ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕಿತರನ್ನು ಅನರ್ಹಗೊಳಿಸಲು ಜೆಡಿಎಸ್ ಆಗ್ರಹ

Last Updated 10 ಫೆಬ್ರುವರಿ 2012, 6:45 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸೆಕ್ಸ್ ಫಿಲಂ ನೋಡಿ  ಸಚಿವ ಸ್ಥಾನ ಕಳೆದುಕೊಂಡಿರುವ  ಮೂವರ ಶಾಸಕತ್ವವನ್ನು ಅನರ್ಹಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜೆಡಿಎಸ್ ಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪಕ್ಷದ ಕಾರ್ಯಕರ್ತರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಟಯರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರು ಸದನದಲ್ಲಿ ಸೆಕ್ಸ್ ಫಿಲಂ ನೋಡುವ ಮೂಲಕ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ ಎಂದರು.

ನಾಡಿನ ಸಂಸ್ಕೃತಿ, ಮಹಿಳೆಯರ ಬಗ್ಗೆ ನೀತಿ ಪಾಠ ಹೇಳುವ ಬಿಜೆಪಿಯ ಮಂತ್ರಿಗಳು ವಿಧಾನಸಭೆ ಇತಿಹಾಸದಲ್ಲಿ ಹಿಂದೆಂದು ನಡೆಯಲಾರದಂತಹ ಪ್ರಕರಣವಾಗಿದೆ, ಈ ಮೂಲಕ ವಿಧಾನಸಭೆಯನ್ನು ಅಪವಿತ್ರ ಗೊಳಿಸಿದ್ದಾರೆ ಎಂದು ಆರೋಪಿಸಿದರು.

ಪ್ರಕರಣವನ್ನು ರಾಜ್ಯಪಾಲರು ತೀವ್ರವಾಗಿ ಪರಿಗಣಿಸಿ ಮೂವರು ಶಾಸಕರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಭ್ರಷ್ಟ, ನೀತಿಗೆಟ್ಟ ಬಿಜೆಪಿ ಸರ್ಕಾರವನ್ನು ತಕ್ಷಣ ರಾಜ್ಯಪಾಲರು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಮೂವರು ಮಾಜಿ ಸಚಿವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ ಲಕ್ಷ್ಮಣ ಸವದಿ ಸೆಕ್ಸಿ ಫೈಲ್ವಾನ್ ನಂ. 1, ಸಿ.ಸಿ. ಪಾಟೀಲ ಸೆಕ್ಸಿ ಫೈಲ್ವಾನ್ ನಂ. 2, ಕೃಷ್ಣ ಪಾಲೆಮಾರ್ ಸೆಕ್ಸಿ ಫೈಲ್ವಾನ್ ನಂ. 3 ಎಂಬ ವಿಭಿನ್ನ ಪೋಸ್ಟರ್ ಪ್ರದರ್ಶಿಸಿದರು.
ಬಳಿಕ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಜೆಡಿಎಸ್ ಮುಖಂಡ ಘನಶಾಮ ಭಾಂಡಗೆ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ಜಂಬಗಿ, ಸಲೀಂ ಮೋಮಿನ, ಶಂಭು ಅಕ್ಕಿಮರಡಿ, ಅಮೀನ ಸಾಬಾ ಸೌದಾಗರ, ಅಜೀಜ್ ಬಾಳಿಕಾಯಿ, ಮುದಕಣ್ಣ ಬಣಕಾರ, ನಬೀ ಟಂಕಸಾಲಿ, ಆನಂದ, ಸಿದ್ದು, ಬಸವರಾಜ ಹೆಬ್ಬಳ್ಳಿ, ರೇಣುಕಾ ಗುರ್ಲ, ಮುಧೋಳ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ನಾಯ್ಕ, ಶಿವಲೀಲಾ, ಮಾಲಾ ಕೆರವಲದ,  ಮೆಹಬೂಬ ನದಾಫ್ ಮತ್ತಿತರರು ಹಾಜರಿದ್ದರು.

ಬಿಜೆಪಿಯಿಂದ ಸಂಸ್ಕೃತಿಗೆ ಧಕ್ಕೆ: ಫಡತರೆ ಆರೋಪ
ಮುಧೋಳ: ಬಿಜೆಪಿಯಿಂದ ದೇಶದ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉದಯಸಿಂಹ ಫಡತರೆ  ಆರೋಪಿಸಿದರು.

ನಗರದಲ್ಲಿ ಬುಧವಾರ  ಎನ್.ಎಸ್.ಯು.ಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನಸೌಧದಲ್ಲಿ ಅಶ್ಲೆಲ ಚಿತ್ರ ವೀಕ್ಷಿಸುವ ಮೂಲಕ ಸದನಕ್ಕೆ ಅಗೌರವ ತೋರಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದಲ್ಲಿ ಅಷ್ಟೇ ಅಲ್ಲ ಅಶ್ಲೀಲ ಕಾರ್ಯಗಳಲ್ಲಿಯೂ ತೊಡಗಿಸಿ ಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ನಂತರ ಪ್ರತಿಭಟನಾಕಾರರು ಮುಧೋಳ ತಹಶೀಲ್ದಾರ ಶಂಕರಗೌಡ ಸೋಮನಾಳರಿಗೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಬದಲ್ಲಿ ಮಹೇಶ ಹಲಸಂಗಿಮಠ, ಪವನ ದೇವಪೂಜಿ, ಎಚ್.ಎ.ಕಡಪಟ್ಟಿ, ಜಿ.ಸಿ.ಚಿನಿವಾಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT