ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಸಮಕ್ಷಮ

Last Updated 20 ಅಕ್ಟೋಬರ್ 2012, 9:05 IST
ಅಕ್ಷರ ಗಾತ್ರ

ಶಿವಮೊಗ್ಗ: ಯಡಿಯೂರಪ್ಪ ಅವರ `ಸಮಕ್ಷಮ~ಕ್ಕೆ ನಗರದ ಸಾಗರ ರಸ್ತೆಯಲ್ಲಿನ ಪಿಇಎಸ್ ಕಾಲೇಜು ಆವರಣ ಸಕಲ ಸಜ್ಜುಗೊಂಡಿದ್ದರೆ, ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ `ಸಮಕ್ಷಮ~ದಲ್ಲಿ ಸಾಕ್ಷಿಯಾಗಬೇಕೆ? ಬೇಡವೇ? ಎಂಬ ಗೊಂದಲ ಆರಂಭವಾಗಿದೆ.

`ಸಮಕ್ಷಮ~ ಕಾರ್ಯಕ್ರಮ ಕೇವಲ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳ ಪರಾಮರ್ಶೆ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದರೂ ಅಲ್ಲಿ ನಡೆಯುವುದು ಯಡಿಯೂರಪ್ಪ ಅವರ ರಾಜಕೀಯ ನಿರ್ಧಾರಗಳ ಬಗೆಗಿನ ಅಭಿಪ್ರಾಯ ಸಂಗ್ರಹ ಎಂಬುದು ಎಲ್ಲರಿಗೂ ತಿಳಿದ ಸತ್ಯ.

ಪಕ್ಷದ ಮುಖಂಡರು ಎಷ್ಟೇ ನಿರಾಕರಿಸಿದರೂ ಜಿಲ್ಲೆಯಲ್ಲಿ ಪಕ್ಷ ಎರಡು ಬಣಗಳಾಗಿರುವುದಂತು ದಿಟ. ಕಾರ್ಯಕರ್ತರು, ಮುಖಂಡರಿಗೆ ಈಗ ಎರಡೆರಡು ದೋಣಿಗಳಲ್ಲಿ ಕಾಲಿಡಬೇಕಾದಂತಹ ಸಂದಿಗ್ಧ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ `ಸಮಕ್ಷಮ~ಕ್ಕೆ ಹೋದರೆ ಎಲ್ಲಿ ಈಶ್ವರಪ್ಪ ಬಣದ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆಂಬ ಆತಂಕ ಕೆಲವರದ್ದು. `ಸಮಕ್ಷಮ~ದ ಬಗ್ಗೆ ಬಿಜೆಪಿ ಯಾವುದೇ ನಿಲುವು ತೆಗೆದುಕೊಳ್ಳದಿರುವುದರಿಂದ ಭಾಗವಹಿಸುವುದರಲ್ಲಿ ತಪ್ಪೇನು ಇಲ್ಲ ಎಂಬ ವಾದ ಹಲವರದ್ದು.

`ಸಮಕ್ಷಮ~ದಲ್ಲಿ ಭಾಗವ ಹಿಸುವುದನ್ನು ತಪ್ಪಿಸಿಕೊಳ್ಳಲು ಜಿಲ್ಲೆಯ ಬಿಜೆಪಿಯ ಮುಖಂಡರಿಗೆ ಹೊಸದೊಂದು ಅಸ್ತ್ರ ಸಿಕ್ಕಿದೆ. ಶನಿವಾರ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ `ಕಾಂಗ್ರೆಸ್ ಹಠಾವೋ ದೇಶ್ ಬಚಾವೋ~ ಆಂದೋಲನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಲು ಹೋಗುತ್ತಿರುವ ನೆಪ ಹೇಳಿ ಕೆಲವು ಮುಖಂಡರು `ಸಮಕ್ಷಮ~ಕ್ಕೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಯುವ ಮೋರ್ಚಾದ ಕಾರ್ಯಕ್ರಮವಾದರೂ ಬಹಳಷ್ಟು ಸಂಖ್ಯೆಯಲ್ಲಿ ಜಿಲ್ಲೆಯ ದೊಡ್ಡ ಮುಖಂಡರು ಹುಬ್ಬಳ್ಳಿಗೆ ಹೋಗುತ್ತಿರುವುದನ್ನು ನೋಡಿದರೆ `ಸಮಕ್ಷಮ~ದಿಂದ ದೂರ ಉಳಿಯುವ ಆಲೋಚನೆ ಅವರದ್ದಾಗಿದೆ.

`ಹಿಂದೆ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಆದರೆ, ಈಗ ಅವರು ಪಕ್ಷ ಬಿಡುವುದಾಗಿ ತೀರ್ಮಾನಿಸಿ ಈ ಸಭೆ ಕರೆದಿರುವುದರಿಂದ ನಾವು ಹೋಗುವುದು ತಪ್ಪಾಗುತ್ತದೆ~ ಎಂಬ ಮಾತು ಬಿಜೆಪಿ ಕಟ್ಟಾ ಕಾರ್ಯಕರ್ತರೊಬ್ಬರದ್ದು.

`ಯಡಿಯೂರಪ್ಪ ಅವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅವರಿಂದ ಪಕ್ಷ ಬಲವಾಗಿದೆ. ಜಿಲ್ಲೆಯ ಚಿತ್ರಣವನ್ನಷ್ಟೇ ಅಲ್ಲ, ಇಡೀ ರಾಜ್ಯದ ಚಿತ್ರಣವನ್ನು ಬದಲು ಮಾಡಿದ ಕೀರ್ತಿ ಅವರಿಗೆ ಸಲ್ಲಲೇಬೇಕು. ಅವರು ಇದ್ದಲ್ಲಿ ನಾವು ಇರಲೇಬೇಕು~ ಎನ್ನುವುದು ಇನ್ನೊಬ್ಬ ಕಟ್ಟಾ ಬಿಜೆಪಿ ಕಾರ್ಯಕರ್ತರೊಬ್ಬರ ಮಾತು.

`ಭ್ರಷ್ಟಚಾರ ಯಾರ್ ಮಾಡಿಲ್ಲ; ಆದರೆ, ಯಡಿಯೂರಪ್ಪ ಅವರಂತೆ ಯಾರ್ ಕೆಲಸ ಮಾಡಿದ್ದಾರೆ. ಬಿಜೆಪಿ ಪಕ್ಷದವನಲ್ಲದಿದ್ದರೂ ನಾನು ಅವರ ಅಭಿಮಾನಿ. ಹಾಗಾಗಿ, ಸಭೆಗೆ ಹೋಗುತ್ತೇನೆ~ ಎಂಬ ಅಭಿಪ್ರಾಯ ಬಿಜೆಪಿ ಹೊರತಾದ ಅಭಿಮಾನಿಯದ್ದು. 

ಆದರೆ ಯಡಿಯೂರಪ್ಪ ಕೃಪೆಯಿಂದಲೇ ಸರ್ಕಾರದಲ್ಲಿ ವಿವಿಧ ಸ್ಥಾನಮಾನ ಪಡೆದವರು `ಸಮಕ್ಷಮ~ದಲ್ಲಿ ಭಾಗವಹಿಸುತ್ತಾರಾ ಎಂಬ ಕುತೂಹಲ ಈಗ ಎಲ್ಲರಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT