ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕ್ರಮವೂ ಬೇಕು

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕ್ರೀಡಾ ಚಟುವಟಿಕೆಯು ವ್ಯಾಪಾರೀಕರಣದ ಉತ್ತುಂಗ ತಲುಪಿದರೆ ಅದು ನೈತಿಕತೆಯ ಅಧಃಪತನ ಎಂಬುದಕ್ಕೆ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಪ್ರಕರಣ ಸ್ಪಷ್ಟ ನಿದರ್ಶನ. ಕ್ರೀಡಾ ಆಡಳಿತ ಪಾರದರ್ಶಕವಾಗಿರದಿದ್ದರೆ ನಡೆಯಬಹುದಾದ ಅನಾಹುತಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಸಭ್ಯರ ಆಟ ಕ್ರಿಕೆಟ್‌ನ ಭಾರತದ ಆಡಳಿತಾಂಗವಾಗಿರುವ ಬಿಸಿಸಿಐ ಅಂಗಸಂಸ್ಥೆಯಾದ ಐಪಿಎಲ್‌ ಆರು ವರ್ಷಗಳ ಹಿಂದೆ ವರ್ಣರಂಜಿತ ಆರಂಭ ಪಡೆದಾಗ ಯಾರಿಗೂ ಅದು ನೀರ ಮೇಲಣ ಕಾಗದದ ದೋಣಿ ಎಂದೆನಿಸಿರಲಿಲ್ಲ. ದಿನ ಕಳೆದಂತೆ ಆಟದ ಸೊಬಗಿಗಿಂತ ನೃತ್ಯಗಾರ್ತಿಯರ ಬಿನ್ನಾಣ, ಆಟಗಾರರು ಮತ್ತು ಬಾಲಿವುಡ್‌ ಮಂದಿಯ ಚೆಲ್ಲಾಟ, ಭಾರೀ ಬೆಟ್ಟಿಂಗ್‌ ಕುರಿತ ಊಹಾಪೋಹಗಳೇ ಅಬ್ಬರದ ಸುದ್ದಿಯಾಗಿದ್ದವು. ಇವುಗಳೆಲ್ಲದರ ಮಾದಕ ಅಲೆಯಲ್ಲಿ ಬಿಸಿಸಿಐ ಮತ್ತು ಐಪಿಎಲ್‌ ಆಡಳಿತಗಾರರು ಜತೆಜತೆಯಾಗಿ ಸಂಭ್ರಮದ ಹೆಜ್ಜೆ ಇರಿಸಿದ್ದರು. ಆದರೆ ಐಪಿಎಲ್‌ನಲ್ಲಿ ನಡೆದ ದೊಡ್ಡಮಟ್ಟದ ಅವ್ಯವಹಾರ ಗಳಿಗೆ ಸಂಬಂಧಿಸಿದಂತೆ ಪುರಾವೆಗಳನ್ನು ತನಿಖಾಧಿಕಾರಿಗಳು ಒಂದರ ಮೇಲೊಂದರಂತೆ ಬಯಲುಗೊಳಿಸತೊಡಗಿದಂತೆ ಕ್ರಿಕೆಟ್‌ ಆಡಳಿತಗಾರರು ಪರಸ್ಪರ ಬೆಟ್ಟು ಮಾಡುತ್ತಾ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದರು. ಐಪಿಎಲ್‌ನ ಮೊದಲ ಮೂರು ಅವತರಣಿಕೆಗಳಲ್ಲಿ ಮುಖ್ಯಸ್ಥರಾಗಿದ್ದ ಲಲಿತ್‌ ಮೋದಿ ಅವರನ್ನು ಮೂರು ವರ್ಷಗಳ ಹಿಂದೆ ಬಿಸಿಸಿಐನ ಶಿಸ್ತು ಸಮಿತಿ ಅಮಾನತುಗೊಳಿಸಿತ್ತು. ಇದೀಗ ಅವರ ಮೇಲೆ ಆಜೀವ ನಿಷೇಧ ಹೇರಿದೆ.

ಮೋದಿಯವರ ತಪ್ಪುಗಳು ಬೆಟ್ಟದಷ್ಟಿವೆ ನಿಜ. ಆದರೆ ಬಿಸಿಸಿಐ ಮೂಗಿನ ಅಡಿಯಲ್ಲಿಯೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದಾಗ ಕ್ರಿಕೆಟ್‌ ಮಂಡಳಿಯ ಇತರ ಪದಾಧಿಕಾರಿಗಳು ಕಣ್ಣು, ಕಿವಿ ಮುಚ್ಚಿಕೊಂಡಿದ್ದರೇನು ಎಂಬ ಪ್ರಶ್ನೆ ಏಳುತ್ತದೆ. ಆರಂಭದ ಮೂರು ವರ್ಷಗಳ ಅವಧಿಯಲ್ಲಿ  ಸಾರ್ವಜನಿಕ ಹಣ ದುರುಪಯೋಗವಾಗಿದೆ, ಸ್ವಜನ ಪಕ್ಷಪಾತ ಎದ್ದು ಕಂಡಿದೆ. ಮೋಸದಾಟ ನಡೆದಿದ್ದೂ ಬಟಾಬಯಲಾಗಿದೆ.

ಇದು ಕೋಟ್ಯಂತರ ಕ್ರೀಡಾಪ್ರೇಮಿಗಳಿಗೆ ಮಾಡಿದ ವಂಚನೆ. ಇದಕ್ಕೆ ಸಂಬಂಧಿಸಿದಂತೆ ಲಲಿತ್‌ ಮೋದಿಗೆ ಆಜೀವ ನಿಷೇಧ ಹೇರಿದ್ದು ಸ್ವಾಗತಾರ್ಹ. ಅವರು ಜನರನ್ನು ವಂಚಿಸಿರುವುದು ಮೇಲ್ನೋಟಕ್ಕೇ ಖಚಿತವಾಗುತ್ತದೆ. ಅಂತಹ ಅಪರಾಧಕ್ಕೆ ಇಷ್ಟೇ ಶಿಕ್ಷೆ ಅಂದರೆ ಇದು ಕಣ್ಣೊರೆಸುವ ತಂತ್ರ ಎಂದೆನಿಸುತ್ತದೆ. ಲಲಿತ್‌ ಮೋದಿ ಇಂಗ್ಲೆಂಡ್‌ನಲ್ಲಿ ಸುಖವಾಗಿದ್ದಾರೆ.

ಟ್ವಿಟರ್‌, ಸುದ್ದಿವಾಹಿನಿಗಳಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.  ಬಿಸಿಸಿಐ ಕೂಡಾ ಈಗ ವಿವಾದದ ಮಡುವಿನಲ್ಲಿ ಸಿಲುಕಿದೆ. ಹಿಂದೆ ಮೋದಿ ಹಾದಿ ತಪ್ಪಿದಾಗ ಅವರ ಜತೆಯಲ್ಲಿದ್ದವರೇ ಈಗ ಸಚ್ಚಾರಿತ್ರ್ಯದ ಮುಖವಾಡ ಧರಿಸಿದಂತಿದೆ. ಕೆಲವು ರಾಜಕಾರಣಿಗಳೂ ಬಿಸಿಸಿಐ ಮತ್ತು ಐಪಿಎಲ್‌ನ ಕೊಳೆಯಲ್ಲಿ ಕೈಯಾಡಿಸಿರುವುದು ಸ್ಪಷ್ಟ.

ಭಾರತದಲ್ಲಿ ಕ್ರಿಕೆಟ್‌ ಆಡಳಿತಗಾರರ ಲಜ್ಜೆಗೇಡಿತನ ಬಹಿರಂಗಗೊಂಡಿದೆ. ಸರ್ಕಾರ ಈಗ ಸುಮ್ಮನಿರಬಾರದು. ಮೋದಿ ಮತ್ತು ಅವರ ಜತೆಗೆ ಕೈಜೋಡಿಸಿದ್ದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT