ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂರಣಗೆರೆ: ಯೋಜನೆ ಪೂರ್ಣ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: `ತಾಲ್ಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿಸುವುದೇ ನನ್ನ ಗುರಿಯಾಗಿದ್ದು, ತಾಲ್ಲೂಕಿನ ಬರಡಾಗಿರುವ ಎಲ್ಲಾ ಕೆರೆಗಳು ತುಂಬಿದಾಗ ತಮ್ಮ ರಾಜಕೀಯ ಜೀವನ ಸಾರ್ಥಕವಾಗುತ್ತದೆ~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಹೇಳಿದರು.

 ತಾಲ್ಲೂಕಿನ ಗರಕಹಳ್ಳಿ ಗ್ರಾಮದ ಏತನೀರಾವರಿ ಯೋಜನೆ ಮೂಲಕ ಗ್ರಾಮದ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

 ಮುಂದಿನ ಒಂದೂವರೆ ತಿಂಗಳಲ್ಲಿ ಗರಕಹಳ್ಳಿ ಏತ ನೀರಾವರಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಲಿದ್ದು, ಈ ಯೋಜನೆ ಮೂಲಕ ತಾಲ್ಲೂಕಿನ 15 ಕೆರೆಗಳಿಗೆ ನೀರುಣಿಸಲಾಗುವುದು ಎಂದ ಅವರು, ಪ್ರಾಯೋಗಿಕವಾಗಿ ಗರಕಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ. ಎರಡು-ಮೂರು ದಿನಗಳೊಳಗೆ ಕೆರೆ ಸಂಪೂರ್ಣ ಭರ್ತಿಯಾಗಲಿದೆ ಎಂದು ತಿಳಿಸಿದರು.

 ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡ  ಚನ್ನಪಟ್ಟಣ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿ ಬಾರದಂತೆ ಎಚ್ಚರವಹಿಸಲಾಗದು. ಇದಕ್ಕಾಗಿ ತಾಲ್ಲೂಕಿನ ಜೀವನಾಡಿ ಕಣ್ವ ಜಲಾಶಯಕ್ಕೆ ಹೇಮಾವತಿ ನದಿಯಿಂದ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದರು.

`ಕೂರಣಗೆರೆ ಏತ ನೀರಾವರಿ ಯೋಜನೆಯ ಸರ್ವೆ ಕಾರ್ಯ 15-20 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಮುಂದಿನ ತಿಂಗಳು ಯೋಜನೆಯ ಸಂಪೂರ್ಣ ವಿವರ ಲಭ್ಯವಾಗಲಿದೆ. ಆದಷ್ಟು ಶೀಘ್ರದಲ್ಲಿ ಈ ಯೋಜನೆಗೂ ಚಾಲನೆ ಸಿಗಲಿದೆ~ ಎಂದು ಸಚಿವರು ತಿಳಿಸಿದರು. ಈ ಯೋಜನೆ ಮೂಲಕ ತಾಲ್ಲೂಕಿನ ಬಹುತೇಕ  ಕೆರೆಗಳಿಗೂ ನೀರು ಹರಿಯಲಿದೆ ಎಂದರು.

ಜಿಲ್ಲೆಯಲ್ಲಿನ ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ 7-8 ಯೋಜನೆಗಳಿಗೆ ಅನುಮೋದನೆ ದೊರೆಯಲಿದೆ ಎಂದ ಯೋಗೇಶ್ವರ್, ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಗರಕಹಳ್ಳಿ ಕೆರೆಗೆ 2 ಯಂತ್ರಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬುಧವಾರದಂದು ಇನ್ನೊಂದು ಮೋಟಾರ್ ಚಾಲನೆಗೊಳ್ಳಲಿದೆ. ಈ ಮೂಲಕ ಇನ್ನಷ್ಟು ಹೆಚ್ಚು ನೀರು ಕೆರೆಗೆ ಹರಿಯಲಿದೆ. ಇದಾದ ನಂತರ ಮೆಂಗಳ್ಳಿ ಕೆರೆ, ನೇರಳೂರು, ಕೃಷ್ಣಾಪುರ, ಸುಳ್ಳೇರಿ, ಸೋಗಾಲ, ಹಾರೋಕೊಪ್ಪ ಕೆರೆಗಳಿಗೆ ಹಂತ ಹಂತವಾಗಿ ನೀರು ಹರಿಸಲಾಗುವುದು ಎಂದು ತಿಳಿಸಿದರು.

 ಯೋಜನೆ ಪೂರ್ಣಗೊಳ್ಳಲು ಈ ಭಾಗದ ರೈತರ ಹಾಗೂ ಹೋರಾಟಗಾರರ ಸಹಕಾರ ಪ್ರಮುಖ ಕಾರಣವಾಗಿದ್ದು, ಪೈಪ್ ಹಾದುಹೋಗಲು ಜಮೀನುಗಳಲ್ಲಿ ಜಾಗ ನೀಡಿದ ಎಲ್ಲಾ ರೈತರಿಗೂ, ಯೋಜನೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂದರ್ಭದಲ್ಲಿ ಯೋಗೀಶ್ವರ್ ಕೃತಜ್ಞತೆ ಸಲ್ಲಿಸಿದರು.

ಸಂದರ್ಭದಲ್ಲಿ ಇಗ್ಗಲೂರು ಬಸವರಾಜು, ಮುಖಂಡರಾದ ರಾಮಚಂದ್ರ, ಹುಲುವಾಡಿ ಶಿವಕುಮಾರ್, ಸಿದ್ದರಾಮಣ್ಣ, ಲಿಂಗರಾಜೇಗೌಡ,, ಹರೂರು ರಾಜಣ್ಣ, ಶಾರದ ಚಂದ್ರಶೇಖರ್, ಶಂಕರೇಗೌಡ, ಎಸ್.ಸಿ. ಶೇಖರ್, ಮರೀಗೌಡ, ಪ್ರೇಮ್‌ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಇಂಜಿನಿಯರ್ ವೆಂಕಟೇಗೌಡ ಸೇರಿದಂತೆ ಗರಕಹಳ್ಳಿ ಗ್ರಾಮದ ಮುಖಂಡರುಗಳು ನೂರಾರು ರೈತರು ಸಂದರ್ಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT