ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಸದೇ ಕಬ್ಬಿಣ ಕರಗಿಸುವ ಸಿಖಲೀಕರು!

Last Updated 19 ಜನವರಿ 2011, 10:45 IST
ಅಕ್ಷರ ಗಾತ್ರ

ಅಂಕೋಲಾ: ಯೋಧ ಜನಾಂಗವೆಂದೇ ಗುರುತಿಸಲ್ಪಟ್ಟ ಸಿಖ್ ಸಮುದಾಯವು ಬಹುಮುಖಿ ಸಂರಚನೆ ಹೊಂದಿದ್ದು  ಜಮೀನ್ದಾರಿ ಹಿನ್ನೆಲೆಯ  ಜಾಟ್ ಜಾತಿ ಜನವರ್ಗದಿಂದ ಹಿಡಿದು ಹಿಂದುಳಿದ ಕುಶಲ ಕರ್ಮಿಗಳು ಈ ಧರ್ಮದ ಪರಿಧಿಯಲ್ಲಿದ್ದಾರೆ.ತಮ್ಮ ಅನುಯಾಯಿಗಳಿಗೆ ಕ್ಷಾತ್ರ ದೀಕ್ಷೆ ನೀಡಿದ ಗುರು ಗೋವಿಂದ ಸಿಂಗರು 5 ವಸ್ತುಗಳನ್ನು ಧರಿಸಲು ಕಡ್ಡಾಯ ಪಡಿಸಿದರು. ಈ ಪೈಕಿ ಕೃಪಾಣ ಎಂಬ ಕಿರುಗತ್ತಿ ಮತ್ತು ಕಡಗ ಎಂಬ ಕಬ್ಬಿಣದ ಬಳೆ ಈ ಕ್ಷಾತ್ರ ಗುಣದ ಬಾಹ್ಯ ಅಭಿವ್ಯಕ್ತಿಗಳಾಗಿವೆ. ಇಂತಹ ಲೋಹ ವಸ್ತುಗಳನ್ನು ಮತ್ತು ನಿರಂತರ ಸಮರ ಪೀಡಿತವಾಗಿದ್ದ ಅಂದಿನ ಸಂದರ್ಭದಲ್ಲಿ ತಲ್ವಾರಗಳನ್ನು ತಯಾರಿಸುತ್ತಿದ್ದ ಜನರೇ ಸಿಖ್ ಸಮುದಾಯದ ತಳಮಟ್ಟದ ಸಿಖಲೀಕ್ ಜನರಾಗಿದ್ದಾರೆ.

ಕಾಲ ಪ್ರವಾಹದಲ್ಲಿ ತೇಲುತ್ತ ಪಂಜಾಬ್‌ನಿಂದ ಕರ್ನಾಟಕದ ಹುಬ್ಬಳ್ಳಿ, ಬೀದರ್ ಮುಂತಾದ ಕಡೆಗೆ ಬಂದು ನೆಲೆಯೂರಿದ ಇಂತಹ ಜನರು, ಜೀವನೋಪಾಯಕ್ಕಾಗಿ ತಮ್ಮ ಕ್ಷಾತ್ರ ಮೂಲದ ಲೋಹ ವಿದ್ಯೆಯನ್ನು ಕೃಷಿ ಮತ್ತು ಗೃಹೋಪಯೋಗಿ ವಸ್ತುಗಳ ತಯಾರಿಕೆಗೆ ರೂಪಾಂತರಗೊಳಿಸಿಕೊಂಡಿದ್ದಾರೆ.‘ಕಾಸಿ ಕಮ್ಮಾರನಾದ’ ಎಂಬಂತೆ ಕಬ್ಬಿಣವನ್ನು ಕುಲುಮೆಯಲ್ಲಿ ಕಾಯಿಸಿ ಬೇಕಾದ ಆಕಾರಕ್ಕೆ ಬಾಗಿಸಿಕೊಳ್ಳುವುದು ಸಾಂಪ್ರದಾಯಿಕ ಕಮ್ಮಾರಿಕೆ. ಆದರೆ, ಕಬ್ಬಿಣವನ್ನು ಕಾಯಿಸದೇ ಬಡಿದು ಆಕಾರ ನೀಡುವುದು ಸಿಖಲೀಕರ ಕಸುಬಿನ ವೈಶಿಷ್ಟ್ಯತೆಯಾಗಿದೆ.

ಲೋಹದ ಶೀಟನ್ನು ಕತ್ತರಿಸಿಕೊಂಡು ಎರಡು ಪಾದಗಳ ನಡುವೆ ಹಿಡಿದು ಸುತ್ತಿಗೆಯಿಂದ ಬಡಿಯುತ್ತ ನೋಡ ನೋಡುತ್ತಲೇ ಕಬ್ಬಿಣದ ಬುಟ್ಟಿಯನ್ನು ಸಿದ್ಧಪಡಿಸುವ 70 ವರ್ಷದ ವಿಕ್ರಮ್‌ಸಿಂಗ್‌ನ ರಟ್ಟೆಯ ತಾಕತ್ತು ಯುವಕರನ್ನು ನಾಚಿಸುವಂತಿದೆ. ಸೀಗಡಿ ಒಲೆಗಳು, ರೊಟ್ಟಿ, ಚಪಾತಿ ಬೇಯಿಸುವ  ತವಾಗಳು, ಕೈಗತ್ತಿಗಳು ಇತ್ಯಾದಿ ಸಲಕರಣೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತ ಉಪಜೀವನ ನಡೆಸುತ್ತಿರುವ ವಿಕ್ರಮ್‌ಸಿಂಗ್ ಮತ್ತು ಆತನ ಸೋದರರಾದ  ಕಿರಣಸಿಂಗ್, ಮೆಹಫಿಲ್‌ಸಿಂಗ್ ಮತ್ತು ಈ ಪರಿವಾರದ ಬಾಲಕ ಸತ್‌ವೀರ್‌ಸಿಂಗ್ ಪ್ರಸ್ತುತ ಅಂಕೋಲಾದ ಪೋಸ್ಟ್ ಬಾಳೆಗುಳಿ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಿಡಾರ ಹೂಡಿದ್ದಾರೆ. ಸುತ್ತಿಗೆಯ ಸಂಗೀತದೊಂದಿಗೆ ಲೋಹ ಕಾಯಕದಲ್ಲಿ ನಿರತರಾಗಿದ್ದಾರೆ.

ತಾವು ಸಿದ್ಧ ಪಡಿಸಿದ ವಸ್ತುಗಳಿಗೆ ಹಳ್ಳಿಗರೇ ಪ್ರಮುಖ ಗಿರಾಕಿಗಳಾಗಿದ್ದಾರೆ. ಕಚ್ಚಾ ಸಾಮಗ್ರಿಗಳನ್ನು ಹುಬ್ಬಳ್ಳಿಯಿಂದ ತರುವುದಾಗಿ ಅವರು ತಿಳಿಸುತ್ತಾರೆ.  ಕನ್ನಡ ಬಲ್ಲ ಇವರು ಅನುಕೂಲವಾದಾಗ ಧಾರ್ಮಿಕ ಹಬ್ಬ, ಉತ್ಸವಗಳಿಗೆ ಅಮೃತಸರದ ಸುವರ್ಣ ಮಂದಿರಕ್ಕೆ ಭೇಟಿ ನೀಡಿ ಬರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT