ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್ ಬಿಕ್ಕಟ್ಟು

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಐಷಾರಾಮಿ ವಿಮಾನಯಾನ ಸಂಸ್ಥೆ `ಕಿಂಗ್‌ಫಿಷರ್ ಏರ್‌ಲೈನ್ಸ್~ ಬಿಕ್ಕಟ್ಟು ಮತ್ತೆ ತೀವ್ರವಾಗಿದೆ. ಸಂಸ್ಥೆಯಲ್ಲಿರುವ 64 ವಿಮಾನಗಳ ಪೈಕಿ ಸದ್ಯ 16 ವಿಮಾನಗಳು ಮಾತ್ರ ಆಗಸದಲ್ಲಿ ಹಾರುತ್ತಿವೆ.

ಕಿಂಗ್‌ಫಿಷರ್ ವಿಮಾನಗಳ ಚಾಲಕರು ಸಾಲುಸಾಲಾಗಿ ರಾಜೀನಾಮೆ ನೀಡುವುದೂ ಮುಂದುವರಿದಿದೆ. ಕಳೆದ ಅಕ್ಟೋಬರ್‌ನಿಂದ ರಾಜೀನಾಮೆ ನೀಡಿರುವ ಚಾಲಕರ ಸಂಖ್ಯೆ 80ಕ್ಕೆ ಏರಿದೆ. ವಿಮಾನ ಸಂಚಾರಗಳ ಮನಸೋಇಚ್ಛೆ ರದ್ದತಿಗಳಿಂದ ತೀವ್ರ ತೊಂದರೆಗೆ ಒಳಗಾಗಿರುವವರು ಪ್ರಯಾಣಿಕರು.
 
ರಾಷ್ಟ್ರದ ಅನೇಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಐಷಾರಾಮಿ, ಅದ್ಧೂರಿ ವಿಮಾನಯಾನ ಎಂದೆಲ್ಲಾ ಹೆಸರು ಪಡೆದ ಕಿಂಗ್‌ಫಿಷರ್ ವಿಮಾನಗಳ ಈ ಸ್ಥಿತಿ ಶೋಚನೀಯ. ಈ ಮಟ್ಟಿನ ತೀವ್ರತರ ಬಿಕ್ಕಟ್ಟಿಗೆ ವಿವರಣೆಗಳನ್ನು ನೀಡಬೇಕೆಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಕಿಂಗ್‌ಫಿಷರ್ ಸಂಸ್ಥೆಗೆ ಸಮನ್ಸ್ ನೀಡಿರುವುದು ಸಹಜವಾದದ್ದೇ.
 
ಪ್ರಯಾಣಿಕರಿಗಾದ ತೊಂದರೆಗಳಿಗೆ ಕಿಂಗ್‌ಫಿಷರ್ ಮುಖ್ಯಸ್ಥ ವಿಜಯ್ ಮಲ್ಯ ಅವರೇನೊ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ, ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದೂ ಈ ಸಂಚಾರ ವ್ಯತ್ಯಯಗಳಿಗೆ ಕಾರಣ ಎಂದು ತೆರಿಗೆ ಇಲಾಖೆಯನ್ನೂ ಅವರು ದೂಷಿಸಿದ್ದಾರೆ.

ತೆರಿಗೆ ಬಾಕಿ ನೀಡದಿರುವುದಕ್ಕೆ ಈ ಕಠಿಣ ಕ್ರಮ, ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದು ಕಿಂಗ್‌ಫಿಷರ್ ಆರೋಪಿಸಿರುವುದು ತಮಾಷೆಯಾಗಿದೆ.

ವಾಸ್ತವವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು ಕಿಂಗ್‌ಫಿಷರ್ ಆಡಳಿತವರ್ಗ. ವಿಮಾನಯಾನ ಉದ್ಯಮ ಆರಂಭಕ್ಕೆ ಅಗತ್ಯವಾಗಿದ್ದ ಪೂರ್ವಸಿದ್ಧತೆ, ಪರಿಶ್ರಮ ಅಥವಾ ಸಮರ್ಪಕ ಯೋಜನೆಗಳಲ್ಲಿ ಸಂಸ್ಥೆ ಎಡವಿರುವುದರ ಫಲವೇ ಈಗಿನ ಸ್ಥಿತಿ ಎಂಬುದು ಸ್ಪಷ್ಟ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಒಟ್ಟು 18 ಬ್ಯಾಂಕುಗಳಿಗೆ ಕಿಂಗ್‌ಫಿಷರ್ ಏರ್‌ಲೈನ್ಸ್  ರೂ 7,057.08 ಕೋಟಿ ಬಾಕಿ ನೀಡಬೇಕಿದೆ. ಯಾವುದೇ ರೀತಿಯ ಸಂಕಷ್ಟ ಪರಿಹಾರ ಪ್ಯಾಕೇಜ್ ನೀಡುವುದು ಸಾಧ್ಯವಿಲ್ಲ ಎಂಬುದನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ, ವಿಮಾನ ಯಾನ ಸಂಸ್ಥೆಯ ಸಾಲ ಸ್ವರೂಪವನ್ನು ಪುನರ್‌ರಚನೆ ಮಾಡಿ, ಸಾಲದ ಮೇಲಿನ ಬಡ್ಡಿದರ ಇಳಿಕೆ ಸೇರಿದಂತೆ ಹಲವು ಕ್ರಮಗಳನ್ನು ಬ್ಯಾಂಕ್‌ಗಳು ಕೈಗೊಂಡಿದ್ದವು.

ಏರ್‌ಲೈನ್ಸ್‌ನ ಉಳಿವಿಗೆ ತಮ್ಮ  ವಿದೇಶಿ ಮದ್ಯದ ಆಸ್ತಿ ಬಳಸುವುದಿಲ್ಲ ಎಂದು ಶತಕೋಟ್ಯಧಿಪತಿ ವಿಜಯ್ ಮಲ್ಯ ಅವರ ಯೂಬಿ ಗ್ರೂಪ್ ಸಹ ಸ್ಪಷ್ಟ ಪಡಿಸಿದೆ. ಕಿಂಗ್‌ಫಿಷರ್‌ನಲ್ಲಿ ತಮ್ಮದೇ ಹಣ ಹೂಡಲು ವಿಜಯ್‌ಮಲ್ಯ ಬಯಸುವುದಿಲ್ಲ.

ಬದಲಿಗೆ ಮಾರುಕಟ್ಟೆಯಿಂದಲೇ ಹಣ ಎತ್ತಲು ಅವರು ಬಯಸುತ್ತಾರೆ ಎಂಬ ಭಾವನೆಯನ್ನು ಅನೇಕ ಮಂದಿ ವ್ಯಕ್ತಪಡಿಸಿದ್ದಾರೆ.

ಇದಕ್ಕಾಗಿಯೇ ಭಾರತೀಯ ವಿಮಾನ ಯಾನ ಸಂಸ್ಥೆಗಳನ್ನು ಖರೀದಿಸಲು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ಇರಬೇಕೆಂದು ಕಿಂಗ್‌ಫಿಷರ್ ಸಾಕಷ್ಟು ಲಾಬಿ ನಡೆಸುತ್ತಿದೆ. ಮುಕ್ತ ಅರ್ಥ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹ ವಾಣಿಜ್ಯ ಯೋಜನೆ ರೂಪಿಸಬೇಕಾದುದೂ ಅಗತ್ಯ ಎಂಬುದಕ್ಕೆ ಈ ವಿದ್ಯಮಾನ ಒಂದು ಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT