ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುಧಾರಣೆಗೆ ಹಿನ್ನಡೆ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗರ್ಭಿಣಿಯ ಜೀವಕ್ಕೆ ಅಪಾಯ ಇರುವ ಸಂದರ್ಭದಲ್ಲಿ ಗರ್ಭಪಾತ ನಡೆಸಲು ಕಾನೂನುಬದ್ಧ ಅವಕಾಶ ನೀಡುವ ನಿರ್ಣಯವನ್ನು ಐರ್ಲೆಂಡ್‌ನ ವೈದ್ಯಕೀಯ ಸಂಸ್ಥೆ ತಿರಸ್ಕರಿಸಿದೆ.

ಇದರಿಂದ ಐರ್ಲೆಂಡ್‌ನಲ್ಲಿರುವ ಕಠಿಣ ಗರ್ಭಪಾತ ವಿರೋಧಿ ಕಾನೂನುಗಳಿಗೆ ಸುಧಾರಣೆ ತರುವಂತಹ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಕ್ಯಾಥೊಲಿಕ್ ರಾಷ್ಟ್ರವಾಗಿರುವ ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧಿಸಲಾಗಿದೆ. ಈ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಗರ್ಭಪಾತ ವಿರೊಧಿ ಕಾನೂನು ಐರೋಪ್ಯ ಒಕ್ಕೂಟದಲ್ಲಿಯೇ ಅತ್ಯಂತ ಕಠಿಣವಾದದ್ದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಐರ್ಲೆಂಡ್‌ನ ಗಾಲ್ವೇ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ನಂಜು ಹೆಚ್ಚಾಗಿ ಕರ್ನಾಟಕ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ ಮೃತಪಟ್ಟಿದ್ದರು. ಈ ಘಟನೆ ವಿಶ್ವದಾದ್ಯಂತ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಆ ನಂತರ ಐರ್ಲೆಂಡ್‌ನಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲು ನಡೆಸಿದ ಪ್ರಯತ್ನಗಳಿಗೆ ಈಗ ಮತ್ತೆ ಸೋಲುಂಟಾಗಿದೆ.  ಹಾಗೆಯೇ ಇತ್ತೀಚೆಗೆ ಪ್ರಕಟವಾದ ಸವಿತಾ ಹಾಲಪ್ಪನವರ ಸಾವಿನ ಪ್ರಕರಣದ ಕುರಿತ ತನಿಖಾ ವರದಿಯೂ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಸಾವು ಸಂಭವಿಸುವುದಕ್ಕೆ ಕಾರಣವಾದ ನಿಜವಾದ ವಿಚಾರಗಳನ್ನು ನಿರ್ವಹಿಸುವಲ್ಲಿ ಈ ವರದಿ ಸೋತಿದೆ. ಭ್ರೂಣದ ಮೇಲೆ ಹೆಚ್ಚಿನ ಗಮನ ಹಾಗೂ ಕ್ಷೀಣಿಸುತ್ತಿದ್ದ ತಾಯಿಯ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡದಿದ್ದುದು ಈ ಸಾವಿಗೆ ಕಾರಣ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಈ ತನಿಖಾ ವರದಿಯಲ್ಲಿ ದೂಷಿಸಲಾಗಿದೆ. ತಾಯಿಯ ಜೀವ ರಕ್ಷಣೆಗೆ ಮಧ್ಯೆ ಪ್ರವೇಶಿಸಲು ಭ್ರೂಣದ ಹೃದಯ ಮಿಡಿತ ನಿಲ್ಲುವವರೆಗೂ ಈ ಪ್ರಕರಣದಲ್ಲಿ ವೈದ್ಯರು ಕಾದಿದ್ದರು. ಹೀಗಾಗಿ ತಾಯಿಯ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ನೀಡದ ಬಗ್ಗೆ ವರದಿ ಗಮನ ಸೆಳೆದಿರುವುದು ಸರಿಯಾಗಿಯೇ ಇದೆ. ಆದರೆ ಆಸ್ಪತ್ರೆ ಸಿಬ್ಬಂದಿಯನ್ನು ದೂಷಿಸುವ ಮೂಲಕ ಸವಿತಾ ಸಾವಿಗೆ ನಿಜವಾದ ಕಾರಣವನ್ನು  ಬೊಟ್ಟು ಮಾಡಿ ತೋರಿಸುವಲ್ಲಿ ಈ ವರದಿ ವಿಫಲವಾಗಿದೆ. ಏಕೆಂದರೆ, ನಿಜಕ್ಕೂ ಮುಖ್ಯ ದೋಷ ಇರುವುದು ಐರ್ಲೆಂಡ್‌ನ ಗರ್ಭಪಾತ ಕಾನೂನುಗಳಲ್ಲಿ ಎಂಬುದನ್ನು ವರದಿ ಒತ್ತಿ ಹೇಳಿಲ್ಲ.

ಗರ್ಭಪಾತವನ್ನು ಐರ್ಲೆಂಡ್‌ನ ಕಾನೂನುಗಳು ಬಹಿಷ್ಕರಿಸುವುದು ಮಾತ್ರವಲ್ಲ, ಗರ್ಭಪಾತ ಮಾಡುವುದನ್ನೂ ಶಿಕ್ಷಾರ್ಹ ಅಪರಾಧವಾಗಿಸಿದೆ. ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವ ವೈದ್ಯರು ವೈದ್ಯಕೀಯವಾಗಿ ಅಗತ್ಯವಿದ್ದರೂ ಗರ್ಭಪಾತ ಮಾಡಲು ಹಿಂಜರಿಯುತ್ತಾರೆ ಎಂಬುದು ಕಟುವಾಸ್ತವ. ಹೀಗಾಗಿಯೇ ಆಸ್ಪತ್ರೆ ವೈದ್ಯರ ತಪ್ಪು ಆದ್ಯತೆಗಳು ಹಾಗೂ ತಪ್ಪು ನಿರ್ಧಾರಗಳಿಗೆ ಮುಖ್ಯ ಕಾರಣ ಗರ್ಭಪಾತ ಕಾನೂನುಗಳು. ಸವಿತಾ ಸಾವಿಗೆ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾದ ನಂತರ, ಕೆಲವು ವೈದ್ಯಕೀಯ ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವಂತೆ ರಾಷ್ಟ್ರದ ಗರ್ಭಪಾತ ಕಾನೂನುಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳುವುದಾಗಿ ಐರಿಷ್ ಸರ್ಕಾರ ಭರವಸೆ ನೀಡಿತ್ತು. ಆದರೆ ಈ ಪ್ರಯತ್ನಗಳು ಫಲಪ್ರದವಾಗುವಂತೆ ಕಾಣುತ್ತಿಲ್ಲ.

ಗರ್ಭಪಾತ ಮಾಡಿಕೊಳ್ಳಲು ಬಯಸುವ ಐರ್ಲೆಂಡ್ ಮಹಿಳೆಯರು ನೆರೆಯ ಬ್ರಿಟನ್‌ಗೆ ಹೋಗುವ ಸ್ಥಿತಿ ಇದೆ. ಇಲ್ಲದಿದ್ದಲ್ಲಿ ಅಸುರಕ್ಷಿತ ಹಾಗೂ ಅಕ್ರಮ ವಿಧಾನಗಳಿಗೆ ಮೊರೆಹೋಗಬೇಕು. ಗರ್ಭಪಾತ ವಿರೋಧಿಸುವವರು ತಮ್ಮದು ಜೀವ ಪರವಾದ ಸಿದ್ಧಾಂತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಭ್ರೂಣದ ಜೀವಕ್ಕೆ ತೋರುವ ಹೆಚ್ಚಿನ ಕಾಳಜಿ ತಾಯಿಯ ಜೀವವನ್ನೇ ಬಲಿತೆಗೆದುಕೊಳ್ಳಬಹುದು ಎಂಬುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT