ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಂಗ್ರೆಸ್-ಬಿಎಸ್‌ವೈ ಒಳ ಒಪ್ಪಂದ'

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಮುಳಬಾಗಲು: ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಹಿಮ್ಮೆಟ್ಟಿಸಬೇಕೆಂಬ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಮತ್ತು ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಕುರುಡುಮಲೆ ಗ್ರಾಮದ ವಿನಾಯಕ ದೇಗುಲಕ್ಕೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಲ್ಲಿ ವಿಧಾನಸಭೆ ವಿಸರ್ಜನೆಯಾಗಲಿದೆ ಎಂದು ಭವಿಷ್ಯ ನುಡಿದರು.

ಹಾಸನದ ಜೆಡಿಎಸ್ ಶಾಸಕರು ಬೇರೆ ಪಕ್ಷಕ್ಕೆ ಹೋದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಹೋಗುವವರು ಹೋಗಬಹುದು, ಅದರಿಂದ ಪಕ್ಷಕ್ಕೆ ಹೆಚ್ಚಿನ ಹಾನಿ ಆಗದು' ಎಂದರು. ಯಡಿಯೂರಪ್ಪ ಪ್ರಾರಂಭಿಸಿರುವ ಹೊಸ ಪಕ್ಷದ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ವಿಧಾನಸಭೆ ಚುನಾವಣೆ ನಂತರ ಕೆಜೆಪಿ ಹೇಳಹೆಸರಿಲ್ಲದಂತಾಗುತ್ತದೆ ಎಂದರು.

ರಾಷ್ಟ್ರೀಯ ಪಕ್ಷ ಸುಪಾರಿ:
ಬೆಳಗಾವಿ: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೂತನ ಪ್ರಾದೇಶಿಕ ಪಕ್ಷ ಕಟ್ಟಲು ರಾಷ್ಟ್ರೀಯ ಪಕ್ಷವೊಂದು ಸುಪಾರಿ ನೀಡಿದೆ'  ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ಆರೋಪಿಸಿದರು.

`ರಾಷ್ಟ್ರೀಯ ಪಕ್ಷದ ಪ್ರಚೋದನೆಯಿಂದಲೇ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪನೆಗೊಂಡಿದೆ. ಕೆಜೆಪಿಯಿಂದ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಕೂಡ ಆಗುವುದಿಲ್ಲ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

`ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ಗೆ ಯಾವುದೇ ಗುರಿ ಇಲ್ಲ.  ಹಿಂದಿನ ಅನುಭವಗಳ ಆಧಾರದಿಂದ ಈ ಬಾರಿ ಯಾವುದೇ ಪಕ್ಷದ ಜೊತೆಗೂ ನಾವು ಕೈಜೋಡಿಸುವುದಿಲ್ಲ. ಈ ಬಾರಿ ಮತದಾರರು ಒಂದೇ ಪಕ್ಷಕ್ಕೆ ಅಧಿಕಾರ ನೀಡಲಿದ್ದು, ಜೆಡಿಎಸ್‌ಗೆ ಅವಕಾಶ ಸಿಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಕಾಂಗ್ರೆಸ್, ಬಿಜೆಪಿಯ ಹಗರಣಗಳನ್ನಿಟ್ಟುಕೊಂಡು ಮುಂದಿನ ನಾವು ಚುನಾವಣೆಗೆ ಹೋಗುವುದಿಲ್ಲ. ವಿಷಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಜನರ ಬಳಿಗೆ ಹೋಗುತ್ತೇವೆ. ಡಿಸೆಂಬರ್ 10 ರಂದು ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಂದು 120 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT