ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದ: ರಂಜಿಸಿದ ಹುತ್ತರಿ ಕೋಲ್‌ ಮಂದ್‌

Last Updated 20 ಡಿಸೆಂಬರ್ 2013, 5:41 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇತಿಹಾಸ ಪ್ರಸಿದ್ಧ ಕುಂದ ಕೈಮುಡಿಕೆ ಹುತ್ತರಿ ಕೋಲಾಟ ಈಚೆಗೆ ವಿಜೃಂಭಣೆಯಿಂದ ಜರುಗಿತು. 
ಕೋಲಾಟ, ವಾದ್ಯಮೇಳ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು  ಜರುಗಿದವು.

ಬೊಟ್ಟಿಯತ್ತ್‌ನಾಡು, ಬೇರಳಿ ನಾಡು, ಕುತ್ತ್‌ ನಾಡುಗಳ ಜನತೆ ಮೂರು ದಿಕ್ಕುಗಳಿಂದ ಓಡಿ ಬಂದು ಮಂದ್‌ನ ಮರಕ್ಕೆ ಕೋಲು ಹೊಡೆಯುವ ಮೂಲಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಿದರು. ಹಳ್ಳಿಗಟ್ಟು, ಕುಂದ, ಮುಗುಟಗೇರಿ,  ಈಚೂರು, ಹುದೂರು, ಅರುವತ್ತೊಕ್ಕಲು, ಬಿ. ಶೆಟ್ಟಿಗೇರಿ, ಕೊಂಗಣ, ವಿ. ಬಾಡಗ,  ಕುಟ್ಟಂದಿ, ರುದ್ರಗುಪ್ಪೆ ಮೊದಲಾದ 18 ಗ್ರಾಮಗಳ ಸಾವಿರಾರು ಜನತೆ  ಒಂದೆಡೆ ಸೇರಿ ಕೋಲಾಟವಾಡಿದರು.

ಮಹಿಳೆಯರು, ಮಕ್ಕಳು, ಪುರುಷರು ಒಂದಾಗಿ ಸೇರಿ ನಡೆಸಿದ ಕೋಲಾಟ, ವಾಲಗ ಮೇಳ, ಉಮ್ಮತ್ತಾಟ್‌, ಬೊಳಕಾಟ್‌ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು. 

ಸಾಂಪ್ರದಾಯಿಕ ಕೊಡವ ಉಡುಗೆ ತೊಟ್ಟು ಕೈಯಲ್ಲಿ ಕೋಲು ಮತ್ತು ಕೋವಿ ಹಿಡಿದ ಪುರುಷರು ಕಂಗೊಳಿಸಿದರು. ಜತೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಕೂಡ ಕಾರ್ಯಕ್ರಮಕ್ಕೆ ಸಾಥ್‌ ನೀಡಿದರು. ಕುಂದ ಸುತ್ತಲಿನ 18 ಗ್ರಾಮಗಳ ತಕ್ಕ್‌ ಮುಖ್ಯಸ್ಥರು ಹಾಗೂ ಮೂರು ನಾಡಿನ ತಕ್ಕ್‌್ ಮುಖ್ಯಸ್ಥರು ಸಭೆಯಲ್ಲಿ  ಭಾಗವಹಿಸಿದ್ದರು.  

ಅಡ್ಡಂಡ ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು. ಹಳ್ಳಿಗಟ್ಟು ಗ್ರಾಮದ ಮುಖಂಡ  ಚೆಮ್ಮಟೀರ ಪ್ರವೀಣ್‌ ಉತ್ತಪ್ಪ ಮಾತನಾಡಿ ಹಿಂದೆ ಇದ್ದ ಸಾಂಸ್ಕೃತಿಕ ವೈಭವ ಈಗ ಕೋಲ್‌ ಮಂದ್‌ಗೆ ಇಲ್ಲವಾಗಿದೆ. ಇದಕ್ಕೆ ಸಂಬಂಧ ಪಟ್ಟ ಮುಖಂಡರು ಇತ್ತ ಗಮನಹರಿಸಿ ಮುಂದೆಯೂ ಕೂಡ ಇದರ ಸಾಂಸ್ಕೃತಿಕ ವೈಭವ ಮರುಕಳಿಸುವಂತೆ ಮಾಡಬೇಕು ಎಂದು ಹೇಳಿದರು. ಅಡ್ಡಂಡ ಪ್ರಕಾಶ್‌ ಕುಶಾಲಪ್ಪ ಹಾಜರಿದ್ದರು.

21ರಿಂದ ದೂರು ಅರ್ಜಿ ಸ್ವೀಕಾರ
ಮಡಿಕೇರಿ: ಕೊಡಗು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಡಿ. 21 ರಂದು ಮಡಿಕೇರಿ ಗೌಳಿಬೀದಿಯ ಲೋಕಾಯುಕ್ತ ಕಚೇರಿಯಲ್ಲಿ, ಡಿ. 23 ರಂದು ವಿರಾಜಪೇಟೆ ನಿರೀಕ್ಷಣಾ ಮಂದಿರದಲ್ಲಿ, ಡಿ. 24ರಂದು ಸೋಮವಾರಪೇಟೆ ನಿರೀಕ್ಷಣಾ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ದೂರು ಅರ್ಜಿಗಳನ್ನು ವಿತರಿಸಲಿರುವರು.

ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗಧಿತ ಪತ್ರದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ವಿವರಗಳಿಗೆ 0827– 2-220797 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT