ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನರ್ ಸ್ಟೋನ್ ಪಾರ್ಕ್‌@ಇಂದಿರಾನಗರ

Last Updated 17 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನೀವು ಕೊನೆಯ ಬಾರಿ ಪಾರ್ಕ್‌ಗೆ ಹೋಗಿದ್ದು ಯಾವಾಗ ಎಂದು ಒಮ್ಮೆ ನೆನಪಿಸಿಕೊಳ್ಳಿ? ಬೆಂಗಳೂರಿಗರಿಗೆ ವಾರಾಂತ್ಯ ಎಂದರೆ ಮಾಲ್‌ಗಳು, ರೆಸ್ಟುರಾಗಳು, ಬಾರ್-ಪಬ್‌ಗಳೆಂಬ ಥಳುಕು ಬಳುಕಿನ ಲೋಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಬೆಂಗಳೂರು ಭಾರತದ ಐಟಿ ರಾಜಧಾನಿಯಾಗುವ ಮೊದಲು ಉದ್ಯಾನ ನಗರಿಯೆಂದೇ ಹೆಸರು ಪಡೆದಿತ್ತು. ಹಲವಾರು ವರ್ಷಗಳಿಂದ ಗಾರ್ಡನ್ ಸಿಟಿ ಎಂದೇ ವಿಶ್ವಮಟ್ಟದಲ್ಲಿ ಪರಿಚಿತವಾಗಿತ್ತು. ಇದೀಗ ಬೆಂಗಳೂರಿನ ಉದ್ಯಾನನಗರಿ ಪಟ್ಟ ಇತಿಹಾಸದ ಪುಟಕ್ಕೆ ಸೇರುವಂತಾಗಿದೆ.

ಮರಳುಗಾಡಿನಲ್ಲಿ ಓಯಸಿಸ್‌ನಂತೆ ಅಲ್ಲಲ್ಲಿ ಹಸಿರು ಉಳಿದುಕೊಂಡಿದೆಯಾದರೂ ಸಾವಿರಾರು ಮರಗಳನ್ನು ಕಡಿದು ಉರುಳಿಸಿ ಮಾಲಿನ್ಯಕ್ಕೆ ದಾರಿ ಮಾಡಿಕೊಡಲಾಗಿದೆ.

ನಗರವಾಸಿಗಳು ಶಬ್ದಮಾಲಿನ್ಯ, ವಾಯುಮಾಲಿನ್ಯದ ಜೊತೆಗೆ ನಾನಾ ಮಾಲಿನ್ಯಗಳನ್ನು ಎದುರಿಸುತ್ತಾ ಬದುಕುವಂತಾಗಿದೆ. ನಗರ ಕಾಂಕ್ರೀಟ್ ಕಾಡಾಗಿ ಬದಲಾಗುತ್ತಿದೆ. ಈ ಹೊತ್ತಿನಲ್ಲಿ ಇಂದಿರಾನಗರದ ಸಿಎಂಎಚ್ ರಸ್ತೆ ಹಾಗೂ ನೂರು ಅಡಿ ರಸ್ತೆಯ ಬಳಿ ಪಾಳು ಬ್ದ್ದಿದಿದ ಉದ್ಯಾನವೊಂದು ಇದೀಗ ಹಸಿರು ಹೊದ್ದು ನಿಂತಿದೆ. ಕಾರ್ನರ್ ಸ್ಟೋನ್ ಪ್ರಾಪರ್ಟೀಸ್ ಸಂಸ್ಥೆಯು ಬಿಬಿಎಂಪಿ ಸಹಯೋಗದೊಂದಿಗೆ ಉದ್ಯಾನವನ್ನು ಪುನರುಜ್ಜೀವನಗೊಳಿಸಿದೆ.

`ಈ ಉದ್ಯಾನ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಗಿಡ, ಮುಳ್ಳುಗಂಟಿ ಹಾಗೂ ಕಸದಿಂದ ತುಂಬಿ ಹೋಗಿತ್ತು. ಇದನ್ನು ಪುನರುಜ್ಜೀವನಗೊಳಿಸಲು ಸಂಕಲ್ಪ ಮಾಡಿ ಕಾರ್ಯಪ್ರವೃತ್ತವಾದ ನಂತರ ಪಾರ್ಕ್ ನಳನಳಿಸುತ್ತಿದೆ. ಇಂದಿರಾನಗರದ ನಿವಾಸಿಗಳು ಸುಸಜ್ಜಿತ ಉದ್ಯಾನದಿಂದ ಸಂತಸಗೊಂಡಿದ್ದಾರೆ' ಎಂದು ವಿವರಿಸುತ್ತಾರೆ ಕಾರ್ನರ್ ಸ್ಟೋನ್ ಪ್ರಾಪರ್ಟಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರಜ್ ಎಚ್. ಅಸ್ರಾನಿ.

ಉದ್ಯಾನದ ಒಳ ಹೊಕ್ಕರೆ ಆಹ್ಲಾದಕರ ವಾತಾವರಣ ನಿಮ್ಮನ್ನು ಸ್ವಾಗತಿಸುತ್ತದೆ. ಗೇಟ್ ಬಳಿಯೇ ಹಸಿರು ಹೊತ್ತ ವಿಶೇಷ ಕಮಾನು ಗಮನ ಸೆಳೆಯುತ್ತದೆ. ಮುಂದೆ ಸಾಗಿದರೆ ನೀರಿನ ಬುಗ್ಗೆಗಳು ಎತ್ತರೆತ್ತರಕ್ಕೆ ಪುಟಿಯುತ್ತಿರುವ ದೃಶ್ಯ ಮನಸ್ಸಿಗೆ ತಂಪೆರೆಯುತ್ತದೆ.

ಉದ್ಯಾನದ ಪಾದಚಾರಿ ಮಾರ್ಗವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಶಾಂತ ವಾತಾವರಣ ಇಡೀ ಪಾರ್ಕ್‌ನಲ್ಲಿ ಮನೆ ಮಾಡಿದೆ. ಕಾಲುದಾರಿಯಲ್ಲಿ ಸಾಗುತ್ತಿದ್ದರೆ ಹಚ್ಚ ಹಸುರಿನ ಹುಲ್ಲುಹಾಸು ಹಾಗೂ ಸುಂದರವಾದ ಪುಷ್ಪಗಳು ತುಂಬಿದ ಗಿಡಗಳೇ ಎಲ್ಲೆಲ್ಲೂ ಕಾಣಸಿಗುತ್ತವೆ. ವಿಶ್ವದರ್ಜೆಯ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದ್ದು, ಉದ್ಯಾನದ ತುಂಬಾ ಟ್ರ್ಯಾಕ್‌ಗಳ ಪಕ್ಕದಲ್ಲಿಯೇ ವಿಶೇಷ ಶೈಲಿಯ ಬೆಂಚ್‌ಗಳನ್ನು ಅಳವಡಿಸಲಾಗಿದೆ.

ಉದ್ಯಾನದ ಸುತ್ತಲೂ ಸುಂದರ ಆಕಾರದ ಗೋಡೆಯನ್ನು ನಿರ್ಮಿಸಲಾಗಿದ್ದು, ಗೋಡೆಯ ಮೇಲೆ ವಿವಿಧ ವರ್ಣಗಳ ಚಿತ್ತಾರಗಳನ್ನು ಬಿಡಿಸಲಾಗಿದೆ. ಧ್ವನಿ ಬೆಳಕಿನ ನೀರಿನ ಬುಗ್ಗೆಗಳನ್ನು ಅಳವಡಿಸಲಾಗಿದ್ದು, ಹಸಿರಿನ ಹಿನ್ನೆಲೆಯಲ್ಲಿ ನೀರಿನ ಬುಗ್ಗೆ ಚಿಮ್ಮುತ್ತಿದ್ದರೆ ಎಂತಹವರು ತಮ್ಮ ದುಗುಡ ಮರೆತು ಸೌಂದರ್ಯ ಆರಾಧಕರಾಗುತ್ತಾರೆ. ಉದ್ಯಾನದ ಇನ್ನೊಂದು ವಿಶೇಷತೆ ಮರಗಳ ಬೇರಿನಿಂದ ರಚಿಸಿದ ಕಲಾಕೃತಿಗಳನ್ನು ಅಲ್ಲಲ್ಲಿ ಇರಿಸಿರುವುದು ಹಾಗೂ ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಳವನ್ನು ಗುರುತಿಸಿರುವುದು.

ಅಲ್ಲದೇ ಮಕ್ಕಳಿಗೆ ಪ್ರತ್ಯೇಕ ಆಟದ ಸ್ಥಳ ನಿಗದಿಪಡಿಸಿರುವುದು ಗಮನ ಸೆಳೆಯುತ್ತದೆ. ಮಕ್ಕಳು ಸುರಕ್ಷಿತವಾಗಿ ಆಟವಾಡಲು ರಬ್ಬರ್ ಮಿಶ್ರಿತ ನೆಲಹಾಸನ್ನು ಅಳವಡಿಸಲಾಗಿದೆ. ಪಾರ್ಕ್‌ನ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದ ಪುತ್ಥಳಿಯನ್ನು ಸ್ಥಾಪಿಸಲಾಗಿದ್ದು, ವಿವೇಕಾನಂದರ ತತ್ವ ಆದರ್ಶಗಳು ಎಲ್ಲರಿಗೂ ನೆನಪಿಸಿಕೊಳ್ಳುವಂತೆ ಬೋಧನೆಯ ಫಲಕಗಳನ್ನು ಅಳವಡಿಸಲಾಗಿದೆ.

ಒಟ್ಟಾರೆ ನಗರದ ಜಂಜಡಗಳಿಂದ ಕ್ಷಣಕಾಲವಾದರೂ ಮುಕ್ತವಾಗಿಸುವ ವಾತಾವರಣದಿಂದ ಇಂದಿರಾನಗರ ಉದ್ಯಾನ ಶೋಭಿಸುತ್ತಿದೆ. ಆಹ್ಲಾದಕರ ಗಾಳಿ, ಕಣ್ಣಿಗೆ ಹಿತವಾದ ನೋಟವನ್ನು ಕಟ್ಟಿಕೊಡುತ್ತದೆ. ಜನರಿಗೆ ಸಂತಸ ನೀಡಿದರೆ ನಮ್ಮ ಉದ್ದೇಶ ಸಾರ್ಥಕ ಎಂದು ಹೇಳುತ್ತಾರೆ ಸೂರಜ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT