ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು: ಕುಡಿವ ನೀರಿನ ಘಟಕ ಸ್ಥಾಪನೆ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ಗ್ರಾಮೀಣ ಮಟ್ಟದಲ್ಲಿ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆ ಯಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ಕೇಂದ್ರಕ್ಕೆ ಇದೀಗ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಶೀಘ್ರದಲ್ಲಿಯೇ ಇದು ಸಾರ್ವಜನಿಕರ ಉಪ ಯೋಗಕ್ಕೂ ಲಭ್ಯವಾಗಲಿದೆ.

ಬೇಸಿಗೆ ಸಂದರ್ಭದಲ್ಲಿ ಕಲುಷಿತ ನೀರು ಸೇವನೆ ಯಿಂದ ತೀವ್ರ ವಾಂತಿ ಬೇಧಿಯಿಂದ ನರಳಿದ್ದ ಕುದೂರಿನ ಜನತೆಗೆ ಇದೀಗ ಗ್ರಾಮದಲ್ಲಿಯೇ ಶುದ್ಧ ಕುಡಿಯುವ ನೀರು ದೊರೆಯಲಿದ್ದು, ಸುಮಾರು ಎಂಟು ಸಾವಿರ ಜನಸಂಖ್ಯೆ ಹೊಂದಿರುವ ಕುದೂರಿನ ಗ್ರಾಮಸ್ಥರಿಗೆ ಈ ಘಟಕ ಕಾರ್ಯಾರಂಭ ಮಾಡುತ್ತಿರುವುದು ಸಂತಸ ತಂದಿದೆ.

ಗ್ರಾಮೀಣ ಪ್ರದೇಶದ ಜನತೆಗೆ ಅತಿ ಕಡಿಮೆ ಬೆಲೆಗೆ ಖನಿಜಯುಕ್ತ ಶುದ್ಧ ಕುಡಿಯುವ ನೀರು ದೊರ ಕಿಸಿಕೊಡುವ ಉದ್ದೇಶ ಹೊಂದಿರುವ `ವಾಟರ್ ಹೆಲ್ತ್ ಇಂಡಿಯಾ~ ಸಂಸ್ಥೆ ಕುದೂರು ಗ್ರಾಮ ಪಂಚಾಯಿತಿ ಜತೆಗೂಡಿ `ಸಮುದಾಯ ಜಲ ವ್ಯವಸ್ಥೆ~ ಯೋಜನೆಯಡಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿವೆ.

ಈ ಮೂಲಕ ರಾಮನಗರ ಜಿಲ್ಲೆಯಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ಹೊಂದಿದ ಹೋಬಳಿ ಕೇಂದ್ರ ಎಂಬ ಹೆಗ್ಗಳಿಕೆಗೆ ಕುದೂರು ಪಾತ್ರವಾಗಲಿದೆ. ಮಾಗಡಿಯ ಸೋಲೂರಿನಲ್ಲಿಯೂ ಇಂತಹ ಘಟಕವನ್ನು ಈ ಸಂಸ್ಥೆ ನಿರ್ಮಿಸುತ್ತಿದೆ.

ಎಂತಹ ಗುಣಮಟ್ಟ?
`ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಆರ್.ಓ ಮತ್ತು ಯು.ವಿ.ಡಬ್ಲ್ಯೂ ಗುಣಮಟ್ಟದ ನೀರನ್ನು ಈ ಘಟಕ ಸಿದ್ಧಪಡಿಸುತ್ತದೆ. ನೀರಿನಲ್ಲಿ ಇರುವ ಹಾನಿ ಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ವನ್ನು ಇಲ್ಲಿನ ಯಂತ್ರಗಳು ಹೊಂದಿವೆ. ಸುಮಾರು ಆರು ಬಾರಿ ನೀರನ್ನು ಶುದ್ಧೀಕರಿಸುವ ಮೂಲಕ ಜನತೆಗೆ ಉತ್ತಮ ಗುಣಮಟ್ಟದ ನೀರನ್ನು ನೀಡ ಲಾಗುತ್ತದೆ~ ಎಂದು ಸಂಸ್ಥೆಯ ಪ್ರತಿನಿಧಿ ಅಪ್ಪಣ್ಣ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ಈಗಾಗಲೇ `ವಾಟರ್ ಹೆಲ್ತ್ ಇಂಡಿಯಾ~ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ಸ್ಥಳೀಯ ಆಡಳಿತದ ನೆರವಿನಿಂದ ಸುಮಾರು 450 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಕರ್ನಾಟಕದಲ್ಲಿ ಆರು ತಿಂಗಳಿಂದ ಸುಮಾರು 35 ಗ್ರಾಮಗಳಲ್ಲಿ ಘಟಕ ಸ್ಥಾಪನೆಯ ಕಾಮಗಾರಿ ನಡೆಯುತ್ತಿದೆ~ ಎಂದು ಅವರು ವಿವರಿಸಿದರು.

`ದೇಶದಲ್ಲಿ ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ಎದುರಿಸುತ್ತಿರುವ  ಪ್ರದೇಶಗಳನ್ನು ಗುರುತಿಸಿ ಐಎಫ್‌ಡಿ ಆರ್ಥಿಕ ನೆರವಿನೊಂದಿಗೆ ಹಾಗೂ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಂಸ್ಥೆ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಗ್ರಾಮ ಪಂಚಾಯಿತಿ ಜತೆ 15 ವರ್ಷಗಳ ಒಡಂಬಡಿಕೆ ಮಾಡಿಕೊಂಡು  `ಸಮುದಾಯ ಜಲ ವ್ಯವಸ್ಥೆ~ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ~ ಎಂದು ಅವರು ಹೇಳಿದರು.

`ಈ ಯೋಜನೆ ಜಾರಿಗೆ ಗ್ರಾಮ ಪಂಚಾಯಿತಿ ಕಡೆಯಿಂದ ಘಟಕ ಸ್ಥಾಪನೆಗಾಗಿ ನಿವೇಶನ ಮತ್ತು ನೀರು ಲಭ್ಯವಿರುವ ಕೊಳವೆ ಬಾವಿಯ ಸಂಪರ್ಕವನ್ನು ದೊರಕಿಸಿಕೊಡಬೇಕು. ಉಳಿದಂತೆ ವಿದ್ಯುತ್ ಶುಲ್ಕ, ದುರಸ್ತಿ ಖರ್ಚು ವೆಚ್ಚ, ಸಿಬ್ಬಂದಿ ವೇತನ ಸೇರಿದಂತೆ 15 ವರ್ಷಗಳ ಕಾಲ ಘಟಕದ ನಿರ್ವಹಣೆಯ ಜವಾ ಬ್ದಾರಿ ವಾಟರ್ ಹೆಲ್ತ್ ಇಂಡಿಯಾ ಸಂಸ್ಥೆ ಯದ್ದಾಗಿರುತ್ತದೆ. 15 ವರ್ಷಗಳ ಅವಧಿ ಮುಗಿದ ನಂತರ ಇಡೀ ಘಟಕವನ್ನು ಗ್ರಾ.ಪಂಗೆ ಹಸ್ತಾಂತರಿ ಸಲಾಗುವುದು. ಆ ನಂತರ ಘಟಕದ ನಿರ್ವಹಣೆ ಗ್ರಾ.ಪಂಗೆ ಸೇರುತ್ತದೆ~ ಎಂದು ಅವರು ತಿಳಿಸಿದರು.

ನೀರು ಸರಬರಾಜು ಹೇಗೆ?
ಗ್ರಾಮದ ಜನತೆ `ಕ್ಯಾನ್~ ಅಥವಾ ಪಾತ್ರೆಯನ್ನು ಘಟಕದ ಬಳಿ ತಂದು ನಿಗದಿತ ಶುಲ್ಕ ಪಾವತಿಸಿ ಅಗತ್ಯವಿರುವಷ್ಟು ಲೀಟರ್ ನೀರನ್ನು ಪಡೆಯ ಬಹುದು. 20 ಲೀಟರ್ ಶುದ್ಧ ನೀರಿಗೆ 7 ರೂಪಾಯಿ ನಿಗದಿಪಡಿಸಲಾಗಿದೆ. ಅಂದರೆ ಒಂದು ಲೀಟರ್ ನೀರಿಗೆ 35 ಪೈಸೆಯಾಗುತ್ತದೆ. ಒಬ್ಬರು ಕನಿಷ್ಠ 10 ಲೀಟರ್ ನೀರನ್ನು ಪಡೆಯಬೇಕು. ಅದಕ್ಕೆ 3.50 ರೂಪಾಯಿ ಆಗುತ್ತದೆ ಎಂದು ಅವರು ತಿಳಿಸಿದರು.

ನೀರಿಗೆ ನೀಡುವ ಹಣದಿಂದ ವಿದ್ಯುತ್ ಶುಲ್ಕ, ಸಿಬ್ಬಂದಿ ವೇತನ, ದುರಸ್ತಿ ಕೆಲಸ, ನಿರ್ವಹಣಾ ವೆಚ್ಚವನ್ನು ಭರಿಸಲಾಗುವುದು. ಮಾರುಕಟ್ಟೆಯಲ್ಲಿ ಒಂದು ಲೀಟರ್ ಖನಿಜಯುಕ್ತ ನೀರಿಗೆ 12ರಿಂದ 15 ರೂಪಾಯಿ ಇದೆ. ಆದರೆ ಗ್ರಾಮೀಣ ಪ್ರದೇಶದ ಜನತೆಗೆ ಏಳು ರೂಪಾಯಿಗೆ 20 ಲೀಟರ್ ನೀರನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ರಾಮನಗರ, ತುಮಕೂರು, ಕೋಲಾರ ಭಾಗದಲ್ಲಿ ಫ್ಲೋರೈಡ್‌ಯುಕ್ತ ನೀರು ಹೆಚ್ಚು ಇದೆ. ಹಾಗಾಗಿ ಈ ಭಾಗದಲ್ಲಿ ಹೆಚ್ಚು ಆಸಕ್ತಿ ತೋರಲಾಗಿದೆ. ಗ್ರಾಮ ಪಂಚಾಯಿತಿ ಕಡೆಯಿಂದ ಪ್ರಸ್ತಾವಗಳು ಬಂದರೆ ಪರಿಶೀಲಿಸಿ, ಸಂಸ್ಥೆಯಿಂದ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT