ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕಾನಿಗೆ ಕಂಬನಿಯ ವಿದಾಯ...

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರಾಜೇಶ್ ಖನ್ನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಅವರ ಕುಟುಂಬದವರ ಮತ್ತು ಅಪಾರ ಅಭಿಮಾನಿಗಳ ಅಶ್ರುಧಾರೆ ನಡುವೆ ಗುರುವಾರ ಇಲ್ಲಿ ನೆರವೇರಿತು.  ಅಗಲಿದ ಮೇರು ನಟನಿಗೆ ಪ್ರಕೃತಿಯೂ ಕಣ್ಣೀರಿಟ್ಟಂತೆ ಮಳೆ ಸುರಿಯುತ್ತಿತ್ತು.

ಜುಹೂ ಪ್ರದೇಶದಲ್ಲಿರುವ `ಪವನ್ ಹನ್ಸ್~ ಚಿತಾಗಾರದಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಖನ್ನಾ ಅವರ ಮೊಮ್ಮಗ ಆರವ್, ತಮ್ಮ ತಂದೆ ಅಕ್ಷಯ್ ಕುಮಾರ್ ಅವರ ನೆರವಿನೊಂದಿಗೆ ನೆರವೇರಿಸಿದರು.
ಚಿತಾಗಾರದ ಸುತ್ತಲೂ ಅಭಿಮಾನಿಗಳು ಕಿಕ್ಕಿರಿದಿದ್ದರು. `ರಾಜೇಶ್ ಖನ್ನಾ ಅಮರ್ ರಹೇ~ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಜನರನ್ನು ನಿಯಂತ್ರಿಸುವಷ್ಟರಲ್ಲಿ ಪೊಲೀಸರಿಗೆ ಸಾಕು ಸಾಕಾಯಿತು.

ಅಂತಿಮ ಯಾತ್ರೆ: ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿರುವ ಖನ್ನಾ ಅವರ ಮನೆ `ಆಶೀರ್ವಾದ್~ನಿಂದ ಪಾರ್ಥಿವ ಶರೀರದ ಮೆರವಣಿಗೆಯು ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಹೊರಟಿತು. ಕಾರ್ಟ್‌ರ್ ರಸ್ತೆಯಿಂದ ಜುಹೂ ಚಿತಾಗಾರದವರೆಗಿನ 10 ಕಿ.ಮೀ. ಮಾರ್ಗವನ್ನು ಕ್ರಮಿಸಲು ಸುಮಾರು ಒಂದು ತಾಸು ಹಿಡಿಯಿತು.
ತೆರೆದ ವಾಹನದಲ್ಲಿ ಗಾಜಿನ ಶವಪೆಟ್ಟಿಗೆಯೊಳಗೆ ಇರಿಸಲಾಗಿದ್ದ ಖನ್ನಾ ಅವರ ಪಾರ್ಥಿವ ಶರೀರವನ್ನು ನೋಡಲು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ರಸ್ತೆಯ ಇಕ್ಕೆಲಗಳಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಪಾದಚಾರಿ ಮೇಲ್ಸೇತುವೆಗಳಲ್ಲೂ ಜನರು ತುಂಬಿದ್ದರು.
 
ಅನೇಕರು `ಪ್ರಣಯ ರಾಜ~ ಎಂಬ ಫಲಕಗಳನ್ನೂ ಹಿಡಿದಿದ್ದರು. ಶವಪೆಟ್ಟಿಗೆಯ ಬಳಿಯಲ್ಲೇ ಪತ್ನಿ ಡಿಂಪಲ್ ಕಪಾಡಿಯಾ, ಅಳಿಯ ಅಕ್ಷಯ್ ಕುಮಾರ್, ಕಿರಿಯ ಮಗಳು ರಿಂಕಿ ಇದ್ದರು. ಹೂಗಳಿಂದ ತುಂಬಿದ್ದ ವಾಹನದ ಸುತ್ತಲು  ಖನ್ನಾ ಅವರ ಕಪ್ಪು ಬಿಳುಪಿನ ದೊಡ್ಡ ಗಾತ್ರದ ಛಾಯಾಚಿತ್ರಗಳು ರಾರಾಜಿಸುತ್ತಿದ್ದವು.
ಮೇರು ನಟ ಅಮಿತಾಭ್ ಬಚ್ಚನ್, ಅವರ ಪುತ್ರ ಅಭಿಷೇಕ್ ಬಚ್ಚನ್, ಖನ್ನಾ ಅವರ ಸಮಕಾಲೀನ ನಟ ಮನೋಜ್ ಕುಮಾರ್, ನಟಿ ರಾಣಿ ಮುಖರ್ಜಿ, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಬಾಲಿವುಡ್‌ನ ಅನೇಕರು ಅಂತಿಮ ನಮನ ಸಲ್ಲಿಸಲು ಚಿತಾಗಾರಕ್ಕೆ ಬಂದಿದ್ದರು.

ಖನ್ನಾ ಅವರ ಸಾವಿಗೆ ಏನು ಕಾರಣ ಎಂಬುದನ್ನು ಲೀಲಾವತಿ ಆಸ್ಪತ್ರೆಯ ವೈದ್ಯರು ಅಥವಾ ಕುಟುಂಬದ ಮೂಲಗಳು ಅಧಿಕೃತವಾಗಿ ಘೋಷಿಸದಿದ್ದರೂ,  ಯಕೃತ್ತಿನ ಸಮಸ್ಯೆಯೇ ಸಾವಿಗೆ ಕಾರಣ ಎಂದು ಖನ್ನಾ ಅವರ ಆಪ್ತರು ತಿಳಿಸಿದ್ದಾರೆ.

`ಸಮಯ ಮುಗಿಯಿತು...ಇದೋ.. ಹೊರಟೆ...~
`ನನ್ನ ಸಮಯ ಮುಗಿಯಿತು. ಇದೋ ಹೊರಟೆ~ - ಇದು ರಾಜೇಶ್ ಖನ್ನಾ ಅವರ ಕಡೆ ಗಳಿಗೆಯ ನುಡಿಗಳು ಎಂದು ಖನ್ನಾ ಅವರ ಮನೆಗೆ ಬುಧವಾರ ಭೇಟಿ ನೀಡಿದ್ದ ಅಮಿತಾಭ್ ಬಚ್ಚನ್ ಹೇಳಿದ್ದಾರೆ.

`ಖನ್ನಾ ಮನೆಗೆ ಹೋದಾಗ ಅವರ ಆಪ್ತರೊಬ್ಬರು ನನ್ನ ಬಳಿ ಬಂದು “ಟೈಂ ಹೋ ಗಯಾ ಹೈ! ಪ್ಯಾಕ್ ಅಪ್‌” ಎಂಬುದು ಖನ್ನಾ ಅವರ ಕೊನೆಯ ಮಾತಾಗಿತ್ತೆಂದು ಗದ್ಗದಿತರಾದರು~ ಎಂಬುದಾಗಿ ಬಚ್ಚನ್ ಬ್ಲಾಗ್‌ನಲ್ಲಿ ಬರೆದಿದ್ದಾರೆ. `ಖನ್ನಾ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ದೇವರು ಒದಗಿಸಿದ ಸುಯೋಗವೇ ಸರಿ~ ಎಂದೂ ಬಚ್ಚನ್ ಹೇಳಿಕೊಂಡಿದ್ದಾರೆ.

ಹಾಡಿನೊಂದಿಗೆ ಸಂತಾಪ
ಪಣಜಿ ವರದಿ: ಗೋವಾ ವಿಧಾನಸಭೆ ರಾಜೇಶ್ ಖನ್ನಾ ಅವರ ನಿಧನಕ್ಕೆ ಗುರುವಾರ ಶೋಕ ವ್ಯಕ್ತಪಡಿಸಿದೆ. ಸಂತಾಪ ಸೂಚಕ ನಿಲುವಳಿ ಮೇಲೆ ಮಾತನಾಡಿದ ಅನೇಕ ಸದಸ್ಯರು, ಖನ್ನಾ ಅವರ ಸಿನಿಮಾಗಳ ಹಲವು ಜನಪ್ರಿಯ ಹಾಡುಗಳನ್ನೂ ಹಾಡಿದ್ದಾರೆ.

ಖನ್ನಾ ಬಂಗ್ಲೆ ವಸ್ತು ಸಂಗ್ರಹಾಲಯ ?
ಮುಂಬೈ (ಪಿಟಿಐ): ರಾಜೇಶ್ ಖನ್ನಾ ಅವರ ಆಸೆಯಂತೆ ಅವರ ಬಂಗ್ಲೆ `ಆಶೀರ್ವಾದ~ವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುತ್ತದೆ.ಪಶ್ಚಿಮ ಬಾಂದ್ರಾದಲ್ಲಿ ಕಾರ್ಟರ್ ರಸ್ತೆಯಲ್ಲಿ ಸಮುದ್ರಾಭಿಮುಖವಾಗಿ ಇರುವ  ಬಂಗ್ಲೆಯು ತನ್ನ ನಿಧನದ ನಂತರ ವಸ್ತು ಸಂಗ್ರಹಾಲಯವಾಗಬೇಕು ಎಂದು ಖನ್ನಾ ಬಯಸಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ಖನ್ನಾ ಅವರ ಆಸೆ ಈಡೇರಿದರೆ ಸಿನಿಮಾ ನಟನ ಬಂಗ್ಲೆಯೊಂದು ವಸ್ತು ಸಂಗ್ರಹಾಲಯವಾಗುವುದು ಪ್ರಥಮ ಎನಿಸಲಿದೆ. ಆದರೆ ಖನ್ನಾ ಅವರ ಇಬ್ಬರು ಪುತ್ರಿಯರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಬಂಗ್ಲೆಯಲ್ಲಿ ಖನ್ನಾ ಅವರು ಆರಂಭದಿಂದಲೂ ಪಡೆದಿರುವ ಪ್ರಶಸ್ತಿಗಳು, ಉಡುಪುಗಳು, ಕಾರುಗಳು ಇವೆ. ಇವೆಲ್ಲವನ್ನೂ ವಸ್ತು ಸಂಗ್ರಹಾಲಯದಲ್ಲಿ ಇಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT