ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ–ಶಿವಕುಮಾರ್‌ ನಡುವೆ ವಾಕ್ಸಮರ

ಕೆಡಿಪಿ ಸಭೆಯಲ್ಲಿ ಸಂಸದರ ‘ಅಭಿನಂದನೆ’ ಪ್ರಸಂಗ n ಪ್ರತಿಪಕ್ಷಗಳ ಆಕ್ಷೇಪ
Last Updated 14 ಸೆಪ್ಟೆಂಬರ್ 2013, 8:17 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ಷೇತ್ರದ ಶಾಸಕರೂ ಆದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕನಕಪುರದ ಶಾಸಕ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆಯಿತು.

ಗೃಹ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೆಲ ಕ್ಷಣ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸಂಸದ ಡಿ.ಕೆ.ಸುರೇಶ್‌ ಅವರು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ’ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ’ ತಿಳಿಸಿದರು.

ಇದರಿಂದ ಕೆರಳಿದ ಎಚ್‌.ಡಿ.ಕುಮಾರಸ್ವಾಮಿ, ’ಇದು ಕೆಡಿಪಿ ಸಭೆ. ಇಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕೇ ಹೊರತು ರಾಜಕೀಯವಲ್ಲ. ಇದು ರಾಜಕೀಯ ವೇದಿಕೆಯಲ್ಲ’ ಎಂದು ಆಕ್ರೋಶದಿಂದ ಹೇಳಿದರು.

ಆಗ ಪ್ರತಿಕ್ರಿಯಿಸಿದ ಸಂಸದ ಸುರೇಶ್‌, ’ನನ್ನನ್ನು ಆಯ್ಕೆ ಮಾಡಿದವರಿಗೆ ಅಭಿನಂದನೆ ಸಲ್ಲಿಸುವುದರಲ್ಲಿ ತಪ್ಪೇನಿದೆ. ಈ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದೆ ಅಷ್ಟೆ’ ಎಂದರು. ಆಗ ಆಕ್ರೋಶಗೊಂಡ ಕುಮಾರಸ್ವಾಮಿ ಮತ್ತು ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು, ’ಹಾಗಾದರೆ ಅಧಿಕಾರಿಗಳು ನಿಮಗೆ ಚುನಾವ ಣೆಯಲ್ಲಿ ಸಹಕಾರ ನೀಡಿದ್ದಾರೆ. ಅದಕ್ಕಾಗಿ ನೀವು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೀರಾ’ ಎಂದು ಕಿಡಿಕಾರಿದರು.

ಈ ಸಂದಭರ್ದಲ್ಲಿ ಶಾಸಕ ಡಿ.ಕೆ.ಶಿವಕುಮಾರ್‌ ಅವರು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಈ ನಾಯಕರುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಮಧ್ಯ ಪ್ರವೇಶಿಸಿದ ಸಚಿವ ಜಾರ್ಜ್‌ ಅವರು ಆಕ್ರೋಶಗೊಂಡಿದ್ದ ನಾಯಕರ ಕೋಪ ಶಮನಗೊಳಿಸಿ, ಕೆಡಿಪಿ ಸಭೆ ನಡೆಸಿದರು.

‘ಶೀಘ್ರ ಸಿದ್ದರಾಮಯ್ಯ ನಿರ್ಗಮನ’
‘ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿನವರೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಿದ್ದಾರೆ. ಈ ಸಂಬಂಧ ಈಗಾಗಲೇ ಕಾಂಗ್ರೆಸ್‌ನಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ವಿಧಾನಸಭೆಯ ವಿರೋ ಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾ ಡಿದರು.

‘ಶಾಸಕ ಎಚ್.ಡಿ. ರೇವಣ್ಣ ಅವರು ಜೆಡಿಎಸ್ ಶಾಸಕರೊಂದಿಗೆ ರಾಜ್ಯಪಾಲರ ಭವನಕ್ಕೆ ತೆರಳಲಿದ್ದಾರೆ ಎಂದು ಕನಕಪುರದ ಶಾಸಕ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಶಾಸಕರು ಸಾಮಾನ್ಯವಾಗಿ ರಾಜ್ಯಪಾಲರ ಭವನಕ್ಕೆ ತೆರಳುವುದು ಸರ್ಕಾರವನ್ನು ರಚಿಸಲು, ಇಲ್ಲವೆ ಆಡಳಿತ ನಡೆಸುತ್ತಿರುವ ಸರ್ಕಾರವನ್ನು ಕೆಡವಲು. ಆದರೆ ಶಿವಕುಮಾರ್ ಹೇಳಿಕೆ ಗಮನಿ ಸಿದರೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತದ ಕೊರತೆ ಎದುರಾಗಲಿದೆ ಎಂದು ತಿಳಿಯುತ್ತದೆ’ ಎಂದು ಕುಮಾರಸ್ವಾಮಿ ವಿವರಿಸಿದರು.

‘ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್‌.ಡಿ.ರೇವಣ್ಣ ಅವರ ನಡುವೆ ನಡೆದಿರುವ ಮಾತುಕತೆಯ ಬಗ್ಗೆ ನನಗೆ ಗೊತ್ತಿಲ್ಲ. ಬಹುಶಃ ಬಹುಮತದ ಕೊರತೆ ಎದುರಾದಾಗಬಹುದುಎಂಬುದನ್ನು  ಅರಿತಿರುವ ಸಿದ್ದರಾಮಯ್ಯ ಅವರು ರೇವಣ್ಣ ಅವರ ಬೆಂಬಲ ಕೋರಿರಬಹುದು. ಇದರ ಮುಂದುವರೆದ ಭಾಗವಾಗಿ ರಾಜಭವನ ಪ್ರಯಾಣವೂ ಎದುರಾಗಬಹುದು ಎಂಬುದು
ಡಿ.ಕೆ.ಶಿವಕುಮಾರ್‌ ಅವರ ಮಾತುಗಳನ್ನು ಗಮನಿಸಿದರೆ ಮನವರಿಕೆಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

’ರಾಮನಗರ ಕ್ಷೇತ್ರಕ್ಕೆ ನಾನು ಶಾಸಕನಾಗಿದ್ದೇನೆ. ನನ್ನ ಗಮನಕ್ಕೆ ತಂದು ಅಭಿವೃ ದ್ಧಿ ಕೆಲಸಗಳನ್ನು ಕೈಗೊಂಡರೆ ಅಭ್ಯಂತರವಿಲ್ಲ. ಆದರೆ ಸರ್ಕಾರದ ಕಾರ್ಯಕ್ರಮಗಳಿಗೆ ಪರಾಜಿತ ಅಭ್ಯರ್ಥಿ ಗುದ್ದಲಿಪೂಜೆ ನೆರವೇರಿಸಲು ಬಿಡುವುದಿಲ್ಲ. ನಾನು ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇದ್ದಾಗ ಅವರು ಮಾಡಲಿ. ಅದನ್ನು ಬಿಟ್ಟು ಚಿಲ್ಲರೆ ರಾಜಕಾರಣ ಮಾಡಿದರೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿ ಸಿದರು.

’ನಾನು ಎಂದಿಗೂ ಸಂಘರ್ಷಕ್ಕೆ ಆಸ್ಪದ ಕೊಡುವುದಿಲ್ಲ. ದ್ವೇಷದ ರಾಜಕಾರಣ ಮಾಡು ವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಪಕ್ಷಾತೀತವಾಗಿ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ಭಿನ್ನಾಭಿ ಪ್ರಾಯ ಗಳು ಉಂಟಾ ಗುವುದಿಲ್ಲ. ಯಾವುದೇ ವಿಷ ಯದ ಬಗ್ಗೆ ಅವರು ಬಹಿರಂಗ ಚರ್ಚೆಗೆ ಬರುವುದಾದರೆ ಅದಕ್ಕೆ ನಾನೂ ಸಿದ್ಧ’ ಎಂದು ಅವರು ಉತ್ತರಿಸಿದರು.
’ಮಾಜಿ ಶಾಸಕರೊಬ್ಬರು ತಾವು ಸಂಪಾದಿಸಿರುವ ಪಾಪದ ಹಣದಿಂದ ಕಾಲೇ ಜನ್ನು ನಡೆಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಪ್ರಕೃತಿಯ ಸಂಪತನ್ನು ಲೂಟಿ ಮಾಡಿ ಗಳಿಸಿರುವ ಹಣದಿಂದ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಗಳನ್ನು ಮಾಡಲು ಬಿಡುವುದಿಲ್ಲ. ನಾನು ಯಾ ವುದೇ ರೀತಿಯಿಂದಲೂ ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡಿಲ್ಲ. ಹಿಂದೆ ಇದ್ದಂತೆಯೇ ಇದ್ದೇನೆ. ಈಗ ಹಿಂದಿಗಿಂತ ಸ್ವಲ್ಪ ದಪ್ಪವಾಗಿದ್ದೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT