ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ವಿಶ್ವವಿದ್ಯಾಲಯ ಸುತ್ತೋಲೆಗೆ ಖಂಡನೆ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರು:  2011ರ ನಂತರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡದ ಕಾನೂನು ವಿದ್ಯಾಲಯಗಳು ನೀಡಿದ ಸ್ನಾತಕೋತ್ತರ ಪದವಿಗಳು (ಎಲ್‌ಎಲ್‌ಎಂ) ಅನೂರ್ಜಿತವಾಗಿದ್ದು, ಇಂತಹ ಕಾಲೇಜುಗಳಿಂದ ನೇಮಕಗೊಂಡಿರುವ ಉಪನ್ಯಾಸಕರನ್ನು ತಕ್ಷಣ ಸೇವೆಯಿಂದ ಕೈ ಬಿಡುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಎಲ್ಲಾ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರಿಗೆ ಸುತ್ತೋಲೆ ಹೊರಡಿಸಿರುವುದನ್ನು `ಅಹಿಂದ~ ತೀವ್ರವಾಗಿ ಖಂಡಿಸಿದೆ.

ನಗರದಲ್ಲಿ ಭಾನುವಾರ `ಅಹಿಂದ~ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಲೋಲಾಕ್ಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ರಾಜ್ಯ ಕಾನೂನು ವಿಶ್ವವಿದ್ಯಾಲಯದ ಈ ಸುತ್ತೋಲೆಯಿಂದ ನೂರಾರು ಯುವ ಉಪನ್ಯಾಸಕರ ಭವಿಷ್ಯ ಅಡಕತ್ತರಿಗೆ ಸಿಲುಕಿದೆ.

ಈ ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿ ಕುಲಾಧಿಪತಿಗಳಾಗಿರುವ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಲಾಗುವುದು~ ಎಂದು ತಿಳಿಸಿದರು. `ರಾಜ್ಯದಲ್ಲಿ ಬೆಂಗಳೂರು, ಗುಲ್ಬರ್ಗ, ಮೈಸೂರು, ಕುವೆಂಪು ಹಾಗೂ ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಬಹುತೇಕ ವಿಶ್ವವಿದ್ಯಾಲಯಗಳು ಕಾನೂನು ಶಿಕ್ಷಣ ವಿಭಾಗ ಹೊಂದಿವೆ. ಈ ವಿಶ್ವವಿದ್ಯಾಲಯಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿಲ್ಲ.

ಇಂಥ ಸಂಸ್ಥೆಗಳ ಸ್ನಾತಕೋತ್ತರ ಪದವೀಧರರು ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ವಿ.ವಿ. ಹೊರಡಿಸಿರುವ ಸುತ್ತೋಲೆ, ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಇದರಿಂದಾಗಿ ಅರ್ಹತೆಯ ಆಧಾರದಲ್ಲಿ ಸ್ನಾತಕೋತ್ತರ ಪದವೀಧರರಾದವರ ಪ್ರಮಾಣಪತ್ರಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ವಿ.ವಿ. ತಪ್ಪಿಗೆ ಈ ಪದವೀಧರರನ್ನು ದಂಡಿಸುವುದು ಯಾವ ನ್ಯಾಯ~ ಎಂದು ಪ್ರಶ್ನಿಸಿದ ಲೋಲಾಕ್ಷ, ಈ ವಿವಾದಾತ್ಮಕ ಸುತ್ತೋಲೆಯನ್ನು ತಕ್ಷಣ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು.

`ಮೀಸಲಾತಿ ಪಡೆದು ಕಾನೂನು ಪದವಿ ಪೂರೈಸಿರುವ ಹೆಚ್ಚಿನ ಸಂಖ್ಯೆಯ ದಲಿತ, ಹಿಂದುಳಿದ ಪದವೀಧರರಿರೂ  ಸುತ್ತೋಲೆಯಿಂದ ಸಮಸ್ಯೆಯಾಗುತ್ತದೆ~ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT