ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ: ಇನ್ನೂ ಸಿಗದ ಪರಿಹಾರ

ಪಶು ಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿಯೇ ರೈತರ ನಿರ್ಲಕ್ಷ್ಯ
Last Updated 23 ಡಿಸೆಂಬರ್ 2013, 6:10 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವ ಜಾನುವಾರುಗಳ ರೈತರಿಗೆ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ಬೇರೆ ಜಿಲ್ಲೆಗಳ ರೈತರಿಗೆ ಈಗಾಗಲೇ ಪರಿಹಾರ ವಿತರಣೆ ಆಗುತ್ತಿದೆ. ಆದರೆ ಪಶು ಸಂಗೋಪನ ಇಲಾಖೆ ಸಚಿವರ ತವರು ಜಿಲ್ಲೆಯ ರೈತರು ಪರಿಹಾರಕ್ಕಾಗಿ ಕಾದು ಕೂರುವಂತಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಸಾವನ್ನಪ್ಪಿರುವ ಜಾನುವಾರುಗಳ ಮಾಹಿತಿಯನ್ನು ಇಲಾಖೆಗೆ ಕಳುಹಿಸಿ ಒಂದು ತಿಂಗಳು ಕಳೆದಿದೆ. ಆದರೆ ಇಲಾಖೆಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ರೈತರಿಗೆ ಪರಿಹಾರ ಬಿಡುಗಡೆ ಮಾಡಲಾಗಿಲ್ಲ. ಇತರ ಕೆಲವು ಜಿಲ್ಲೆಗಳ ರೈತರು ಕಳೆದ ತಿಂಗಳಿಂದಲೇ ಪರಿಹಾರದ ಹಣ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಿಂದ ಇದುವರೆಗೆ 474 ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿವೆ. ಸಾವನ್ನಪ್ಪಿದ ಜಾನುವಾರುಗಳ ಮಾಹಿತಿ ಪಟ್ಟಿಗೆ ತಾಲ್ಲೂಕು ಸಮಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದು, ಇದರಲ್ಲಿ ನವೆಂಬರ್‌ ಅಂತ್ಯದವರೆಗೆ ಸಾವನ್ನಪ್ಪಿದ 385 ಜಾನುವಾರುಗಳ ಮಾಹಿತಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಆದರೆ ಪರಿಹಾರ ಯಾವಾಗ ಬರುತ್ತದೆ ಎಂಬ ಮಾಹಿತಿ ಪಶು ಇಲಾಖೆಯ ಅಧಿಕಾರಿಗಳಿಗೂ ಇಲ್ಲ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಲುಬಾಯಿ ಜ್ವರ ಹೆಚ್ಚುತ್ತಿದೆ. ಪ್ರತಿ ನಿತ್ಯ ಜಾನುವಾರುಗಳು ಸಾವನ್ನಪ್ಪುತ್ತಿವೆ. ಇದುವರೆಗೆ 646 ಹಳ್ಳಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, 3240 ಜಾನುವಾರುಗಳಿಗೆ ಕಾಲು­ಬಾಯಿ ಜ್ವರ ತಗುಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಜ್ವರ ತಗುಲಿದ 6ನೇ ಜಿಲ್ಲೆ ತುಮಕೂರು ಎಂದು ಪರಿಗಣಿಸಲಾಗಿದೆ.

ಆದರೆ ಸದ್ಯಕ್ಕೆ ಕಾಲುಬಾಯಿ ಜ್ವರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪ್ರತಿ ನಿತ್ಯ 5– 6 ಹಳ್ಳಿಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಔಷಧಿ ನೀಡಿ ನಿಗಾವಹಿಸದಿದ್ದಲ್ಲಿ ಒಂದೆರಡು ದಿನದಲ್ಲಿ ಉಲ್ಬಾಣವಸ್ಥೆಗೆ ತಲುಪುತ್ತದೆ ಎಂದು ಪಶು ವೈದ್ಯರೊಬ್ಬರು ತಿಳಿಸಿದ್ದಾರೆ.

ಪರಿಹಾರ ಎಷ್ಟು?: ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುವಿಗೆ ₨ 25 ಸಾವಿರ, ಕೃಷಿ ಎತ್ತುಗಳಿಗೆ ರೂ. 20 ಮತ್ತು ಕರುವಿಗೆ ₨ 10 ಸಾವಿರ ಪರಿಹಾರ ನೀಡ­ಲಾಗುತ್ತದೆ.

ಔಷಧಿ ಕೊರತೆ ಇಲ್ಲ: ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಹೆಚ್ಚಳವಾಗುತ್ತಿದೆ. ಆದರೆ ಜಾನುವಾರುಗಳಿಗೆ ಔಷಧಿ ಕೊರತೆ ಇಲ್ಲ. ಅಗತ್ಯ ಔಷಧಿಯನ್ನು ಖರೀದಿಸಿ ಶೇಖರಿಸಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ಎಲ್ಲ ಗ್ರಾಮಗಳ ಜಾನುವಾರುಗಳಿಗೆ ಔಷಧಿ ವಿತರಣೆ ಮಾಡಲಾಗಿದೆ ಎಂದು ಪಶು ವೈದ್ಯಕೀಯ ಉಪ ನಿರ್ದೇಶಕ ಡಾ.ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪಶು ಇಲಾಖೆಯಿಂದ ನೇರವಾಗಿ ಖರೀದಿಸಿದ ಔಷಧಿಯನ್ನು ಜಿಲ್ಲೆಗಳಿಗೆ ನೀಡಿದ್ದಾರೆ. ಅಲ್ಲದೆ ಕಾಲು ಬಾಯಿ ಜ್ವರದ ಔಷಧಿ ಖರೀದಿಗೆ ಜಿಲ್ಲಾ ಪಂಚಾಯಿತಿ ರೂ. 10 ಲಕ್ಷ, ಜಿಲ್ಲಾಡಳಿತ ರೂ. 20 ಲಕ್ಷ ನೀಡಿದೆ. ಹೀಗಾಗಿ ಔಷಧಿ ಕೊರತೆ ಇಲ್ಲ. ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಸಾಕಷ್ಟು ಔಷಧಿ ನೀಡಲಾಗಿದೆ ಎಂದು ಅವರು ಹೇಳಿದರು.

ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಪಶು ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆ ಇದೆ. ಮಂಜೂರಾಗಿರುವ 144 ಪಶು ವೈದ್ಯರಿಗೆ 123 ವೈದ್ಯರಿದ್ದಾರೆ. ಪಶು ಸಹಾಯಕರು 118ಕ್ಕೆ 26 ಇದ್ದಾರೆ. ಹಿರಿಯ ಪರೀಕ್ಷಕರು 84ಕ್ಕೆ 75, ಪರೀಕ್ಷಕರು 133ಕ್ಕೆ 116 ಮತ್ತು ಡಿ ದರ್ಜೆ ನೌಕರರು 344 ಮಂದಿಗೆ ಕೇವಲ 213 ಮಂದಿ ಇದ್ದಾರೆ.

ರಾಜ್ಯದ ಎಲ್ಲೆಡೆ ಪಶು ವೈದ್ಯರ ಕೊರತೆ ಇದೆ. 327 ಪಶು ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಸಮಸ್ಯೆ ಬಗೆಹರಿಯಬಹುದು. ಆದರೆ ಪಶು ವೈದ್ಯ ಸಹಾಯಕರು ಮತ್ತು ಡಿ ದರ್ಜೆ ನೌಕರರ ಕೊರತೆ ಸಮಸ್ಯೆಯಾಗಿದೆ. ಆದರೂ ಇರುವ ಸಿಬ್ಬಂದಿಯಲ್ಲಿಯೇ ಸಮಸ್ಯೆಯನ್ನು ನಿರ್ವಹಿಸುತ್ತಿದ್ದೇವೆ ಎಂದು ಡಾ.ಪರಮೇಶ್ವ­ರಪ್ಪ ತಿಳಿಸಿದರು.

ಮುಖ್ಯಾಂಶಗಳು
*ಜಿಲ್ಲೆಯ 646 ಗ್ರಾಮಗಳಲ್ಲಿ ಕಾಣಿಸಿದ ರೋಗ
*3240 ರಾಸುಗಳಿಗೆ  ಕಾಲುಬಾಯಿ ಜ್ವರ
*ಸಾವನ್ನಪ್ಪಿದ ಜಾನುವಾರುಗಳು 474
*30 ಲಕ್ಷ ಮೌಲ್ಯದ ಔಷಧಿ ಖರೀದಿ
*ಪಶು ವೈದ್ಯರು, ಸಹಾಯಕ ಸಿಬ್ಬಂದಿ  
  ಕೊರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT