ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ

Last Updated 2 ಅಕ್ಟೋಬರ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೂರೈಸಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಕ್ಕೆ ನಾಗರಿಕರಿಂದ ಎರಡನೇ ದಿನ ಸ್ವಲ್ಪಮಟ್ಟಿಗೆ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ವಾಣಿಜ್ಯ ಸಂಕೀರ್ಣಗಳು ಹಾಗೂ ಹೋಟೆಲ್, ಮಾಲ್‌ಗಳು ಒಣ ಕಸವನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ರಸ್ತೆ ಬದಿ ಎಸೆದಿರುವುದರಿಂದ ನಗರದ ಹೃದಯ ಭಾಗದಲ್ಲಿರುವ ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಂತಹ ಕಡೆಗಳಲ್ಲಿ ಕಸದ ರಾಶಿ ಎದ್ದು ಕಂಡಿತು.

ಈ ನಡುವೆ, ಮೇಯರ್ ಡಿ.ವೆಂಕಟೇಶಮೂರ್ತಿ, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಮಂಗಳವಾರ ಕತ್ರಿಗುತ್ತೆ ಆಸುಪಾಸಿನ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಮೂಲದಿಂದಲೇ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸುವ ನೀತಿ ಅನುಷ್ಠಾನಗೊಂಡಿದ್ದು ಪಾಲಿಕೆಯ ಸ್ಪಷ್ಟ ಸೂಚನೆಯ ಮೇರೆಗೆ ಪೌರ ಕಾರ್ಮಿಕರು ಕೇವಲ ಹಸಿ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುತ್ತಿದ್ದಾರೆ. ಆದರೆ, ನಾಗರಿಕರು ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ಇರಿಸಿಕೊಳ್ಳಲಾಗದೇ ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ನಗರದ ಅನೇಕ ಕಡೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಮಂಗಳವಾರ ಕಂಡು ಬಂದಿತು.

`ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕಸ ವಿಂಗಡಣೆಗೆ ಸೋಮವಾರದಿಂದ ಚಾಲನೆ ದೊರಕಿತ್ತು. ಮೊದಲ ದಿನ ನಗರದಾದ್ಯಂತ ಸರಾಸರಿ ಶೇ.20 ರಷ್ಟು ಕಸವನ್ನು ವಿಂಗಡಿಸಿ ಸಂಗ್ರಹಿಸಲಾಗಿತ್ತು. ಮಂಗಳವಾರ ಕೂಡ ಕಸ ವಿಂಗಡಿಸಿ ಸಂಗ್ರಹಿಸುವ ಕಾರ್ಯ ಮುಂದುವರೆದಿದ್ದು, ಶೇ 30 ರಷ್ಟು ಹಸಿ ತ್ಯಾಜ್ಯ ಸಂಗ್ರಹವಾಗಿದೆ~ ಎಂದು ಪಾಲಿಕೆಯ ಆಯುಕ್ತ ಡಾ. ರಜನೀಶ್ ಗೋಯಲ್ ತಿಳಿಸಿದರು.

`ಬುಧವಾರದಿಂದ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದರ ಮೂಲಕ ಕಸ ವಿಂಗಡಣೆಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು. ಸಂಗ್ರಹಿಸಿದ ಹಸಿ ಕಸ ವಿಲೇವಾರಿಗೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸಲಾರದು. ತಕ್ಷಣ ರೈತರಿಂದ ಸಾಕಷ್ಟು ಬೇಡಿಕೆ ಬಂದಿರುವುದರಿಂದ ಅದನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು~ ಎಂದು ಅವರು ತಿಳಿಸಿದರು.

ಯಲಹಂಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ : ಈ ನಡುವೆ, ಯಲಹಂಕ ವಲಯದ 11 ವಾರ್ಡ್‌ಗಳಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಶೇ 100ರಷ್ಟು ಕಸ ಸಂಗ್ರಹಿಸಲಾಗಿದೆ. ಇಲ್ಲಿ 35 ಟನ್‌ಗಳಷ್ಟು ಹಸಿ ಕಸ ಸಂಗ್ರಹಿಸಲಾಗಿದೆ. 500 ಕೆ.ಜಿ.ಗಳಷ್ಟು ಒಣ ಕಸ, 55 ಕೆ.ಜಿ.ಯಷ್ಟು ಸ್ಯಾನಿಟರಿ ವೇಸ್ಟ್ (ಬಯೋಮೆಡಿಕಲ್ ತ್ಯಾಜ್ಯ) ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ರಾಮ್ಕಿ ಸಂಸ್ಥೆಯ ಮುಖಾಂತರ ವೈಜ್ಞಾನಿಕವಾಗಿ ವಿಲೇವಾರಿಗಾಗಿ ಕಳುಹಿಸಲಾಗಿದೆ. 500 ಕೆ.ಜಿ.ಗಳಷ್ಟು ಸಂಗ್ರಹಿಸಲಾದ ಒಣ ಕಸವನ್ನು ಕಸ ವಿಂಗಡಣೆ ಘಟಕದಲ್ಲಿ ಹಾಕಲಾಗಿದೆ.

ಯಲಹಂಕ ವಲಯದ ಎಲ್ಲ 11 ವಾರ್ಡ್‌ಗಳಿಂದ ಸಂಗ್ರಹಿಸಲಾದ 35 ಟನ್‌ಗಳಷ್ಟು ಹಸಿ ಕಸವನ್ನು ಗುತ್ತಿಗೆದಾರರು 5,000 ರೂಪಾಯಿಗೆ ರೈತರಿಗೆ ಮಾರಿದ್ದಾರೆ. ಬಿಬಿಎಂಪಿಯಿಂದ ಸಂಗ್ರಹಿಸಲಾದ ಹಸಿ ಕಸಕ್ಕೆ ರೈತರಿಂದ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ ಎಂದು ಯಲಹಂಕ ವಲಯದ ಜಂಟಿ ಆಯುಕ್ತ ರಾಮಚಂದ್ರಮೂರ್ತಿ ತಿಳಿಸಿದ್ದಾರೆ.

ಈ ನಡುವೆ, ಬೇರ್ಪಡಿಸಿದ ಒಣ ಹಾಗೂ ಹಸಿ ತ್ಯಾಜ್ಯವನ್ನು ಸ್ವೀಕರಿಸುವ ಕುರಿತು ಪೌರ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ.

ಸಾರ್ವಜನಿಕ ಅಭಿಪ್ರಾಯಗಳು
ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸುತ್ತಿದ್ದೇವೆ. ಆದರೆ ವಾರಕ್ಕೊಮ್ಮೆ  ಒಣ ತ್ಯಾಜ್ಯವನ್ನು ಪೌರಕಾರ್ಮಿಕರು ಸಂಗ್ರಹಿಸಲು ಸೂಚನೆ ನೀಡಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ಶೇಖರಿಸಿಡಲು ಸಾಧ್ಯವಿಲ್ಲ. ಇದನ್ನು ಏನು ಮಾಡುವುದೆಂಬುದೇ ತಿಳಿಯುತ್ತಿಲ್ಲ.
 -ವಿಶಾಲಾಕ್ಷಿ, ಜರಗನಹಳ್ಳಿ

ಪಾಲಿಕೆ ತ್ಯಾಜ್ಯ ವಿಂಗಡಿಸಿ ನೀಡಿ ಎಂದು ಸೂಚನೆ ನೀಡಿದೆ. ಆದರೆ ಅದರಲ್ಲೂ ವಾರಕ್ಕೊಮ್ಮೆ ಒಣತ್ಯಾಜ್ಯವನ್ನು ಸಂಗ್ರಹಿಸುವುದಿರಿಂದ ನಮಗೆಲ್ಲ ಪರದಾಡುವಂತಾಗಿದೆ. ಚಿಕ್ಕ ಮನೆಯಾದರೂ ಎರಡು ಬಿನ್‌ಗಳನ್ನು ಇಟ್ಟುಕೊಂಡಿದ್ದೇವೆ. ಹಸಿ ತ್ಯಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಏಳು ದಿನದ ತ್ಯಾಜ್ಯಕ್ಕೆ ಒಂದೇ ಬಿನ್ ಸಾಲುತ್ತದೆಯೇ ಎಂಬ ಚಿಂತೆಯಾಗಿದೆ.
 - ಜಲಜಾ, ಯಲಚೇನಹಳ್ಳಿ

ಮೂಲದಿಂದಲೇ ತ್ಯಾಜ್ಯ ವಿಂಗಡಣೆ ಮತ್ತು ಅದರ ಸಮರ್ಪಕ ವಿಲೇವಾರಿಯಾದಾಗ ಮಾತ್ರ ನಗರದಲ್ಲಿ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪಾಲಿಕೆ ಕಸ ವಿಂಗಡಣೆಗೆ ಒತ್ತು ನೀಡಿದಂತೆ ಅದರ ವಿಲೇವಾರಿಯತ್ತ ಹೆಚ್ಚಿನ ಗಮನ ಹರಿಸಬೇಕು.
 - ರಾಜಮ್ಮ, ಜೆ.ಪಿ.ನಗರ

ಬಿಬಿಎಂಪಿ ಏಕಾಏಕಿ ಈ ನೀತಿಯನ್ನು ತರುವ ಬದಲು ಹಂತ ಹಂತವಾಗಿ ಜಾರಿಗೊಳಿಸಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಕಸ ಸಂಗ್ರಹ ಮತ್ತು ವಿಲೇವಾರಿಯ ಬಗ್ಗೆ ನಾಗರಿಕರಿಗೆ ಸಮಗ್ರವಾಗಿ ಮಾಹಿತಿ ದೊರೆತಾಗ ಮಾತ್ರ ಇನ್ನಷ್ಟು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನೀತಿ ಬಂದ ಮೇಲೂ ರಾಜಧಾನಿಯಲ್ಲಿ ಕಸ ಬಿದ್ದರೆ ಪಾಲಿಕೆಗೆ ಅವಮಾನವಾದಂತೆ
- ರಾಮಪ್ಪ , ಅಂಗಡಿ ಮಾಲೀಕ, ಕೋಣನ ಕುಂಟೆ ಕ್ರಾಸ್ 

ಪಾಲಿಕೆ ದಿನಕ್ಕೊಂದು ನೀತಿ ರೂಪಿಸುತ್ತಿದೆ. ಆದರೆ, ಯಾವುದೂ ವ್ಯವಸ್ಥಿತವಾಗಿ ಇರುವುದಿಲ್ಲ. ಎರಡು ದಿನಕ್ಕೇ ಒಣ ಕಸದ ಬಿನ್ ತುಂಬಿ ಹೋಗಿದೆ. ಇನ್ನೂ ಒಂದು ವಾರ ಕಾಲ ಈ ಬಿನ್ ತುಂಬದೇ ಇರುತ್ತದೆಯೇ? ಕೆಲವರಂತೂ ಇದನ್ನು ಮನೆಯ ಮುಂದೆಯೇ ಸುರಿಯುತ್ತಿದ್ದಾರೆ. ಹೀಗಾದರೆ ಹೊಸ ನೀತಿಯ ಉಪಯೋಗವೇನು?
 -ಮೀನಾಕ್ಷಿ, ಗೋವಿಂದ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT