ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಗಳ ಸಮರ್ಪಕ ಜಾರಿ ಅಗತ್ಯ

ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾನೂನು ಸಲಹೆಗಾರ ಪ್ರಹ್ಲಾದ ರಾವ್ ಹೇಳಿಕೆ
Last Updated 14 ಜುಲೈ 2013, 20:05 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದಲ್ಲಿ ಸಾರ್ವಜನಿಕರ ರಕ್ಷಣೆಗೆ ಕಾನೂನುಗಳ ಕೊರತೆಯಿಲ್ಲ. ಆದರೆ, ಇರುವ ಕಾನೂನುಗಳು ಸಮರ್ಪಕವಾಗಿ ಜಾರಿಗೊಳ್ಳಬೇಕಾದ ಅಗತ್ಯವಿದೆ' ಎಂದು ರಾಜ್ಯ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾನೂನು ಸಲಹೆಗಾರ ಎಸ್.ಆರ್. ಪ್ರಹ್ಲಾದ ರಾವ್ ಅವರು ಹೇಳಿದರು.

ಬೆಂಗಳೂರು ವಿಜ್ಞಾನ ವೇದಿಕೆಯು ಭಾನುವಾರ ನಗರದಲ್ಲಿ ಆಯೋಜಿಸಿದ್ದ ಜಿ.ಟಿ.ನಾರಾಯಣ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಕಾನೂನು ಮತ್ತು ಸಾಮಾನ್ಯ ವ್ಯಕ್ತಿ' ವಿಷಯ ಕುರಿತು ಅವರು ಮಾತನಾಡಿದರು.

ಗ್ರಾಹಕ ರಕ್ಷಣಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಸಾಮಾನ್ಯ ಜನರ ರಕ್ಷಣೆಗೆ ಹಲವು ಕಾನೂನುಗಳಿವೆ. ಆದರೆ, ಇವುಗಳ ಬಗೆಗಿನ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಈ ಕಾನೂನುಗಳು ಸಾಮಾನ್ಯ ಜನರಿಗೆ ತಿಳಿಯದೆ ದುರುಪಯೋಗವಾಗುತ್ತಿವೆ ಎಂದರು.

ಗ್ರಾಹಕರ ಹಿತರಕ್ಷಣೆಯನ್ನು ಮುಖ್ಯ ಕೇಂದ್ರವಾಗಿಸಿಕೊಂಡು ಗ್ರಾಹಕ ರಕ್ಷಣಾ ಕಾಯ್ದೆಯನ್ನು ರೂಪಿಸಲಾಗಿದೆ. ತಾವು ಖರೀದಿಸಿದ ವಸ್ತುಗಳ ಬಗ್ಗೆ ದೂರುಗಳಿದ್ದರೆ ಜಿಲ್ಲಾ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿರುವ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದಾಗಿದೆ ಎಂದು ಅವರು ಸಲಹೆ ನೀಡಿದರು.

ಮಾಹಿತಿ ಹಕ್ಕು ಕಾಯ್ದೆಯು ಸಾರ್ವಜನಿಕ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆ ಇದ್ದಂತೆ. ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗುವ ಮೊದಲು ಸರ್ಕಾರದ ಯಾವುದೇ ಯೋಜನೆಗಳು, ಅಂಕಿ-ಅಂಶಗಳು, ಸೌಲಭ್ಯಗಳ ಬಗೆಗಿನ ಮಾಹಿತಿಯು ಸಾಮಾನ್ಯ ಜನರಿಗೆ ಲಭ್ಯವಾಗುತ್ತಿರಲಿಲ್ಲ. ಕಾಯ್ದೆಯ ಅನ್ವಯ ಸಾಮಾನ್ಯ ವ್ಯಕ್ತಿಯೂ ಸಹ ತನಗೆ ಬೇಕಾದ ಸಂಸ್ಥೆಯ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಸಮಾಜದ ಯಾವುದೇ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಇದೆ. ಸಾರ್ವಜನಿಕರು ಈ ಕಾನೂನುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ಕಾಯ್ದೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT