ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಕಾಂಗ್ರೆಸ್ಸೇತರರಿಗೆ ಸಮಪಾಲು

ರಾಣಿಬೆನ್ನೂರು ಕ್ಷೇತ್ರ ಪರಿಚಯ
Last Updated 5 ಏಪ್ರಿಲ್ 2013, 5:48 IST
ಅಕ್ಷರ ಗಾತ್ರ

ಹಾವೇರಿ: ವಾಣಿಜ್ಯ ಕೇಂದ್ರವಾಗಿರುವ ಹಾಗೂ ಬಿತ್ತನೆ ಬೀಜೋತ್ಪಾದನೆಗೆ ರಾಷ್ಟ್ರದಲ್ಲಿ ಹೆಸರುವಾಸಿಯಾದ ರಾಣೆಬೆನ್ನೂರ ತಾಲ್ಲೂಕು ರಾಜ್ಯ ರಾಜಕಾರಣದಲ್ಲಿ ಅಷ್ಟೊಂದು ದೊಡ್ಡ ಹೆಸರು ಮಾಡದಿದ್ದರೂ, ಜಿಲ್ಲೆಯ ರಾಜಕಾರಣದಲ್ಲೂ ತನ್ನದೇ ಆದ ಚಾಪು ಮೂಡಿಸಿದೆ.

ಕೆ.ಎಫ್. ಪಾಟೀಲರಂತಹ ಸಹಕಾರಿ ಧುರೀಣರನ್ನು ರಾಜಕೀಯಕ್ಕೆ ಪರಿಚಯ ಮಾಡಿರುವ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರವು, ಹೆಚ್ಚಾಗಿ ಪಕ್ಷ, ಸಮುದಾಯಕ್ಕೆ ಮಾನ್ಯತೆ ನೀಡದೇ ಬಹುತೇಕ ಸಂದರ್ಭದಲ್ಲಿ ವ್ಯಕ್ತಿಗೆ ಮಾನ್ಯತೆ ನೀಡಿದೆ. ಸ್ವಾತಂತ್ರ್ಯ ನಂತರ 12 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸುವ ರಾಣೆಬೆನ್ನೂರ ಕ್ಷೇತ್ರದಲ್ಲಿ ಆರು ಬಾರಿ ಕಾಂಗ್ರೆಸ್ ವಿಜಯಿಶಾಲಿಯಾಗಿದ್ದರೆ, ಇನ್ನಾರು ಬಾರಿ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಜಯದ ನಗೆ ಬೀರಿವೆ. ಇಲ್ಲಿವರೆಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದವರು ಯಾರೂ ಇಲ್ಲ.

ಮಾಜಿ ಸಚಿವ ಕೆ.ಬಿ. ಕೋಳಿವಾಡ ಅವರು 1972, 1985, 1994, 1999ರಲ್ಲಿ ನಾಲ್ಕು ಬಾರಿ  ಆಯ್ಕೆಯಾಗಿ ದಾಖಲೆ ನಿರ್ಮಿಸ್ದ್ದಿದ್ದಾರೆ. ಅಲ್ಲದೇ, ಕಾಂಗ್ರೆಸ್‌ನ ಯಲ್ಲವ್ವ ಸಾಂಬ್ರಾಣಿ, ಬಿಜೆಪಿಯ ಜಿ.ಶಿವಣ್ಣ ಸತತ ಎರಡು ಬಾರಿ ಆಯ್ಕೆಯಾಗಿದ್ದಾರೆ. 1957, 1962 ರಲ್ಲಿ ಮಹಿಳೆ ಆಯ್ಕೆಯಾಗಿದ್ದು ಬಿಟ್ಟರೆ, ನಂತರದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮಹಿಳೆ ಸ್ಪರ್ಧೆಗೂ ಇಳಿದಿಲ್ಲ. 

ಸಮುದಾಯ ನಗಣ್ಯ: ಲಿಂಗಾಯತ ಪಂಚಮಸಾಲಿ ಸಮುದಾಯದ ಜನರೇ ಹೆಚ್ಚಿದ್ದರೂ 12 ಚುನಾವಣೆಗಳಲ್ಲಿ ಸಮುದಾಯದ ಕೆ.ಎಫ್. ಪಾಟೀಲ (1957), ಎನ್.ಎಲ್. ಬೆಲ್ಲದ (1967), ಬಿ.ಜಿ. ಪಾಟೀಲ (1983), ವಿ.ಎಸ್. ಕರ್ಜಗಿ (1994) ಹಾಗೂ ಜಿ. ಶಿವಣ್ಣ (2004, 2008) ಶಾಸಕರು ಆಯ್ಕೆಯಾಗ್ದ್ದಿದಾರೆ. ನಂತರದ ದೊಡ್ಡ ಸಮುದಾಯಗಳಾದ ಕುರಬ, ಮುಸ್ಲಿಮ್ ಸಮಾಜಕ್ಕೆ ಈವರೆಗೆ ಚುನಾವಣೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವ ಭಾಗ್ಯ ದೊರೆತಿಲ್ಲ. ಎರಡು ಬಾರಿ ಎಸ್‌ಸಿ, ಒಂದು ಬಾರಿ ಎಸ್‌ಟಿ, ನಾಲ್ಕು ಬಾರಿ ರೆಡ್ಡಿ ಸಮುದಾಯದ ವ್ಯಕ್ತಿಗಳು ಆಯ್ಕೆಯಾಗಿರುವುದು ಕ್ಷೇತ್ರದ ವಿಶೇಷ.

8 ಬಾರಿ ಸ್ಪರ್ಧೆ: 1972 ರಲ್ಲಿ ಪ್ರಥಮ ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಕೆ.ಬಿ.ಕೋಳಿವಾಡರಿಗೆ ಆಗ ಕೇವಲ 21 ವರ್ಷ. ಅಲ್ಲಿಂದ 2008 ವರೆಗೆ ನಡೆದ 9 ಸಾರ್ವತ್ರಿಕ ಚುನಾವಣೆಗಳಲ್ಲಿ 1983 ಚುನಾವಣೆ ಹೊರತುಪಡಿಸಿ ಉಳಿದ 8 ಚುನಾವಣೆಗೆ ಸ್ಪರ್ಧಿಸಿ ದಾಖಲೆ ಮಾಡಿದ್ದಾರೆ. ಇದರಲ್ಲಿ ಕೇವಲ ನಾಲ್ಕು ಬಾರಿ ಗೆಲವು ಸಾಧಿಸ್ದ್ದಿದರೆ, ಒಮ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 2013ರ ಚುನಾವಣೆಯಲ್ಲಿ ಅವರು 9ನೇ ಬಾರಿಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಅದೇ ರೀತಿ 1983ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಬಿ.ಜಿ.ಪಾಟೀಲರು ತಮ್ಮ ಅವಧಿ ಮುಗಿದ ನಂತರ ಹಲಗೇರಿ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರಲ್ಲದೇ, ಅಖಂಡ ಧಾರವಾಡ ಜಿಲ್ಲೆ ಜಿ.ಪಂ.ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1994 ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದ ವಿ.ಎಸ್.ಕರ್ಜಗಿ ಅವರು ಜವಳಿ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ನೂಲಿನ ಗಿರಣಿ ರಾಜಕಾರಣ: ಕೆ.ಬಿ. ಕೋಳಿವಾಡ ಅವರು ಶಾಸಕರಾದ ನಂತರ ಹನುಮನಮಟ್ಟಿನಲ್ಲಿ ರೈತರ ಸಹಕಾರಿ ನೂಲಿನ ಗಿರಣಿ ಸ್ಥಾಪಿಸಿ ರಾಜಕಾರಣದಲ್ಲಿ ಗಟ್ಟಿಯಾಗಿ ಉಳಿಯಲು ಪ್ರಯತ್ನಿಸಿದರೆ, 1994 ರಲ್ಲಿ ಶಾಸಕರಾದ ವಿ.ಎಸ್.ಕರ್ಜಗಿ ಅವರು ಕಮದೋಡದಲ್ಲಿ ತುಂಗಭದ್ರಾ ರೈತರ ಸಹಕಾರಿ ನೂಲಿನ ಗಿರಣಿ ಸ್ಥಾಪಿಸಿ ಕೋಳಿವಾಡರ ನೂಲಿನ ಗಿರಣಿ ರಾಜಕಾರಣಕ್ಕೆ ಸೆಡ್ಡು ಹೊಡೆದರು.

ಚುನಾವಣಾ ಇತಿಹಾಸ: 1957ರಿಂದ  2008ರವರೆಗೆ ನಡೆದ 12ವಿಧಾನಸಭೆ ಚುನಾವಣೆಗಳ ಫಲಿತಾಂಶದ ಸಂಕ್ಷಿಪ್ತ ವಿವರ ಇಲ್ಲಿದೆ.
1957 ರಲ್ಲಿ ದ್ವಿಕ್ಷೇತ್ರವಾದ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಎಫ್. ಪಾಟೀಲ 33,937 ಮತಗಳನ್ನು ಪಡೆದು ಆಯ್ಕೆಯಾದರೆ, ಇನ್ನೊಬ್ಬ ಸದಸ್ಯೆಯಾಗಿ ಕಾಂಗ್ರೆಸ್‌ನ ಯಲ್ಲವ್ವ ಸಾಂಬ್ರಾಣಿ 28,988 ಮತಗಳಿಸಿ ಆಯ್ಕೆಯಾದರು.

1962ರಲ್ಲಿ ಏಕ ಸದಸ್ಯ ಹಾಗೂ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾದ ಕ್ಷೇತ್ರವಾಗಿದ್ದರಿಂದ ಮತ್ತೆ ಕಾಂಗ್ರೆಸ್‌ನಿಂದ ಯಲ್ಲವ್ವ ಸಾಂಬ್ರಾಣಿ 18,715 ಮತಪಡೆದು ಪುನರಾಯ್ಕೆಯಾದರು.

1967ರ ಚುನಾವಣೆಯಲ್ಲಿ ಪಿಎಸ್‌ಪಿ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ) ಅಭ್ಯರ್ಥಿ ಎನ್.ಎಲ್. ಬೆಲ್ಲದ 25,550 ಮತಗಳಿಸಿ ಗೆಲುವು ಸಾಧಿಸಿದರು. 1972 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ 28,540 ಮತಗಳಿಸಿ ಚುನಾಯಿತರಾದರು. 1978 ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಎಸ್.  ಎಚ್. ನಲವಾಗಲ 25,675 ಮತ ಪಡೆದು ಆಯ್ಕೆಯಾದರು.

1983ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ ಬಿ.ಜಿ. ಪಾಟೀಲ 36,395 ಮತಗಳಿಸಿ ಆಯ್ಕೆಯಾದರೆ, 1985ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ ಅವರು 33,296 ಮತ ಪಡೆದು ಎರಡನೇ ಬಾರಿ ಜಯ ಸಾಧಿಸಿದರು. 

1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ 43,228 ಮತಗಳಿಸಿ ಮೂರನೇ ಬಾರಿಗೆ ಆಯ್ಕೆಯಾದರು. 1994 ಜನತಾದಳದಿಂದ ಸ್ಪರ್ಧಿಸಿದ್ದ ವಿ.ಎಸ್. ಕರ್ಜಗಿ 53,080 ಮತಗಳಿಸಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ನಿರೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡರಿಗೆ ಬ್ರೇಕ್ ಹಾಕಿದರು.

1999ರಲ್ಲಿ ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ 50,958 ಮತಗಳಿಸಿ ನಾಲ್ಕನೇ ಬಾರಿಗೆ ಆಯ್ಕೆಯಾದರು. ಜೆಡಿಯುನಿಂದ ಸ್ಪರ್ಧಿಸಿದ್ದ ಜಿ. ಶಿವಣ್ಣ 45,460 ಮತ ಪಡೆದು ಸೋಲು ಅನುಭವಿಸಿದರು. 2004 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಶಿವಣ್ಣ 57,123 ಮತಗಳಿಸಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ 41,037 ಮತ ಪಡೆದು ಸೋಲು ಕಂಡರು.  2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಜಿ. ಶಿವಣ್ಣ 59,399 ಮತ ಪಡೆದು ಪುನರಾಯ್ಕೆಯಾಗಿದ್ದಾರೆ.

2013ರ ಚುನಾವಣೆಯಲ್ಲಿ ಜಿ.ಶಿವಣ್ಣ ಕೆಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ, ಜೆಡಿಎಸ್ ತೊಳಲಾಟದಲ್ಲಿವೆ. ಚುನಾವಣೆಗೆ ಒಂದು ತಿಂಗಳು ಇರುವಾಗಲೇ ಪ್ರಮುಖ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT