ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಸಮಸ್ಯೆ ಪರಿಹರಿಸಲು ಆಗ್ರಹ

Last Updated 21 ಡಿಸೆಂಬರ್ 2013, 8:52 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಆಲೂರು: ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿ ಕಲ್ಲಾರೆ, ಕೊಡಗತ್ತವಳ್ಳಿ ಮತ್ತು ಹಂಜಳಿಗೆ ಗ್ರಾಮಗಳಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಭತ್ತದ ಬೆಳೆ ನಾಶಪಡಿಸಿವೆ.

ಬೆಳೆ ಹಾನಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿಗಳ ಜೀಪನ್ನು ತಡೆದು ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಮಂಗಳವಾರ, ಬುಧವಾರ ಮತ್ತು ಗುರುವಾರ ರಾತ್ರಿ ದೊಡ್ಡಬೆಟ್ಟ, ರಂಗನಬೆಟ್ಟ, ಉಂಬಳಿಬೆಟ್ಟ ಪ್ರದೇಶಗಳಲ್ಲಿ ಮೂರು ಗುಂಪುಗಳಾಗಿ ಬೀಡುಬಿಟ್ಟರುವ 25ಕ್ಕೂ ಹೆಚ್ಚು ಕಾಡಾನೆಗಳು ಬೆಳೆಹಾನಿ ಮಾಡಿವೆ. ಕಲ್ಲಾರೆ ಗ್ರಾಮದ ಜವರೇಗೌಡ, ಕೆ. ಮಂಜುನಾಥ್, ಕೆ.ಟಿ. ಸುರೇಶ್, ಮಂಜಯ್ಯ, ಕೆ.ಆರ್. ಚಂದ್ರಶೇಖರ್, ಲಕ್ಷ್ಮೇಗೌಡ, ಕೆ. ವಿರೂಪಾಕ್ಷ, ಕೃಷ್ಣೇಗೌಡ, ಸಂಜೀವ್ ಕುಮಾರ್, ಕೆ.ಎಚ್. ಮಂಜು ನಾಥ್, ಕೆ. ಅಶ್ವಥ್, ಕೆ. ರಾಜಸುಗುಣ, ಕೊಡಗತ್ತವಳ್ಳಿ ಗ್ರಾಮದ ಕೆ.ಟಿ. ನಾಗರಾಜ್, ಕೆ.ಟಿ. ಸುರೇಶ್, ಬಾಲಕೃಷ್ಣ, ಹಂಜಳಿಗೆ ಗ್ರಾಮದ ಮಂಜಯ್ಯ ಎಂಬುವವರಿಗೆ ಸೇರಿದ 35 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ನಾಶ ಮಾಡಿವೆ.

ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ವಲಯ ಅರಣ್ಯಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿಗಳಿದ್ದ ಜೀಪ್ ಅನ್ನು ಕಲ್ಲಾರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ತಡೆದು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿ ರುವ ಕಾಡಾನೆಗಳು ಕಳೆದ ಒಂದು ವಾರದಿಂದ ದೊಡ್ಡಬೆಟ್ಟ, ರಂಗನಬೆಟ್ಟ, ಉಂಬಳಿಬೆಟ್ಟದ ಅರಣ್ಯ ಪ್ರದೇಶದ ತಪ್ಪಲಿನ ಗ್ರಾಮಗಳಲ್ಲಿ ದಾಳಿ ನಡೆಸಿ ಬೆಳೆ ಹಾನಿಗೊಳಿಸಿವೆ. ಅರಣ್ಯ ಇಲಾಖೆಯವರು ಕಾಡಾನೆ ಗಳನ್ನು ಓಡಿಸುವುದನ್ನು ಬಿಟ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಆನೆಗಳನ್ನು ಓಡಿಸಲು ಕನಿಷ್ಠ ಪಟಾಕಿಗಳನ್ನೂ ನೀಡಿಲ್ಲ.

ಅಲ್ಲದೆ, ಕಳೆದ ವರ್ಷ ಇದ್ದ ವಲಯ ಅರಣ್ಯಾಧಿಕಾರಿಗಳು ಹೆಚ್ಚು ಹಾನಿಗೊಳಗಾದ ರೈತರಿಗೆ ಕಡಿಮೆ ಹಾಗೂ ಕಡಿಮೆ ಬೆಳೆ ಹಾನಿಯಾದ ವರಿಗೆ ಹೆಚ್ಚು ಪರಿಹಾರಕ್ಕೆ ಶಿಫರಾಸು ಮಾಡಿದ್ದು, ಇದುವರೆಗೂ ನಿಜವಾಗಿ ಬೆಳೆ ಕಳೆದುಕೊಂಡವರಿಗೆ ನೈಜ ಪರಿಹಾರ ದೊರೆಯದೆ ಅನ್ಯಾಯವಾಗಿದೆ. ಸರ್ಕಾರ ನೀಡುತ್ತಿರುವ ಪರಿಹಾರ ಅವೈಜ್ಞಾನಿಕ ವಾಗಿದ್ದು, ಆ ಪರಿಹಾರ ಗದ್ದೆಗಳ ಬದುಗಳನ್ನು ಸರಿಪಡಿಸಿಕೊಳ್ಳಲು ಸಾಕಾಗುವುದಿಲ್ಲ. ಕಳೆದ ವರ್ಷವೂ ಬೆಳೆ ಕಳೆದುಕೊಂಡಿದ್ದ ನಾವು ಈ ಬಾರಿಯೂ ಬೆಳೆ ಕೈಗೆ ಬಾರದೆ ಒಂದೇ ಹೊತ್ತಿನ ಊಟಕ್ಕಾಗಿ ಕೂಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ನಮಗೆ ಸೂಕ್ತ ಪರಿಹಾರ ನೀಡದಿದ್ದರೆ ವಿಧಾನಸೌಧದ ಮುಂದೆ ಧರಣಿ ನಡೆಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಪ್ರತಿಭಟನಾಕಾರರನ್ನು ಓಲೈಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ದೇವರಾಜ್, ‘ಅರಣ್ಯ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ದೂರಕ್ಕೆ ಸಾಗಿಸಲು ಆಗುತ್ತಿಲ್ಲ. ಪಟಾಕಿ ಸಿಡಿಸಲು ಹೋದರೆ ನಮ್ಮ ಮೇಲೆ ಆನೆಗಳು ದಾಳಿ ಮಾಡಲು ಬರುತ್ತವೆ.

ಎಷ್ಟು ಓಡಿಸಲು ಪ್ರಯತ್ನಪಟ್ಟರು ಆಗು­ತ್ತಿಲ್ಲ. ಪುನಃ ರಾತ್ರಿ ವೇಳೆ ಬರುತ್ತವೆ. ಕಳೆದ ವರ್ಷ ಬೆಳೆ ಪರಿಹಾರ 10 ಲಕ್ಷ ರೂಪಾಯಿ ಬಾಕಿ ಇದ್ದು ಈ ವರ್ಷ ಈಗಾಗಲೇ 1,800 ಅರ್ಜಿಗಳು ಬಂದಿವೆ. ರೂ 50 ಲಕ್ಷ ಪರಿಹಾರ ಬರಬೇಕಿದ್ದು ಬಂದ ತಕ್ಷಣ ವಿತರಿಸಲಾಗುವುದು. ಕೇಂದ್ರ ಸರ್ಕಾರದಿಂದ ಆದೇಶ ದೊರೆತ ತಕ್ಷಣವೇ ಆನೆ ಹಿಡುಯುವ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ಕಾಡಾನೆ ದಾಳಿ: ಬೆಳೆ ಹಾನಿ
ರಾಮನಾಥಪುರ: ಸಮೀಪದ ಹಂಡ್ರಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಗಲ್ ಗ್ರಾಮದ ರೈತ ಆನಂದ್ ಎಂಬುವರಿಗೆ ಸೇರಿದ ಮೆಕ್ಕೆಜೋಳದ ಬೆಳೆ­ಯನ್ನು ಗುರುವಾರ ರಾತ್ರಿ ಕಾಡಾನೆಗಳು ನಾಶಪಡಿಸಿದೆ.

‘2 ಎಕರೆ ಹೊಲದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಸಮೀಪದ ಸಿದ್ದಾಪುರ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷದ ಅರವತ್ತು ಸಾವಿರ ರೂಪಾಯಿ ಬೆಳೆ ಸಾಲ ತೀರಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ರೈತ ಆನಂದ್ ಅಳಲು ತೋಡಿಕೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೊನಗಾನಹಳ್ಳಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿ, ಪ್ರತಿವರ್ಷ ಈ ಭಾಗದ ರೈತರು ಬೆಳೆದ ಫಸಲು ಕೈ ಸೇರುವ ಹೊತ್ತಿಗೆ ಕಾಡುಪ್ರಾಣಿಗಳ ಪಾಲಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳದೇ ನಿರ್ಲಕ್ಷಿಸುತ್ತಿರುವುದು ಒಂದು ದುರಂತ ಎನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಲ್ಲಿನ ಸುತ್ತಮುತ್ತಲಿನ ಅರಣ್ಯದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಒಂದು ತಿಂಗಳಿಂದ ಕಾಡಾನೆಗಳ ಹಿಂಡು ಈ ಭಾಗದ ಬಾಣಾವರ, ಆಲದಮರಗೇಟು, ಸುಳುಗೋಡುಸೋಮವಾರ ಕಡೆಯಿಂದ ಬಂದು ಕಾಡಂಚಿನ ಗ್ರಾಮಗಳಲ್ಲಿ ಬೆಳೆನಾಶ ಮಾಡುತ್ತಿವೆ. ಹೀಗಿದ್ದರೂ ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸಲು ಯತ್ನಿಸದೆ ಬೇಜವಾಬ್ದಾರಿ ನಿರ್ಲಕ್ಷ್ಯ ವಹಿಸಿದೆ’ ಎಂದು ಗ್ರಾಮಸ್ಥರು ಆರೋಪಿದ್ದಾರೆ.

ಕೂಡಲೇ ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿ­ಗಳೊಂದಿಗೆ ಚರ್ಚಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT