ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಕೇಂದ್ರದ ತಾರತಮ್ಯ ನೀತಿ ಖಂಡನೆ

Last Updated 1 ಅಕ್ಟೋಬರ್ 2012, 19:15 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕನ್ನಡ ಒಕ್ಕೂಟದ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಒಕ್ಕೂಟದ ಸಂಚಾಲಕ ವಾಟಾಳ್ ನಾಗರಾಜ್ ಮಾತನಾಡಿ, `ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಹಿಂದಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕಾವೇರಿ ನೀರಾವರಿ ಪ್ರದೇಶಗಳಲ್ಲಿ ಬರಗಾಲ ಎದುರಾಗಿದೆ.

ಆದರೆ, ಇಂತಹ ಸ್ಥಿತಿಯಲ್ಲಿಯೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದು ರಾಜ್ಯಕ್ಕೆ ಮಾಡಿದ ಅನ್ಯಾಯ~ ಎಂದು ಆರೋಪಿಸಿದರು.

`ರಾಜ್ಯದ ಪರಿಸ್ಥಿತಿಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸದೇ ತಮಿಳುನಾಡಿಗೆ ನೀರು ಹರಿಸಲು ಕೇಂದ್ರ ಸರ್ಕಾರ ಉತ್ಸಾಹ ತೋರುತ್ತಿದೆ. ರಾಜ್ಯದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಿಂದ ಚುನಾಯಿತರಾಗಿರುವ ಕೇಂದ್ರದ ಸಚಿವರು ರಾಜ್ಯದ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ~ ಎಂದು ಅವರು ಕಿಡಿಕಾರಿದರು.

`ಕೃಷ್ಣರಾಜ ಸಾಗರದಲ್ಲಿ ಈಗಾಗಲೇ ನೀರಿನ ಮಟ್ಟ ಕಡಿಮೆ ಇದ್ದು, ಈಗ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಮುಂದೆ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ~ ಎಂದು ಅವರು ತಿಳಿಸಿದರು.

`ಎಲ್ಲ ರಾಜ್ಯಗಳನ್ನು ಸಮನಾಗಿ ಪರಿಗಣಿಸಿ, ಜನಪರವಾಗಿ ವರ್ತಿಸಬೇಕಿದ್ದ ಕೇಂದ್ರ ಸರ್ಕಾರ ತಮಿಳುನಾಡಿನ ಪರವಾಗಿ ವರ್ತಿಸುತ್ತಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಜನತೆಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲಿದೆ. ಹೀಗಾಗಿ ನಗರದ ಜನತೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು~ ಎಂದು ಅವರು ಕರೆನೀಡಿದರು.

ಮೈಸೂರು ಬ್ಯಾಂಕ್‌ವೃತ್ತದಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ಮೆರವಣಿಗೆಯಲ್ಲಿ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಮಹಾರಾಣಿ ಜಂಕ್ಷನ್ ಬಳಿ ತಡೆದರು. ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನಂತರ ಬಿಡುಗಡೆಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT