ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕ್ರಮ ನಿರ್ವಹಣೆಯಲ್ಲೂ ಕಾಸು

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಅದೊಂದು ಪುಟ್ಟ ಸಮಾರಂಭ. ಖರ್ಚು ಅಂದಾಜು 5 ಲಕ್ಷ. ಕಾರ್ಯಕ್ರಮ ನಡೆಯಬೇಕಿದ್ದು ಬೆಳಿಗ್ಗೆ 10 ಘಂಟೆಗೆ. ಶುರುವಾಗಿದ್ದು 11.30. ಅಲ್ಲಿಂದಲೇ ಸಮಸ್ಯೆ ಆರಂಭ. ಎಲ್ಲಾ ಅಸ್ತವ್ಯಸ್ತ. `

ಈಗ ಸಭಾಧ್ಯಕ್ಷರಿಗೆ ಮಾಲಾರ್ಪಣೆ~ ಎಂದು ನಿರೂಪಕರಿಂದ ಘೋಷಣೆ. ಆದರೆ ಮಾಲೆ ತಂದಿದ್ದರೆ ತಾನೇ ಹಾಕುವುದು. ಅದೇ ನಾಪತ್ತೆ. ಸಮಾರಂಭದ ಉದ್ದಕ್ಕೂ ಭಾಷಣ. ಊಟದ ಸಮಯ ಬಂದರೂ ಭಾಷಣ ಮಾತ್ರ ಮುಗಿಯುತ್ತಲೇ ಇಲ್ಲ. 

ಪ್ರೇಕ್ಷಕರಿಗೆ ಯಾವುದರಲ್ಲೂ ಉತ್ಸಾಹವಿಲ್ಲ. ಆಯೋಜಕರು ಊಟದ ವ್ಯವಸ್ಥೆ ಮಾಡಬೇಕಾಯಿತು.ಸಭಾಂಗಣವೆಲ್ಲಾ ಖಾಲಿ.

ಸಣ್ಣ ಸಮಾರಂಭದ ಕತೆಯೇ ಹೀಗಾದರೆ, ದೊಡ್ಡ ಸಮಾರಂಭದ ಗತಿಯೇನು? ಹೀಗಾದರೆ ಕಾರ್ಯಕ್ರಮ ನಡೆಸುವುದರ ಉದ್ದೇಶ ಸಾರ್ಥಕವಾಗುತ್ತದೆಯೇ? ಸಮಾರಂಭ ಹಾಳಾಗುವುದಕ್ಕೆ ಕಾರಣ ಸರಿಯಾಗಿ ಯೋಜಿಸದೇ ಇದ್ದದ್ದು. ಆಯೋಜಕರಲ್ಲಿ ಸಮಯ ಪ್ರಜ್ಞೆ, ಕರ್ತವ್ಯ ಪರಿಪಾಲನೆಯ ಕೊರತೆಯದ್ದು.

ಇಂತಹ ಸಮಸ್ಯೆಗಳು ಪರಿಹಾರಕ್ಕೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ `ಕಾರ್ಯಕ್ರಮ ನಿರ್ವಹಣೆ~ (EVENT MANAGEMENT) ಎಂಬ ಪದವಿ ಶಿಕ್ಷಣ ಅಥವಾ ಡಿಪ್ಲೊಮಾ ಪ್ರಾರಂಭಿಸುವ ಅವಶ್ಯಕತೆ ಇದೆ. ದೊಡ್ಡ ಉತ್ಸವ, ಆಚರಣೆ, ಸಮ್ಮೇಳನ, ಸಮಾಲೋಚನ ಸಭೆ ಮುಂತಾದವುಗಳನ್ನು ಆಯೋಜಿಸುವ ಪಠ್ಯ ಪ್ರಾರಂಭಿಸಬೇಕಿದೆ.

ಕಾರ್ಯಕ್ರಮ ನಿರ್ವಾಹಕರೆಂಬ ಪರಿಣಿತ ಉದ್ಯೋಗಸ್ಥರು ಬೆಳೆಯಬೇಕಾಗಿದೆ. ವಿದೇಶಗಳಲ್ಲಿ, ಕೆಲವು ವಿಶ್ವವಿದ್ಯಾಲಯಗಳಲ್ಲಿ (EVENT MANAGEMENT) ಕೋರ್ಸ್ ಮಾಡುವ ಅವಕಾಶವಿದೆ. ಕೆಲವು ಸಂಘ ಸಂಸ್ಥೆಗಳು ಇದರ ತರಬೇತಿಯನ್ನು ನೀಡುತ್ತವೆ.

ಏನಿದು?

ಕಾರ್ಯಕ್ರಮದ ನಿರ್ವಹಣೆ, ಸೇರುವ ಜನ, ಆಹ್ವಾನ, ಪರಿಕಲ್ಪನೆ, ಸಿದ್ಧತೆಗಳು, ತಾಂತ್ರಿಕ ಅಗತ್ಯಗಳನ್ನು ಅಂದರೆ ದೀಪ, ಮೈಕ್ ಇತ್ಯಾದಿ ವ್ಯವಸ್ಥೆ ಮಾಡುವುದು, ಆರೋಗ್ಯ, ಸುರಕ್ಷತೆ, ಪೂರ್ವಭಾವಿ ತಯಾರಿ ಮುಂತಾದವುಗಳನ್ನು ನಿಭಾಯಿಸುವುದು, ಯಾವುದೇ ಆಡಚಣೆ, ಅಪಸ್ವರಕ್ಕೆ ಅವಕಾಶ ಇಲ್ಲದಂತೆ ಸಮಾರಂಭವನ್ನು ಸುಲಲಿತವಾಗಿ ನಡೆಸುವುದೇ ಇವೆಂಟ್ ಮ್ಯಾನೇಜ್‌ಮೆಂಟ್.

ಏಕೆ ಬೇಕು?
ಬದಲಾಗುತ್ತಿರುವ ಜಗತ್ತಿನಲ್ಲಿ ಜನರಿಗೆ ಸಮಯದ ಅಭಾವವಿರುತ್ತದೆ. ಇದರಿಂದ ಸಣ್ಣ ಮಟ್ಟದ ಕಾರ್ಯಕ್ರಮ ನಡೆಸಲು ಕಷ್ಟಕರವಾಗಿದೆ.  ಹೀಗಾಗಿ ಹುಟ್ಟು ಹಬ್ಬ, ಮದುವೆ, ಮುಂಜಿ, ನಾಮಕರಣ ಮುಂತಾದ ವೈಯಕ್ತಿಕ ಸಮಾರಂಭಗಳನ್ನು ಕಾರ್ಯಕ್ರಮ ನಿರ್ವಾಹಕರಿಗೆ ವಹಿಸಿದರೆ, ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

ಮಾಧ್ಯಮಗಳ ಮೂಲಕ ಮನುಷ್ಯ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡಿದ್ದಾನೆ. ಅವನಿಗೆ ಭಾಷಣ ಕೇಳುವ ತಾಳ್ಮೆ ಹಾಗೂ ಸಮಯ ಇರುವುದಿಲ್ಲ.  ದೊಡ್ಡ ಮಟ್ಟದಲ್ಲಿ ಜನರನ್ನು ಆಕರ್ಷಿಸುವ ಸಂಪನ್ಮೂಲ ವ್ಯಕ್ತಿಯನ್ನು ಕ್ರೋಢೀಕರಿಸಿ ನಿಗದಿತ ಸಮಯದಲ್ಲಿ ಕಾರ್ಯಕ್ರಮ ಆರಂಭಿಸಿ ರಂಜಿಸುವ ಉದ್ದೇಶ ಆಯೋಜಕರಿಗೆ ಇರುತ್ತದೆ. ಇಲ್ಲಿ ಕಾರ್ಯಕ್ರಮ ನಿರ್ವಾಹಕರು ಮಹತ್ವದ ಪಾತ್ರ ವಹಿಸುತ್ತಾರೆ.

ಸಮಾರಂಭದ ರೂಪುರೇಷೆ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರುವವರೇ ಕಾರ್ಯಕ್ರಮ ನಿರ್ವಾಹಕರು. ತಮ್ಮ ಗ್ರಾಹಕ ಅಥವಾ ಪ್ರಾಯೋಜಕರು ನಡೆಸುವ ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಕಾರ್ಯಕಲಾಪಗಳಿಗೂ ಅವರ ತಂಡ ಹೊಣೆ. ಸೃಜನಶೀಲತೆ, ಮಾತುಗಾರಿಕೆ, ವ್ಯಾವಹಾರಿಕ ಜ್ಞಾನ, ತಾಂತ್ರಿಕತೆ ಹೀಗೆ ಎಲ್ಲಾ ಕೋನಗಳಲ್ಲಿ ಪರಿಣತಿ ಹೊಂದಿದರೆ ಉತ್ತಮ ನಿರ್ವಾಹಕರಾಗಲು ಸಾಧ್ಯವಾಗುತ್ತದೆ.

ಅವಕಾಶಗಳು ಎಲ್ಲಿ?
ಉತ್ಸವ, ಪ್ರದರ್ಶನ, ಉತ್ಪನ್ನದ ಮಾರಾಟ, ಪ್ರಚಾರ, ಸಂಗೀತ, ನೃತ್ಯ, ಪತ್ರಿಕಾಗೋಷ್ಠಿ, ಫ್ಯಾಷನ್ ಶೋ, ಸಿನಿಮಾ ಆಡಿಯೊ ವಿಡಿಯೊ ಬಿಡುಗಡೆ ಮುಂತಾದವು ಈಗ ಉದ್ಯಮವಾಗಿ ಪರಿವರ್ತಿತವಾಗಿವೆ.

ಇಲ್ಲಿ ನುರಿತ ಕಾರ್ಯಕ್ರಮ ನಿರ್ವಾಹಕರಿಗೆ ಬೇಡಿಕೆಯಿದೆ. ನಿಮ್ಮಲ್ಲಿ ಸೃಜನಶೀಲತೆ, ವ್ಯಾವಹಾರಿಕ ಜ್ಞಾನ, ಮಾತಿನ ಕಲೆ ಇದ್ದರೆ ಇವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಯಶಸ್ವಿಯಾಗಬಹುದು.

ದೇಶದ ವಿವಿಧೆಡೆ ಇವೆಂಟ್ ಮ್ಯಾನೇಜ್‌ಮೆಂಟ್ ಶಾಲೆಗಳು ಆಸಕ್ತರಿಗೆ ಶಿಕ್ಷಣ ನೀಡುತ್ತಿವೆ. ಅವುಗಳಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯೋನೇಜ್‌ಮೆಂಟ್ (ಮುಂಬೈ ಮತ್ತು ಪುಣೆ), ಅಮಿಟಿ ಇನ್‌ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯೋನೇಜ್‌ಮೆಂಟ್ (ದೆಹಲಿ), ಇವೆಂಟ್ ಮ್ಯೋನೇಜ್‌ಮೆಂಟ್ ಡೆವೆಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಮುಂಬೈ, ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯೋನೇಜ್‌ಮೆಂಟ್ ಮುಂಬೈ, ನ್ಯಾಷನಲ್ ಅಕಾಡೆಮಿ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್ ಅಂಡ್ ಡೆವಲಪ್‌ಮೆಂಟ್ (http://www.naemd.com) ಇತ್ಯಾದಿ ಸೇರಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT