ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಗೋಡಿಗೆ ಪಟ್ಟಣ ಪಂಚಾಯಿತಿ ಕೋಡು?

Last Updated 13 ಡಿಸೆಂಬರ್ 2013, 6:39 IST
ಅಕ್ಷರ ಗಾತ್ರ

ಕುರುಗೋಡು: 2011ರ ಜನಗಣತಿ ಆಧರಿಸಿ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿಗಳನ್ನಾಗಿ ಪರಿವರ್ತಿಸುವ ಕಾರ್ಯ ಆರಂಭಗೊಂಡಿದ್ದರಿಂದ ಪಟ್ಟಣದ ಜನರ ಬಹುದಿನಗಳ ಪಟ್ಟಣ ಪಂಚಾಯ್ತಿ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ.

ಸ್ಥಳೀಯ ಗ್ರಾಮ ಪಂಚಾಯ್ತಿ ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಗ್ರಾಮ ಪಂಚಾಯ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಹುತೇಕ ಜನರು ಕೃಷಿಯನ್ನು ಅವಲಂಬಿಸಿ ಬದುಕುತ್ತಿ­ದ್ದಾರೆ. ಒಟ್ಟು 4231ಕುಟುಂಬಗಳಿದ್ದು, 23 ಸಾವಿರ ಜನಸಂಖ್ಯೆ ವಾಸವಾಗಿದ್ದಾರೆ. ಗ್ರಾಮ ಪಂಚಾಯ್ತಿಗೆ ವಿವಿಧ ಮೂಲಗಳಿಂದ ವಾರ್ಷಿಕ ₨ 60 ಲಕ್ಷ ಆದಾಯ ಬರಬೇಕು. ಆದರೆ ವಸೂಲಾತಿ ಮಾತ್ರ ₨ 35 ಲಕ್ಷ. ಬರುವ ಆದಾಯದಲ್ಲಿ 34 ಜನ ಸಿಬ್ಬಂದಿ ವೇತನಕ್ಕೆ ವಾರ್ಷಿಕ 18 ಲಕ್ಷ ವೆಚ್ಚವಾಗುತ್ತಿದೆ.

ಪಟ್ಟಣ ವರ್ಷ­ದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಕುಡಿ­ಯುವ ನೀರು, ಚರಂಡಿ, ಬೀದಿದೀಪ, ರಸ್ತೆಗಳ ಸಮಸ್ಯೆ ಹೆಚ್ಚಾಗತೊಡಗಿದೆ. ಗ್ರಾ.ಪಂ.ಗೆ ವಿವಿಧ ಯೋಜನೆಯಲ್ಲಿ ದೊರೆಯುವ ಅನುದಾನ ಮತ್ತು ತೆರಿಗೆಯಿಂದ ಬರುವ ಆದಾಯದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಸಾಧ್ಯವಾಗುತ್ತಿಲ್ಲ.

ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಬಹುತೇಕ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದ ಪಟ್ಟಣವನ್ನು ಪಟ್ಟಣ ಪಂಚಾಯ್ತಿ­ಯನ್ನಾಗಿ ಮೇಲ್ದರ್ಜೆಗೇರಿಸಿದರೆ ಲಾಭವಿಲ್ಲ. ಇದರ ಬದಲಾಗಿ ಪುರಸಭೆಯಾಗಿ ಮೇಲ್ದರ್ಜೆ­ಗೇರಿಸುವುದು ಸೂಕ್ತ ಎನ್ನುವ ವಿಷಯ ಸ್ಥಳೀಯ ಸಾರ್ವಜನಿಕ ಸ್ಥಳಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
       
ಗ್ರಾಮ ಪಂಚಾಯ್ತಿಯನ್ನು ಮೇಲ್ದರ್ಜೆಗೆ ಏರಿಸುವುದರಿಂದ ಜನ ಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಭಾರ ಬೀಳಲಿದೆ. ನಲ್ಲಿಕಂದಾಯ, ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ, ವ್ಯಾಪಾ­ರಿಗಳು ಸರ್ಕಾರ ನಿಗದಿ ಪಡಿಸುವ ತೆರಿಗೆ ಪಾವ­ತಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾ­ಣವಾಗುತ್ತದೆ. ಇದರಿಂದ ಮಧ್ಯಮ ವರ್ಗದ ಜನರು ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎನ್ನುವುದು ಇನ್ನು ಕೆಲವು ಜನರ ಅಭಿಪ್ರಾಯ.

ನೂತನ ತಾಲ್ಲೂಕು ರಚನೆ ಪ್ರಕ್ರಿಯೆ ನನೆ­ಗುದಿಗೆ ಬಿದ್ದಿರುವುದು ಈ ಭಾಗದ ಜನರ ನಿರಾ­ಸೆಗೆ ಕಾರಣವಾಗಿದೆ. ರಾಜ್ಯ ಸರ್ಕಾರ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿ ಜನರನ್ನು ಸಂತೋಷ ಪಡಿಸುವುದೇ ಅಥವಾ ಮೇಲ್ದರ್ಜೇ­ಗೇರಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದು, ಪಟ್ಟಣದ ಜನರ ಬಹುದಿನಗಳ ಕನಸು ಕನಸಾಗಿ ಉಳಿಯು­ತ್ತದೆಯೇ ಎನ್ನುವ ಅನು­ಮಾನ ಕೆಲವರನ್ನು ಕಾಡ­ತೊಡಗಿದೆ. ಎಲ್ಲಾ ಕ್ಷೇತ್ರ­ದಲ್ಲಿ ಹಿಂದುಳಿದಿರುವ ಈ ಪಟ್ಟಣ ಪಂಚಾಯ್ತಿ­ಯನ್ನಾಗಿ ಮೇಲ್ದರ್ಜೆಗೇರಿಸ­ಲೇ­ಬೇಕು ಎನ್ನುವುದು ಬಹುತೇಕ ಜನರ ­ಒತ್ತಾಯವಾಗಿದೆ.

ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿ ಮಾಡುವ ಬದಲು ಜನಸಂಖ್ಯೆ ಆಧಾರದ ಮೇಲೆ ಪುರಸಭೆಯಾಗಿ ಪರಿ­ವರ್ತಿಸುವುದು ಸೂಕ್ತ. ಇದರಿಂದ ಆದಾಯ ಹೆಚ್ಚಳ ಮತ್ತು ಸರ್ಕಾರದ ಹೆಚ್ಚಿನ ಅನುದಾನ ದೊರೆಯಲಿದೆ. ಮೂಲ ಸಮಸ್ಯೆ­ಗಳಿಗೆ ಶಾಶ್ವತ ಪರಿಹಾರ ನೀಡಬಹುದು.
-ಎನ್. ರುದ್ರಗೌಡ. ಬಳ್ಳಾರಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರು.

ಗ್ರಾಮ ಪಂಚಾಯ್ತಿಯನ್ನು ಮೇಲ್ದರ್ಜೆ­ಗೇರಿಸುವುದರಿಂದ ಅನುದಾನ ದೊರೆ­ಯ­ಲಿದೆ ಎನ್ನುವುದು ಸಂತಸದ ವಿಷಯವಾಗಿದೆ. ಆದರೆ ಸ್ಥಳೀಯ ಜನಸಾಮಾನ್ಯರು ಹೆಚ್ಚಿನ ತೆರಿಗೆ ಭಾರ ಎದುರಿಸಬೇಕಾಗುತ್ತದೆ ಎನ್ನುವುದು ದುಃಖದ ಸಂಗತಿ.
-ಎಚ್.ಎಂ. ವಿಶ್ವನಾಥಸ್ವಾಮಿ ಸಿಪಿಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ.

ವಿಧಾನಸಭಾ ಕ್ಷೇತ್ರ ಕಳೆದುಕೊಂಡ ನಂತರ ರಾಜಕೀಯ ಮಹತ್ವ ಕಳೆದುಕೊಂಡು ಪಟ್ಟಣದಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದೆ. ತಾಲ್ಲೂಕು ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿರುವ ಕುರುಗೋಡು ಗ್ರಾಮ ಪಂಚಾ­­ಯ್ತಿಯನ್ನು ಮೇಲ್ದರ್ಜೆಗೆ ಏರಿಸು­ವು­ದ­ರಿಂದ ರಾಜಕೀಯ ಮಹತ್ವ ದೊರೆಯ­ಲಿದೆ. ಸರ್ಕಾರದ ಅನುದಾನ ಮತ್ತು ತೆರಿಗೆ ಸಂಗ್ರಹದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು.
-ಟಿ. ಸಿದ್ದಪ್ಪ ಗ್ರಾಮ ಪಂಚಾಯ್ತಿ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT