ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಏರಿದ ಬಂಡಾಯದ ಬಿಸಿ!

ಬೆಳಗಾವಿ: ವಿಧಾನಸಭೆ ಚುನಾವಣೆ
Last Updated 10 ಏಪ್ರಿಲ್ 2013, 8:35 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಭಿನ್ನಮತದ ಬಿಸಿ ಮುಗಿಲು ಮುಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತದ ಕಾವು ಹೆಚ್ಚುತ್ತಿದೆ.

ಬಿಜೆಪಿಗಿಂತ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಚುನಾವಣಾ ಕಣದಲ್ಲಿ ಬಂಡಾಯದ ಬಿಸಿ ಮುಟ್ಟಿಸಲು ಕೆಲವರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತರು ತಮ್ಮ ಅಸಮಾಧಾನ ಹೊರಗೆಡವಿದ್ದು, ಅಧಿಕೃತ ಅಭ್ಯರ್ಥಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಟಿಕೆಟ್ ವಂಚಿತರನ್ನು ಸಮಾಧಾನ ಪಡಿಸಲು ಪಕ್ಷದ ನಾಯಕರಿಗೆ ಆಗುತ್ತಿಲ್ಲ.

ಕಾಂಗ್ರೆಸ್ ಪಕ್ಷದ ಬೆಳಗಾವಿ ಜಿಲ್ಲಾ ಘಟಕದಲ್ಲಿ ಭಿನ್ನಮತ ಉಲ್ಬಣಗೊಂಡಿದ್ದು, ಖಾನಾಪುರ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇದು ತಾರಕಕ್ಕೇರಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ನಾಯಕರ ವಿರುದ್ಧ ಅಸಮಾಧಾನ ಹೊರಗೆ ಹಾಕಿದ್ದಾರೆ.

ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅವರ ಪುತ್ರ  ಆನಂದಸ್ವಾಮಿ ಗಡ್ಡದೇವರಮಠ ಅವರ ಬದಲಾಗಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಹೆಬ್ಬಾಳಕರ ಅವರು ಮೊದಲಿನಿಂದಲೂ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದರು. ಮಾಧ್ಯಮದವರ ಎದುರು ಸಹ ಈ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆಯುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಉಂಟಾಗಲು ಕಾರಣರಾದರು.

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದ ಆನಂದಸ್ವಾಮಿ ಗಡ್ಡದೇವರಮಠ ಅವರ ಬೆಂಬಲಿಗರು ಹೆಬ್ಬಾಳಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವತಂತ್ರವಾಗಿ ಕಣಕ್ಕಿಳಿಯುವಂತೆ ಗಡ್ಡದೇವರಮಠ ಮೇಲೆ ಒತ್ತಡ ಹೇರಿದ್ದಾರೆ. ಬೆಂಬಲಿಗರು ಹಾಗೂ ಅಭಿಮಾನಿಗಳ ಒತ್ತಡಕ್ಕೆ ಮಣಿದಿರುವ ಗಡ್ಡದೇವರಮಠ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ.

`ಕಳೆದ ಮೂರು ತಿಂಗಳಿನಿಂದ ಗಡ್ಡದೇವರಮಠ ಕ್ಷೇತ್ರದಲ್ಲಿ ಚುನಾವಣಾ ಪೂರ್ವ ತಯಾರಿ ನಡೆಸಿದ್ದರು. ಕ್ಷೇತ್ರದಲ್ಲಿ ರೈತರ ಹೊಲಗಳಲ್ಲಿ ಸುಮಾರು 36 ಕೊಳವೆ ಬಾವಿಗಳನ್ನು ಕೊರೆಯಿಸಿದ್ದಾರೆ. ಚುನಾವಣೆಗಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದ ಅವರಿಗೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಸಹ ಇತ್ತು. ಆದರೆ, ಕೊನೆ ಗಳಿಗೆಯ ಬೆಳವಣಿಗೆ ತೀವ್ರ ಬೇಸರವುಂಟು ಮಾಡಿದೆ' ಎಂದು ಗಡ್ಡದೇವರಮಠ ಅವರ ಬೆಂಬಲಿಗ ಉಮೇಶ ಹೇಳುತ್ತಾರೆ.

ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಗಡ್ಡದೇವರಮಠ ಅವರ ಕಚೇರಿಗೆ ನೂರಾರು ಮಂದಿ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಆಗಮಿಸಿ ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ಚುನಾವಣೆಗೆ ಸ್ವಯಂ ಪ್ರೇರಣೆಯಿಂದ ದುಡಿಯುವುದಾಗಿ ಭರವಸೆ ನೀಡಿದ ಬೆಂಬಲಿಗರು, ತಾವೇ ಹಣ ಸಹ ಸಂಗ್ರಹಿಸಿ ನೀಡುವುದಾಗಿ ವಾಗ್ದಾನ ಮಾಡಿದರು.

`ಅಭಿಮಾನಿಗಳು ಹಾಗೂ ಕ್ಷೇತ್ರದ ಹಿರಿಯರೊಂದಿಗೆ ಮಾತುಕತೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಈ ಮಟ್ಟಕ್ಕೆ ಏರಲು ಸ್ನೇಹಿತರ ಸಹಕಾರವೇ ಕಾರಣ. ಆದ್ದರಿಂದ ಸ್ನೇಹಿತರ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಪಕ್ಷದ ನಿರ್ಧಾರ ಒಂದೆಡೆಯಾದರೆ, ಮತದಾರರು, ಅಭಿಮಾನಿಗಳ ನಿರ್ಧಾರ ಮತ್ತೊಂದಿದೆ. ನಾನು ಯಾವಾಗಲೂ ಮತದಾರರು, ಅಭಿಮಾನಿಗಳ ಜೊತೆಗೆ ಗುರುತಿಸಿಕೊಂಡು ಬಂದಿದ್ದೇನೆ. ಇವರೆಲ್ಲರ ನಿರ್ಧಾರಕ್ಕೆ ಬದ್ಧನಾಗಿರುವೆ' ಎಂದು ಆನಂದಸ್ವಾಮಿ ಗಡ್ಡದೇವರಮಠ `ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮೀಣ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಮುಟ್ಟಿದ್ದರೆ, ಖಾನಾಪುರ ಕ್ಷೇತ್ರದಲ್ಲಿ ಹೊರಗಿನವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುವುದಾಗಿ ಕಾರ್ಯಕರ್ತರು ಹೇಳಿದ್ದಾರೆ.

ಉತ್ಸಾಹದ ಅಲೆಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಭಿನ್ನಮತ ತಲೆನೋವಾಗಿದೆ. ಬೇರೆ ಪಕ್ಷದವರಿಗಿಂತ ಸ್ವಪಕ್ಷೀಯರಿಂದಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ತೊಂದರೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT