ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ರೋಗ; ಕ್ಷೀಣಿಸಿದ ಜಾನುವಾರು ಸಂತತಿ

Last Updated 17 ಡಿಸೆಂಬರ್ 2013, 7:07 IST
ಅಕ್ಷರ ಗಾತ್ರ

ಪಾವಗಡ: ಪಶು ಸಾಕಣೆಗೆ ಸೂಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲ್ಲೂಕಿನಲ್ಲೇ ಜಾನುವಾರು ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ದಶಕದಿಂದ ಬಿಡದೆ ಕಾಡುತ್ತಿರುವ ಬರ, ಮೇವಿನ ಸಮಸ್ಯೆ, ಕುಡಿಯುವ ನೀರಿಗೂ ತತ್ವಾರ, ಸತತ ನಷ್ಟ ಸೇರಿದಂತೆ ಸೂಕ್ತ ಪಶು ವೈದ್ಯಕೀಯ ಸೇವೆ ಅಲಭ್ಯತೆಯಿಂದ ಬಹುತೇಕ ರೈತರು ಪಶು ಸಂಗೋಪನೆಯಿಂದ ವಿಮುಖರಾಗುತ್ತಿದ್ದಾರೆ.

ತಾಲ್ಲೂಕಿನ ಇತಿಹಾಸ ತಿರುವಿ ಹಾಕಿದರೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜಾನುವಾರು ಸಾಕಣೆ ನಡೆ­ಯುತ್ತಿತ್ತು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇಲ್ಲಿನ ಬೆಟ್ಟಗುಡ್ಡಗಳ ಭೌಗೋಳಿಕ ಹಿನ್ನೆಲೆಯೂ ಇದಕ್ಕೆ ಪೂರಕವಾಗಿತ್ತು. ಸುತ್ತಮುತ್ತಲ ಸಾಮಂತ­ರಿಗೆ ಬೆಣ್ಣೆ, ತುಪ್ಪವನ್ನು ರವಾನಿಸ­ಲಾಗುತ್ತಿತ್ತು ಎಂಬ ಅಂಶ ದಾಖಲೆಗಳಲ್ಲಿದೆ. ಪಾವಗಡ, ವೈ.ಎನ್.ಹೊಸಕೋಟೆ, ನಿಡಗಲ್ ಕೋಟೆಗಳಲ್ಲಿರುವ ಭಾರೀ ಗಾತ್ರದ ತುಪ್ಪದ ಕೊಳಗಳೇ ಇದಕ್ಕೆ ಜೀವಂತ ನಿದರ್ಶನ.

ತಾಲ್ಲೂಕಿನ ಕಾಮನದುರ್ಗ, ನಿಡಗಲ್‌ ಬೆಟ್ಟದ ಆಸು­ಪಾಸಿನ ಹಳ್ಳಿಕಾರ್ ತಳಿ ರಾಸುಗಳು ರಾಜ್ಯದಲ್ಲೇ ಹೆಸರು­ವಾಸಿ. ಪ್ರಸ್ತುತ ಈ ಭಾಗದಲ್ಲೂ ರಾಸುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.

ತಾಲ್ಲೂಕಿನ ಪಶು ಇಲಾಖೆ ಮಾಹಿತಿ­ಯ­ನ್ವಯ 1,25,563 ಕುರಿಗಳಿವೆ. 39,294 ದನಗಳು, 16,804 ಎಮ್ಮೆಗಳು, 38,716 ಮೇಕೆ­ಗಳು, 49,716 ಕೋಳಿಗಳಿವೆ. 2007ರ ಗಣತಿ ಪ್ರಕಾರ ತಾಲ್ಲೂಕಿನಲ್ಲಿ  3,84,392 ಪ್ರಾಣಿಗಳಿದ್ದವು. ಆದರೆ 2012ರ ಗಣತಿ ಪ್ರಕಾರ ಅವುಗಳ ಸಂಖ್ಯೆ 2,79,512ಕ್ಕೆ ಇಳಿದಿದೆ.  ಐದು ವರ್ಷದಲ್ಲಿ ಜಾನುವಾರುಗಳ ಸಂಖ್ಯೆ ಲಕ್ಷಕ್ಕೂ ಅಧಿಕ ಕಡಿಮೆಯಾಗಿವೆ.

ತಾಲ್ಲೂಕಿನಲ್ಲಿ 1  ಪಶು ಆಸ್ಪತ್ರೆ, 5 ಪಶು ಚಿಕಿತ್ಸಾ­ಲಯಗಳು, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 2 ಕೃತಕ ಗರ್ಭಧಾರಣಾ ಕೇಂದ್ರ­ಗಳು, 1 ಸಂಚಾರಿ ಪಶು ಚಿಕಿತ್ಸಾಲಯ ಇದೆ. ಆದರೆ ಇರುವ 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿಯ ಕೊರತೆ ಕಾಡು­ತ್ತಿದೆ. ವೈದ್ಯರು, ಸಿಬ್ಬಂದಿಯಿಲ್ಲದೆ ಚಿಕಿತ್ಸಾ ಕೇಂದ್ರಗಳಿದ್ದೂ ಪ್ರಯೋಜನವಿಲ್ಲ. ತಾಲ್ಲೂಕಿಗೆ ಇರುವ ಏಕೈಕ ಪಶು ಚಿಕಿತ್ಸಾ­ಲಯದಲ್ಲೂ ವೈದ್ಯರಿಲ್ಲ. ವೆಂಕಟಮ್ಮನಹಳ್ಳಿ­ಯಲ್ಲಿರುವ ಕೃತಕ ಗರ್ಭಧಾರಣಾ ಕೇಂದ್ರದಲ್ಲಿಯೂ ಸಿಬ್ಬಂದಿಯಿಲ್ಲ.

ಸತತ ಬರದಿಂದ ಕಂಗೆಟ್ಟ ತಾಲ್ಲೂಕಿನ ಜನತೆಗೆ ಪಶು ವೈದ್ಯಕೀಯ ಸೇವೆಯೂ ಲಭ್ಯವಾಗದೆ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಹಲ ಗ್ರಾಮಗಳ ರೈತರು ಆಂಧ್ರದಲ್ಲಿ ತಮ್ಮ ರಾಸುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT