮದ ಸೀಮಿ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಚಲನಚಿತ್ರ ನಟ ಶ್ರೀನಾಥ್ ಅವರನ್ನು ಸನ್ಮಾನಿಸಲಾಗುವುದು.

ಸಂಜೆ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ಹಾಗೂ ಚಲನಚಿತ್ರ ನಟಿ ರಾಗಿಣಿ ಮತ್ತು ತಂಡದಿಂದ ಸಂಗೀತ ನೃತ್ಯ, ಅಜಯ ವಾರಿಯರ್ ಮತ್ತು ತಂಡದಿಂದ ಸಂಗೀತ ವೈವಿಧ್ಯ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳು ಜರುಗಲಿವೆ.

ಆ ದಿನ ರಾತ್ರಿ 9 ಗಂಟೆಗೆ ಕೋಟೆ ಆವರಣದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಇದಲ್ಲದೇ ಉತ್ಸವದಲ್ಲಿ ಚಲನಚಿತ್ರೋತ್ಸವ, ಧ್ವನಿ ಬೆಳಕು, ವಸ್ತು ಪ್ರದರ್ಶನ, ಬತ್ತೇರಿ ಮೇಲೆ ರಾತ್ರಿ ದೀಪೋತ್ಸವ ಸೇರಿದಂತೆ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT