ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಿರುಬ'ಎಂಬ ಹುಡುಗಿಯೂ `ತಿರುಪತಿ'ನಾಮವೂ...

Last Updated 1 ಡಿಸೆಂಬರ್ 2012, 8:41 IST
ಅಕ್ಷರ ಗಾತ್ರ

ನಾನಿಲ್ಲಿ ಹೇಳಲು ಹೊರಟಿರುವುದು ನಾಮದ ಬಗ್ಗೆ. ಅಂದರೆ ತಿರುಪತಿ ವೆಂಕಟರಮಣನ ನಾಮದ ಬಗ್ಗೆಯೇ ಅಥವಾ ಕೆಂಪು, ಬಿಳಿ ನಾಮವೇ ಎಂದು ಕೇಳಬೇಡಿ. ನಾನು ಹೇಳುತ್ತಿರುವುದು ಹಣೆಯ ಮೇಲಿನ ನಾಮವಂತೂ ಖಂಡಿತಾ ಅಲ್ಲ. ನಾಮ ಅರ್ಥಾತ್ ಹೆಸರಿನ ಬಗ್ಗೆ. ಅದು ಉಂಟು ಮಾಡುವ ಗೊಂದಲದ ಬಗ್ಗೆ.

ಆ ನಾಮಧೇಯರು ಅನುಭವಿಸುವ ಪಡಿಪಾಟಲಿನ ಬಗ್ಗೆ. ಕಾಲೇಜು ಅಧ್ಯಾಪಕಿಯಾಗಿ ನನ್ನ ವೃತ್ತಿ ಜೀವನದಲ್ಲಿ ನಾನು ಕಂಡ ಬಗೆಬಗೆಯ ನಾಮಧೇಯರಿಂದ ನನಗಾದ ವಿಭಿನ್ನ ಅನುಭವಗಳನ್ನು ಇಗೋ, ನಿಮ್ಮ ಮುಂದೆ ಇಡುತ್ತಿದ್ದೇನೆ.

ಪಿಯುಸಿ ತರಗತಿಯೆಂದರೆ ಸುಮಾರು 80-100 ವಿದ್ಯಾರ್ಥಿಗಳು ಇರುತ್ತಿದ್ದರು. ಹಾಜರಿ ತೆಗೆದು ಕೊಳ್ಳುವಾಗ ಅವರುಗಳೆಲ್ಲರ ಹೆಸರು ಕರೆದರೆ ಅಷ್ಟೋತ್ತರ ಶತ ನಾಮಾವಳಿ ಹೇಳಿದಂತೆ. ಕೆಲವರಂತೂ ರೋಲ್ ನಂಬರ್ ಕೂಗಿ ಹಾಜರಿ ಹಾಕುತ್ತಿದ್ದರು. ಆದರೆ ನನಗದು ಸರಿಬರುತ್ತಿರಲಿಲ್ಲ. ವಿದ್ಯಾರ್ಥಿಯ ಹೆಸರು ಕೂಗಿ, ಅವರ ಮುಖ ನೋಡಿದರೇನೇ ನನಗೆ ತೃಪ್ತಿ. ಇದರಿಂದ ಮತ್ತೊಂದು ಅನುಕೂಲವಿತ್ತು. ಹುಡುಗರ ಚಟವಾದ `ಪ್ರಾಕ್ಸಿ' ಹೇಳುವಿಕೆಗೆ ಸ್ವಲ್ಪ ಮಟ್ಟಿಗೆ ಕತ್ತರಿ ಬೀಳುತ್ತಿತ್ತು.

ಅದೇ ತಾನೇ ಕಾಲೇಜು ಆರಂಭವಾಗಿತ್ತು. ಮೊದಲ ಪಿಯುಸಿ ತರಗತಿಗೆ ಹೋದೆ. ಸರಿ, ಹಾಜರಿ ಹಾಕುವ ಪರಿಪಾಠ ಮುಗಿಸಲು ವಿದ್ಯಾರ್ಥಿಗಳ ಹೆಸರುಗಳನ್ನು ಒಂದೊಂದಾಗಿ ಕೂಗತೊಡಗಿದೆ.

`ತಿರುಪತಿ' ಎಂದು ಕೂಗಿದೆ. ಯಾಕೋ ಹೆಸರು ವಿಚಿತ್ರವಾಗಿದೆಯಲ್ಲ! ಯಾರೋ ತಿರುಪತಿಯ ಪರಮ ಭಕ್ತರೇ ಇರಬೇಕು, ಮಗನಿಗೆ `ತಿರುಪತಿ' ಅಂತಲೇ ಹೆಸರಿಟ್ಟುಬಿಟ್ಟಿದ್ದಾರೆ ಎಂದು ಯೋಚಿಸುತ್ತಾ ಹುಡುಗರ ಕಡೆ ನೋಡಿದೆ. ಅಷ್ಟರಲ್ಲಿ, ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು `ಮ್ಯೋಮ್, ಅದು ತಿರುಪತಿ ಅಲ್ಲ, ತೃಪ್ತಿ' ಎಂದು ಅಳುದನಿಯಲ್ಲಿ ಹೇಳಿದಳು. ವಿದ್ಯಾರ್ಥಿಗಳೆಲ್ಲ ಗೊಳ್ಳೆಂದು ನಕ್ಕರು. ಆದರೆ ಅವಳು ನಗಲಿಲ್ಲ. ಬದಲಿಗೆ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ಅದನ್ನು ಕಂಡ ನಾನು, `ರಿಜಿಸ್ಟರಿನಲ್ಲಿ ಹಾಗೇ ಬರೆದಿದೆ. ನೀನು ಬೇಜಾರು ಮಾಡ್ಕೋಬೇಡ. ಈಗಲೇ ತಿದ್ದುತ್ತೇನೆ, ಆಯ್ತೊ?' ಎಂದು ಹೇಳಿ ಕೂಡಲೇ `ತಿರುಪತಿ' ಎಂಬುದನ್ನು `ತೃಪ್ತಿ' ಎಂದು ತಿದ್ದಿದೆ. ಅವಳು ನೆಮ್ಮದಿಯಾಗಿ ಕುಳಿತಳು.

ಒಮ್ಮೆ ಒಂದು ಕಾಲೇಜಿಗೆ ಪ್ರಾಕ್ಟಿಕಲ್ ಪರೀಕ್ಷೆ ನಡೆಸಲು ಹೋಗಿದ್ದೆ. ಅಲ್ಲಿ `ಕಿರುಬ' ಎಂಬ ವಿಚಿತ್ರ ಹೆಸರು ನನ್ನ ಗಮನ ಸೆಳೆಯಿತು. ಅರೆ, ಇದೇನು? ಹೆಸರು ಬರೆಯುವುದರಲ್ಲಿ ತಪ್ಪಾಗಿದೆಯೇ ಎಂದು ಯೋಚಿಸುತ್ತಾ, ಅವಳು ಸಹಿ ಮಾಡಿದ್ದ ಕಡೆ ನೋಡಿದರೆ ಅಲ್ಲೂ ಅದೇ ರೀತಿ ಇದೆ! ಅವಳ ತಂದೆತಾಯಿ ಯಾವುದಾದರೂ ದೇವರಿಗೆ ಹರಕೆ ಹೊತ್ತು ಹೀಗೆ ಹೆಸರಿಟ್ಟಿರಬಹುದೇ ಎನಿಸಿ ನನಗೆ ಆಶ್ಚರ್ಯ!

ಕೊನೆಗೆ ಕುತೂಹಲ ತಡೆಯಲಾರದೇ ಅವಳನ್ನು ಕರೆದು,  `ನಿನ್ನ ಹೆಸರೇನು?' ಎಂದು ಕನ್ನಡದಲ್ಲಿ ಕೇಳಿದೆ. ಅವಳು `ಐ ಡೋಂಟ್ ನೋ ಕನ್ನಡ' ಎಂದು ಈಗ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತನ್ನೇ ಹೇಳಿದಳು. `ಅಯ್ಯೋ, ಕನ್ನಡಿಗರೇ ಈಗ ಕನ್ನಡದಲ್ಲಿ ಮಾತನಾಡುವುದಿಲ್ಲ, ಹಾಗೆ ಮಾತನಾಡಿದರೆ ತಮ್ಮ ಗೌರವಕ್ಕೆ ಕುಂದು ಎಂದುಕೊಳ್ಳುತ್ತಾರೆ.

ಇನ್ನು ಹೊರಗಿನವರು ಕನ್ನಡ ಬರುವುದಿಲ್ಲ ಎಂದರೆ ನಾವು ಸ್ವಲ್ಪ ಸಹಿಸಿಕೊಳ್ಳಲೇಬೇಕಲ್ಲವೇ ಎನಿಸಿ ಉದಾರ ಬುದ್ಧಿ(!)ಯಿಂದ ಅದೇ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ಕೇಳಿದೆ. ಅವಳು ತಣ್ಣಗೆ `ಕಿರುಬ' ಎಂದೇ ಉತ್ತರಿಸಿದಳು. `ನೀನು ಯಾವ ರಾಜ್ಯದಿಂದ ಬಂದಿದ್ದೀಯಾ?' ಎಂದು ಕೇಳಿದೆ (ಇಂಗ್ಲಿಷ್‌ನಲ್ಲಿ) `ತಮಿಳುನಾಡಿಂದ' ಎಂಬ ಉತ್ತರ ಕೇಳಿದಾಗ ನನಗೆ ಜ್ಞಾನೋದಯವಾಯಿತು.

ಕನ್ನಡದ `ಕೃಪಾ' ತಮಿಳಿನಲ್ಲಿ `ಕಿರುಬ' ಎಂದಾಗಿದೆ ಎಂಬ ಸತ್ಯದ ಅರಿವಾಗಿ ನನ್ನ ಕುತೂಹಲ ತಣಿಯಿತು.  `ಸರಿ, ಅರ್ಥವಾಯಿತು ನೀನಿನ್ನು ಹೋಗು' ಎಂದು ಹೇಳಿ ಅವಳನ್ನು ಕಳುಹಿಸಿದೆ. ಅಲ್ಲಿಗೆ `ಕಿರುಬ' ಎಂಬ ಹೆಸರಿನ ಬಗ್ಗೆ ಎದ್ದ ನನ್ನ ಗೊಂದಲ ಮಾಯವಾಯಿತು.

ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಹೊಸ ವಿದ್ಯಾರ್ಥಿಗಳು ಬಂದಾಗಲೆಲ್ಲ ಸ್ಟಾಫ್ ರೂಮಿನಲ್ಲಿ ಕೆಲವು ವಿಶಿಷ್ಟ ಹೆಸರುಗಳ ಬಗ್ಗೆ ವ್ಯಾಖ್ಯಾನ ನಡೆಯುತ್ತದೆ. ಅಂತಹ ಒಂದು ಸಂದರ್ಭದಲ್ಲಿ `ಕ್ಷಣ' ಎಂಬ ಹೆಸರು ನಮ್ಮ ಗಮನ ಸೆಳೆದಿತ್ತು.

ಅವಳಿಗೆ ಬಹುಶಃ ಇಬ್ಬರು ತಂಗಿಯರಿದ್ದರೆ ಅವರಿಗೆ `ನಿಮಿಷ' ಮತ್ತು `ಗಂಟಾ' ಎಂದೇ ಇಟ್ಟಿರುತ್ತಾರೆ ಎಂದು ಮಾತನಾಡಿಕೊಂಡು ನಕ್ಕೆವು. ಆದರೆ ಅದನ್ನು ಖಚಿತಪಡಿಸಿಕೊಳ್ಳಲು ಮಾತ್ರ ಯಾರೂ ಮುಂದಾಗಲಿಲ್ಲ. ಸಮಯ ಬಂದರೆ ನೀವೂ ಈ ಹೆಸರುಗಳನ್ನು ಪ್ರಯತ್ನಿಸಿ ನೋಡಬಹುದು.

ಏಕೆಂದರೆ ಇವು ತೀರಾ ಅಪರೂಪದ ಹೆಸರುಗಳು. ಆಧುನಿಕ ತಂದೆತಾಯಿ ಇಂತಹ ಹೆಸರುಗಳ ಹುಡುಕಾಟದಲ್ಲಿ ಇರುತ್ತಾರಲ್ಲವೇ?! ಒಬ್ಬ ಹುಡುಗನ ಹೆಸರು `ಅಲಕ್ಷ್ಯ' ಎಂದು ತಿಳಿದು ಯಾಕೆ ಹೀಗೆ ಹೆಸರಿಟ್ಟಿದ್ದಾರೆ ಎಂದು ನಾವು ಸೋಜಿಗ ಪಟ್ಟಿದ್ದುಂಟು.

ಎಷ್ಟೋ ವೇಳೆ ಒಂದು ತರಗತಿಯಲ್ಲಿ ಒಂದೇ ನಾಮಧೇಯ ಹೊತ್ತ ಅನೇಕ ವಿದ್ಯಾರ್ಥಿಗಳು ಇರುತ್ತಿದ್ದರು. ಉದಾಹರಣೆಗೆ ನವೀನ್, ಅನಿರುದ್ಧ, ಅಕ್ಷಯ್, ಚೇತನ್, ಭರತ್, ಅರವಿಂದ ಇತ್ಯಾದಿ. ಅವರುಗಳ ಇನಿಷಿಯಲ್ಸ್ ಬೇರೆ ಇರುತ್ತಿದ್ದುದರಿಂದ ತೊಂದರೆ ಆಗುತ್ತಿರಲಿಲ್ಲ. ಹುಡುಗಿಯರಲ್ಲೂ ಇದೇ ರೀತಿ. ಪ್ರಿಯಾ, ಶಿಲ್ಪ, ಸಿಂಧು, ಪ್ರೀತಿ ಇತ್ಯಾದಿ ಜನಪ್ರಿಯ ಹೆಸರುಗಳು ಒಂದೇ ತರಗತಿಯಲ್ಲಿ ಅನೇಕ ಹುಡುಗಿಯರಿಗೆ!

ಒಮ್ಮೆ ಒಂದು ತರಗತಿಯಲ್ಲಿ `ಪ್ರಿಯಾ' ಎಂಬ ಹೆಸರಿನ 15 ವಿದ್ಯಾರ್ಥಿನಿಯರು ಇದ್ದರು ಎಂದರೆ ನೀವು ನಂಬುವಿರಾ? ಅಷ್ಟೂ ಹುಡುಗಿಯರು ಒಂದೇ ಪ್ರಾಕ್ಟಿಕಲ್ ಬ್ಯಾಚಿನಲ್ಲಿದ್ದರು. ಈ  `ಪ್ರಿಯಾ'ಗಳ ಹಾವಳಿಯಲ್ಲಿ ಉಪನ್ಯಾಸಕರ ತಲೆ ಕೆಟ್ಟು ಹೋಗುತ್ತಿತ್ತು. ಯಾವ `ಪ್ರಿಯಾ' ಯಾರು ಎಂದೇ ತಿಳಿಯದೆ ಎಷ್ಟೋ ವೇಳೆ ಗೊಂದಲ ಉಂಟಾಗುತ್ತಿತ್ತು.

ಇನ್ನೂ ವಿಚಿತ್ರ ಎಂದರೆ, ಕೆಲವು ಬಾರಿ ಅವರುಗಳ ಇನಿಷಿಯಲ್ಸ್‌ನಲ್ಲಿ ಸಹ ವ್ಯತ್ಯಾಸವೇ ಇರುತ್ತಿರಲಿಲ್ಲ. ಒಮ್ಮೆ ಚೇತನ್ ಆರ್. ಎಂಬ ಹೆಸರಿನ ಇಬ್ಬರು ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿದ್ದರು! ಆಗೇನು ಮಾಡುವುದು? ಅವರನ್ನು ಗುರುತಿಸಲು ಉಪಯೋಗಕ್ಕೆ ಬಂದಿದ್ದು ಅವರ ಪಿತೃನಾಮ! ಒಬ್ಬನ ತಂದೆಯ ಹೆಸರು ರಮೇಶ್, ಇನ್ನೊಬ್ಬನ ತಂದೆಯ ಹೆಸರು ರಾಮೇಗೌಡ. ಸರಿ ಅವರನ್ನು ಹಾಗೇ ಗುರುತಿಸಿ ನಾವು ಬಚಾವಾದೆವು. ಇನ್ನೊಮ್ಮೆ ಪರಿಸ್ಥಿತಿ ಇನ್ನೂ ಕ್ಲಿಷ್ಟವಾಯಿತು. ಸ್ಮಿತಾ ಸಿ. ಎಂಬ ಹೆಸರಿನ ಇಬ್ಬರು ಹುಡುಗಿಯರು ಒಂದೇ ತರಗತಿಯಲ್ಲಿ.

ಕಾಕತಾಳೀಯ ಎಂಬಂತೆ ಇಬ್ಬರ ತಂದೆಯಂದಿರ ಹೆಸರೂ ಚಂದ್ರಶೇಖರ್! ಕೊನೆಗೆ ಸ್ಮಿತಾ ಸಿ.1, ಸ್ಮಿತಾ ಸಿ.2 ಎಂದೇ ಆ ಹುಡುಗಿಯರು ಖ್ಯಾತನಾಮರಾದರು ಅನ್ನಿ.

ನನ್ನ ಹೆಸರು ಸಹ ಅನೇಕ ಬಾರಿ ನನ್ನನ್ನು ಗೊಂದಲಕ್ಕೆ ಸಿಲುಕಿಸಿದೆ. ನಾನು ಕೆಲಸಕ್ಕೆ ಸೇರಿದ ಮೊದಲ ವಾರ, ಅಟೆಂಡರ್ ಒಂದು ಪತ್ರ ತಂದಿತ್ತ. ನನ್ನ ಹೆಸರು ಸರಿಯಾಗಿತ್ತು. ಪತ್ರದ ಹಿಂಬದಿಯಲ್ಲಿ ಮೈಸೂರು ಎಂದಿತ್ತು.

ಮನೆಯವರಿಗೆ ಮತ್ತು ಸ್ನೇಹಿತರಿಗೆ ನಾನು ಕಾಲೇಜಿಗೆ ಸೇರಿದ ವಿಷಯ ತಿಳಿಸಿದ್ದೆ. ಆದರೂ ಕಾಲೇಜಿನ ಅಡ್ರೆಸ್‌ಗೆ ಬರೆದವರಾರು ಎಂದು ಕುತೂಹಲದಿಂದ ಒಡೆದು ನೋಡಿದೆ. ಮೊದಲ ಸಾಲಿನಲ್ಲೇ ಪತ್ರ ನನ್ನದಲ್ಲ ಎಂದು ತಿಳಿಯಿತು. ಪತ್ರದ ಮೇಲಿನ ವಿಳಾಸ ಸರಿಯಾಗಿದೆ, ಹೆಸರು ಗಾಯತ್ರಿ ಕೃಷ್ಣಮೂರ್ತಿ ಎಂದಿದ್ದುದು ನನ್ನನ್ನು ಮೋಸಗೊಳಿಸಿತ್ತು. ತಕ್ಷಣ ಕಚೇರಿಗೆ ಹೋಗಿ, ಇಲ್ಲಿ `ಗಾಯತ್ರಿ ಕೃಷ್ಣಮೂರ್ತಿ ಎಂದು ಯಾರಾದರೂ ಇದ್ದಾರಾ?' ಎಂದು ಕೇಳಿದೆ. ಮುಗುಳ್ನಗೆಯ ಸುಂದರ ಯುವತಿ ಬಳಿಗೆ ಬಂದಳು. ನಾನು ಪತ್ರವನ್ನು ಅವಳ ಕೈಗಿತ್ತು, `ಹೆಸರಿನ ಗೊಂದಲ. ನನ್ನದೇ ಎಂದು ಪತ್ರ ತೆರೆದೆ. ನನ್ನದಲ್ಲ ಎಂದು ತಿಳಿಯಿತು. ನಿಮ್ಮ ಪತ್ರ ಒಡೆದದ್ದಕ್ಕಾಗಿ ಕ್ಷಮೆಯಿರಲಿ' ಎಂದೆ. ಮುಂದೆ ಆಕೆ ನನ್ನ ಆತ್ಮೀಯ ಗೆಳತಿಯಾದರು.

ಕೆಲವು ಇನಿಷಿಯಲ್‌ಗಳು ಹೆಸರಿನೊಂದಿಗೆ ಸೇರಿ ಗೊಂದಲ ಉಂಟುಮಾಡುತ್ತವೆ. ವಿ.ಚಿತ್ರ ಎಂಬ ಹೆಸರು, ವಿಚಿತ್ರ ಆಗಿಬಿಡುತ್ತದೆ. ಕಾಲೇಜಿನಲ್ಲಿ ಒಂದು ಹುಡುಗಿಯ ಹೆಸರು ಎ.ವಿ.ಅಂತರಾ ಎಂದಿತ್ತು. ವಿದ್ಯಾರ್ಥಿಗಳ ಬಾಯಲ್ಲಿ ಅದು `ಅವಾಂತರ' ಆಗಿ ಹೋಯಿತು. ಕೊನೆಗೆ ಅವಳು ತನ್ನ ಹೆಸರಿನಲ್ಲಿ ಮೊದಲ ಇನಿಷಿಯಲ್ ತೆಗೆಸಿ ವಿ.ಅಂತರಾ ಎಂದು ಬದಲಾಯಿಸಿಕೊಂಡಳು.

   ಹೀಗೆ ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲದೇ ಹೋಗುತ್ತದೆ. ಆದರೂ ಈ ಪ್ರಸಂಗ ಮಾತ್ರ ಹೇಳಲೇಬೇಕು. ಒಮ್ಮೆ ಗೋವಿಂದ ಎಂಬ ವಿದ್ಯಾರ್ಥಿ ತರಗತಿಗೆ ಸತತವಾಗಿ ಚಕ್ಕರ್ ಹಾಕುತ್ತಿದ್ದ.

ಆಫೀಸಿನಿಂದ ಮಾಹಿತಿ ಬಂದ ಹೊರತು ನಾವು ಹಾಜರಿ ಪುಸ್ತಕದಿಂದ ಅವನ ಹೆಸರು ತೆಗೆಯುವಂತಿರಲಿಲ್ಲ. ಪ್ರತಿ ಬಾರಿ ಹೆಸರು ಕೂಗಿ ಬೇಸರವಾಗಿ ಒಂದು ದಿನ `ಇವನಿಗೇನಾಗಿದೆ, ಯಾಕೆ ಬರುತ್ತಿಲ್ಲ?' ಎಂದು ವಿಚಾರಿಸಿದಾಗ, ಇಡೀ ತರಗತಿಯ ವಿದ್ಯಾರ್ಥಿಗಳು ಏನೋ ನಮಗೆ ತಿಳಿಯದು ಎಂಬಂತೆ `ಗೋವಿಂದಾ, ಗೋ......ವಿಂದಾ' ಎಂದು ಖೋರಸ್ ಹಾಡಿದರು. ಆಮೇಲೆ ಒಬ್ಬ ಹುಡುಗ ಎದ್ದು ನಿಂತು `ಅವನು ಕಾಲೇಜು ಬಿಟ್ಟು ಹೋದ' ಎಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT