ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಸಂವಿಧಾನ ಪೀಠ ರಚಿಸಲು ದೇವೇಗೌಡ ಆಗ್ರಹ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯ ಮಂಡಳಿಯ 2007ರ ಐತೀರ್ಪು ಆಧರಿಸಿ ಅಧಿಸೂಚನೆ ಹೊರಡಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ತೀರ್ಪು ಅಧಿಸೂಚನೆಯಾಗಿ ಹೊರ ಬೀಳುವುದಕ್ಕೆ ಪ್ರಧಾನಿ ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಅಣೆಕಟ್ಟೆ ವೀಕ್ಷಿಸಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯ ಮಂಡಳಿಯ ತೀರ್ಪನ್ನು ಕೇರಳ, ಪುದುಚೇರಿ ಮತ್ತು ಕರ್ನಾಟಕ ರಾಜ್ಯಗಳು ಒಪ್ಪದೇ ಇರುವುದರಿಂದ ವಿವಾದ ಇತ್ಯರ್ಥಕ್ಕೆ ಸಂವಿಧಾನ ಪೀಠ ಸ್ಥಾಪಿಸಬೇಕು. ನಾಲ್ಕೂ ರಾಜ್ಯಗಳು ವಿಸ್ತ್ರೃತ ವಾದ ಮಂಡಿಸಲು ಅವಕಾಶ ನೀಡಬೇಕು. ಆ ಪೀಠ ತೀರ್ಮಾನ ಕೊಡುವವರೆಗೆ ಅಧಿಸೂಚನೆ ಹೊರಡಿಸಬಾರದು ಎಂದು ಒತ್ತಾಯಿಸಿದರು.

ನ್ಯಾಯಮಂಡಳಿಯ ಐತೀರ್ಪು ಅಧಿಸೂಚನೆಯಾಗಿ ಹೊರ ಬಿದ್ದರೆ ರಾಜ್ಯದ ರೈತರಿಗೆ ಘೋರ ಅನ್ಯಾಯವಾಗುತ್ತದೆ. ವರ್ಷಕ್ಕೆ ಒಂದು ಬೆಳೆ ಬೆಳೆಯುವುದೂ ಕಷ್ಟವಾಗುತ್ತದೆ. ನ್ಯಾಯ ಮಂಡಳಿಯ ತೀರ್ಪು ತಮಿಳುನಾಡಿನ ಪರವಾಗಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ತಮಿಳುನಾಡಿನ ಒತ್ತಡಕ್ಕೆ ಮಣಿದು ಒಪ್ಪಿತವಲ್ಲದ ಅಧಿಸೂಚನೆ ಹೊರಡಿಸುವುದು ಸರಿಯಲ್ಲ. ಕೃಷ್ಣಾ ನ್ಯಾಯ ಮಂಡಳಿ  ವಿಷಯದಲ್ಲಿ ಮರು ಪರಿಶೀಲನಾ ಅರ್ಜಿ ಹಾಕಲು ಅವಕಾಶ ಇತ್ತು. ಕಾವೇರಿ ವಿಷಯದಲ್ಲಿ ಅದಕ್ಕೆ ಅವಕಾಶವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ತಿಂಗಳಾಂತ್ಯಕ್ಕೆ ಐತೀರ್ಪುನ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ನೀಡಬಾರದು. ರಾಜ್ಯ ಸರ್ಕಾರ ನೀರಾವರಿ ನಿಗಮದ ಅಧಿಕಾರಿಗಳಿಂದ ರಾಜ್ಯದ ಕಾವೇರಿ ಕಣಿವೆ ಜಲಾಶಯಗಳ ನೀರಿನ ಮಟ್ಟ, ಬೆಳೆದು ನಿಂತಿರುವ ಬೆಳೆ ಹಾಗೂ ಕುಡಿಯಲು ಬೇಕಿರುವ ನೀರಿನ ಅಗತ್ಯ ಬಗ್ಗೆ ವಸ್ತುನಿಷ್ಠ ವರದಿ ತರಿಸಿಕೊಳ್ಳಬೇಕು. ತ್ವರಿತವಾಗಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ವಾಸ್ತವ ಸಂಗತಿ ಮನವರಿಕೆ ಮಾಡಿಕೊಡಬೇಕು. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಮಧ್ಯೆ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸಬೇಕು. ಕೇಂದ್ರ ಸರ್ಕಾರವೇ ಅಣೆಕಟ್ಟೆ ಕಟ್ಟಬೇಕು. ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಅಗತ್ಯ ಬಿದ್ದಾಗ ಬಳಸಿಕೊಳ್ಳುವಂತಾದರೆ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT