ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ತಜ್ಞರಿಂದ ವಿಷಯ ಮಂಡನೆ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಜಾವಾಣಿ~, `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹವು ನಗರದ ಶಿಕ್ಷಕರ ಸದನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಸೂಕ್ತ ಕೋರ್ಸ್‌ಗಳ ಆಯ್ಕೆಗೆ ಅನುಕೂಲವಾಗುವಂತೆ ಭಾನುವಾರ ಏರ್ಪಡಿಸಿದ್ದ`ಮಿಷನ್ ಅಡ್ಮಿಷನ್~ ಕೌನ್ಸೆಲಿಂಗ್ ಕಾರ್ಯಕ್ರಮದಲ್ಲಿ ನಗರ ಹಾಗೂ ವಿವಿಧ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿ-ಪೋಷಕರು ಭಾಗವಹಿಸಿದ್ದರು.

ಕಾನೂನು, ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿರುವ ವಿವಿಧ ಕೋರ್ಸುಗಳ ಬಗ್ಗೆ ವಿಷಯ ತಜ್ಞರು ಅನಿಸಿಕೆಗಳನ್ನು ಮಂಡಿಸಿದರು. 

 ಆರಂಭದಲ್ಲಿ `ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ~ಯ ಕುಲಪತಿ ಡಾ.ಆರ್.ವೆಂಕಟರಾವ್ ಮಾತನಾಡಿ, `ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳು ಯಾವ ಕೋರ್ಸೂ ಸಿಗದಿದ್ದಾಗ ಅನಿವಾರ್ಯವಾಗಿ ಕಾನೂನು ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇಂದು ಕಾಲ ಬದಲಾಗಿದೆ~ ಎಂದರು.

`ಕಳೆದ ವರ್ಷ ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಯೊಬ್ಬ ಕಾನ್ಪುರದ ಐಐಟಿಯನ್ನು ಬಿಟ್ಟು ಬಂದಿ ದ್ದರು. ಕಾರಣ ಕೇಳಿದರೆ, ಕಳೆದ ವರ್ಷ ಈ ಸಂಸ್ಥೆಯಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಆದ್ದರಿಂದ ಐಐಟಿ ಸೇರಿದ್ದೆ. ಆದರೆ ಈ ವರ್ಷ ಸಿಕ್ಕಿದ್ದರಿಂದ ಇಲ್ಲಿಗೆ ಬಂದೆ ಎಂದು ಅವರು ಉತ್ತರಿಸಿದರು. 

 ಬರುವ ಐದು ವರ್ಷಗಳಲ್ಲಿ ಭಾರತೀಯ ಕಾನೂನು ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಲಿದೆ. ಮೋನಿಕಾ ಲೆವಿನ್‌ಸ್ಕಿ ಅವರೊಂದಿಗಿನ ಲೈಂಗಿಕ ಹಗರಣದಲ್ಲಿ ಸಿಲುಕಿದ್ದ ಬಿಲ್ ಕ್ಲಿಂಟನ್ ಆ ಕೇಸಿನಿಂದ ಮುಕ್ತಿ ಪಡೆಯಲು ನೆರವು ನೀಡುತ್ತಿರುವ ವಕೀಲರ ಶುಲ್ಕ ನೀಡಲು ತಮ್ಮ ಆಸ್ತಿ ಅಲ್ಲದೇ, ವಿವಿಧೆಡೆ ಭಾಷಣ ಮಾಡುವ ಮೂಲಕ ಹಣ ಸಂಗ್ರಹಿಸಿ ವಕೀಲರ ಶುಲ್ಕ ಕಟ್ಟುತ್ತಿದ್ದಾರೆ. ಅಮೆರಿದಲ್ಲಿ ಶುಲ್ಕ ಜಾಸ್ತಿಯಿರುವುದರಿಂದ ಭಾರತೀಯ ವಕೀಲರಿಗೆ ಬೇಡಿಕೆ ಹೆಚ್ಚಿದೆ. ಬೌದ್ಧಿಕ ಹಕ್ಕು ಕಾಯ್ದೆ ಬಂದ ನಂತರವಂತೂ ವಕೀಲರ ಮಹತ್ವ ಇನ್ನಷ್ಟು ಹೆಚ್ಚಾಗಿದೆ~ ಎಂದರು.

 `ಕಾನೂನು ಓದಿದವರೆಲ್ಲರೂ ನ್ಯಾಯಾಧೀಶ ಅಥವಾ ವಕೀಲ ಮಾತ್ರ ಆಗಬೇಕೆಂದೇನೂ ಇಲ್ಲ. ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ಸಿಗುತ್ತಿವೆ. ಮೊದಲೆಲ್ಲ ನ್ಯಾಯಾಧೀಶರಾಗಬೇಕಾದರೆ ಹತ್ತಾರು ವರ್ಷ ವಕೀಲರಾಗಿ ಸೇವೆ ಸಲ್ಲಿಸಬೇಕಾಗುತ್ತಿತ್ತು. ಇದೀಗ ಕಾನೂನು ಪದವಿ ಮುಗಿಸಿದ ತಕ್ಷಣ ನ್ಯಾಯಾಧೀಶರಾಗಬಹುದು~ ಎಂದು ಹೇಳಿದರು.

`ಇನ್‌ಸ್ಟಿಟ್ಯೂಟ್ ಆಫ್ ಬಿಜಿನೆಸ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್~ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಸಿ.ಮನೋಹರ್ ಮಾತನಾಡಿ, `ವಿದ್ಯಾರ್ಥಿಗಳನ್ನು ಪೋಷಕರು ಈ ಕೋರ್ಸ್‌ಗೆ ಸೇರಬೇಕು ಎಂದು ಒತ್ತಾಯಪೂರ್ವಕವಾಗಿ ಸೇರಿಸುವ ಪ್ರಕರಣಗಳು ಕಂಡು ಬರುತ್ತಿವೆ.

ಆದರೆ ಆ ಕ್ರಮ ಸರಿಯಲ್ಲ. ಮಕ್ಕಳು ಬಯಸಿದಂಥ ಶಿಕ್ಷಣವನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಿದ್ದು, ಅವರಿಗೆ ಅವಕಾಶಗಳೂ ಸಾಕಷ್ಟಿವೆ~ ಎಂದು ಹೇಳಿದರು.

  `ಹೊಸ ಅಗತ್ಯಕ್ಕೆ ಅನುಗುಣವಾಗಿ ತಮ್ಮ ಮಕ್ಕಳನ್ನು ಸಾಂಪ್ರದಾಯಿಕ ಕೋರ್ಸುಗಳಿಗೆ ಸೇರಿಸುವ ಬದಲು ನೂತನ ಕೋರ್ಸುಗಳಿಗೆ ಸೇರಿಸಬೇಕು. ಹಳೆಯ ನಂಬಿಕೆಗಳಿಗೆ ಜೋತು ಬೀಳಬಾರದು. ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಧ್ಯತೆಗಳನ್ನು ಗುರುತಿಸಿಕೊಂಡು ಪೂರಕ ಕೋರ್ಸುಗಳನ್ನು ಓದಬೇಕು~ ಎಂದು ಅವರು ನುಡಿದರು.

 ಮಣಿಪಾಲ್‌ನ ಎಂಎಎಚ್‌ಇ ಡೀಮ್ಡ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ.ಹೆಗ್ಡೆ ಮಾತನಾಡಿ, `ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮಾತ್ರ ಬರಬೇಕೇ ಹೊರತು, ಎಲ್ಲರೂ ಅದನ್ನೇ ಇಷ್ಟಪಡುತ್ತಿದ್ದಾರೆ, ಆದ್ದರಿಂದ ನಾನೂ ಅದನ್ನೇ ಮಾಡಬೇಕೆಂಬುದು ಸರಿಯಲ್ಲ~ ಎಂದರು.

`ಶಿಕ್ಷಕ ಎಂದರೆ ಸೂಲಗಿತ್ತಿಯಿದ್ದಂತೆ. ವಿದ್ಯಾರ್ಥಿಯ ಒಳಗಿರುವ ಪ್ರತಿಭೆಯನ್ನು ಹೊರತೆಗೆಯಬೇಕು~ ಎಂದು ಹೇಳಿದರು.

`ಏಸ್ ಕ್ರಿಯೇಟಿವ್ ಲರ್ನಿಂಗ್~ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ್, `ವಿದ್ಯಾರ್ಥಿಗಳು ಯಾವುದೇ ಕೋರ್ಸುಗಳನ್ನು ಆಯ್ಕೆ ಮಾಡುಕೊಳ್ಳುವ ಮುನ್ನ ಸೂಕ್ತ ಸಿದ್ಧತೆ ನಡೆಸಬೇಕು~ ಎಂದು ಸಲಹೆ ನೀಡಿದರು.
ನಂತರ ಎಲ್ಲ ತಜ್ಞರು ವಿದ್ಯಾರ್ಥಿ-ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

`ಪ್ರಜಾವಾಣಿ,~ `ಡೆಕ್ಕನ್ ಹೆರಾಲ್ಡ್~ನ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮಕೃಷ್ಣ ಅವರು ಗಣ್ಯರಿಗೆ ಸ್ಮರಣಿಕೆಗಳನ್ನು ವಿತರಿಸಿದರು.

ಕೌನ್ಸೆಲಿಂಗ್: ವಿದ್ಯಾರ್ಥಿ-ಪೋಷಕರ ಅನಿಸಿಕೆ
ಕೌನ್ಸೆಲಿಂಗ್ ಇರುವ ಬಗ್ಗೆ ಪತ್ರಿಕಾ ವರದಿಯನ್ನು ನೋಡಿ ಮಗಳನ್ನು ಕರೆದುಕೊಂಡು ಇಲ್ಲಿಗೆ ಬಂದೆ.ಎಲ್ಲ ತಜ್ಞರು ವಿಷಯದ ಕುರಿತು ಸಾಕಷ್ಟು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಈ ಅವಕಾಶಕಲ್ಪಿಸಿದ್ದಕ್ಕಾಗಿ `ಪ್ರಜಾವಾಣಿ~ ಬಳಗಕ್ಕೆ ಅಭಿನಂದನೆಗಳು.
 ಡಾ.ಬಿ.ಎನ್.ಸತ್ಯನಾರಾಯಣ, ಪ್ರಾಧ್ಯಾಪಕರು, ಬೆಂಗಳೂರು ಕೃಷಿ ವಿವಿ

ಈ ಕೌನ್ಸೆಲಿಂಗ್‌ನಿಂದ ಯಾವ ಯಾವ ಕೋರ್ಸುಗಳ ಮಹತ್ವ ಏನು, ನಾನು ಆಯ್ದುಕೊಳ್ಳಬೇಕಾದ ಕೋರ್ಸ್ ಏನು ಎಂಬುದು ತಿಳಿಯಿತು. ಎಷ್ಟೊಂದು ವಿಷಯಗಳಿವೆಯಲ್ಲ ಎಂದು ಗೊತ್ತಾಯಿತು.
ಮೇಘಾ, ವಿದ್ಯಾರ್ಥಿನಿ

ಬಡತನದ ಹಿನ್ನೆಲೆಯಿಂದ ಬಂದಿದ್ದರೂ ಶ್ರಮಪಟ್ಟು ಓದಿ ಉನ್ನತ ಹುದ್ದೆಗೇರಿದ ಹಲವಾರು ಉದಾಹರಣೆಗಳನ್ನು `ಸೂಪರ್ 30~ ಸಂಸ್ಥೆಯ ಮುಖ್ಯಸ್ಥ ಆನಂದಕುಮಾರ್ ಅವರು ಹೇಳಿದ ಮೇಲೆ ವಿದ್ಯಾರ್ಥಿಗಳು ಏನು ಬೇಕಾದರೂ ಸಾಧಿಬಹುದಲ್ಲ ಎಂಬುದು ಅರ್ಥವಾಯಿತು.
 ಎಚ್.ಎಂ.ಭಾರತಿ, ಪೋಷಕಿ, ವಿಜಯನಗರ

ಎಂಜಿನಿಯರಿಂಗ್‌ನಲ್ಲಿ ಏನೇನು ಅವಕಾಶಗಳಿವೆ ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದೆ. ಅದರೊಂದಿಗೆ ಇತರ ವಿಷಯಗಳ ಬಗ್ಗೆಯೂ ತಿಳಿದಿದ್ದರಿಂದ ನನ್ನ ಆಯ್ಕೆ ವ್ಯಾಪ್ತಿ ದೊಡ್ಡದಾಯಿತು.
ಸುಗಂಧ್, ವಿದ್ಯಾರ್ಥಿ

 ಪ್ರೊ.ಬಿ.ಎಂ.ಹೆಗ್ಡೆ ಅವರು ಮೆಡಿಕಲ್ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿದ್ದು ನನಗೆ ಹೆಚ್ಚು ಇಷ್ಟವಾಯಿತು. ಹಣ ಮಾಡುವುದಕ್ಕಿಂತ ರೋಗಿಗಳ ಸೇವೆ ಮಾಡಬೇಕೆಂಬ ಮಾತು ಯೋಚಿಸುವಂತೆ ಮಾಡಿತು.
ಭಾವನಾ, ವಿದ್ಯಾರ್ಥಿನಿ

ಮಗನ ಮುಂದಿನ ಕೋರ್ಸ್ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೆವು. ಆನಂದಕುಮಾರ್ ಅವರು ಬಡತನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಐಐಟಿಗೆ ಸೇರಿಸಿದ ಮಾತು ಕೇಳಿ ಕಣ್ಣೀರು ಬಂತು. ಮಗನಿಗೆ ಉಪಯೋಗವಾಗಲಿ ಎಂದು ಬಂದಿದ್ದೆ. ಆದರೆ ಈ ಕೌನ್ಸೆಲಿಂಗ್ ನನಗೇ ಸಾಕಷ್ಟು ಉಪಯೋಗಕ್ಕೆ ಬರುತ್ತದೆ ಎಂದೆನಿಸಿತು.
ರತ್ನ, ಪೋಷಕಿ, ಲಗ್ಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT