ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರತ್ತ ಸರ್ಕಾರದ ನಿರ್ಲಕ್ಷ್ಯ;ಆರೋಪ

ಚಿಕ್ಕಬಳ್ಳಾಪುರದಲ್ಲಿ ಸಿಐಟಿಯು ದ್ವಿತೀಯ ಜಿಲ್ಲಾ ಸಮ್ಮೇಳನ
Last Updated 24 ಡಿಸೆಂಬರ್ 2012, 6:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕಿದ್ದ ಮತ್ತು ಉದ್ಯೋಗಾವಕಾಶ ಕಲ್ಪಿಸಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಭರವಸೆ ನೀಡುವುದರಲ್ಲಿ ಕಾಲಹರಣ ಮಾಡುತ್ತಿವೆ. ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಸಿಐಟಿಯು ದ್ವಿತೀಯ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, `ಕೋಟ್ಯಂತರ ಜನ ಉದ್ಯೋಗ ಅಭದ್ರತೆಯಲ್ಲೇ ಬದುಕುತ್ತಿದ್ದು, ಅವರಿಗೆ ಉತ್ತಮ ಭವಿಷ್ಯ ರೂಪಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಯಾವುದೇ ಸರ್ಕಾರಿ ಸೌಲಭ್ಯವಿಲ್ಲದೆ ಗುತ್ತಿಗೆಯಾಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲಾಗುತ್ತಿಲ್ಲ. ಕಾಗದಪತ್ರಗಳಲ್ಲಿ ಮಾತ್ರ ಕನಿಷ್ಠವೇತನ ನಿಗದಿಪಡಿಸಲಾಗುತ್ತದೆಯಾದರೂ ಅರ್ಹರಿಗೆ ಕನಿಷ್ಠ ವೇತನ ಮತ್ತು ಇತರ ಸೌಲಭ್ಯಗಳು ದೊರೆಯುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಗುತ್ತಿಗೆಯಾಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರನ್ನು ಮನಬಂದಂತೆ ದುಡಿಸಿಕೊಳ್ಳಲಾಗುತ್ತದೆ. ಕಾರ್ಮಿಕರ ಹಕ್ಕುಗಳನ್ನು ಪದೇ ಪದೇ ಉಲ್ಲಂಘಿಸಲಾಗುತ್ತದೆ. 10 ರಿಂದ 12 ಗಂಟೆಯವರೆಗೆ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತದೆ. ಆದರೆ ಅವರಿಗೆ ಸಮರ್ಪಕವೇತನ ನೀಡುವುದಿಲ್ಲ' ಎಂದರು.

`ಅಂಗನವಾಡಿ ನೌಕರರನ್ನು ಮತ್ತು ಕಾರ್ಯಕರ್ತರನ್ನು ಉದ್ಯೋಗ ಕಾಯಂಗೊಳಿಸಿಲ್ಲ. ಗೌರವ ಧನ ನೀಡಲಾಗುತ್ತಿದೆಯಾದರೂ ನಿಯಮಿತವಾಗಿ ಕೊಡುತ್ತಿಲ್ಲ. 3 ರಿಂದ 4 ಸಾವಿರ ರೂಪಾಯಿ ಗೌರವಧನದಲ್ಲಿ ಜೀವನ ನಡೆಸುವುದಾದರೂ ಹೇಗೆ? ಕುಟುಂಬದ ನಿರ್ವಹಣೆ ಹೇಗೆ ಮಾಡಲು ಸಾಧ್ಯ' ಎಂದು ಅವರು ಪ್ರಶ್ನಿಸಿದರು.

`ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಪ್ರವೇಶಿಸಲು ಅವಕಾಶ ಮಾಡಿಕೊಟ್ಟವರೇ ಈ ಹಿಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಈಗಿನ ಪ್ರಧಾನಿ ಮನಮೋಹನ್ ಸಿಂಗ್. 1990ರ ದಶಕದಲ್ಲಿ ಗ್ಯಾಟ್ ಒಪ್ಪಂದ ಮಾಡಿಕೊಂಡ ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರು ವಿದೇಶಿ ಉದ್ಯಮಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು.

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಆರ್ಥಿಕ ವಹಿವಾಟು ಮೇಲಷ್ಟೇ ಅಲ್ಲ, ದೇಶದ ಸಂಸ್ಕೃತಿಯ ಮೇಲೂ ಗಂಭೀರ ಪರಿಣಾಮ ಬೀರುವಂತೆ ಮಾಡಿತು' ಎಂದು ಶ್ರೀರಾಮರೆಡ್ಡಿ ತಿಳಿಸಿದರು. ಸಿಐಟಿಯು ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಸಿದ್ದಗಂಗಪ್ಪ, ಲಕ್ಷ್ಮಿದೇವಮ್ಮ, ಸರ್ದಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT