ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿ, ಮೇಜು ಬೀದಿಗೆಸೆದ ರೈತರು

ಕಾಲುವೆ ನೀರಿಗಾಗಿ ಕಚೇರಿಗೆ ಬೀಗ
Last Updated 4 ಡಿಸೆಂಬರ್ 2012, 9:38 IST
ಅಕ್ಷರ ಗಾತ್ರ

ಬೀಳಗಿ: ಕಾಲುವೆ  ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ಇಲ್ಲಿನ ಘಟಪ್ರಭಾ ಎಡದಂಡೆ ಕಾಲುವೆಯ ವಿಭಾಗೀಯ ಹಾಗೂ ಉಪವಿಭಾಗೀಯ ಕಚೇರಿಗಳ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಹಾಕಿದ ರೈತರು ಕಚೇರಿಗಳಿಗೆ ಬೀಗ ಜಡಿದಿದ್ದಲ್ಲದೇ ಕಚೇರಿಯ ಕುರ್ಚಿ, ಮೇಜು ಸಹಿತ ಪೀಠೋಪಕರಣಗಳನ್ನು ಎತ್ತಿ ತಂದು ಬೀದಿಗೆಸೆದರು.

ಸೋಮವಾರ ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ಕಚೇರಿಗೆ ಬಂದ ರೈತರು, ಮೇಲ್ಭಾಗದ ರೈತರು ಡೀಸೆಲ್ ಎಂಜಿನ್, ವಿದ್ಯುತ್ ಮೋಟಾರು ಬಳಸಿ ಅಕ್ರಮವಾಗಿ ನೀರು ಪಡೆದುಕೊಳ್ಳು ತ್ತಾರೆ. ಅಕ್ರಮವಾಗಿ ಕಾಲುವೆಯ ಕೆಳ ಭಾಗದಲ್ಲಿ ಕೊಳವೆಗಳನ್ನು ಜೋಡಿಸಿಕೊಳ್ಳುತ್ತಾರೆ. ಕಾಂಕ್ರೀಟ್ ಒಡೆದು ನೀರೊಯ್ಯುತ್ತಾರೆ. ಅಂಥವರ ಮೇಲೆ ನೀವು ಕಾನೂನು ಕ್ರಮ ಜರುಗಿಸುತ್ತಿಲ್ಲವೆಂದು ಆರೋಪಿಸಿ, ಅಧಿಕಾರಿಗಳ ವಿರುದ್ಧ ಕೂಗಾಡಿದರು.

ನಂತರ ನಡೆದ ಸಭೆಯಲ್ಲಿ ಎಂ.ಎನ್. ಪಾಟೀಲ ಮಾತನಾಡಿ, ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯೇ ನಮಗೆ ನೀರು ಬರದಂತಾಗಿದೆ. ಹಿಡಕಲ್ಲ ಜಲಾಶಯದಿಂದ ಹಿಡಿದು ಟೇಲೆಂಡ್ ಪ್ರದೇಶದವರೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೆ ಅಧಿಕಾರ ಸ್ಥಾನದಲ್ಲಿದ್ದು ತಮ್ಮ ಕಾರ್ಖಾನೆಗಳಿಗೆ ಕಬ್ಬು ಬಂದರೆ ಸಾಕೆಂದು ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ಟೇಲೆಂಡ್‌ಗೆ ನೀರು ಬರದಿರುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇವಲ ಮೇಲ್ಭಾಗದ ರೈತರಿಗೆ ಪ್ರಯೋಜನವಾಗಿರುವ ಆನ್ ಅಂಡ್ ಆಫ್ ಸಿಸ್ಟಮ್‌ನ್ನು ತಕ್ಷಣವೇ ನಿಲ್ಲಿಸಿ ನಮಗೆ ನಿರಂತರ ನೀರು ಹರಿಸಬೇಕೆಂದು ಒತ್ತಾಯಿಸಿದರಲ್ಲದೇ, ಈಗಿದ್ದ ಅಸಮರ್ಥ ಅಧಿಕಾರಿಗಳ ವರ್ಗಾವಣೆ ಮಾಡಿ ದಕ್ಷ ಅಧಿಕಾರಿಗಳನ್ನು ಇಲ್ಲಿಗೆ ಕರೆತರಬೇಕೆಂದು ಹೇಳಿದರು.

ಬೀಜ, ಗೊಬ್ಬರಕ್ಕೆ ಸಾಕಷ್ಟು ವೆಚ್ಚ ಮಾಡಿ ಬಿತ್ತನೆ ಮಾಡಿದ್ದೇವೆ. ಇಂಥ ಸಂದರ್ಭದಲ್ಲಿ ನೀರು ಪೂರೈಸದೇ ಹೋದಲ್ಲಿ ಬೆಳೆಗಳು ಒಣಗಿ ನಾವು ನಷ್ಟಕ್ಕೀಡಾಗುವುದಲ್ಲದೇ ಮೇವು ಸಿಗದಂತಾಗಿ ನಮ್ಮ ದನ ಕರುಗಳನ್ನು ಕಸಾಯಿ ಖಾನೆಗೆ ಸಾಗಿಸುವಂತಹ ದುರಂತಕ್ಕೀಡಾಗಬೇಕಾ ಗುತ್ತದೆ ಎಂದು ಗೋಳಾಡುತ್ತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಕಂಡು ಬಂತು.

ರೈತರ ಧರಣಿ ಮುಂದುವರಿದಿದ್ದು ಎಂ.ಎನ್. ಪಾಟೀಲ, ಸಿದ್ದು ಮೇಟಿ, ಯಲ್ಲಪ್ಪ ಮೇಟಿ, ವಿವೇಕಾನಂದ ಕೊಲ್ಹಾರ, ಈರಯ್ಯ ವಸ್ತ್ರದ ಸೇರಿದಂತೆ ಹಲವಾರು ಮುಖಂಡರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT