ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು: ರಾಜ್ಯಕ್ಕೆ ಕೇಂದ್ರ ಭರವಸೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ಅಭಾವ ಎದುರಿಸುತ್ತಿರುವ ರಾಜ್ಯಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಭರವಸೆ ನೀಡಿದೆ.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಮನವಿ ಸ್ವೀಕರಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ರಾಜ್ಯ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಅರಿವಿದ್ದು ಹೆಚ್ಚುವರಿ ಕಲ್ಲಿದ್ದಲು ಪೂರೈಕೆ ಮಾಡುವ ಮೂಲಕ ಪರಿಹಾರ ಸೂಚಿಸಲಾಗುವುದು ಎಂದರು.

ಸರ್ಕಾರಿ ಸ್ವಾಮ್ಯದ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಪೂರೈಸಲು ಹೊಸ ನೀತಿ ರೂಪಿಸಲಾಗುತ್ತಿದೆ. ಅದರನ್ವಯ ರಾಜ್ಯಕ್ಕೂ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ಸ್ವಾಮ್ಯದ ಮಹಾನದಿ ಕಲ್ಲಿದ್ದಲು ಗಣಿಯಿಂದ ರಾಯಚೂರು ಉಷ್ಣ ವಿದ್ಯುತ್ ಘಟಕಗಳಿಗೆ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಆಗದಿರುವುದರಿಂದ ದಾಸ್ತಾನು ಖಾಲಿ ಆಗಿದೆ. ಇದರಿಂದ ವಿದ್ಯುತ್ ಉತ್ಪಾದನೆಗೆ ಸಮಸ್ಯೆ ಆಗಿದೆ ಎಂದು ಸಚಿವರು ವಿವರಿಸಿದ್ದಾರೆ. ಉಷ್ಣ ವಿದ್ಯುತ್ ಸ್ಥಾವರಕ್ಕೆ ದಿನಕ್ಕೆ 38 ಸಾವಿರ ಟನ್ ಕಲ್ಲಿದ್ದಲು ಅಗತ್ಯವಿದೆ. ರಾಜ್ಯದ ವಿದ್ಯುತ್ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಕಲ್ಲಿದ್ದಲು ಪೂರೈಕೆ ಪ್ರಮಾಣ ಹೆಚ್ಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯದ ಬೇಡಿಕೆ ಪೂರೈಸಲು ಪ್ರತಿನಿತ್ಯ 940 ಮೆ.ವಾ ವಿದ್ಯುತ್ ಖರೀದಿಸಲಾಗುತ್ತಿದೆ. ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ ಹೆಚ್ಚುವರಿಯಾಗಿ 300 ಮೆ.ವಾ ಅಗತ್ಯವಿದೆ. ವಿದ್ಯುತ್ ಖರೀದಿಗೆ ತಿಂಗಳಿಗೆ 150ರಿಂದ 200 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಶೋಭಾ ಸ್ಪಷ್ಟಪಡಿಸಿದರು.

ಸಕ್ಕರೆ ಕಾರ್ಖಾನೆಗಳಿಂದ 400 ಮೆ.ವಾ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಯುನಿಟ್‌ಗೆ 5.40 ರೂಪಾಯಿ ಕೇಳುತ್ತಿದ್ದಾರೆ. ಸರ್ಕಾರ ಕೊಡಲು ಸಿದ್ಧವಿದೆ. ಆದರೆ, ಕೆಇಆರ್‌ಸಿ ದರ ನಿಗದಿಪಡಿಸಬೇಕು ಎಂದರು.
 
ಇಂಧನ ಸಚಿವರು ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಬಿಡದಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆರಂಭಿಸಲಾಗುತ್ತಿರುವ ಅನಿಲ (ಗ್ಯಾಸ್) ಆಧಾರಿತ ವಿದ್ಯುತ್ ಘಟಕಗಳಿಗೆ ಅಗತ್ಯವಿರುವ ಅನಿಲ ಪೂರೈಕೆ ಮಾಡುವಂತೆ ಮನವಿ ಮಾಡಿದರು.
 
ಅನಂತರ ಶೋಭಾ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ವಿದ್ಯುತ್ ಅಭಾವ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಬಿಜೆಪಿ ಆಡಳಿತವಿರುವ ರಾಜ್ಯಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೇಟ್ಲಿ ಜತೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರಿದ್ದರು. ಪಕ್ಷದ ಮುಖಂಡರ ಜತೆ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಲಿಲ್ಲ ಎಂದು ಕರಂದ್ಲಾಜೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT