ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಮಾಫಿಯಾ ಶೀಘ್ರ ಮಟ್ಟ:ಅಶೋಕ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರದಲ್ಲಿ ದೈತ್ಯಾಕಾರವಾಗಿ ಬೆಳೆದು ನಿಂತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಕಸದ ಮಾಫಿಯಾವೇ ಕಾರಣವಾಗಿದ್ದು, ಸರ್ಕಾರ ಅದನ್ನು ಮಟ್ಟ ಹಾಕಲಿದೆ~ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ನಗರ ಉಸ್ತುವಾರಿ ಸಚಿವ ಆರ್. ಅಶೋಕ ಗುಡುಗಿದರು.

ಕಸದ ಸಮಸ್ಯೆ ಉದ್ಭವಿಸಿ ಎರಡೂವರೆ ತಿಂಗಳು ಗತಿಸಿದ ಬಳಿಕ ಕೊನೆಗೂ ಮೌನ ಮುರಿದ ಅವರು, ಭಾನುವಾರ ವರದಿಗಾರರ ಜೊತೆ ಮಾತನಾಡಿದರು. `ಮಂಡೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಯಾರೂ ಗ್ರಾಮಸ್ಥರಲ್ಲ. ರಾಜಕೀಯ ಹಿತಾಸಕ್ತಿಯಿಂದ ಕೆಲವರು ಈ ಕೃತ್ಯದಲ್ಲಿ ತೊಡಗಿದ್ದು, ಅವರಿಗೆ ಪಾಠ ಕಲಿಸುತ್ತೇವೆ~ ಎಂದು ಹೇಳಿದರು.

`ಮಂಡೂರಿನಲ್ಲಿ ನೈರ್ಮಲ್ಯ ಕಾಪಾಡಲು ರೂ 10 ಕೋಟಿ ಖರ್ಚು ಮಾಡಲಾಗುತ್ತಿದ್ದು, ಗ್ರಾಮಸ್ಥರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ರಸ್ತೆ ಸುಧಾರಣೆ, ಶುದ್ಧ ನೀರು ಪೂರೈಕೆ ಮತ್ತು ಕಸದ ರಾಶಿ ಸುತ್ತ ಕ್ರಿಮಿನಾಶಕ ಸಿಂಪಡಣೆ ಆ ಗ್ರಾಮಕ್ಕೆ ನೀಡಲಾದ ವಿಶೇಷ ಪ್ಯಾಕೇಜ್‌ನಲ್ಲಿ ಸೇರಿವೆ~ ಎಂದು ವಿವರಿಸಿದರು.

`ಪ್ರತಿಭಟನೆಯಲ್ಲಿ ತೊಡಗಿದವರು ಹಿಂದೆ ಸರಿಯದಿದ್ದರೆ ಬಲ ಪ್ರಯೋಗ ಅನಿವಾರ್ಯವಾಗುತ್ತದೆ~ ಎಂದು ಎಚ್ಚರಿಸಿದರು. `ತ್ಯಾಜ್ಯ ವಿಲೇವಾರಿಗೆ ಶಾಶ್ವತವಾದ ಪರಿಹಾರ ರೂಪಿಸುವ ಮೂಲಕ ಕಸ ಮಾಫಿಯಾದ ಸದ್ದು ಅಡಗಿಸಲಾಗುವುದು~ ಎಂದು ಹೇಳಿದರು. `ಹಿಂದಿನ ಸರ್ಕಾರಗಳು ಈ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿದ್ದರೆ ಈಗ ಇಂತಹ ತೊಂದರೆ ಉದ್ಭವವಾಗುತ್ತಿರಲಿಲ್ಲ~ ಎಂದು ದೂರಿದರು.

`ತ್ಯಾಜ್ಯ ವಿಲೇವಾರಿಯನ್ನು ಸುಗಮಗೊಳಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ನಾಲ್ಕೈದು ಕಂಪೆನಿಗಳು ಒಣ ಕಸದಿಂದ ವಿದ್ಯುತ್ ಉತ್ಪಾದನೆಗೆ ಮುಂದೆ ಬಂದಿವೆ. ಮುಂದಿನ ದಿನಗಳಲ್ಲಿ ಕಸಕ್ಕಾಗಿ ಪೈಪೋಟಿ ನಡೆಸುವ ದಿನಗಳು ಬರಲಿವೆ~ ಎಂದು ಹೇಳಿದರು.

`ಕಂಪೆನಿಗಳೇ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ಪ್ರಸ್ತಾವವೂ ಬಂದಿದೆ. ಸಮಸ್ಯೆಗೆ ಸದ್ಯ ತುರ್ತು ಪರಿಹಾರ ಕಾರ್ಯ ಕೈಗೊಂಡು, ಬಳಿಕ ಶಾಶ್ವತ ವ್ಯವಸ್ಥೆ ರೂಪಿಸಲು ಯತ್ನಿಸಲಾಗುತ್ತದೆ. ಸೋಮವಾರದಿಂದ ನಗರದಲ್ಲಿ ಕಸದ ಸಮಸ್ಯೆ ಇರುವುದಿಲ್ಲ~ ಎಂದು ಭರವಸೆಯಿಂದ ತಿಳಿಸಿದರು.

`ಕಷ್ಟದ ಈ ಸನ್ನಿವೇಶದಲ್ಲಿ ಸರ್ಕಾರ ಯಾವಾಗಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆ ಇರುತ್ತದೆ. ಸಿವಿಲ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಸರ್ಕಾರ ಶನಿವಾರ ರಾತ್ರಿಯೇ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ~ ಎಂದು ಅಶೋಕ ಹೇಳಿದರು.

ಮೇಯರ್ ಡಿ. ವೆಂಕಟೇಶಮೂರ್ತಿ ಮತ್ತು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಅವರೊಂದಿಗೆ ಸಭೆ ನಡೆಸಿದ ಅಶೋಕ, ಭಾನುವಾರ ರಾತ್ರಿಯಿಂದಲೇ ಮಂಡೂರಿಗೆ ಕಸ ಸಾಗಿಸುವಂತೆ ಸೂಚನೆ ನೀಡಿದರು.

ಸಭೆಯ ಬಳಿಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮೇಯರ್, `ತ್ಯಾಜ್ಯ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಜೊತೆ ಸರ್ಕಾರ ಕೈಜೋಡಿಸಿದ್ದು, ಇನ್ನುಮುಂದೆ ನಗರ ತ್ಯಾಜ್ಯಮುಕ್ತವಾಗಲಿದೆ~ ಎಂದು ಭರವಸೆ ವ್ಯಕ್ತಪಡಿಸಿದರು. `ಕಸದ ಸಮಸ್ಯೆಗೆ ಬೆಂಗಳೂರು ಇದುವರೆಗೆ ದೇಶದಲ್ಲಿ ಸುದ್ದಿಯಾಗಿದ್ದು ಸಾಕು, ಇನ್ನುಮುಂದೆ ಹೊಸ ಅಧ್ಯಾಯ ಶುರುವಾಗಲಿದೆ~ ಎಂದರು.

ಜಾರಿಗೆ ಬಾರದ ಪ್ರತ್ಯೇಕ ಕಸ ಸಂಗ್ರಹ ವ್ಯವಸ್ಥೆ
ಬೆಂಗಳೂರು: ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರೂ ಸೇರಿದಂತೆ ಸಾರ್ವಜನಿಕರು ಕಸವನ್ನು ಹಾಗೇ ತಂದು ಹಾಕುತ್ತಿರುವ ಕಾರಣ ಮೂಲದಲ್ಲೇ ಕಸ ಬೇರ್ಪಡಿಸಬೇಕೆಂಬ ಬಿಬಿಎಂಪಿ ಯತ್ನ ಇನ್ನೂ ಕೈಗೂಡಿಲ್ಲ.

ಹಸಿ ಕಸ, ಒಣ ಕಸ, ಪುನರ್ ಬಳಕೆ ಕಸ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಬಿಬಿಎಂಪಿ ಉದ್ದೇಶಿಸಿದೆ. ಆದರೆ, ಈ ಸಂಬಂಧ ನಗರದಲ್ಲಿ ಇದುವರೆಗೆ ಜಾಗೃತಿ ಉಂಟಾಗಿದರಿಂದ ಎಲ್ಲ ಕಸವನ್ನು ಒಟ್ಟುಗೂಡಿಸಿ ಹಾಗೇ ತಂದು ಹಾಕಲಾಗುತ್ತಿದೆ.

ಕಸ ಸಂಗ್ರಹ ಮಾಡಲು ಬರುವವರಲ್ಲೂ ಪ್ರತ್ಯೇಕವಾಗಿ ಕಸ ಸಂಗ್ರಹಿಸಲು ಯಾವುದೇ ಸಲಕರಣೆಗಳು ಇಲ್ಲ. ಭಾನುವಾರ ಮಲ್ಲೇಶ್ವರ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಬಂದವರಿಗೆ ಗೃಹಣಿಯೊಬ್ಬರು ಪ್ರತ್ಯೇಕವಾಗಿ ಕಸ ಕೊಡಲು ಮುಂದಾದಾಗ `ಡ್ರಮ್ಮುಗಳಿಲ್ಲ ಕೊಡಮ್ಮಾ~ ಎಂದು ಒಟ್ಟುಗೂಡಿಸಿ ಸಂಗ್ರಹಿಸಿದ ದೃಶ್ಯ ಕಂಡುಬಂತು.

`ಬಿಬಿಎಂಪಿ ಮೊದಲು ಪ್ರತ್ಯೇಕ ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬಳಿಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಈ ವ್ಯವಸ್ಥೆ ಸಮರ್ಪಕವಾಗಿ ಜಾರಿಗೆ ಬರಲು ಸಾಧ್ಯ~ ಎಂದು ಅಲ್ಲಿಯ ನಾಗರಿಕರು ಸಲಹೆ ನೀಡಿದರು.

ಚಿಂತಾಮಣಿಯಲ್ಲಿ ಜೈವಿಕ ಅನಿಲ ಉತ್ಪಾದನೆ
ಬೆಂಗಳೂರು: ಚಿಂತಾಮಣಿಯಲ್ಲಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಜೈವಿಕ ಅನಿಲ ಘಟಕ ಸ್ಥಾಪಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದ್ದು, 1,000 ಟನ್ ಜೈವಿಕ ಅನಿಲವನ್ನು ಇಲ್ಲಿ ಉತ್ಪಾದನೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಯ ಮಾದರಿಗಳನ್ನು ನೋಡಿಕೊಂಡು ನಗರಕ್ಕೆ ಸೂಕ್ತವಾದ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪುಣೆಯಲ್ಲಿ ಕಸ ಸಂಸ್ಕರಣೆ ಮತ್ತು ವಿದ್ಯುತ್ ಉತ್ಪಾದನೆ ಘಟಕ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಂತಹ ವ್ಯವಸ್ಥೆಗಳ ಕಡೆಗೆ ಗಮನಹರಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಸಮಸ್ಯೆಗೆ ಶಾಶ್ವತ ಪರಿಹಾರ: ಶೆಟ್ಟರ್
ಬೆಂಗಳೂರು: `ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಸೂತ್ರ ಕಂಡುಕೊಳ್ಳಲು ಸರಣಿ ಸಭೆ ನಡೆಸಲಾಗುತ್ತಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಭಾನುವಾರ ವರದಿಗಾರರ ಜೊತೆ ಮಾತನಾಡಿದ ಅವರು, `ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ರೂಪಿಸಲಾಗುವುದು~ ಎಂದರು. `ಮಂಡೂರಿನ ಗ್ರಾಮಸ್ಥರ ಆರೋಗ್ಯ ರಕ್ಷಣೆಗೆ ಆಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ~ ಎಂದ ಅವರು, `ಮಂಡೂರಿನ ಕಸದ ಹೊರೆಯನ್ನು ಆದಷ್ಟು ಶೀಘ್ರದಲ್ಲಿ ಕಡಿಮೆ ಮಾಡಲಾಗುವುದು~ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT