ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಗಳ ಗೆದ್ದು ಬಾ...

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇವರು ನಿಮ್ಮನ್ನೇ ಏಕೆ ಇಂತಹ ಮಹಾಮಾರಿ ರೋಗಕ್ಕೆ ಈಡಾಗುವಂತೆ ಮಾಡಿದ?
-ತಮ್ಮದಲ್ಲದ ತಪ್ಪಿಗೆ ಏಡ್ಸ್ ರೋಗದಿಂದ ಬಳಲುತ್ತಿದ್ದ ಟೆನಿಸ್ ದಂತಕತೆ ಆರ್ಥರ್ ಆ್ಯಷ್ ಅವರನ್ನು ಯಾರೊ ಅಭಿಮಾನಿ ಈ ರೀತಿ ಕೇಳಿದನಂತೆ.

ಅದಕ್ಕೆ ವಿಂಬಲ್ಡನ್ ಚಾಂಪಿಯನ್ ಆರ್ಥರ್ ನೀಡಿದ ಉತ್ತರವೇನು ಗೊತ್ತಾ?
`ಈ ಪ್ರಪಂಚದಲ್ಲಿ ಐದು ಕೋಟಿ ಮಂದಿ ಮಕ್ಕಳು ಟೆನಿಸ್ ರ‌್ಯಾಕೆಟ್ ಹಿಡಿಯುತ್ತಾರೆ. 50 ಲಕ್ಷ ಮಂದಿ ಟೆನಿಸ್ ಆಡಲು ಕಲಿಯುತ್ತಾರೆ.

50 ಮಂದಿ ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅದರಲ್ಲಿ ನಾಲ್ಕು ಆಟಗಾರರು ಸೆಮಿಫೈನಲ್ ತಲುಪುತ್ತಾರೆ. ಇವರಲ್ಲಿ ಇಬ್ಬರು ಫೈನಲ್‌ನಲ್ಲಿ ಆಡುತ್ತಾರೆ. ಫೈನಲ್ ಹೋರಾಟದಲ್ಲಿ ನಾನು ಗೆದ್ದು ವಿಂಬಲ್ಡನ್ ಚಾಂಪಿಯನ್ ಆದಾಗ ಈ ಪಟ್ಟಕ್ಕೆ ನನ್ನನ್ನೇಕೆ ಆಯ್ಕೆ ಮಾಡಿದೆ ಎಂದು ದೇವರನ್ನು ಕೇಳಲಿಲ್ಲ. ಈಗ ನಾನು ಏಡ್ಸ್‌ನಿಂದ ಬಳಲುತ್ತಿದ್ದೇನೆ. ಆದರೆ ನನಗೇಕೆ ಈ ನೋವು ನೀಡಿದೆ ಎಂದು ನಾನು ದೇವರನ್ನು ಪ್ರಶ್ನಿಸುವುದಿಲ್ಲ~

ಅದು ಜೀವನ. ಶಹಬ್ಬಾಸ್ ಆರ್ಥರ್!
ಈ ಮಾತನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಲು ಕಾರಣ ಕ್ರಿಕೆಟ್ ಪ್ರೀತಿಯ ನಾಡಿನ ಆಟಗಾರ ಯುವರಾಜ್ ಸಿಂಗ್ ಈಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ರೀಡಾ ಪ್ರೇಮಿಗಳದ್ದು ಒಂದೇ ಪ್ರಾರ್ಥನೆ. ಕಷ್ಟಗಳ ಗೆದ್ದು ಬಾ `ಯುವಿ~. ಆ ಅಭಿಮಾನಿಗಳ ಮನದಾಳದ ನೋವಿನ ಸ್ವಗತದ ಒಂದು ಪತ್ರ ಇಲ್ಲಿದೆ. 

ನಲ್ಮೆಯ ಯುವಿ...
ನೀನು ಕ್ರಿಕೆಟ್ ಪ್ರೇಮಿಗಳಲ್ಲಿ ಅದೆಷ್ಟೊಂದು ಸಂತೋಷಕ್ಕೆ ಕಾರಣವಾಗಿದ್ದೆ. ಕ್ರಿಕೆಟ್ ಎಂದರೆ ಹುಚ್ಚೆದ್ದು ಕುಣಿಯುವ ನಾಡಿನಲ್ಲಿ ನಿನ್ನ ಆಟವನ್ನು ಅದೆಷ್ಟು ಖುಷಿಯಿಂದ ನೋಡಿ ಸಂತೋಷಪಟ್ಟಿದ್ದೆವು. ಅದಕ್ಕೆ ವಿಶ್ವಕಪ್‌ಗಿಂತ ಮತ್ತೊಂದು ಟೂರ್ನಿ ಬೇಕಾ?
ಕಪಿಲ್ ಡೆವಿಲ್ಸ್ ನಮಗೆ ವಿಶ್ವಕಪ್ ಗೆದ್ದುಕೊಟ್ಟು ತುಂಬಾ ವರ್ಷಗಳಾಗಿದ್ದವು.
 
ಅದು ಬರೋಬ್ಬರಿ 28 ಸಂವತ್ಸರಗಳು. ಪ್ರತಿಬಾರಿ ವಿಶ್ವಕಪ್ ನಡೆದಾಗ ಈ ಬಾರಿ ನಮ್ಮ ಭಾರತ ಗೆಲ್ಲುತ್ತೆ ಎಂಬ ಆಸೆ ಇಟ್ಟುಕೊಂಡು ಊಟ, ನಿದ್ದೆ ಬಿಟ್ಟು ಪರಿತಪಿಸುತ್ತಿದ್ದೆವು. ಆದರೆ ಸೆಮಿಫೈನಲ್‌ನಲ್ಲೋ, ಫೈನಲ್‌ನಲ್ಲೋ, ಕೊನೆಗೆ ಲೀಗ್ ಹಂತದಲ್ಲೋ ಎಡವಿ ಬಿದ್ದ ಗೋಳು. ಮನಸ್ಸಿಗೆ ತುಂಬಾ ಬೇಜಾರಾಗುತಿತ್ತು.

ಇರಲಿ ಬಿಡಿ; ಮುಂದಿನ ಬಾರಿ ಚಾಂಪಿಯನ್ ಆಗುತ್ತೇವೆ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳುತ್ತಿದ್ದೆವು.

ಆದರೆ ಕಳೆದ ವರ್ಷ ನಮ್ಮೆಲ್ಲರ ಆಸೆ ತಣಿಸುವಲ್ಲಿ ನೀನು ಪ್ರಮುಖ ಕಾರಣನಾದೆ. ನಿಜ, ಸಚಿನ್, ದೋನಿ, ಸೆಹ್ವಾಗ್ ಸೇರಿದಂತೆ ಪ್ರತಿಯೊಬ್ಬರೂ ಚೆನ್ನಾಗಿ ಆಡಿದ್ದರು. ಆದರೆ ನಿನ್ನ ಆಲ್‌ರೌಂಡ್ ಪ್ರದರ್ಶನ ಮಾತ್ರ ಅದ್ಭುತ. ನಾಲ್ಕು ಬಾರಿ ಪಂದ್ಯ ಶ್ರೇಷ್ಠ, ಕೊನೆಗೆ ಟೂರ್ನಿ ಶ್ರೇಷ್ಠ!  ನಿನ್ನ ಉಪಸ್ಥಿತಿಯಿಂದ ನಾಯಕ ದೋನಿಗೆ ಆಲ್‌ರೌಂಡರ್ ಕೊರತೆಯೇ ಕಾಣಿಸಲಿಲ್ಲ. ಫೀಲ್ಡಿಂಗ್‌ನಲ್ಲಿ ನೀನೊಂಥರ ಭದ್ರಕೋಟೆ.

ಭಾರತ ವಿಶ್ವಕಪ್ ಗೆದ್ದಾಗ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಟ್ರೋಫಿ ಹಿಡಿದು ನೀನು ಕುಣಿದಾಡಿದ ಆ ಕ್ಷಣ ಇನ್ನೂ ನಮ್ಮ ಕಣ್ಣಿನ ರೆಪ್ಪೆಯ ತುದಿಯಲ್ಲಿಯೇ ಇದೆ. ಆ ದಿನ ಬೆಳಗಿನ ಜಾವದವರೆಗೆ ಪಟಾಕಿ ಸಿಡಿಸಿ ಖುಷಿಪಟ್ಟಿದ್ದೆವು.
 
ಪಕ್ಕದ ಮನೆ ಸ್ನೇಹಿತರಿಗೆ ಸಿಹಿ ಹಂಚಿದ್ದೆವು. ಬೆಳಿಗ್ಗೆ ಎದ್ದು ಅಷ್ಟೂ ಪತ್ರಿಕೆಗಳನ್ನು ಹರವಿಕೊಂಡು ಓದಿದ್ದೆವು. ಚಿತ್ರಗಳನ್ನು ಕತ್ತರಿಸಿ ಆಲ್ಬಂನಲ್ಲಿ  ಅಂಟಿಸಿಕೊಂಡಿದ್ದೆವು. ಹಾಗೇ, ನೀನು ಅಮ್ಮನನ್ನು ಅಪ್ಪಿಕೊಂಡು ಖುಷಿಪಟ್ಟ ಆ ಕ್ಷಣವನ್ನು ಪೇಪರ್, ಟಿವಿಯಲ್ಲಿ ನೋಡಿ ನಾವೂ ಸಂಭ್ರಮಿಸಿದ್ದೆವು.

ಆದರೆ ಯುವಿ, ನಮ್ಮಲ್ಲಿದ್ದ ನೋವನ್ನು ಮರೆಸಿದ ನೀನು ಈಗ ಕಷ್ಟಕ್ಕೆ ಸಿಲುಕಿದ್ದೀಯಾ. ನೀನು ನಿಜವಾದ ಚಾಂಪಿಯನ್, ಅದ್ಭುತ ಹೋರಾಟಗಾರ. ನಿನಗೆ ಈ ರೀತಿ ಆಗಬಾರದಿತ್ತು. ಖಂಡಿತ ನೀನು ಗೆದ್ದು ಬರುತ್ತೀಯಾ. ನಮ್ಮೆಲ್ಲರ ಪ್ರಾರ್ಥನೆ ನಿನ್ನೊಂದಿಗಿರಲಿದೆ. ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ; ಇಡೀ ದೇಶ ನಿನ್ನೊಂದಿಗಿದೆ. ಮತ್ತೆ ನಿನ್ನ ಆಟ ನೋಡುವ ತವಕದಲ್ಲಿ...

ಇಂತಿ ನಿನ್ನ ಪ್ರೀತಿಯ ಅಭಿಮಾನಿಗಳು
 
ಯುವಿಗೆ ಈ ರೀತಿ ಆಗಬಾರದಿತ್ತು...
ಅದೆಷ್ಟೊ ಕ್ರಿಕೆಟ್ ಅಭಿಮಾನಿಗಳು `ಪ್ರಜಾವಾಣಿ~ ಕಚೇರಿಗೆ ದೂರವಾಣಿ ಮಾಡಿ ಯುವಿಗೆ ಈ ರೀತಿ ಆಗಬಾರದಿತ್ತು ಸರ್ ಎಂದವರಿದ್ದಾರೆ. ಕ್ರಿಕೆಟ್ ಅಭಿಮಾನಿ ಆಟೊ ಚಾಲಕರನ್ನು ಮಾತನಾಡಿಸಿ, ಸೆಲೂನ್‌ನಲ್ಲಿ ಹೊರಹೊಮ್ಮುವ ಮಾತುಗಳಿಗೆ ಸುಮ್ಮನೆ ಹಾಗೇ ಕಿವಿ ಕೊಡಿ. ದರ್ಶಿನಿಗಳಲ್ಲಿ ಪ್ರತಿ ಬೆಳಿಗ್ಗೆ ಕಾಫಿ ಹೀರುತ್ತಾ ಕ್ರಿಕೆಟ್ ಬಗ್ಗೆ ಚರ್ಚೆ ಮಾಡುವವರ ಬಳಿ ಹೋಗಿ ನಿಲ್ಲಿ, ಬಸ್ಸುಗಳಲ್ಲಿ, ಪಾರ್ಕ್‌ಗಳಲ್ಲಿ, ಆಫೀಸ್‌ನಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುವಾಗ ಯುವರಾಜ್‌ಗೆ ಈ ರೀತಿ ಆಗಬಾರದಿತ್ತು. ಆದರೆ ಆತ ಹೋರಾಟಗಾರ, ಗೆದ್ದು ಬರುತ್ತಾನೆ ಎನ್ನುವ ಮಾತುಗಳು ಕೇಳಿಬರುತ್ತವೆ.

ಆರನೇ ಸಿಕ್ಸರ್ ಎತ್ತುವ ವಿಶ್ವಾಸವಿತ್ತಂತೆ...!
ಮತ್ತೊಮ್ಮೆ ಆ ಕ್ಷಣವನ್ನು ನೆನಪಿಸಿಕೊಳ್ಳಲೇಬೇಕು. ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಸತತ ಐದು ಸಿಕ್ಸರ್ ಎತ್ತಿದ್ದ ಯುವರಾಜ್‌ಗೆ ಆರನೇ ಸಿಕ್ಸರ್ ಎತ್ತುವ ವಿಶ್ವಾಸವಿತ್ತಂತೆ.

ಒಂದು ಸಂದರ್ಶನದಲ್ಲಿ ಅವರೇ ಹೇಳಿದ್ದ ಮಾತಿದು. ಅಂದ ಹಾಗೇ, ಯುವಿ ಈ ಮಹಾಮಾರಿ ಕ್ಯಾನ್ಸರ್‌ನಿಂದಲೂ      ಗುಣಮುಖರಾಗಿ ಮತ್ತೆ ಅಂಗಳಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಟ್ವಿಟರ್‌ನಲ್ಲಿ ಯುವಿ ಹೇಳಿದಂತೆ ಭಾರತ ಕ್ರಿಕೆಟ್ ತಂಡದ ನೀಲಿ ಬಣ್ಣದ ಪೋಷಾಕು ತೊಡಲು ಅವರ ಹೃದಯ ತುಡಿಯುತ್ತಿದೆ.
ಈ ಜೀವನವೆಂಬುದು ಒಂದು ಕ್ರಿಕೆಟ್ ಮ್ಯಾಚ್ ಎಂದಿಟ್ಟುಕೊಳ್ಳಿ. ಗೆಲ್ಲಲು ಆರು ಎಸೆತಗಳಲ್ಲಿ 36 ರನ್ ಬೇಕು. ಯುವಿ ಕ್ರೀಸ್‌ನಲ್ಲಿದ್ದಾರೆ...!
 

ಕ್ರಿಕೆಟ್ ಅಭಿಮಾನಿಗಳಲ್ಲಿ ಯುವಿ ಅದೆಷ್ಟೊಂದು ಸಂತೋಷಕ್ಕೆ ಕಾರಣವಾಗಿದ್ದರು. ಕ್ರಿಕೆಟ್ ಎಂದರೆ ಹುಚ್ಚೆದ್ದು ಕುಣಿಯುವ ನಾಡಿನಲ್ಲಿ ಅವರ ಆಟವನ್ನು ಅದೆಷ್ಟು ಖುಷಿಯಿಂದ ನೋಡಿ ತಮ್ಮ ನೋವು ಮರೆತವರಿಲ್ಲ. ಆದರೆ ಅಭಿಮಾನಿಗಳ ನೋವನ್ನು ಮರೆಸಿ ಖುಷಿಗೆ ಕಾರಣವಾಗುತ್ತಿದ್ದ ಯುವಿಯೇ ಈಗ ಕಷ್ಟಕ್ಕೆ ಸಿಲುಕಿದ್ದಾರೆ.                                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT