ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯೇ ಹೆಚ್ಚು ಪ್ರೀತಿ...

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಕಿರುತೆರೆಯಲ್ಲಿ ಕಿರುಚಾಡುವ ಪಾತ್ರಗಳನ್ನು ನಿರ್ವಹಿಸುವ ಈ ನಟಿ ಬೆಳ್ಳಿತೆರೆಯಲ್ಲಿ ಸೌಮ್ಯ ಸ್ವಭಾವದ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.

ಇವರೇ ಚಂದ್ರಕಲಾ ಮೋಹನ್. ಬಿ.ರಾಮಮೂರ್ತಿ ನಿರ್ದೇಶನದ `ಋಣಾನುಬಂಧ~ ಸಿನಿಮಾದ ನಟನೆಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿರುವ ಚಂದ್ರಕಲಾ, ಕಿರುತೆರೆಯಿಂದಲೇ ಹೆಚ್ಚು ಜನಪ್ರಿಯರಾದವರು.

ಪ್ರಸ್ತುತ `ಕೃಷ್ಣರುಕ್ಮಿಣಿ~ ಧಾರಾವಾಹಿಯ ಗೌಡತಿ ಮತ್ತು `ಬೆಂಕಿಯಲ್ಲಿ ಅರಳಿನ ಹೂವು~ ಧಾರಾವಾಹಿಯ ಖಳನಾಯಕಿಯ ಪಾತ್ರಗಳಿಗೆ ಅವರು ಜೀವ ತುಂಬಿರುವ ಪರಿ ಅನನ್ಯ.

ಮಂಡ್ಯದ ಹೊಸಳ್ಳಿಯವರಾದ ಚಂದ್ರಕಲಾ ಮೋಹನ್, ಹತ್ತರ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ಚಿಕ್ಕಂದಿನಲ್ಲಿಯೇ ರಂಗಭೂಮಿಯಲ್ಲಿ ಸಕ್ರಿಯರಾದ ಅವರು `ಕುರುಕ್ಷೇತ್ರ~, `ದಕ್ಷಯಜ್ಞ~, `ಶ್ರೀಕೃಷ್ಣ ಸಂಧಾನ~, `ರತ್ನ ಮಾಂಗಲ್ಯ~, `ಬಸ್ ಕಂಡಕ್ಟರ್~, `ಸತಿ ಸಂಸಾರದ ಜ್ಯೋತಿ~, `ಗೌಡ್ರಗದ್ಲ~ ಹೀಗೆ ಸಾಕಷ್ಟು ನಾಟಕಗಳಲ್ಲಿ ನಟಿಸಿದರು. ಮದುವೆಯ ನಂತರವೂ ಬಣ್ಣದ ಬದುಕಿನಲ್ಲಿ ತೊಡಗಿಸಿಕೊಂಡ ಅವರಿಗೆ ದೂರದರ್ಶನದಲ್ಲಿ ಪ್ರಸಾರವಾದ `ಮರೀಚಿಕೆ~ ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶ ದೊರೆಯಿತು.

ನಂತರದಲ್ಲಿ `ಜೀವನ~, `ಕುಸುಮಾಂಜಲಿ~, `ರಂಗೋಲಿ~, `ಗೋಧೂಳಿ~, `ಎಸ್ಸೆಸ್ಸೆಲ್ಸಿ ನನ್ಮಕ್ಳು~ ಹೀಗೆ ಸಾಲು ಸಾಲು ಅವಕಾಶಗಳು ದೊರೆತವು. ಪಕ್ಕಾ ಮಂಡ್ಯ ಸೀಮೆಯವರಾದ ಅವರಿಗೆ `ಮೂಡಲಮನೆ~ಯಲ್ಲಿ ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ಕಲಿತು ಆಡುವುದು ಸವಾಲೇ ಆಗಿತ್ತು.
 
ಅದನ್ನು ಯಶಸ್ವಿಯಾಗಿ ನಿಭಾಯಿಸಿ ಇಂದಿಗೂ ಮೂಡಲಮನೆಯ ಶಾಂತಾ ಎಂದೇ ಪಾತ್ರದಿಂದ ಗುರುತಿಸಿಕೊಳ್ಳುವ ಚಂದ್ರಕಲಾ ತಾವು ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸಿದರು.

ಧಾರಾವಾಹಿ ಜೊತೆಜೊತೆಗೆ `ಭಕ್ತಶಂಕರ~, `ಆಂತರ್ಯ~, `ರಿಕ್ಷಾರಾಜ~, `ಮಿ.ಪುಡಾರಿ~, `ಸುಹಾಸಿನಿ~, `ನಾ ರಾಣಿ ನೀ ಮಹಾರಾಣಿ~, `ಭದ್ರ~, `ರಾಜಧಾನಿ~, `ಆಟ~, `ಅರ್ಥ~, `ಹುಂಜ~, `ಗೇಮ್ ಫಾರ್ ಲವ್~ ಹೀಗೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿರುವ ಮತ್ತು ನಟಿಸುತ್ತಿರುವ ಚಂದ್ರಕಲಾ ಅವರಿಗೆ ಕಿರುತೆರೆ ನೀಡಿರುವ ತೃಪ್ತಿ ಹೆಚ್ಚು ಎನಿಸಿದೆ.

ಬುಕ್ಕಾಪಟ್ನ ವಾಸು ಅವರ `ಗುರಿ~ ಟೆಲಿಫಿಲ್ಮ್‌ನಲ್ಲಿ ಕರಿಬಸವಯ್ಯ ಅವರೊಂದಿಗೆ ಹಳ್ಳಿ ಹೆಂಗಸಿನ ಪಾತ್ರದಲ್ಲಿ ಕಪ್ಪು ಮೇಕಪ್ ಹಾಕಿಕೊಂಡು ನಟಿಸಿದ್ದು ಮತ್ತು `ಮಾನಸ ವೀಣೆ~ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರ ಪತ್ನಿಯಾಗಿ 75 ವರ್ಷದ ಮುದುಕಿ ಪಾತ್ರದಲ್ಲಿ ನಟಿಸಿದ್ದು ಅವರು ಹೆಚ್ಚು ಇಷ್ಟಪಡುವ ಪಾತ್ರಗಳು.

ತಾವು ನಟಿ ಶ್ರುತಿ ಅವರ ಚಿಕ್ಕಮ್ಮ ಎಂದು ಹೇಳಿಕೊಳ್ಳಲು ಸಂಕೋಚಪಡುವ ಚಂದ್ರಕಲಾ, `ಕೃಷ್ಣ ರುಕ್ಮಿಣಿ~ಯಲ್ಲಿ ತಮಗೆ ಅವಕಾಶ ನೀಡಿದ ನಿರ್ದೇಶಕ ರವಿ.ಆರ್ ಗರಣಿ, ನಿರ್ಮಾಪಕ ಕುಮಾರಸ್ವಾಮಿ ಮತ್ತು `ಬೆಂಕಿಯಲ್ಲಿ ಅರಳಿದ ಹೂವು~ ನಿರ್ದೇಶಕಿ ಪದ್ಮಜಾ ರಾವ್ ಅವರಿಗೆ ಧನ್ಯವಾದ ಸಲ್ಲಿಸುತ್ತಾರೆ.

`ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಹೆಚ್ಚು ಒತ್ತು ಕೊಡುವುದಿಲ್ಲ. ಅದರಿಂದ ಕಿರುತೆರೆ ಹೆಚ್ಚು ತೃಪ್ತಿ ನೀಡುತ್ತಿದೆ. ಪಾತ್ರಕ್ಕೆ ತೂಕವಿದ್ದಾಗ, ಕಸ ಗುಡಿಸುವ ಪಾತ್ರ ಕೊಟ್ಟರೂ ಕಣ್ಣಿಗೊತ್ತಿಕೊಂಡು ಮಾಡಿಬಿಡುವೆ~ ಎನ್ನುವ ವೃತ್ತಿಪರತೆ ಅವರದು.

ನಟಿ ಉಮಾಶ್ರೀ ಅವರಂತೆ ವಯಸ್ಸಿರುವಾಗಲೇ ಮುದುಕಿ ಪಾತ್ರ ಮಾಡುವಾಸೆ ಎನ್ನುವ ಅವರಿಗೆ ಅದರಲ್ಲೂ ಹಣ್ಣಣ್ಣು ಮುದುಕಿ ಪಾತ್ರ, ಕೆಸರಲ್ಲಿ ಉರುಳಾಡೋ ಪಾತ್ರ, ಕಪ್ಪು ಮೇಕಪ್ ಬಳಿದುಕೊಳ್ಳುವ ಪಾತ್ರಗಳೆಂದರೆ ಅಚ್ಚುಮೆಚ್ಚು. `ನೀವು ಬೆಳ್ಳಗಿದ್ದೀರಾ ಅಂಥ ಪಾತ್ರಗಳು ನಿಮಗೆ ಹೊಂದಿಕೆಯಾಗಲ್ಲ~ ಎನ್ನುವವರಿಗೆ, `ಕೊಟ್ಟು ನೋಡಿ~ ಎಂದು ಸವಾಲು ಹಾಕುತ್ತಾರೆ. ಹುಚ್ಚಿ, ಕುರುಡಿ, ಮೂಗಿ ಪಾತ್ರ ನಿರ್ವಹಿಸುವ ಆಸೆಯೂ ಅವರಿಗಿದೆ.

ಕಿರುತೆರೆ, ಸಿನಿಮಾದ ಜೊತೆಜೊತೆಗೆ ರಂಗಭೂಮಿಯ ನಂಟನ್ನೂ ಉಳಿಸಿಕೊಂಡಿರುವ ಅವರು ಕಷ್ಟದಲ್ಲಿ ಇದ್ದಾಗ ಅವಕಾಶ ನೀಡಿದ ಡಿಂಗ್ರಿ ನಾಗರಾಜ್ ಅವರ ಪತ್ನಿ ಮಾಲಾ, ಕರಿಬಸವಯ್ಯ, ಬ್ಯಾಂಕ್ ಜನಾರ್ದನ್, ಶಂಖನಾದ ಅರವಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT