ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡುಂಕುಳಂ ಆರಂಭಕ್ಕೆ ಎರಡೇ ಮೆಟ್ಟಿಲು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಷ್ಯಾದ ಸಹಯೋಗದೊಂದಿಗೆ ತಮಿಳುನಾಡಿನ ಕೂಡುಂಕುಳಂನಲ್ಲಿ ನಿರ್ಮಿಸುತ್ತಿರುವ 1000 ಮೆಗಾವಾಟ್ ಅಣುಶಕ್ತಿ ಘಟಕ ಪೂರ್ಣಗೊಳ್ಳಲು ಎರಡು ಹಂತಗಳು ಬಾಕಿ ಇವೆ~ ಎಂದು ಘಟಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಘಟಕ ನಿರ್ಮಾಣ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಘಟಕಕ್ಕೆ ಇಂಧನ ತುಂಬಿಸುವ ಕಾರ್ಯ ಪೂರ್ಣಗೊಂಡಿದೆ. ಎರಡು ಹಂತಗಳನ್ನು ಪೂರೈಸಿದರೆ ಘಟಕ ಕಾರ್ಯಾರಂಭ ಮಾಡುತ್ತದೆ~ ಎಂದು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. (ಎನ್‌ಪಿಸಿಐಎಲ್)ನ ತಾಂತ್ರಿಕ ವಿಭಾಗದ ನಿರ್ದೇಶಕ ಶಿವ ಅಭಿಲಾಷ್ ಭಾರದ್ವಾಜ್ ಹೇಳಿದ್ದಾರೆ.

ಇಲ್ಲಿ ನಡೆದ ಭಾರತೀಯ ಇಂಧನ ಒಕ್ಕೂಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅಣುಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ)ಯವರು ಕೂಡುಂಕುಳಂನ ಅಣುಶಕ್ತಿ ಘಟಕಕ್ಕೆ ಭೇಟಿ ನೀಡಿ ಪರಾಮರ್ಶಿಸಿದ ನಂತರ, ರಿಯಾಕ್ಟರ್ ಪ್ರೆಷರ್ ವೆಸೆಲ್ ಮುಚ್ಚಲು ಎನ್‌ಪಿಸಿಐಲ್ ಅನುಮತಿ ನೀಡಿದೆ.

ರಿಯಾಕ್ಟರ್‌ಗೆ 163 ಬಂಡಲ್‌ಗಳಷ್ಟು ಯುರೇನಿಯಂ ಇಂಧನವನ್ನು ತುಂಬಿ, ಸೆಪ್ಟೆಂಬರ್ 19ರಂದು ಚಾಲನೆ ನೀಡಲಾಗಿದೆ. ಅಕ್ಟೋಬರ್ 2ರಂದು ಈ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಅಣುಶಕ್ತಿ ಘಟಕ ಕಾರ್ಯಾರಂಭಕ್ಕೆ ಮೊದಲು ಎಇಆರ್‌ಬಿಯಿಂದ ಅನುಮೋದನೆ ದೊರೆಯಬೇಕು. ಅದು ಸಿಕ್ಕ ನಂತರ ರಿಯಾಕ್ಟರ್‌ನಲ್ಲಿರುವ ಒತ್ತಡವನ್ನು ಪರೀಕ್ಷಿಸಿ, ಆ ಫಲಿತಾಂಶದ ಮೇಲೆ ಅದನ್ನು ಮುಚ್ಚಬೇಕು. ರಿಯಾಕ್ಟರ್ ಒಳಗೆ ಒತ್ತಡ ಮತ್ತು ಉಷ್ಣತೆ ಕೃತಕವಾಗಿ ಏರಿಕೆಯಾದರೆ, ಅದನ್ನು ನಿವಾರಿಸಬೇಕು. ಎಲ್ಲವೂ ಸರಿ ಹೋದರೆ, 1000 ಮೆಗಾವಾಟ್ ರಿಯಾಕ್ಟರ್ ಅನ್ನು ಲೋಕಾರ್ಪಣೆ ಮಾಡಬಹುದು~ ಎಂದು ಹೇಳಿದ್ದಾರೆ.

`ನ. 1ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡುಂಕುಳಂಗೆ ಭೇಟಿ ನೀಡಿದ ನಂತರ ಈ ಘಟಕ ಕಾರ್ಯಾರಂಭ ಮಾಡಲಿದೆಯೇ~ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, `ನಾವು ಸಮಯ ಆಧಾರಿತವಾಗಿ ಕೆಲಸ ಮಾಡುತ್ತಿಲ್ಲ. ನಾವು ಹಂತ ಹಂತವಾಗಿ ಈ ಘಟಕವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ~ ಎಂದರು.

`ಯೋಜನೆ ಪೂರ್ಣಗೊಳ್ಳಲು ಇನ್ನೆಷ್ಟು ಹಂತಗಳು ಬಾಕಿ ಇವೆ~ ಎಂಬ ಪ್ರಶ್ನೆಗೆ, `ಶೀಘ್ರದಲ್ಲೇ~ ಎಂದು ಚುಟುಕಾಗಿ ಉತ್ತರಿಸಿದರು. ರಷ್ಯಾ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ `ಇಂಡೋ-ರಷ್ಯಾ ಅಣುಶಕ್ತಿ ಘಟಕ ಯೋಜನೆ~ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಪರಿಸರ ಸಂಘಟನೆಗಳ ಪ್ರತಿಭಟನೆಯಿಂದಾಗಿ, ಅದು ಮುಂದಕ್ಕೆ ಹೋಗಿದೆ.
 

`ಏಳು ಹಂತದ ಸುರಕ್ಷತೆ~
ನವದೆಹಲಿ (ಐಎಎನ್‌ಎಸ್):
`ಕೂಡುಂಕುಳಂನ ಅಣುಸ್ಥಾವರ ಘಟಕಕ್ಕೆ ಏಳು ಪದರಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ~ ಎಂದು ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.

ಇಲ್ಲಿ ನಡೆದ ಭಾರತೀಯ ಇಂಧನ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, `ಘಟಕಕ್ಕೆ ನಾನು ಹಲವು ಬಾರಿ ಭೇಟಿ ನೀಡಿದ್ದೇನೆ. ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ನನಗೆ ವಿಶ್ವಾಸವಿದೆ~ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ನಡೆಯುತ್ತಿರುವ ಏಳು ಹೊಸ ಯೋಜನೆಗಳು ಪೂರ್ಣಗೊಂಡರೆ, 2017ರ ಹೊತ್ತಿಗೆ ದೇಶದಲ್ಲಿ 10,080 ಮೆಗಾವಾಟ್ ಅಣು ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
`ಅಣುಶಕ್ತಿ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT