ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ನಿಯಮಾವಳಿ-ಕಿರುಕುಳ ಭಾವನೆ ಬೇಡ

Last Updated 7 ಜನವರಿ 2012, 8:45 IST
ಅಕ್ಷರ ಗಾತ್ರ

ಮಂಗಳೂರು: ಕೈಗಾರಿಕಾ ಕ್ಷೇತ್ರದಲ್ಲಿ ಕಾನೂನು ನಿಯಮಾವಳಿಗಳನ್ನು ಜಾರಿಗೊಳಿಸುವುದನ್ನು ಉದ್ಯಮಿಗಳು ಕಿರುಕುಳ ಎಂದು ತಿಳಿಯಬಾರದು ಎಂದು ಕಸ್ಟಮ್ಸ ತೆರಿಗೆ ಆಯುಕ್ತ ಎಂ.ವಿ.ಎಸ್. ಚೌಧರಿ ಹೇಳಿದರು.

ಕರಾವಳಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಮತ್ತು ಭಾರತೀಯ ರಫ್ತುದಾರರ ಸಂಘಗಳ ಒಕ್ಕೂಟ (ಎಫ್‌ಐಇಒ) ಜಂಟಿಯಾಗಿ ಶುಕ್ರವಾರ ಏರ್ಪಡಿಸಿದ್ದ ಕೈಗಾರಿಕೋದ್ಯಮಿಗಳಿಗೆ ತೆರಿಗೆ ವಾಪಸಾತಿ ಯೋಜನ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕೋದ್ಯಮಿಗಳ ಉತ್ಪಾದನಾ ಹೆಚ್ಚಳ ಹಾಗೂ ರಫ್ತು ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ತೆರಿಗೆ ವಾಪಸಾತಿ ಯೋಜನೆ ಹಮ್ಮಿಕೊಂಡಿದೆ. ಇದರಿಂದ ಉದ್ಯಮಿಗಳಿಗೆ ಉತ್ಪನ್ನ ರಫ್ತು ಮೇಲೆ ಹಾಲಿ ಕಟ್ಟುತ್ತಿರುವ ತೆರಿಗೆಗೆ ವಿನಾಯಿತಿ ದೊರೆಯುತ್ತದೆ. ಆದರೆ ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನಾ ಹೆಚ್ಚಳ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಉತ್ಪಾದನಾ ಹೆಚ್ಚಳವೇ ಇಲ್ಲಿನ ಮುಖ್ಯ ಉದ್ದೇಶವಾದ್ದರಿಂದ ಈ ಅಗತ್ಯ ಕ್ರಮಗಳನ್ನು ತೆರಿಗೆ ಇಲಾಖೆಯ ನಿರೀಕ್ಷಿಸುತ್ತದೆ. ಜತೆಗೆ ಕೈಗಾರಿಕೆಗಳಿಗೂ ಈ ನಿಯಮಾವಳಿ ಕಡ್ಡಾಯವಾಗುತ್ತದೆ ಎಂದರು.

ಅಂತರರಾಷ್ಟ್ರೀಯ ಮಾರುಕಟ್ಟೆ ಬಿರುಸಾಗಿರುವ ಕಾರಣ, ಭಾರತೀಯ ಕೈಗಾರಿಕಾ ಉತ್ಪಾದನೆಯು ಈ ನಿಟ್ಟಿನಲ್ಲಿ ಬಿರುಸಾಗಿದ್ದರೆ ಮಾತ್ರ ಕೈಗಾರಿಕಾ ಅಗತ್ಯಗಳನ್ನು ಪೂರೈಸಲು ಸಾಧ್ಯ. ಹಾಗಾಗಿ ಭಾರತೀಯ ಕೈಗಾರಿಕೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ತನ್ನ ಸಂಪೂರ್ಣ ಬೆಂಬಲ ನೀಡಲಿದೆ. ಯೋಜನೆಗಳಿಗೆ, ಹಣಕ್ಕೆ ಯಾವುದೇ ಕೊರತೆ ಸರ್ಕಾರದಲ್ಲಿ ಇಲ್ಲ ಎಂದರು.

ಆದರೆ ಸರ್ಕಾರಕ್ಕೆ ಅಗತ್ಯ ದಾಖಲೆಗಳನ್ನು ಪೂರೈಸಬೇಕಾದ ಅನಿವಾರ್ಯತೆ ಇಲಾಖೆಗೆ ಇದೆ. ಹಾಗಾಗಿ ಅನೇಕ ಕಾನೂನು ನಿಯಮಾವಳಿಗಳ ಕಟ್ಟುನಿಟ್ಟಾದ ಜಾರಿ ಆಗಲೇಬೇಕು. ಇದು ಕೆಲವು ಕೈಗಾರಿಕೋದ್ಯಮಿಗಳಿಗೆ ಕಿರುಕುಳ ಎಂದು ಕಾಣಿಸಬಹುದು. ಆದರೆ ಈ ನಿಯಮಾವಳಿ ಜಾರಿಯ ಉದ್ದೇಶ ಕೈಗಾರಿಕೆಗಳ ಉನ್ನತಿಯೇ. ಆದ್ದರಿಂದ ಸಹಕಾರ ನೀಡುವಂತೆ ಕೋರಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಡಂಬಿ, ಮೀನು, ಕಾಫಿ  ಉದ್ಯಮ ಉತ್ತಮವಾಗೇ ಇದೆ. ಇವುಗಳನ್ನು ಮತ್ತಷ್ಟು ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಾಗಾಗಿ ಕೈಗಾರಿಕೋದ್ಯಮಿಗಳು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂದರು.

ಕೆಸಿಸಿಐ ಅಧ್ಯಕ್ಷೆ ಲತಾ ಆರ್. ಕಿಣಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಪಿಟಿ ಉಪಾಧ್ಯಕ್ಷ ಟಿ.ಎಸ್.ಎನ್. ಮೂರ್ತಿ, ಎಫ್‌ಐಇಒ ಜಂಟಿ ನಿರ್ದೇಶಕ ಬಸವರಾಜ, ಪ್ರಾದೇಶಿಕ ಅಧ್ಯಕ್ಷ ವಾಲ್ಟರ್ ಡಿಸೋಜ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT