ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಸು ಬಡವಾಯ್ತೇ?

ಹೆತ್ತವರ ಕಲಹ
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರೀಶ್ ಮತ್ತು ವಾಣಿಗೆ ಮದುವೆಯಾಗಿ ಮೂರು ವರ್ಷಗಳಾಗಿವೆ. ವಾಣಿಗೆ ಮದುವೆಯಾದಾಗ ಎಲ್ಲರಂತೆಯೇ ಸಂತೋಷ. ಗಂಡ ಬ್ಯಾಂಕ್‌ನಲ್ಲಿ ಕೆಲಸಕ್ಕಿದ್ದ. ಮದುವೆಯಾದ ಮೊದಲ ಮೂರು ತಿಂಗಳು ಎಲ್ಲ ತುಂಬಾ ಚೆನ್ನಾಗಿಯೇ ಇತ್ತು. ನಂತರ ಒಂದು ದಿನ ಏನೋ ಸಣ್ಣ ವಿಷಯಕ್ಕೆ ಮಾತಾಗಿ ಜಗಳ ಬಂತು. ನೋಡ ನೋಡುತ್ತಿದ್ದಂತೆಯೇ ಮಾತಿಗೆ ಮಾತು ಬೆಳೆದು, ಗಂಡ ವಾಣಿಯ ಮೇಲೆ ಕೈ ಮಾಡಿದ. ವಾಣಿಗಂತೂ ಆಶ್ಚರ್ಯ. ಡಿಗ್ರಿ ಓದಿದ್ದ ಅವಳಿಗೆ ಕೈ ಎತ್ತುವುದು ತುಂಬಾ ಹೀನಾಯ ಅನ್ನಿಸಿತು.

ಏನೋ ಒಂದು ಸಲ ತಾಳ್ಮೆ ಕಳೆದುಕೊಂಡ ಎಂದು ಸುಮ್ಮನಾದಳು. ಕೆಲವು ದಿನಗಳಾದ ನಂತರ, ಇದು ಮತ್ತೆ ಮತ್ತೆ ಪುನರಾವರ್ತನೆ ಆಗತೊಡಗಿತು.  ವಾಣಿಯಂತೂ ಖಿನ್ನತೆಗೇ ಒಳಗಾದಳು. ಅವಳ ಒತ್ತಾಯದ ಮೇರೆಗೆ ಇಬ್ಬರೂ ಮನಃಶಾಸ್ತ್ರಜ್ಞರಲ್ಲಿ ಆಪ್ತಸಲಹೆಗೆ ಹೋದರು. ಅವರು ಇಬ್ಬರನ್ನೂ ಬೇರೆ ಬೇರೆ ಕೂರಿಸಿಕೊಂಡು ಮಾತನಾಡಿದರು. ಹರೀಶನಿಗೆ ವಾಣಿಯ ಮೇಲೆ ಪ್ರೀತಿಯಿಲ್ಲ ಎಂದಲ್ಲ. ಅವನು ಬೆಳೆದ ಪರಿಸರವೇ ಆ ತರದ್ದು. ಅವನು ಬಾಲ್ಯದಲ್ಲಿದ್ದಾಗ ತಂದೆ  ಯಾವಾಗಲೂ ತಾಯಿಗೆ ಹೊಡೆಯುತ್ತಿದ್ದುದನ್ನು ನೋಡಿಕೊಂಡೇ ಬೆಳೆದಿದ್ದ. ಅವನ ದೃಷ್ಟಿಯಲ್ಲಿ ಹೆಂಡತಿಯ ಮೇಲೆ ಕೈ ಮಾಡಿದ್ದು ತಪ್ಪಾಗಿರಲಿಲ್ಲ. ಹೆಂಡತಿ ಅವನ ಮಾತು ಕೇಳದೇ, ಎದುರುತ್ತರ ಹೇಳಿದಾಗ ತಾನು ಹೊಡೆದದ್ದು ಸರಿಯಾಗಿಯೇ ಇದೆ ಎಂಬ ಭಾವನೆ. ಈ ರೀತಿ ದೈಹಿಕ ಮಟ್ಟದ ಹಿಂಸೆ/ ದೌರ್ಜನ್ಯವನ್ನು ಸಮಸ್ಯೆಗಳ ಪರಿಹಾರಕ್ಕಾಗಿ ಉಪಯೋಗಿಸುವುದು ಎಷ್ಟು ಅಮಾನವೀಯ ಎಂಬುದೇ ಅವನಿಗೆ ತಿಳಿದಿರಲಿಲ್ಲ.

ವಾಣಿಯಾದರೋ ಸೂಕ್ಷ್ಮವಾಗಿ ಬೆಳೆದವಳು. ಅವಳ ತಂದೆ ತಾಯಿ ಇಬ್ಬರೂ ಕೆಲಸದಲ್ಲಿದ್ದವರು. ಯಾವತ್ತೂ ತಮ್ಮಲ್ಲಿ ಒಬ್ಬರಿಗೊಬ್ಬರು ಇರಲಿ, ಮಕ್ಕಳ ಮೇಲೂ ಕೈ ಮಾಡಿದವರಲ್ಲ. ಮನಃಶಾಸ್ತ್ರಜ್ಞರು ಹರೀಶ್ ಮತ್ತು ವಾಣಿಗೆ ಆಪ್ತ ಸಲಹೆ ನೀಡಿದರು. ವಾಣಿಗೆ, ಹರೀಶ್ ಬೆಳೆದ ಪರಿಸರ ಮತ್ತು ಅವನ ವ್ಯಕ್ತಿತ್ವದ ಮೇಲೆ ಆಗಿರುವ ಪರಿಣಾಮವನ್ನು ವಿವರಿಸಿದರು.

***
ಶ್ರೀನಿವಾಸ ಎಂಟು ವರ್ಷದ ಬಾಲಕ. ಶಿಕ್ಷಕರು ಗಮನಿಸಿದಂತೆ, ಈಗ ಒಂದು ತಿಂಗಳಿನಿಂದ ಮಂಕಾಗಿರುತ್ತಾನೆ. ಇಷ್ಟು ದಿನ ಅವನ ತಂದೆ ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು ಕುಟುಂಬದೊಟ್ಟಿಗೇ ಬಂದು ವಾಸಿಸುತ್ತಿದ್ದಾರೆ. ಮನೆಯಲ್ಲಿ ದಿನಾಲೂ ಏನಾದರೊಂದು ರಗಳೆ. ಯಾವುದಾದರೊಂದು ವಿಷಯಕ್ಕೆ ತಂದೆ ತಾಯಿಗೆ ಜಗಳ. ನಂತರ ತಾಯಿಗೆ ತಂದೆ ಹೊಡೆಯುವುದು, ತಾಯಿಯಂತೂ ಸದಾ ಖಿನ್ನತೆಯಲ್ಲಿ ಇರುತ್ತಾಳೆ.

ಈ ಜಗಳದ ಸಮಯದಲ್ಲಿ ಒಂದೆರಡು ಸಲ ತಾಯಿಯನ್ನು ಬಿಡಿಸಲು ಹೋದ ಶ್ರೀನಿವಾಸನಿಗೂ ಹೊಡೆತ ಬಿದ್ದದ್ದುಂಟು. ಅವನಿಗಂತೂ ತನ್ನದೇ ತಪ್ಪೇನೋ ಎಂಬ ತಪ್ಪು ಭಾವನೆ ಇತ್ತೀಚೆಗೆ ಕಾಡಲು ಶುರುವಾಗಿದೆ. ಓದುವುದರಲ್ಲಿ ನಿರಾಸಕ್ತಿ, ಆಟವಾಡಲು ಬೇಸರ, ಮನೆಯಲ್ಲಿ ಇರುವುದಕ್ಕೂ ಆಗುತ್ತಿಲ್ಲ. ಸದಾ ಹತ್ತಿರದಲ್ಲಿರುವ ಕೆರೆಯ ಹತ್ತಿರ ಕುಳಿತುಕೊಂಡು ಯೋಚಿಸುತ್ತಿರುತ್ತಾನೆ.

***
ಮೇಲೆ ವಿವರಿಸಿದ ಉದಾಹರಣೆಗಳು ಕೌಟುಂಬಿಕ ಕಲಹ/ ಹಿಂಸೆ ಮತ್ತು ಮಕ್ಕಳ ಮೇಲಿನ ಪರಿಣಾಮದ ವಿವಿಧ ಆಯಾಮಗಳು. ಕೌಟುಂಬಿಕ ಕಲಹಕ್ಕೂ ಮಕ್ಕಳ ಮೇಲಿನ ದೌರ್ಜನ್ಯಕ್ಕೂ ಅತ್ಯಂತ ನಿಕಟವಾದ ಸಂಬಂಧವಿದೆ ಎಂದರೆ ತಪ್ಪಾಗಲಾರದು. ಎರಡೂ ರೀತಿಯ ಹಿಂಸೆಗಳು ಸಾಮಾನ್ಯವಾಗಿ ಒಂದೇ ಕುಟುಂಬದಲ್ಲಿ ಕಂಡುಬರುತ್ತವೆ. ಅಮೆರಿಕದ ಒಂದು ರಾಷ್ಟ್ರೀಯ ಸಮೀಕ್ಷೆಯಲ್ಲಿ ಆರು ಸಾವಿರ ಕುಟುಂಬಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ, ಸುಮಾರು ಶೇಕಡಾ 50ರಷ್ಟು ಗಂಡಸರು ತಮ್ಮ ಹೆಂಡತಿಯ ಮೇಲಷ್ಟೇ ಅಲ್ಲ, ಮಕ್ಕಳ ಮೇಲೂ ದೈಹಿಕ ದೌರ್ಜನ್ಯ ಎಸಗಿದ್ದರು. ಇನ್ನೊಂದು ಇದೇ ರೀತಿಯ ಅಧ್ಯಯನದಲ್ಲಿ, ದೌರ್ಜನ್ಯಕ್ಕೊಳಗಾದ ಶೇಕಡಾ ಅರವತ್ತರಷ್ಟು ಮಕ್ಕಳ ತಾಯಂದಿರು ಸಹ ಅವರ ಗಂಡಂದಿರಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು.

ಕೌಟುಂಬಿಕ ಹಿಂಸೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಎರಡೂ ಮಕ್ಕಳ ಮನೋವಿಕಾಸಕ್ಕೆ, ವ್ಯಕ್ತಿತ್ವ ನಿರ್ಮಾಣಕ್ಕೆ ಮತ್ತು ಸಮಾಜಕ್ಕೆ ಹಾನಿಕರ. ಇದಷ್ಟೇ ಅಲ್ಲ, ಅಧ್ಯಯನಗಳ ಪ್ರಕಾರ ಮನೆಯಲ್ಲಿ ಸದಾ ಕೌಟುಂಬಿಕ ಕಲಹದ ನಡುವೆ ಬೆಳೆಯುವ ಮಕ್ಕಳು, ಒಂದೋ ತಾವೇ ದೌರ್ಜನ್ಯಕ್ಕೆ ಒಳಗಾಗಬಹುದು ಇಲ್ಲವೇ ಮುಂದೆ ದೊಡ್ಡವರಾದ ಮೇಲೆ ಸ್ವತಃ ಬೇರೆಯವರ ಮೇಲೆ ದೌರ್ಜನ್ಯ ಎಸಗಬಹುದು.

ಒಂದು ಕುಟುಂಬದಲ್ಲಿ ಗಂಡ ಹೆಂಡತಿಯ ಮೇಲೆ ದೈಹಿಕ ದೌರ್ಜನ್ಯ ಎಸಗುವ ಸಂದರ್ಭದಲ್ಲಿ ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಗಾಯ ಮಾಡಬಹುದು, ಹೊಡೆಯಬಹುದು. ಹೀಗೆ ಮಾಡುವುದರಿಂದ ಹೆಂಡತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದೇ ಈ ಕೃತ್ಯದ ಹಿಂದಿನ ಕಾರಣ. ಮಕ್ಕಳನ್ನೂ ಭಾವನಾತ್ಮಕವಾಗಿ ಕೆಟ್ಟ ಶಬ್ದಗಳಿಂದ ಬೈದು ನೋಯಿಸಬಹುದು. ಮಕ್ಕಳೊಡನೆ ಈ ರೀತಿ ವರ್ತಿಸುವ ಮೂಲಕ ತಾಯಿಗೆ ನೋವುಂಟು ಮಾಡಬೇಕು ಎಂಬ ಉದ್ದೇಶ ಇದರ ಹಿಂದೆ ಇರುತ್ತದೆ.

ಆಕಸ್ಮಿಕವಾಗಿ ಮಕ್ಕಳಿಗೆ ದೈಹಿಕ ಗಾಯಗಳಾಗಬಹುದು. ಉದಾಹರಣೆಗೆ, ಕುಡಿದು ಬಂದ ಗಂಡ ಸಿಟ್ಟಿನಿಂದ ಮತ್ತಿನಲ್ಲಿ ಹೆಂಡತಿಯ ಮೇಲೆ ಯಾವುದೋ ಒಂದು ವಸ್ತುವನ್ನು ಎಸೆದಾಗ, ಅದು ಆಕಸ್ಮಿಕವಾಗಿ ಮಗುವಿಗೆ ತಾಗಬಹುದು. ಇನ್ನು ಕೆಲವು ಸಲ ಚಿಕ್ಕ ಮಕ್ಕಳು, ತಾಯಿಯನ್ನು ತಂದೆಯ ಹೊಡೆತದಿಂದ ರಕ್ಷಿಸಲು ಹೋಗಿ, ತಾವೇ ಹೊಡೆತ ತಿಂದ ಪ್ರಸಂಗಗಳೂ ಉಂಟು. ಮತ್ತೆ ಹಲವು ಬಾರಿ, ಬೇಸರಗೊಂಡ ತಾಯಿ ತನ್ನ ಸಿಟ್ಟನ್ನೆಲ್ಲ ಮಗುವಿಗೆ ಹೊಡೆಯುವ ಮೂಲಕ ತೀರಿಸಿಕೊಳ್ಳಲು ಮುಂದಾಗಬಹುದು.

`ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು' ಎಂಬಂತೆ ದೈಹಿಕವಾಗಿ ಮಕ್ಕಳಿಗೆ ಏನೂ ತೊಂದರೆ ಆಗದಿದ್ದರೂ, ಕೌಟುಂಬಿಕ ಕಲಹಗಳಲ್ಲಿ ಮುಳುಗಿದ  ತಂದೆ ತಾಯಿಯು ಮಕ್ಕಳ ಬೇಕು-ಬೇಡಗಳು, ದೈನಂದಿನ ಅಗತ್ಯಗಳನ್ನು ಅಸಡ್ಡೆ ಮಾಡುತ್ತಾರೆ. ಅಲ್ಲದೆ ಪ್ರೀತಿ ವಿಶ್ವಾಸಗಳ ಕೊರತೆಯೂ ಉಂಟಾಗಬಹುದು.

ಎಲ್ಲ ವಯಸ್ಸಿನ ಮಕ್ಕಳ ಮೇಲೂ ಕೌಟುಂಬಿಕ ಕಲಹಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ. ಎರಡು ವರ್ಷದೊಳಗಿನ ಮಕ್ಕಳಿಗೆ ಅಷ್ಟೇನೂ ತಿಳಿಯದಿದ್ದರೂ, ಮುಂದೆ ಅವರು ತಂದೆ ತಾಯಿಯೊಂದಿಗೆ ಸರಿಯಾದ ಬಾಂಧವ್ಯ ಬೆಳೆಸಿಕೊಳ್ಳದೇ ಇರಬಹುದು. ಎರಡರಿಂದ ಮೂರು ವರ್ಷದ ಮಕ್ಕಳು ಈ ಕಲಹಗಳನ್ನು ವೀಕ್ಷಿಸಿ ತಾವೂ ಅದರ ಭಾಗವಾದಾಗ, ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ರಾತ್ರಿಯ ವೇಳೆ ಭಯಾನಕವಾದ ಕನಸುಗಳಿಂದ ಏಳುವುದು, ನಿದ್ರೆಯ ತೊಂದರೆಗಳೂ ಪ್ರಾರಂಭವಾಗುತ್ತವೆ. ಶಾಲೆಗೆ ಹೋಗುವ ಮಕ್ಕಳಲ್ಲಿ ಹಲವಾರು ರೀತಿಯ ನಡವಳಿಕೆಯ ತೊಂದರೆಗಳು (ಉದಾ: ಸ್ನೇಹಿತರೊಂದಿಗೆ ಕೋಪ, ಹೊಡೆಯುವುದು), ಆತಂಕ, ಖಿನ್ನತೆ ಕಾಣಿಸಬಹುದು. ಹದಿಹರೆಯದವರಲ್ಲಿ ಭಾವನಾತ್ಮಕ ಸಮಸ್ಯೆಗಳು, ಖಿನ್ನತೆ, ಆತ್ಮಹತ್ಯೆ, ತಂದೆ ತಾಯಿಯೊಂದಿಗೆ ಸಿಡಿಮಿಡಿ, ಮಾದಕ ವ್ಯಸನ ಕಾಣುತ್ತದೆ. ಸಮಾಜದ್ರೋಹಿ ಚಟುವಟಿಕೆಗಳಲ್ಲೂ ಮಕ್ಕಳು ಪಾಲ್ಗೊಳ್ಳಬಹುದು. ದೊಡ್ಡವರಾದಂತೆ ಜೀವನದ ಸಮಸ್ಯೆಗಳಿಗೆ ಹಿಂಸೆಯೇ ಪರಿಹಾರ ಎಂಬ ಭಾವನೆ ಬೆಳೆದು, ಅದೇ ರೀತಿಯ ವ್ಯಕ್ತಿತ್ವವನ್ನು ಅವರು ಬೆಳೆಸಿಕೊಳ್ಳಬಹುದು.

ಹಾಗೆಂದ ಮಾತ್ರಕ್ಕೆ ಕೌಟುಂಬಿಕ ಕಲಹಗಳಿರುವ ಎಲ್ಲ ಮಕ್ಕಳೂ ಸಮಸ್ಯೆ ಎದುರಿಸುತ್ತಾರೆ ಎಂದಲ್ಲ. ಕೆಲವು ಸಲ ಮಕ್ಕಳು ಏನೂ ತೊಂದರೆ ಇಲ್ಲದೆ ಚೆನ್ನಾಗಿ ಬೆಳೆಯಬಹುದು. ಇದನ್ನು `ಸ್ಥಿತಿಸ್ಥಾಪಕತ್ವ ಗುಣ' ಎನ್ನುತ್ತೇವೆ. ಯಾಕೆ ಈ ರೀತಿಯ ವ್ಯತ್ಯಾಸ ಎಂದು ಅಧ್ಯಯನಗಳನ್ನು ನಡೆಸಿದಾಗ ತಿಳಿದುಬಂದ ವಿಷಯವೆಂದರೆ, ಈ ಕುಟುಂಬಗಳಲ್ಲಿ ಮಕ್ಕಳ ಸಕಾರಾತ್ಮಕವಾದ ಬೆಳವಣಿಗೆಗೆ ಪೂರಕವಾದ ಕೆಲವು ಅಂಶಗಳು ಇದ್ದಾಗ, ಅದು ಅವರನ್ನು ಸಮಸ್ಯೆಗಳಿಗೆ ತುತ್ತಾಗದಂತೆ ಕಾಪಾಡುತ್ತದೆ. ಈ ಅಂಶಗಳೆಂದರೆ ಬುದ್ಧಿವಂತಿಕೆ, ಬಹಿರ್ಮುಖ ಮನೋಭಾವ, ತನ್ನ ಸಹೋದರ/ ಸಹೋದರಿಯರೊಂದಿಗಿನ ಸೌಹಾರ್ದಯುತ ಸಂಬಂಧ, ಇನ್ನೊಬ್ಬ ವಯಸ್ಕ ವ್ಯಕ್ತಿಯ ಮಾನಸಿಕ/ ಭಾವನಾತ್ಮಕ ಬೆಂಬಲ ಇತ್ಯಾದಿ.

ತಾವೇ ಪೋಷಕರಾದಾಗ...
ಅಧ್ಯಯನಗಳ ಪ್ರಕಾರ, ಕೌಟುಂಬಿಕ ಕಲಹದಿಂದ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯು ಮುಂದೆ ತಾನೇ ತಂದೆ ಅಥವಾ ತಾಯಿಯಾದಾಗ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲ. ಅಂತಹವರು ಸದಾ ಖಿನ್ನತೆ, ನಕಾರಾತ್ಮಕ ಭಾವನೆಗಳಿಂದ ಬಳಲುವುದರಿಂದ ಮಕ್ಕಳ ಮೇಲೂ ಅದನ್ನೇ ತೋರಿಸಬಹುದು.

ಇನ್ನು ಕೆಲವು ಬಾರಿ ಮಗುವನ್ನು ಗಂಡನಿಂದ ರಕ್ಷಿಸಲು, ತಾಯಿ ತಾನೇ ಮಗುವಿಗೆ ಶಿಕ್ಷೆ ನೀಡುವುದೂ ಉಂಟು. ಉದಾಹರಣೆಗೆ, ಗಂಡ ಕುಡಿದು ಬಂದು ಹೆಂಡತಿಗೆ ಹೊಡೆಯುವ ಸಂದರ್ಭದಲ್ಲಿ ಮಗು ಅಳುವುದಕ್ಕೆ ಪ್ರಾರಂಭಿಸಬಹುದು. ಇನ್ನು ಗಂಡ ಎಲ್ಲಿ ಮಗುವಿಗೆ ಹೆಚ್ಚಿನ ದೈಹಿಕ ಹಾನಿ ಮಾಡಿಬಿಡುತ್ತಾನೋ ಎಂಬ ಆತಂಕದಿಂದ ತಾಯಿ ತಾನೇ ಮಗುವಿಗೆ ಏಟು ಕೊಟ್ಟು ಸುಮ್ಮನಿರಿಸಬಹುದು.  ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಎಲ್ಲ ವ್ಯಕ್ತಿಗಳಿಗೂ ಪೋಷಕರಾಗಿ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯ ಇಲ್ಲ ಎಂದಲ್ಲ. ಅನಿವಾರ್ಯ ಕಾರಣಗಳಿಂದ ಸಂದರ್ಭಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ನಿರ್ವಹಿಸಲು ಅವರಿಗೆ ತೊಂದರೆ ಆಗುತ್ತಿರಬಹುದು ಅಷ್ಟೆ.

ತಡೆ ಹೇಗೆ?
ಸಂಶೋಧನೆಗಳ ಪ್ರಕಾರ, ಭಾರತದಲ್ಲಿ ಇತ್ತೀಚೆಗೆ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಇದರಿಂದ ಗಂಡ- ಹೆಂಡತಿಗೆ ಮಾತ್ರವಲ್ಲ ಮಕ್ಕಳಿಗೂ, ಸಮಾಜಕ್ಕೂ ತೊಂದರೆ ಆಗುವುದೇ ಹೆಚ್ಚು. 1983ರಲ್ಲಿ ಮೊದಲ ಬಾರಿಗೆ ಕೌಟುಂಬಿಕ ಕಲಹವನ್ನು ಅಪರಾಧ ಎಂದು ಗುರುತಿಸಲಾಯಿತು. 2001ರಲ್ಲಿ `ಕೌಟುಂಬಿಕ ದೌರ್ಜನ್ಯ ತಡೆ ಮಸೂದೆ'ಯನ್ನು ಅನುಷ್ಠಾನಗೊಳಿಸಲಾಯಿತು. ಬಳಿಕ `ಮಹಿಳೆಯರ ಕೌಟುಂಬಿಕ ದೌರ್ಜನ್ಯ ಸುರಕ್ಷಾ ಕಾಯ್ದೆ- 2005 ಜಾರಿಗೆ ಬಂತು. ಇದರಂತೆ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಟ್ಟರೆ, ಅದು ನ್ಯಾಯಾಧೀಶರಿಗೆ ತಲುಪಿ, ನಂತರ ವಿಚಾರಣೆ ನಡೆಯುತ್ತದೆ. ಇಂತಹ ಸಮಸ್ಯೆಗಳ ತಡೆಗೆ ಕಾನೂನಿನ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ದೊಡ್ಡದು. ದೆಹಲಿಯಲ್ಲಿರುವ `ಸಾಕ್ಷಿ', ಮುಂಬಯಿಯ `ಸ್ವಾಧಾರ್', ಚೆನ್ನೈನ `ಸ್ನೇಹ', ಬೆಂಗಳೂರಿನ `ವಿಮೋಚನ' ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇವು ಮಹಿಳೆಯರಿಗೆ ಆಪ್ತ ಸಲಹೆ, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿವೆ.

ಕಾನೂನುಗಳು ಏನೇ ಇರಲಿ ಜನರ ಮನಃಸ್ಥಿತಿ ಬದಲಾಗದ ಹೊರತು, ಸಮಾಜದಿಂದ ಕೌಟುಂಬಿಕ ಕಲಹಗಳನ್ನು/ ಹಿಂಸೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಶಿಕ್ಷಣ, ಚಿಕ್ಕ ವಯಸ್ಸಿಗೆ ಮದುವೆ ಮಾಡದಿರುವುದು, ಆರ್ಥಿಕ ಸ್ವಾವಲಂಬನೆ, ಬಡತನ ನಿರ್ಮೂಲನೆ, ಮದ್ಯವ್ಯಸನಕ್ಕೆ ಸರಿಯಾದ ಚಿಕಿತ್ಸೆ ಎಲ್ಲವೂ ನೆರವಾಗಬಲ್ಲವು.

ತಪ್ಪು ಹೆಜ್ಜೆ ಇಟ್ಟಾರು
ಆಗ ತಾನೇ ಹೊರಜಗತ್ತಿಗೆ ತೆರೆದುಕೊಳ್ಳುತ್ತಿರುವ ಪುಟ್ಟ ಮಕ್ಕಳು ಮನೆಯ ಭದ್ರತೆಯನ್ನು ಅವಲಂಬಿಸಿರುತ್ತಾರೆ. ಮನೆಯಲ್ಲಿನ ಜಗಳಗಳು ಅಭದ್ರತೆ ಉಂಟುಮಾಡಿದರೆ ಅತ್ತ ಹೊರಜಗತ್ತಿಗೆ ಮುಖ ಮಾಡಲು ಅವರು ಹೆದರಿಕೊಳ್ಳುವ ಸಾಧ್ಯತೆ ಹೆಚ್ಚು. ಪ್ರಾಥಮಿಕ ಶಾಲಾ ವಯಸ್ಸಿನ ಮಕ್ಕಳಲ್ಲಿ ಇದು ಎರಡು ಬಗೆಯ ಪರಿಣಾಮ ಬೀರಬಲ್ಲದು. ಒಂದೆಡೆ ಆಂತರಿಕ ಹಿಂಸೆಯು ಖಿನ್ನತೆ, ಆತ್ಮವಿಶ್ವಾಸದ ಕೊರತೆ, ಓದಿನಲ್ಲಿ ಹಿನ್ನಡೆ, ಕೀಳರಿಮೆ ಮುಂತಾದವುಗಳಿಗೆ ಕಾರಣವಾದರೆ ಮತ್ತೊಂದೆಡೆ, ಅದನ್ನು ಅನುಕರಿಸಿ ಹೊರಗೆ ಸ್ನೇಹಿತರ ಮೇಲೆ ಪ್ರಯೋಗಿಸುವ ಅಪಾಯಗಳಿರುತ್ತವೆ.

ಹದಿಹರೆಯದವರು ಸಾಮಾನ್ಯವಾಗಿ ಸ್ವತಂತ್ರ ಜೀವನಕ್ಕೆ ಹಾತೊರೆಯುತ್ತಿರುತ್ತಾರೆ. ಇಲ್ಲಿ ಅವರು ತಮಗೆ ಅಪ್ಪ ಅಥವಾ ಅಮ್ಮನಲ್ಲಿ ಯಾರು ಸರಿ ಎನಿಸುತ್ತಾರೋ ಅವರ ಪರವಾಗಿ ನಿಲುವು ತೆಗೆದುಕೊಳ್ಳುತ್ತಾರೆ. ಹೊರಗೆ ತಾವು ಹೇಳಿದ್ದೇ ನಡೆಯಬೇಕು ಎನ್ನುವ ಮನೋಭಾವ ಪ್ರದರ್ಶಿಸುತ್ತಾರೆ. ಮನೆಯಿಂದ ಓಡಿಹೋಗುವುದು, ಮಾದಕ ವ್ಯಸನಗಳ ದಾಸರಾಗುವುದು ಈ ವಯಸ್ಸಿನಲ್ಲಿಯೇ. ಹೆಣ್ಣು ಮಕ್ಕಳು ಮನೆಯಲ್ಲಿ ಸಿಗದ ಪ್ರೀತಿಯನ್ನು ಬೇರೊಬ್ಬರ ಬಳಿ ಅರಸುತ್ತಾರೆ. ಇಂಥ ಸಂದರ್ಭದಲ್ಲಿ ಅವರು ತಪ್ಪು ಹೆಜ್ಜೆಯನ್ನಿಟ್ಟು ಮೋಸ ಹೋಗುವ ಪ್ರಸಂಗಗಳು ಜಾಸ್ತಿ.

ಕೌಟುಂಬಿಕ ಕಲಹಗಳಿಗೆ ವಿವಾಹ ಪೂರ್ವದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಅನುಸರಿಸಿಕೊಂಡು ಹೋಗುತ್ತೇವೆಯೇ, ಪೋಷಕರಾಗಲು ಅರ್ಹರಾಗಿದ್ದೇವೆಯೇ ಎಂದು ಆಲೋಚಿಸಬೇಕು. ಮಗುವನ್ನು ಬೆಳೆಸುವ ವಿಷಯದಲ್ಲಿ ವಿರುದ್ಧ ಅಭಿಪ್ರಾಯ ಮೂಡಿದಾಗ ಆಪ್ತಸಲಹೆಗೆ ಮುಂದಾಗಬೇಕು. ಆಗ ಇಂಥ ಸಮಸ್ಯೆಗಳು ನಿಯಂತ್ರಣಕ್ಕೆ ಬರಲು ಸಾಧ್ಯ.
-ಡಾ. ಪ್ರೀತಿ ಪೈ, ಮನೋವೈದ್ಯೆ.

ಸಮಸ್ಯೆಗಳ ಸರಪಣಿ

ಮಕ್ಕಳ ಹಕ್ಕುಗಳ ಚ್ಯುತಿ, ಅವರ ಮನೋದೈಹಿಕ ಸಮಸ್ಯೆಗಳಿಗೆ ಶೇಕಡಾ 70ರಷ್ಟು ಕೌಟುಂಬಿಕ ಕಲಹಗಳೇ ಕಾರಣ ಎನ್ನುವುದು ಆತಂಕದ ಸಂಗತಿ. ಅಂತಹ ಮಕ್ಕಳು ನೋವನ್ನು ನುಂಗಿಕೊಳ್ಳಲೂ ಆಗದೆ, ಇತರರೊಂದಿಗೆ ಹೇಳಿಕೊಳ್ಳಲೂ ಆಗದೆ ಅಡ್ಡದಾರಿ ಹಿಡಿಯುವ ಸನ್ನಿವೇಶಗಳೇ ಹೆಚ್ಚು. ಇನ್ನು ಈ ರೀತಿಯ ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವ ಜನರೂ ಇದ್ದಾರೆ. ಕೌಟುಂಬಿಕ ಕಲಹಗಳು ಸರಪಣಿಯಂತೆ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. 

ಮನೆಯಲ್ಲಿನ ಜಗಳಗಳು ಮಗುವಿನ ಮೇಲೆ ಪರಿಣಾಮ ಬೀರಿದರೆ, ಮಗು ಅದನ್ನು ಸಮಾಜದ ಮೇಲೆ ಪ್ರಯೋಗಿಸುತ್ತದೆ. ಸಮಾಜ ದೇಶವನ್ನು ಹಾಳುಮಾಡುತ್ತದೆ. ಮಕ್ಕಳಿಗಾಗಿ ಒತ್ತಡಗಳನ್ನು ಸಹಿಸಿಕೊಂಡು ದುಡಿಯುವ ಪೋಷಕರು ಮಕ್ಕಳ ಹಿತವನ್ನು ಮರೆಯುವುದು ವಿಪರ್ಯಾಸ.

ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಕೊಂಡಿರುವ ಧಾರ್ಮಿಕ ಮುಖಂಡರು ಈ ಬಗೆಯ ಸಮಸ್ಯೆಗೆ ಪರಿಹಾರ ನೀಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ಮಠ ಮಾನ್ಯಗಳು, ಧಾರ್ಮಿಕ ಮುಖಂಡರು ಪರಿಣಾಮಕಾರಿಯಾಗಿ ಕೌನ್ಸೆಲಿಂಗ್ ಮೂಲಕ ಕೌಟುಂಬಿಕ ಕಲಹಗಳಿಗೆ ಕಡಿವಾಣ ಹಾಕಿ, ಸ್ವಸ್ಥ ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರೆ ಅದು ಫಲಪ್ರದವಾಗುತ್ತದೆ.
-ಉಮೇಶಾರಾಧ್ಯ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು

ಅಭಿಪ್ರಾಯ ಭೇದದ ಅರಿವಿರಬೇಕು

ಜಗಳವಿಲ್ಲದ ಮನೆಯಿರಲು ಸಾಧ್ಯವೇ ಇಲ್ಲ. ಅಭಿಪ್ರಾಯ ಭೇದಗಳು ಬಂದೇ ಬರುತ್ತವೆ. ಒಂದು ಬಗೆಯಲ್ಲಿ ಅಭಿಪ್ರಾಯ ಭೇದಗಳ ಅರಿವು ಮಕ್ಕಳಿಗಿರಬೇಕು. ಮಕ್ಕಳ ಉದ್ದೇಶಕ್ಕಾಗಿ ಜಗಳವನ್ನೇ ಆಡುವುದಿಲ್ಲ ಎಂದು ಪೋಷಕರು ತೀರ್ಮಾನ ಕೈಗೊಂಡರೆ ಅದು ಕೃತಕ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಿದಂತೆ. ಆದರೆ ಅದು ಮಿತಿಮೀರಿದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಖಚಿತ. ತಂದೆ ಅಥವಾ ತಾಯಿ ನಡುವಿನ ಮನಸ್ತಾಪ ಮಕ್ಕಳ ಮೇಲೆ ಪರಿಣಾಮ ಬೀರುವುದು ಅವರು ತಮ್ಮ ಪಾರಮ್ಯ ಮೆರೆಯಲು ಪ್ರಯತ್ನಿಸಿದಾಗ. ತಾನು ಶ್ರೇಷ್ಠ ಎಂದು ಅಪ್ಪ ಅಥವಾ ಅಮ್ಮ ತೋರಿಸಿಕೊಳ್ಳಲು ಮುಂದಾದಾಗ ಅದು ಮಕ್ಕಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಇದು ಅಪ್ಪ ಅಥವಾ ಅಮ್ಮನ ಮೇಲೆ ಮಕ್ಕಳಲ್ಲಿ ಅಗೌರವದ ಭಾವನೆ ಮೂಡಲೂ ಕಾರಣವಾಗಬಹುದು. ಅದಕ್ಕಿಂತ ಕೆಟ್ಟ ಫಲಿತಾಂಶ ದೊರಕುವುದು ವ್ಯಂಗ್ಯದ ಮಾತುಗಳು ಕೇಳತೊಡಗಿದಾಗ.

ಮನೆಯಲ್ಲಿ ವ್ಯಂಗ್ಯ, ದೈಹಿಕ ಹಿಂಸೆಗಳು ಹೆಚ್ಚಾದಾಗ ಮಕ್ಕಳೂ ಅದನ್ನು ಅನುಕರಿಸುತ್ತಾರೆ. ಕೌಟುಂಬಿಕ ಕಲಹಗಳು ಹೆಚ್ಚು ಸಂಭವಿಸುವುದು ಅನ್ಯರ ವಿಷಯಗಳಿಗೆ. ಅಲ್ಲಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದಾದಾಗ ಮಕ್ಕಳು ಬೇರೆ ದಾರಿ ಹಿಡಿಯುತ್ತಾರೆ. ಕೌಟುಂಬಿಕ ಕಲಹಗಳಲ್ಲಿ ಧಾರಾವಾಹಿಗಳ ಪಾಲೂ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಇಲ್ಲಿ ಜಗಳಗಳ ವೈಭವೀಕರಣ ಹೆಚ್ಚು. ಒಂದು ಸಣ್ಣ ಜಗಳ ಇಡೀ ತಿಂಗಳು ಪ್ರಸಾರವಾಗುತ್ತದೆ. ಅದರಲ್ಲಿ ಬರುವ ಸಂಭಾಷಣೆಗಳನ್ನೇ ತಂದೆ ತಾಯಿ ಜಗಳವಾಡುವಾಗ ಪ್ರಯೋಗಿಸುವುದನ್ನು ನೋಡಬಹುದು. ಮನೆಯೊಳಗಿನ ಅಸಹನೀಯ ವಾತಾವರಣ ಮಕ್ಕಳ ಮನಃಸ್ಥಿತಿಯನ್ನು ಬದಲಿಸುತ್ತದೆ. 
ವಾಸುದೇವ ಶರ್ಮ, ಕರ್ನಾಟಕ ಮಕ್ಕಳ ಹಕ್ಕುಗಳ ವೀಕ್ಷಣಾಲಯದ ಸಂಚಾಲಕ

ಆರೋಗ್ಯ ಸಮಸ್ಯೆ ಹೆಚ್ಚುತ್ತದೆ

ಸಾಮಾನ್ಯವಾಗಿ ನಾವು ಪರೀಕ್ಷಿಸುವ ಮಕ್ಕಳಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡುಬರುವುದು ಮನೆಯ ವಾತಾವರಣದ ಕಾರಣದಿಂದ. ಹೀಗಾಗಿ ಮಕ್ಕಳ ಭವಿಷ್ಯದ ಕಾರಣದಿಂದಾದರೂ ಪೋಷಕರು ತಮ್ಮ ಮನಸ್ತಾಪ, ಕೋಪ, ಹತಾಶೆಗಳನ್ನು ನಿಯಂತ್ರಿಸಿಕೊಳ್ಳುವುದು ಅತಿ ಮುಖ್ಯ.
ಡಾ. ರಮೇಶ್, ಶಿಶುವೈದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT