ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಆಹಾರ ಪೂರೈಕೆ: ಅಧಿಕಾರಿ ತರಾಟೆಗೆ

Last Updated 7 ಡಿಸೆಂಬರ್ 2012, 6:35 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಕಳಪೆ ಮತ್ತು ಹುಳುಮಿಶ್ರಿತ ಗೋಧಿ ತಡೆಗಟ್ಟಲು ವಿಫಲರಾಗಿರುವ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ಅವರನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯರ‌್ರಬಚ್ಚಪ್ಪ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗರೇಖನಹಳ್ಳಿಯಲ್ಲಿ ಸರಬರಾಜು ಮಾಡಿರುವ ಗೋಧಿಯಲ್ಲಿ ಹುಳುಗಳು ಕಂಡು ಬಂದಿವೆ. ನೀವು ಏನು ಕ್ರಮ ಕೈಗೊಂಡಿದ್ದೀರಾ? ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರಿಸಿದ ಪ್ರಕಾಶ್, ಪಟ್ಟಣದ ನಾಲ್ಕು ಅಂಗನವಾಡಿ ಕೇಂದ್ರಗಳಲ್ಲಿ ಹುಳುಮಿಶ್ರಿತ ಗೋಧಿ ಸರಬರಾಜು ಮಾಡಿರುವುದನ್ನು ಪತ್ತಹಚ್ಚಿ, ಅದನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಗೋಧಿ ಸರಬರಾಜು ಮಾಡಿರುವವರಿಗೆ ಈಗಾಗಲೆ ನೋಟಿಸ್ ನೀಡಲಾಗಿದ್ದು, ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಮಧ್ಯಾಹ್ನಕ್ಕೆ ಬಾಗಿಲನ್ನು ಹಾಕಿ ತಮ್ಮ ಸ್ವಂತ ಕೆಲಸಗಳಿಗೆ ಹೋಗುತ್ತಾರೆ. ಕೇಂದ್ರಗಳಿಗೆ ಬರುವ ಆಹಾರ ಧಾನ್ಯಗಳು ದುರ್ಬಳಕೆಯಾಗುತ್ತಿವೆ ಎಂದು ದೂರುಗಳು ಬಂದಿದ್ದು, ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸಿ.ಡಿ.ಪಿ.ಓಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಸೂಚಿಸಿದರು.

ಹೈಕೋರ್ಟ್ ಆದೇಶದಂತೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ್ದರೂ ಈಗ ಸುಮಾರು 33 ಶಾಲೆಗಳಿಗೆ ತಾತ್ಕಾಲಿಕವಾಗಿ ನೀರಿನ ಸೌಕರ್ಯ ಒದಗಿಸಲಾಗಿದೆ ಎಂದು ಹೇಳುತ್ತಿದ್ದೀರಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡರು.

ರಸ್ತೆ ಬದಿಯಲ್ಲಿ 6 ಕಿ.ಮೀ. ವ್ಯಾಪ್ತಿಯಲ್ಲಿ ಗಿಡ ನೆಟ್ಟಿರುವುದಾಗಿ ಹೇಳಿದ ಅರಣ್ಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಉಪಾಧ್ಯಕ್ಷೆ ಸರಸ್ವತಮ್ಮ, ಕೆಲಸ ಮಾಡದೆ ಹಣ ಡ್ರಾ ಮಾಡಲಾಗಿದೆ. ರಸ್ತೆ ಬದಿಯಲ್ಲಿ ಗಿಡಗಳೇ ಇಲ್ಲ, ಅರಣ್ಯದಲ್ಲಿ ಕಾವಲುಗಾರರೆ ಮರಗಳನ್ನು ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಮ್ಮನಾಯಕನಹಳ್ಳಿ, ಗಂಜಿಗುಂಟೆ, ಹಾಗೂ ಕುಂದಲಗುರ್ಕಿ ಪಂಚಾಯಿತಿಗಳಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಜಲಾನಯನ ಇಲಾಖೆ ಅಧಿಕಾರಿಯಾಗಿ ಬಂದಿರುವ ಅಶ್ವಥನಾರಾಯಣ ಅವರಿಗೆ ಅಧ್ಯಕ್ಷರು ಸೂಚಿಸಿದರು.

ಜಲಾನಯನ ಇಲಾಖೆ ಮೂಲಕ ಮೂರೂ ಪಂಚಾಯಿತಿಗಳಲ್ಲಿ ಮಾಡಿರುವ ಕಾಮಗಾರಿಗಳನ್ನು ಹಿಂದೆ ಇದ್ದ ಅಧಿಕಾರಿ ಜೆಸಿಬಿ ಯಂತ್ರಗಳ ಮೂಲಕ ಮಾಡಿಸಿ ಹಣ ಡ್ರಾ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಕೂಡಲೆ ಸಂಬಂಧಪಟ್ಟ ದಾಖಲೆ ಒದಗಿಸಿ ಸ್ಥಳ ಪರಿಶೀಲನೆ ನಡೆಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಬೆಸ್ಕಾಂ ಇಲಾಖೆ, ರೇಷ್ಮೆ ಇಲಾಖೆ, ಮುಂತಾದ ಇಲಾಖೆ ಅಧಿಕಾರಿಗಳು ಇಲಾಖೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್, ಪಂಚಾಯತ್ ರಾಜ್ ವಿಭಾಗದ ಎಇಇ ಪಿ.ವಿ.ನಾಗಪ್ಪ ಮತ್ತು ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT