ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಜ್ಜು

ಬಂಡೀಪುರ: 2,100 ಕಿ.ಮೀ ಉದ್ದದ `ಬೆಂಕಿ ರೇಖೆ' ನಿರ್ಮಾಣ
Last Updated 1 ಫೆಬ್ರುವರಿ 2013, 10:00 IST
ಅಕ್ಷರ ಗಾತ್ರ

ಚಾಮರಾಜನಗರ: ಕುಡಿಯುವ ನೀರಿಗಾಗಿ ಅಂಡಲೆ ಯುತ್ತಿರುವ ಜಿಂಕೆಗಳು. ನೀರು ಹುಡುಕಿಕೊಂಡು ಹೊರಟ ಆನೆಗಳು. ಅಮ್ಮನ ಪಕ್ಕದಲ್ಲಿ ತೊನೆಯುತ್ತ ಮೆಲ್ಲನೆ ಹೆಜ್ಜೆ ಇಡುತ್ತಿರುವ ಕಾಡಾನೆ ಮರಿ. ಕಾಡೆಮ್ಮೆಗಳದ್ದೂ ದಾಹ ತೀರಿಸಿಕೊಳ್ಳಲು ಅಲೆದಾಟ. ಒಣಗಿ ನಿಂತಿರುವ ಮರಗಿಡಗಳು. ಕಾಳ್ಗಿಚ್ಚು ಹರಡದಂತೆ ಮುಂಜಾಗ್ರತಾ ಕ್ರಮದಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿ.

-ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದರೆ ಈ ದೃಶ್ಯಗಳು ಕಾಣಸಿಗುತ್ತವೆ. ಕಳೆದ ವರ್ಷದ ಬೇಸಿಗೆಯಲ್ಲಿ ಬಂಡೀಪುರದ ಕೆಲವೆಡೆ ಕಾಳ್ಗಿಚ್ಚು ಕಾಣಸಿಕೊಂಡು ಅಪಾರ ಪ್ರಮಾಣದ ವನಸಂಪತ್ತು ನಾಶವಾಗಿತ್ತು. ವನ್ಯಜೀವಿಗಳು ಸಂಕಷ್ಟ ಅನುಭವಿಸಿದ್ದವು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಕಾಳ್ಗಿಚ್ಚು ತಡೆಯುವ ಸಂಬಂಧ ಅರಣ್ಯ ಇಲಾಖೆಯಿಂದ ಈಗ ಸಿದ್ಧತೆ ನಡೆಯುತ್ತಿದೆ.

ಕಾಡಿನ ಬೆಂಕಿ ಒಂದು ನೈಸರ್ಗಿಕ ಪ್ರಕ್ರಿಯೆ. ಅರಣ್ಯದಲ್ಲಿ ಬಿದಿರು ಒಂದಕ್ಕೊಂದು ಉಜ್ಜುವಿಕೆ ಯಿಂದ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಮನುಷ್ಯನ ಹುಚ್ಚಾಟದಿಂದಲೂ ಅರಣ್ಯಕ್ಕೆ ಬೆಂಕಿ ಬೀಳುತ್ತದೆ.

ಅಜಾಗರೂಕ ಪ್ರವಾಸಿ ಗರು ಅನಾಹುತ ಸೃಷ್ಟಿಸುತ್ತಾರೆ. ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಿಸುವ ಮಂದಿಯೂ ಉದ್ದೇಶ ಪೂರ್ವಕವಾಗಿ ಬೆಂಕಿಹಚ್ಚುವ ಸಾಧ್ಯತೆ ಇದೆ. ಕಾಡಿ ನೊಳಗೆ ಜಾನುವಾರು ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಕೆಲವು ಕಿಡಿಗೇಡಿಗಳು ಅರಣ್ಯ ಇಲಾಖೆ ಸಿಬ್ಬಂದಿ ಮೇಲಿನ ಕೋಪಕ್ಕೆ ಕಾಡಿಗೆ ಬೆಂಕಿ ಹಚ್ಚಿರುವ ನಿದರ್ಶನವೂ ಇದೆ. ಹೀಗಾಗಿ, ಅನಾಹುತ ಸೃಷ್ಟಿಸುವ ಎಲ್ಲ ಕಾರಣಗಳಿಗೂ ಮಾರ್ಗೋಪಾಯ ಹುಡುಕಿ ಕೊಂಡು  ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಮುಂದಾಗಿದೆ.

ಪ್ರಸ್ತುತ ಬೇಸಿಗೆಯ ಪ್ರಖರತೆ ಹೆಚ್ಚುತ್ತಿದೆ. ಈಗಾಗಲೇ, ಬಂಡೀಪುರ ಉದ್ಯಾನದಲ್ಲಿ `ಬೆಂಕಿ ರೇಖೆ' ನಿರ್ಮಿಸುವ ಕಾರ್ಯವೂ ಪೂರ್ಣಗೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಳ್ಗಿಚ್ಚು ಹರಡದಂತೆ ತಡೆಯಲು ನಿಗಾವಹಿಸಿದ್ದಾರೆ. ಅರಣ್ಯ ಪ್ರದೇಶದ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ.

ಬಂಡೀಪುರ ಉದ್ಯಾನದಲ್ಲಿ ಒಟ್ಟು 2,100 ಕಿ.ಮೀ. ಉದ್ದದ `ಬೆಂಕಿ ರೇಖೆ' ನಿರ್ಮಿಸಲಾಗಿದೆ. ಸುಮಾರು 380 ಕಾಯಂ ಸಿಬ್ಬಂದಿ ಇದ್ದಾರೆ. ಇವರೊಂದಿಗೆ ದಿನಗೂಲಿ ಆಧಾರದ ಮೇಲೆ ಹೆಚ್ಚುವರಿಯಾಗಿ 350 ಮಂದಿ ಬೆಂಕಿ ಪಹರೆಗಾರರನ್ನು ನೇಮಿಸಿಕೊಳ್ಳ ಲಾಗಿದೆ. ನಿಗದಿತ ಸ್ಥಳಗಳಲ್ಲಿ ಅವರು ನಿತ್ಯವೂ ಗಸ್ತು ನಡೆಸಲಿದ್ದಾರೆ.

`ಈಗಾಗಲೇ, ಬೆಂಕಿ ರೇಖೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉದ್ಯಾನದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೂ ತಹಬಂದಿಗೆ ತರಲು ಸಜ್ಜಾಗಿದ್ದೇವೆ. ಉದ್ಯಾನದಲ್ಲಿ ಕಾಳ್ಗಿಚ್ಚು ತಡೆಯುವ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಫೆ. 5 ಮತ್ತು 6ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಆಗಮಿಸಲಿದ್ದಾರೆ. ಅವರ ಮಾರ್ಗದರ್ಶನದ ನಂತರ ಮತ್ತಷ್ಟು ಸುರಕ್ಷತಾ ಕ್ರಮಕೈಗೊಳ್ಳಲಾಗುವುದು' ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಚ್.ಸಿ. ಕಾಂತರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಏನಿದು ಬೆಂಕಿ ರೇಖೆ?
ಬೇಸಿಗೆ ಪರಿಣಾಮ ಮರಗಳ ಎಲೆಗಳು ಉದುರುವುದು ಸಾಮಾನ್ಯ. ಕಾಡಿನ ನೆಲ ತರಗೆಲೆಗಳ ಹಾಸಿನಿಂದ ಸಂಪೂರ್ಣ ಮುಚ್ಚಿಕೊಂಡಿರುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ನಿತ್ಯವೂ ಗಸ್ತಿಗೆ ತೆರಳುವ ಹಾಗೂ ಪ್ರವಾಸಿಗರನ್ನು ಕರೆದೊಯ್ಯುವ ಕಾಡಿನ ರಸ್ತೆಬದಿ ಈ ದೃಶ್ಯ ಸಾಮಾನ್ಯವಾಗಿ ಕಾಣಸಿಗುತ್ತದೆ. ರಸ್ತೆಬದಿ ಬೆಂಕಿ ಕಾಣಿಸಿಕೊಂಡರೆ ಇಡೀ ಅರಣ್ಯಕ್ಕೆ ವ್ಯಾಪಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಕಾಡಿನ ರಸ್ತೆಯ ಎರಡು ಬದಿಯಲ್ಲಿರುವ ಲಂಟಾನ ಸೇರಿದಂತೆ ಇತರೇ ಪೊದೆ ಸಸ್ಯಗಳನ್ನು ಸಿಬ್ಬಂದಿ ಕತ್ತರಿಸುತ್ತಾರೆ. ಅವುಗಳು ಒಣಗಿದ ನಂತರ ಬೆಂಕಿ ಹಾಕಿ ಸುಡುತ್ತಾರೆ. ಈ ಮೊದಲೇ ಇಲಾಖೆಯಿಂದ ನಿಗದಿಪಡಿಸಿರುವ ರಸ್ತೆಬದಿ ಬಿದ್ದಿರುವ ಒಣಗಿರುವ ವಸ್ತುಗಳು, ತರಗೆಲೆಗಳನ್ನು ಸುಟ್ಟುಹಾಕುತ್ತಾರೆ. ಇದಕ್ಕೆ `ಬೆಂಕಿ ರೇಖೆ' ಎನ್ನುತ್ತಾರೆ.

ಕ್ಷಿಪ್ರಗತಿಯ ಈ ನೆಲಮಟ್ಟದ ಬೆಂಕಿ ಉಂಟು ಮಾಡುವ ನಷ್ಟ ಊಹಿಸಲು ಕಷ್ಟಸಾಧ್ಯ. ಇದರಿಂದ ಅರಣ್ಯದ ಪುನರುತ್ಪತ್ತಿಗೂ ಧಕ್ಕೆ ಹೆಚ್ಚು. ಈ ಹಿನ್ನೆಲೆಯಲ್ಲಿ ಕಾಳ್ಗಿಚ್ಚು ತಡೆಯಲು ಮುಂಜಾಗ್ರತೆಯಾಗಿ ಬೆಂಕಿ ರೇಖೆ ನಿರ್ಮಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT