ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆ ನಟಿ ಹೇಮಶ್ರೀ ಸಾವಿನ ಪ್ರಕರಣ:ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗೊಂದಲ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಿರುತೆರೆ ನಟಿ ಹೇಮಶ್ರೀ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಶುಕ್ರವಾರ ಪೊಲೀಸರ ಕೈಸೇರಿದೆ. ಆದರೆ, ವರದಿ ಗೊಂದಲದಿಂದ ಕೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆಯ ಎರಡು ಪುಟಗಳ ಪ್ರಾಥಮಿಕ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೆಬ್ಬಾಳ ಪೊಲೀಸರಿಗೆ ನೀಡಿದರು. `ಹೇಮಶ್ರೀ ಸಾವು ಅನುಮಾನಾಸ್ಪದ ಎಂದೇ ವೈದ್ಯರು ವರದಿಯಲ್ಲಿ ನಮೂದಿಸಿದ್ದಾರೆ. ವರದಿಯ ಮೊದಲ ಪುಟದಲ್ಲಿ ಫಲಿತಾಂಶ ನಿರಿಕ್ಷೀಸಲಾಗುತ್ತಿದೆ ಎಂದು ಬರೆದಿದ್ದಾರೆ.

ಹೇಮಶ್ರೀ ಮುಖ, ತುಟಿ ಹಾಗೂ ತಲೆಯ ಮೇಲೆ ಗಾಯದ ಗುರುತುಗಳಿವೆ. ಆಕೆ ಹೃದಯಾಘಾತದಿಂದ ಸಾವನ್ನಪ್ಪಿಲ್ಲ. ಉಸಿರುಗಟ್ಟಿಸಿ ಆಕೆಯನ್ನು ಸಾಯಿಸಿರುವ ಸಾಧ್ಯತೆ ತೀರಾ ಕಡಿಮೆ. ಕಾರಣ, ಉಸಿರುಗಟ್ಟಿಸಿದ್ದರೇ ಶ್ವಾಸನಾಳಕ್ಕೆ ತೊಂದರೆಯಾಗುತ್ತಿತ್ತು. ಆದರೆ, ಶ್ವಾಸನಾಳಕ್ಕೆ ಯಾವುದೇ ಹಾನಿಯಾಗಿಲ್ಲ~ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.

`ಪೊಲೀಸರ ಕೈಸೇರಿರುವ ಮರಣೋತ್ತರ ಪರೀಕ್ಷೆ ವರದಿ ಅಂತಿಮವಲ್ಲ. ದೇಹದಲ್ಲಿ ಸಿಕ್ಕ ಕಪ್ಪು ಬಣ್ಣದ ದ್ರಾವಣದ ಬಗ್ಗೆ ಮತ್ತಷ್ಟು ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗುವುದು. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ತಜ್ಞರ ಅಂತಿಮ ವರದಿಗಾಗಿ ಒಂದು ವಾರ ಕಾಯಬೇಕು~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ಧ್ವನಿ ಮುದ್ರಿಕೆ ಜಪ್ತಿಗೆ ಕ್ರಮ: `ಹೇಮಶ್ರೀ ತನ್ನ ಸ್ನೇಹಿತೆಯೊಂದಿಗೆ ಕೊನೆಯ ಬಾರಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆ ಮಾಧ್ಯಮಗಳಿಗೆ ಲಭ್ಯವಾಗಿದೆ. ಆದರೆ, ಹೇಮಶ್ರೀ ಯಾರಿಗೆ ಕರೆ ಮಾಡಿದ್ದರು, ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಂಡವರು ಯಾರು ಎಂಬುದು ಗೊತ್ತಿಲ್ಲ. ಅದರಲ್ಲಿರುವ ಮಾಹಿತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಪರಿಶೀಲಿಸಬೇಕು. ಹೀಗಾಗಿ ಆ ಧ್ವನಿ ಮುದ್ರಿಕೆಯನ್ನು ಜಪ್ತಿ ಮಾಡಿ, ತನಿಖೆಗೆ ಬಳಸಿಕೊಳ್ಳಲಾಗುವುದು~ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಹೇಮಶ್ರೀ ಹೇಳಿದ್ದೇನು
`ಸುರೇಂದ್ರ ಬಾಬು ನನ್ನ ತಾಯಿಯನ್ನು ವಶೀಕರಣ ಮಾಡಿಕೊಂಡಿದ್ದಾನೆ. ಹೀಗಾಗಿ ಅಮ್ಮ ಆತನ ಪರವಾಗಿಯೇ ಮಾತನಾಡುತ್ತಾಳೆ. ನನ್ನನ್ನು ಕಂಡರೆ ಜಗಳಕ್ಕೆ ಬರುತ್ತಾಳೆ. ಸುರೇಂದ್ರ ನನ್ನನ್ನು ಅನುಭವಿಸಬೇಕು ಅಥವಾ ಸಾಯಿಸಬೇಕು ಎಂಬ ಸಂಚು ರೂಪಿಸಿದ್ದಾನೆ.

ಇದಕ್ಕಾಗಿ ಮೂರು ರೌಡಿಗಳನ್ನು ನನ್ನ ಹಿಂದೆ ಬಿಟ್ಟಿದ್ದಾನೆ ಎಂದು ಗೊತ್ತಾಗಿದೆ. ಇದರಿಂದ ತುಂಬಾ ನೋವಾಗಿದ್ದು, ನೇಣು ಹಾಕಿಕೊಂಡು ಸಾಯಬೇಕು ಎನಿಸುತ್ತಿದೆ~ ಎಂದು ಹೇಮಶ್ರೀ ದೂರವಾಣಿ ಮೂಲಕ ಅಳಲು ತೋಡಿಕೊಂಡಿದ್ದರು.

`ಈಗ ನನ್ನ ತಾಯಿಯೇ ನನಗೆ ವೇಶ್ಯೆ ಪಟ್ಟ ಕಟ್ಟಿದ್ದಾಳೆ. ವೇಶ್ಯಾವಾಟಿಕೆ ಮೂಲಕ ಸಂಪಾದನೆ ಮಾಡುತ್ತಿದ್ದೇನೆ ಎಂದು ಸಂಬಂಧಿಕರಿಗೆ ಕರೆ ಮಾಡಿ ಹೇಳುತ್ತಿದ್ದಾಳೆ. ಹೆತ್ತ ತಾಯಿಯೇ ಮಗಳನ್ನು ವೇಶ್ಯೆ ಎಂದು ಹೇಳಿಕೊಂಡು ಬರುತ್ತಿರುವುದರಿಂದ ಮನಸ್ಸಿಗೆ ಆಘಾತವಾಯಿತು. ಹೀಗಾಗಿ, ಮನೆ ಬಿಟ್ಟು ದೊಡ್ಡಮ್ಮನ ಮನೆಗೆ ಬಂದು ನೆಲೆಸಿದ್ದೇನೆ~ ಎಂದು ಹೇಳಿದ್ದರು.

`ಮನೆ ಬಿಟ್ಟು ಬಂದರೂ ತಾಯಿಯ ಕಾಟ ತಪ್ಪಿಲ್ಲ. ಅಮ್ಮ ಪ್ರತಿದಿನ ದೊಡ್ಡಮ್ಮನಿಗೆ ಕರೆ ಮಾಡಿ, ನನ್ನ ಮಗಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದೀಯ. ಇಷ್ಟು ದಿನ ನಮ್ಮ ಮನೆಗೆ ದುಡಿದಳು. ಈಗ ನಿಮ್ಮ ಮನೆಗೆ ದುಡಿಯುತ್ತಿದ್ದಾಳೆ ಎಂದು ನಿಂದಿಸಿದ್ದಾರೆ. ನನ್ನ ನಡವಳಿಕೆ ಬಗ್ಗೆ ಅಮ್ಮ ಯಾವತ್ತೂ ಹೀಗೆ ಮಾತನಾಡಿದವರಲ್ಲ.

ಸುರೇಂದ್ರ ಬಾಬು ನಮ್ಮ ಮನೆಯಲ್ಲೇ ಇದ್ದಾನೆ. ಆತನ ವಶೀಕರಣ ತಂತ್ರದಿಂದ ಅವಳು ಬದಲಾಗಿದ್ದಾಳೆ~ ಎಂದು ಹೇಮಶ್ರೀ ದೂರವಾಣಿ ಮೂಲಕ ವಿವರಿಸಿದ್ದಾರೆ. `ಸುರೇಂದ್ರ ಬಾಬು ದೊಡ್ಡ ಮೋಸಗಾರ. ಈಗಾಗಲೇ ಆತ ನಾಲ್ಕು ಮದುವೆಯಾಗಿದ್ದು, ಒಂಬತ್ತು ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ. ಮೊದಲ ಪತ್ನಿ ಹಳ್ಳಿಯವಳು. ಆಕೆಗೆ ಮೂವರು ಮಕ್ಕಳು.

ಮತ್ತೊಂದು ಮದುವೆಯಾಗುವ ದೃಷ್ಟಿಯಿಂದ ಪತ್ನಿ ಮಕ್ಕಳಿಗೆ ದುಡ್ಡು ಕೊಟ್ಟು ಮನೆಯಿಂದ ಹೊರ ಹಾಕಿದ್ದ. ಆ ಮಕ್ಕಳು ಕೂಲಿ ಕೆಲಸ ಮಾಡುತ್ತಿದ್ದಾರೆ. ಈತನೇ ತನ್ನ ಅಪ್ಪ ಎಂಬುದು ಅವರಿಗೆ ಗೊತ್ತಿಲ್ಲ. ಅವರು ತುಂಬಾ ಬಡತನದಿಂದ ಬದುಕುತ್ತಿದ್ದಾರೆ. ಈಗ ವೇಶ್ಯೆಯೊಬ್ಬಳನ್ನು ಮದುವೆಯಾಗಿದ್ದಾನೆ.

ನನ್ನ ಜೀವನವನ್ನು ಹಾಳು ಮಾಡಲು ಸಂಚು ರೂಪಿಸಿದ್ದಾನೆ~ ಎಂದು ಹೇಮಶ್ರೀ ತಿಳಿಸಿದ್ದಾರೆ. ಈ ಸಂಭಾಷಣೆಯ ಸತ್ಯಾಸತ್ಯತೆ ಬಗ್ಗೆ ತಿಳಿಯಲು ಅವರ ಕುಟುಂಬ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಮುಖ್ಯಾಂಶಗಳು
*ಪೊಲೀಸರ ಕೈಸೇರಿದ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ
* ಹೇಮಶ್ರೀ ಸ್ನೇಹಿತೆಯೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಬಹಿರಂಗ
* ಮಗಳನ್ನೇ ವೇಶ್ಯೆ ಎಂದಳು ತಾಯಿ: ಹೇಮಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT