ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣವನ್ನೇ ಕಾಣದ ಪೌರಕಾರ್ಮಿಕರ ಬದುಕು

ಪೌರ ಕಾರ್ಮಿಕರ ಬದುಕು ಬವಣೆ -1
Last Updated 8 ಜುಲೈ 2013, 11:09 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: 2011ರ ಜನಗಣತಿಯಿಂತೆ ನಗರದ ಜನಸಂಖ್ಯೆ ಈಗ 80 ಸಾವಿರಕ್ಕೆ ಏರಿಕೆಯಾಗಿದೆ. 2 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದ ನಗರ ಈಗ 3 ರಿಂದ 4 ಕಿ.ಮೀ ವ್ಯಾಪ್ತಿಗೆ ವಿಸ್ತಿರ್ಣಗೊಂಡಿದೆ. ಅನೇಕ ಕಡೆ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ದೊಡ್ಡಬಳ್ಳಾಪುರ ಸದ್ಯದಲ್ಲೇ ಗ್ರೇಡ್-1 ನಗರಸಭೆಯಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯಾಗಲಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಸಂಖ್ಯೆ ಮಾತ್ರ 70ಕ್ಕೆ ಸೀಮಿತವಾಗಿದೆ.

31 ವಾರ್ಡ್‌ಗಳನ್ನು ಹೊಂದಿರುವ ನಗರದಲ್ಲಿ ಪಟ್ಟಣದ ಹೃದಯ ಭಾಗದಲ್ಲಿನ 17 ವಾರ್ಡ್‌ಗಳಲ್ಲಿ ಮಾತ್ರ ನಗರಸಭೆಯ ಕಾಯಂ ಪೌರ ಕಾರ್ಮಿಕರು ಕಸ ತೆಗೆಯುವ ಕೆಲಸ ಮಾಡುತ್ತಾರೆ. ಉಳಿದ 17 ವಾರ್ಡ್‌ಗಳಲ್ಲಿನ ಕಸ ನಿರ್ವಹಣೆಯನ್ನು ಖಾಸಗಿಯವರಿಗೆ ಹೊರ ಗುತ್ತಿಗೆಗೆ ನೀಡಲಾಗಿದೆ. `ಬೆಳೆಯುತ್ತಿರುವ ನಗರಕ್ಕೆ ಕನಿಷ್ಠ 200 ಜನ ಪೌರ ಕಾರ್ಮಿಕ ಅಗತ್ಯವಿದೆ' ಎಂದು ಪ್ರತಿ ಬಾರಿ ನಗರಸಭೆಯಲ್ಲಿ ಕಸ ನಿರ್ವಹಣೆ ಸಮಸ್ಯೆ ಮೇಲೆ ಚರ್ಚೆ ನಡೆದಾಗಲೂ ಸದಸ್ಯರು ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಆದರೆ ಪೌರ ಸೇವಾ ನೌಕರರ ನೇಮಕ ಮಾತ್ರ ನಡೆದಿಲ್ಲ. ನಗರದಲ್ಲಿನ ಕಸ ನಿರ್ವಹಣೆ ಸಮಸ್ಯೆಯೂ ಬಗೆಹರಿದಿಲ್ಲ.

ತುಕ್ಕು ಹಿಡಿದ ತೊಟ್ಟಿಗಳು: ನಗರದಲ್ಲಿ ಹೆಚ್ಚು ಕಸ ಬೀಳುವ ಕಡೆಗಳಲ್ಲಿ ಕಸವನ್ನು ಕೈಯಿಂದ ತುಂಬದೆ ಕ್ರೇನ್ ಸೌಲಭ್ಯದ ಮೂಲಕ ಲಾರಿಗೆ ತುಂಬಿಸುವ ಆಧುನಿಕ ವ್ಯವಸ್ಥೆಗಾಗಿ ಕಂಟೇನರ್‌ಗಳನ್ನು ತರಲಾಯಿತು. ಪ್ರತಿ ಕಂಟೇನರ್‌ಗಳನ್ನೂ ಕಸ ಹೆಚ್ಚು ಬೀಳುವ ಸ್ಥಳದಲ್ಲಿ ಇಡಲು ನಾಲ್ಕು ಅಡಿ ಅಗಲ, ನಾಲ್ಕು ಅಡಿ ಎತ್ತರದ ಸಿಮೆಂಟ್ ಕಟ್ಟೆಗಳನ್ನು ನಿರ್ಮಿಸಲು 25 ಸಾವಿರ ರೂಪಾಯಿಗಳನ್ನು ನೀಡಲಾಗಿತ್ತು. ಆದರೆ ಇಡೀ ನಗರದಲ್ಲಿ ಎಲ್ಲೂ ಸಿಮೆಂಟ್ ಕಟ್ಟೆಗಳನ್ನು ನಿರ್ಮಿಸದೆ ಕಂಟೇನರ್‌ಗಳನ್ನು ನೆಲದ ಮೇಲೆಯೇ ಇಡಲಾಗಿದೆ. ಇದರಿಂದಾಗಿ ಸಾವಿರಾರು ರೂಪಾಯಿ ಬೆಲೆ ಬಾಳುವ ಕಂಟೇನರ್‌ಗಳು ತುಕ್ಕು ಹಿಡಿಯುತ್ತಿವೆ.

ತೊಟ್ಟಿ ಸೇರದ ಕಸ: ಇಡೀ ನಗರದಲ್ಲಿ ಎಲ್ಲೂ ಸಹ ತೊಟ್ಟಿಗಳಲ್ಲಿ ಹಾಗೂ ಕಂಟೇನರ್‌ಗಳ ಒಳಗೆ  ಕಸ ಹಾಕಿರುವುದು ಕಡಿಮೆಯೇ. ಇನ್ನು ಒಣ ಕಸ, ಹಸಿ ಕಸ ಹಾಗೂ ಕೊಳೆಯದೇ ಇರುವ ಕಸವನ್ನು ಬೇರ್ಪಡಿಸಿ ನೀಡುವ ವ್ಯವಸ್ಥೆ ಒಂದೆರಡು ವಾರ್ಡ್‌ಗಳನ್ನು ಹೊರತುಪಡಿಸಿದರೆ ಉಳಿದ ಯಾವುದೇ ವಾರ್ಡ್‌ನಲ್ಲೂ ಜಾರಿಯಾಗಿಲ್ಲ. ಇದರಿಂದಾಗಿ ಮನೆ, ಹೋಟೆಲ್, ವಾಣಿಜ್ಯ ಮಳಿಗೆಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ರಾಶಿ ಹಾಕಲಾಗುತ್ತಿದೆ. ಇದರಿಂದ ಪೌರ ಸೇವಾ ಕಾರ್ಮಿಕರು ಕೈಗಳಿಂದ ಕಸ ತುಂಬುವುದು ಅನಿವಾರ್ಯ ಎನಿಸಿದೆ.

ಕೆಲಸ ಹೆಚ್ಚು ಸಂಬಳ ಮಾತ್ರ...: 70  ಕಾಯಂ ಪೌರಸೇವಾ ನೌಕರರಿಗೆ ಸೇವಾವಧಿಗೆ ತಕ್ಕಂತೆ 12 ರಿಂದ 20 ಸಾವಿರ ರೂಪಾಯಿಗಳವರೆಗೆ ಸಂಬಳ ಹಾಗೂ ಇತರೆ ಸರ್ಕಾರಿ ಸೌಲಭ್ಯ ದೊರೆಯುತ್ತವೆ. ಆದರೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ನೀಡಿದ್ದಷ್ಟೇ ಹಣ. ಕೆಲಸ ಮಾತ್ರ ಹೆಚ್ಚು. ಕಾಯಂ ಪೌರಸೇವಾ ನೌಕರರಿಗೆ ನಗರಸಭೆ ವತಿಯಿಂದ ಪ್ರತಿ ವರ್ಷ ಸಮವಸ್ತ್ರ, ಕಸ ತುಂಬುವಾಗ ಕೈ, ಕಾಲುಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪಂಪ್ ಶೂ ಸೇರಿದಂತೆ ಎಲ್ಲ ರೀತಿಯ ಸುರಕ್ಷಿತ ಪರಿಕರಗಳನ್ನು ನೀಡಲಾಗುತ್ತದೆ. ಆದರೆ ಯಾವೊಬ್ಬ ಪೌರಸೇವಾ ನೌಕರರೂ ಸುರಕ್ಷಿತ ಪರಿಕರಗಳನ್ನು ಧರಿಸಿ ಕೆಲಸ ಮಾಡಿದ ನಿದರ್ಶನ ಇಲ್ಲ. ಹೀಗಾಗಿ ಪೌರಸೇವಾ ನೌಕರರು ಕಾಯಿಲೆಗಳಿಗೆ ತುತ್ತಾಗಿ ಸದಾ ಸೇವೆಗೆ ಗೈರು ಹಾಜರಾಗುವುದು ಸಹಜವಾಗಿದೆ.

`ತೆರೆದ ಶೌಚಾಲಯ ಇಲ್ಲ'
`ಸರ್ಕಾರದ ಹೊಸ ಆದೇಶದಂತೆ ನಗರದಲ್ಲಿ ತೆರೆದ ಶೌಚಾಲಯಗಳು ಇರುವ ಬಗ್ಗೆ, ಕಾರ್ಮಿಕರೇ ಕೈಗಳಿಂದ ಶೌಚಾಲಯದ ಗುಂಡಿಗಳನ್ನು ತೆಗೆಯುತ್ತಿರುವ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಇಡೀ ನಗರದಲ್ಲಿ ಎಲ್ಲೂ ತೆರೆದ ಶೌಚಾಲಯ ಗುಂಡಿಗಳು ಇಲ್ಲ. ಹಾಗೂ ಮನುಷ್ಯರೇ ಕೈಗಳಿಂದ ಶೌಚಾಲಯಗಳನ್ನು ಸ್ವಚ್ಚಗೊಳಿಸುವ ವ್ಯವಸ್ಥೆಯೂ ಉಳಿದಿಲ್ಲ. ಶೌಚಾಲಯಗಳನ್ನು ಬರಿದು ಮಾಡಲು ಯಂತ್ರಗಳನ್ನು ತರಿಸಲಾಗಿದೆ. ನಗರದ ಯಾವುದೇ ವಾರ್ಡ್‌ನ ಸಾರ್ವಜನಿಕರು ನಗರಸಭೆಯಲ್ಲಿ ಅರ್ಜಿ ಸಲ್ಲಿಸಿ ಹಣ ನೀಡಿದರೆ ತಕ್ಷಣ ಶೌಚಾಲಯದ ಗುಂಡಿಯನ್ನು ಯಂತ್ರದ ಮೂಲಕ ಖಾಲಿ ಮಾಡುವ ವ್ಯವಸ್ಥೆ ಈಗಾಗಲೇ ನಗರದಲ್ಲಿ ಜಾರಿಯಲ್ಲಿದೆ'.
-ಚಿಕ್ಕಣ್ಣ ನಗರಸಭೆ ಪೌರಾಯುಕ್ತರು

`ಕಸ ತೆಗೆಯುವವರೇ ಇಲ್ಲ'

`ನಗರದ    ಹೃದಯ ಭಾಗದ ವಾರ್ಡ್‌ಗಳನ್ನು ಹೊರತು ಪಡಿಸಿದರೆ, ನಗರದ ಹೊರ ಭಾಗದಲ್ಲಿನ ವಾರ್ಡ್‌ಗಳ ಬಡಾವಣೆಗಳಲ್ಲಿ ಎರಡು ತಿಂಗಳಾದರೂ ಕಸ ತೆಗೆಯುವುದಿಲ್ಲ. ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಅಂಗಲಾಚಿದರೂ ಹೊರ ಭಾಗದ ವಾರ್ಡ್‌ಗಳ ಕಡೆಗೆ ಕಸ ತೆಗೆಯಲು ಬರುವುದೇ ಅಪರೂಪ'.
-ಆಂಜಿನಪ್ಪ, ನಗರಸಭೆ ಸದಸ್ಯ,5ನೇ ವಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT