ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೋಪಾಸಕಿಯ ಪಯಣ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ವಾಸ್ತುಶಿಲ್ಪ ಕಲೆ, ವಿವಿಧ ವಿನ್ಯಾಸಗಳು, ವಾಲ್ ಪೇಂಟಿಂಗ್, ಮೆಹೆಂದಿ ರಂಗು, ಸೀರೆಯ ಘಮಲು ಎಲ್ಲೇ ನೋಡಿದರೂ ಪೇಸ್ಲೆ ಕಲಾಕೃತಿ ಕಣ್ಣಿಗೆ ಎದ್ದು ಕಾಣುತ್ತದೆ.

ಮಾವಿನ ಕಾಯಿ ಆಕೃತಿಯಲ್ಲಿರುವ ಪೇಸ್ಲೆ ವಿನ್ಯಾಸ ಶುಭದ ಸಂಕೇತವಂತೆ. ರಾಜ ಮಹಾರಾಜರ ಕಾಲದ ಶಿಲ್ಪಕಲೆಗಳಲ್ಲೂ ಕಾಣಬಹುದಾದ ಈ ವಿನ್ಯಾಸದ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುವ ವಿನ್ಯಾಸಕಿ ಶೈಲಜಾ ಇತ್ತೀಚೆಗೆ ನಗರದ ರೇನ್‌ಟ್ರೀಯಲ್ಲಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಪೇಸ್ಲೆ ವಿನ್ಯಾಸದಲ್ಲಿ ಎದ್ದು ಕಾಣುತ್ತಿದ್ದ ಸೀರೆ, ದುಪಟ್ಟಾ, ಆಭರಣಗಳು ಹಾಗೂ ರೆಡಿಮೇಡ್ ಬ್ಲೌಸ್‌ಗಳು ಗ್ರಾಹಕರ ಮನಗೆದ್ದವು. ಪೇಸ್ಲೆ ಸೇರಿದಂತೆ ಅನೇಕ ವಿನ್ಯಾಸಗಳನ್ನು ಸಿದ್ಧಿಸಿಕೊಂಡ ಶೈಲಜಾ ಅನಂತ್ `ಮೆಟ್ರೊ' ಮಾತಿಗೆ ಸಿಕ್ಕಾಗ ಹೇಳಿದ್ದಿಷ್ಟು.

ಸುಮಾರು 15 ವರ್ಷಗಳಿಂದ ವಿನ್ಯಾಸ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶೈಲಜಾ ಶಾಸ್ತ್ರೀಯವಾಗಿ ಕಲಾಭ್ಯಾಸ ಮಾಡಿದವರಲ್ಲ. ವಿನ್ಯಾಸಗಳೆಡೆಗಿನ ಪ್ರೀತಿ ಹಾಗೂ ಅಪಾರವಾದ ಆಸಕ್ತಿ, ಜನರಿಂದ ಸಿಕ್ಕ ಪ್ರೋತ್ಸಾಹ ಕಲೆಯನ್ನು ಸಿದ್ಧಿಸಿಕೊಳ್ಳಲು ಸಹಕಾರಿಯಾಯಿತು.

ಪ್ರಾರಂಭದಲ್ಲಿ ತುಸು ಕಷ್ಟ ಎನಿಸಿದರೂ ಇವರ ನಿರಂತರ ಪರಿಶ್ರಮ, ಹೊಸ ವಿನ್ಯಾಸಗಳನ್ನು ಸೃಷ್ಟಿಸುವ ಬಗ್ಗೆ ಇದ್ದ ಅನವರತ ತುಡಿತ ಇವರನ್ನು ಬೆಳೆಸಿದೆ. ಜೆ.ಪಿ.ನಗರ 2ನೇ ಫೇಸ್‌ನಲ್ಲಿ ಇವರದ್ದೇ ಆದ ಸ್ವಂತ ಬುಟಿಕ್ ಸ್ಟುಡಿಯೊ `ಶೈನಾ' ಇದೆ. ಹೊಲಿಗೆ, ಕಸೂತಿ ಮುಂತಾದ ಕೆಲಸ ಮಾಡುವ 20 ಕೆಲಸಗಾರರಿದ್ದು ವಿವಿಧ ವಿನ್ಯಾಸಗಳ ಸೀರೆ, ದುಪಟ್ಟಾ, ರೆಡಿಮೇಡ್ ಬ್ಲೌಸ್ ಇಲ್ಲಿ ದೊರೆಯುತ್ತವೆ. ಶೈಲಜಾ ಅವರ ಮಗಳು ಸಂಗೀತಾ ಅನಂತ್ ಚಿತ್ರಕಲಾ ಪರಿಷತ್‌ನಲ್ಲಿ ಪದವಿ ಪಡೆದವರು. ಐಟಿ ಉದ್ಯೋಗವನ್ನು ಬಿಟ್ಟು ಅಮ್ಮನೊಂದಿಗೆ ಕೈಜೋಡಿಸಿದ್ದು ಶೈಲಜಾ ಆಸಕ್ತಿಗೆ ದಕ್ಕಿದ ಬೋನಸ್.

ಇಲ್ಲಿ ಮದುವೆಗೆ ಬೇಕಾಗುವ ಉಡುಗೆ ತೊಡುಗೆಗಳನ್ನು ತಯಾರಿಸಿ ಕೊಡುವ ವ್ಯವಸ್ಥೆಯೂ ಇದೆ. ಜನಪ್ರಿಯ ಡಾಕ್ಟರ್, ನಾಟ್ಯ ಕಲಾವಿದರು, ಸೆಲೆಬ್ರಿಟೀಸ್‌ಗಳಲ್ಲ ಅನೇಕರು ಇವರ ಗ್ರಾಹಕರು. ನೃತ್ಯಗಾರ್ತಿ, ನಟಿಮಣಿ ರುಕ್ಮಿಣಿ ವಿಜಯ್‌ಕುಮಾರ್ ಹಾಗೂ ಕಲಾವಿದೆಯಾಗಿದ್ದ ಪ್ರೀತಿ ಚಂದ್ರಶೇಖರ್ ಅವರ ವಿವಾಹದಲ್ಲಿ ವಸ್ತ್ರ ವಿನ್ಯಾಸ ಇವರದ್ದೆ. ಗವಾಸ್ಕರ್ ಅವರ ಕುರ್ತಾ ಹಾಗೂ ಕುಟುಂಬದ ಎಲ್ಲರ ಉಡುಗೆಗಳನ್ನು ವಿನ್ಯಾಸ ಮಾಡಿಕೊಟ್ಟ ಕೀರ್ತಿಯೂ ಇವರದ್ದು.

ಬೆಂಗಳೂರಿನಲ್ಲಿ ವರ್ಷಕ್ಕೆ ಮೂರು ಬಾರಿ ಪ್ರದರ್ಶನ ಕೈಗೊಳ್ಳುವ ಇವರು ಹೈದರಾಬಾದ್‌ನಲ್ಲೂ ತಮ್ಮ ವಿನ್ಯಾಸದ ಉಡುಗೆಗಳನ್ನು ಪ್ರದರ್ಶಿಸಿ ಬಂದಿದ್ದರು. ನಂತರ ಜೂನಿಯರ್ ಎನ್‌ಟಿಆರ್ ಅವರ ವಿವಾಹದಲ್ಲಿ ಅವರ ಪತ್ನಿಗೆ ಬ್ಲೌಸ್‌ನ್ನು ಶೈಲಜಾ ವಿನ್ಯಾಸ ಮಾಡಿಕೊಟ್ಟಿದ್ದರು. ವಿಶೇಷ ವಿನ್ಯಾಸದ ಆ ಬ್ಲೌಸ್ ಅತ್ಯಂತ ಮೆಚ್ಚುಗೆ ಪಡೆದಿತ್ತಂತೆ.

`ವೈದ್ಯರು, ಸೆಲೆಬ್ರಿಟಿಗಳು ಅನೇಕ ಕಾರ್ಯಕ್ರಮಗಳಿಗೆ ನನ್ನಿಂದ ವಸ್ತ್ರ ವಿನ್ಯಾಸ ಮಾಡಿಸಿಕೊಂಡಿದ್ದಿದೆ. ಅವರದ್ದು ತುಂಬಾ ಬ್ಯುಸಿಯಾದ ಜೀವನ ಶೈಲಿ. ಮ್ಯಾಚಿಂಗ್, ವಿನ್ಯಾಸಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಅವರಿಗೆ ತುಂಬಾ ಸಮಯ ಇರುವುದಿಲ್ಲ. ಹೀಗಾಗಿ ಕೆಲವರು ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮೇಲೇ ಬಿಡುತ್ತಾರೆ.

ನನ್ನ ಮನಸ್ಸಿನಲ್ಲಿ ನಿರಂತರವಾಗಿ ನಡೆಯುವ ವಿನ್ಯಾಸದ ಚೌಕಟ್ಟಿಗೆ ಅವುಗಳನ್ನು ಹೊಂದಿಸಿ ಪ್ರಿಂಟಿಂಗೊ, ಕಸೂತಿ ಕೆಲಸವೋ, ಎಂಬ್ರಾಯ್ಡರಿಯನ್ನೋ ಮಾಡಿಕೊಡುತ್ತೇನೆ. ಅತ್ಯಂತ ಸಂತೋಷದಿಂದ ಅವುಗಳನ್ನು ಧರಿಸುತ್ತಾರೆ. ತುಂಬಾ ಖುಷಿಯಾಗುತ್ತದೆ' ಎನ್ನುವ ಶೈಲಜಾ ಸೆಲೆಬ್ರಿಟಿ ಗ್ರಾಹಕರ ಹೆಸರುಗಳನ್ನು ಹೇಳಲು ಹಿಂದೆಮುಂದೆ ನೋಡುತ್ತಾರೆ. ತಮ್ಮ ಗ್ರಾಹಕರಿಗೆ ಅದು ಇಷ್ಟವಾಗದಿದ್ದರೆ ಎಂಬ ಕಾಳಜಿ ಅವರದ್ದು.

ವಿವಿಧ ಶೈಲಿಯ ವಿನ್ಯಾಸಗಳನ್ನು ಮಾಡುವ ಇವರಿಗೆ ಪೇಸ್ಲೆ ಶೈಲಿ ಎಂದರೆ ತುಂಬಾ ಇಷ್ಟವಂತೆ. `ಶುಭ ಸೂಚನೆಯ ಈ ಶೈಲಿ ಕುರ್ತಾ, ಸೀರೆ, ದುಪಟ್ಟಾ, ಶಾಲು, ಶರ್ಟ್ ಎಲ್ಲ ರೀತಿಯ ಉಡುಗೆಗೆ ಹೊಂದುತ್ತದೆ. `ನಾವು ಬ್ಲೌಸ್ ತಯಾರಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿದ್ದೇವೆ. ಅವುಗಳ ಮೇಲೆ ಹೊಂದಿಸಲಾದ ಪೇಸ್ಲೆ ಕಲಾಕೃತಿ ಬ್ಲೌಸ್‌ನ ಅಂದವನ್ನು ಹೇಗೆ ಹೆಚ್ಚಿಸಿದೆ ನೋಡಿ' ಎಂದು ಬ್ಲೌಸ್‌ಗಳ ರಾಶಿಯೆಡೆಗೆ ತೋರಿಸುತ್ತಾರೆ ಶೈಲಜಾ.

ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ತಮ್ಮ ಬೋಟಿಕ್ ಸ್ಟುಡಿಯೊದಲ್ಲಿ ಇವರು ನಿರತರಾಗಿರುತ್ತಾರೆ. ಆದರೆ ಉಳಿದ ಸಮಯದಲ್ಲೂ ವಿನ್ಯಾಸಗಳ ಬಗ್ಗೇ ಇವರಿಗೆ ಯೋಚನೆ. ನಿದ್ದೆ ಮಾಡಿದಾಗಲೂ ಅಪ್ರಜ್ಞಾಪೂರ್ವಕವಾಗಿ ಅವುಗಳ ಬಗ್ಗೆ ಯೋಚಿಸುವ ಶೈಲಜಾ ನಿದ್ದೆಯಿಂದೆದ್ದು ಚಿತ್ರ ಬಿಡಿಸಿಟ್ಟ ಸಂದರ್ಭಗಳು ಸಾಕಷ್ಟಿವೆಯಂತೆ.

`ಮಕ್ಕಳೆಲ್ಲಾ ದೊಡ್ಡವರಾಗಿದ್ದಾರೆ. ನನ್ನ ಆಸಕ್ತಿಗೆ ಅವರ ಸ್ಪಂದನೆ ಇದೆ. ಕುಟುಂಬದ ಎಲ್ಲಾ ಸದಸ್ಯರೂ ಅಷ್ಟೇ. ಹೀಗಾಗಿಯೇ ಎಲ್ಲವನ್ನೂ ಆರಾಮವಾಗಿ ನಿಭಾಯಿಸುತ್ತೇನೆ. ವಿಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲೂ ನಾವು ವಿನ್ಯಾಸಗೊಳಿಸಿದ ಬ್ಲೌಸ್‌ಗಳು ಸಿಗುತ್ತವೆ. ಬೇರೆ ಕಡೆಯೂ ನೀಡುವ ಮನಸ್ಸು ಮಾಡಲಿಲ್ಲ. ನಮ್ಮದು ನಾಜೂಕಿನ ಕೆಲಸ. ಒಮ್ಮೆ ತಯಾರಿಸಿದ ಮೇಲೆ ಎಲ್ಲವೂ ಪಕ್ಕಾ ಆಗಬೇಕು. ಹೀಗಾಗಿ ನಮ್ಮಲ್ಲಿ ಪ್ರತಿದಿನಕ್ಕೆ ಮೂರ್ನಾಲ್ಕು ಬ್ಲೌಸ್‌ಗಳನ್ನು ಮಾತ್ರ ಹೊಲಿಯಲಾಗುತ್ತದೆ' ಎಂದು ಮಾಹಿತಿ ನೀಡುತ್ತಾರೆ ಅವರು.

ಐದು ವರ್ಷದಿಂದ ನಗರದಲ್ಲಿ ಅನೇಕ ಬಾರಿ ಪ್ರದರ್ಶನ ಕೈಗೊಂಡ ಇವರಿಗೆ ಮುಂದಿನ ವರ್ಷ ಅಮೆರಿಕದಲ್ಲಿ ಪ್ರದರ್ಶನ ಆಯೋಜಿಸಿ ಕಲೆಯನ್ನು ಪ್ರಚಾರ ಮಾಡುವ ಬಯಕೆ ಇದೆ. ಜೊತೆಗೆ ಆನ್‌ಲೈನ್‌ನಲ್ಲಿ ವ್ಯಾಪಾರ ಪ್ರಾರಂಭಿಸುವ ಯೋಜನೆ ಇದೆ. ಇದಕ್ಕೆ ಸಾಕಷ್ಟು ಪೂರ್ವತಯಾರಿ ಬೇಕಾಗಿರುವುದರಿಂದ ಇನ್ನೂ ಅದು ಸಾಧ್ಯವಾಗಿಲ್ಲವಂತೆ.

ಆಯಾಯಾ ಕಾಲ, ಸಂದರ್ಭ ಹಾಗೂ ಋತುಮಾನಕ್ಕೆ ಸರಿಹೊಂದುವ ವಿನ್ಯಾಸ, ಬಣ್ಣಗಳ ಮಿಶ್ರಣ ಮಾಡಬೇಕು ಎನ್ನುವುದು ಇವರ ಧ್ಯೇಯ. ತುಸು ಹೆಚ್ಚು ಸಮಯ ತೆಗೆದುಕೊಂಡರೂ ಉತ್ತಮವಾದ ವಿನ್ಯಾಸವನ್ನು ನೀಡಬೇಕು ಎನ್ನುವ ಇವರಿಗೆ ವಿದೇಶಗಳ ಗ್ರಾಹಕರೂ ಇದ್ದಾರೆ. ಇವರಿಗೆ ಆರ್ಡರ್ ಕೊಟ್ಟು ನಗರಕ್ಕೆ ಬಂದಾಗ ಖರೀದಿ ಮಾಡಿ ತೆರಳುತ್ತಾರೆ. ಕಲೆಯನ್ನೇ ನೆಚ್ಚಿ ಇದರಲ್ಲೇ ಬದುಕು ಕಂಡುಕೊಂಡಿರುವುದು ಅವರಿಗೆ ಹೆಚ್ಚು ಸಮಾಧಾನ ನೀಡಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT